"ನಮ್ಮ ಅಜ್ಜಿಗೆ ಒಪ್ಪಿಗೆ ಆದೀತೇ ನಮ್ಮ ಆಹಾರ?"

"ನಮ್ಮ ಅಜ್ಜಿಗೆ ಒಪ್ಪಿಗೆ ಆದೀತೇ ನಮ್ಮ ಆಹಾರ?"

"ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ?” ಇದು ಅಮೇರಿಕದಿಂದ ಮಹಾರಾಷ್ಟ್ರದ ಹಳ್ಳಿಗೆ ಮರಳಿದ ಗಾಯತ್ರಿ ಭಾಟಿಯಾ ಕೇಳುವ ನೇರ ಪ್ರಶ್ನೆ. ತಾವು ಖರೀದಿಸುವ ಹಣ್ಣು, ತರಕಾರಿ, ಧಾನ್ಯ ಸಹಿತ ಎಲ್ಲ ಆಹಾರದ ಬಗ್ಗೆಯೂ ಗ್ರಾಹಕರು ಈ ಪ್ರಶ್ನೆ ಕೇಳಲೇ ಬೇಕೆಂಬುದು ಅವರ ಆಗ್ರಹ.   
ಆಹಾರ ಖರೀದಿಸುವಾಗ ಗ್ರಾಹಕರು ಕೇಳಲೇ ಬೇಕಾದ ಇನ್ನೂ ಕೆಲವು ಪ್ರಶ್ನೆಗಳನ್ನು ಪಟ್ಟಿ ಮಾಡುತ್ತಾರೆ ಗಾಯತ್ರಿ ಭಾಟಿಯಾ: "ಇದು ಎಲ್ಲಿಂದ ಬರುತ್ತಿದೆ? ಈಗ ಇದನ್ನು ಬೆಳೆಯುವ ಹಂಗಾಮು ಹೌದೇ? ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ? ಈ ಮೊಸರಿನಲ್ಲಿ ಹಾಲು ಮತ್ತು ಬ್ಯಾಕ್ಟೀರಿಯಾ ಹೊರತಾಗಿ ಬೇರೆ ವಸ್ತುಗಳಿದ್ದರೆ ಅವು ಯಾವುವು? ಮತ್ತು ಅವು ಯಾಕೆ ಮೊಸರಿನಲ್ಲಿವೆ?" ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಮಾತ್ರ ನಾವು ಭೂಮಿಯೊಂದಿಗೆ ಸಾಮರಸ್ಯದಿಂದ ಬದುಕಲು ಸಾಧ್ಯ ಎನ್ನುತ್ತಾರೆ ಅವರು.
"ನಾವು ನಮ್ಮ ಕೈಗಳಿಂದಲೇ ಕೃಷಿ ಮಾಡಬೇಕಾಗಿದೆ. ಮಣ್ಣು ಹೇಗಿದೆ? ಗಿಡಗಳನ್ನು ಬೆಳೆಸೋದು ಹೇಗೆ? ಇದನ್ನೆಲ್ಲ ನಾವು ಅನುಭವಿಸಬೇಕಾಗಿದೆ. ಜೊತೆಗೆ ಕೃಷಿಕರು ತಮ್ಮ ಜಮೀನು, ತಮ್ಮ ಬೀಜಗಳನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾಗಿದೆ. ಅದುವೇ ನಿಜವಾದ ಸ್ವಾತಂತ್ರ್ಯ” ಎನ್ನುತ್ತಾ ಇಂದಿನ ಕೃಷಿರಂಗದ ಹಾಗೂ ಕೃಷಿಕರ ಆದ್ಯತೆಗಳನ್ನು ಬೆರಳು ಮಾಡಿ ತೋರಿಸುತ್ತಾರೆ ಗಾಯತ್ರಿ ಭಾಟಿಯಾ.
ಮುಂಬೈಯ ಈಶಾನ್ಯ ದಿಕ್ಕಿನಲ್ಲಿರುವ ಅವರ ಕುಟುಂಬದ ೧೦ ಎಕ್ರೆಗಳ ಬೃಂದಾವನ ಫಾರ್ಮಿಗೆ ಅಲ್ಲಿಂದ ಒಂದು ಗಂಟೆ ಪ್ರಯಾಣ. ಅದೀಗ ಸಂಪೂರ್ಣ ಸಾವಯವ ತೋಟ. ಈ ಪರಿವರ್ತನೆ ಒಂದು ರೋಚಕ ಕತೆ. ಇದೆಲ್ಲ ಶುರುವಾದದ್ದು ೧೦ ವರುಷಗಳ ಮುಂಚೆ ಗಾಯತ್ರಿ ಭಾಟಿಯಾ ಯುಎಸ್‍ಎ ದೇಶದ ಬೋಸ್ಟನ್ ಮಹಾನಗರದ ಪರಿಸರ ರಕ್ಷಣಾ ಏಜೆನ್ಸಿಯಲ್ಲಿ ತನ್ನ “ಪರಿಸರ ವಿಶ್ಲೇಷಕಿ” ಹುದ್ದೆ ತೊರೆದು ತನ್ನ ಹಳ್ಳಿಗೆ ಮರಳಿದಾಗ.
ಆಗ ಈ ಜಮೀನು ಪ್ರಧಾನವಾಗಿ ಮಾವಿನ ತೋಟ. ಅಲ್ಲಿದ್ದವು ಏಳು ತಳಿಗಳ ೫೦೦ ಮಾವಿನ ಮರಗಳು. ಜೊತೆಗೆ ಕೆಲವು ತೆಂಗು ಮತ್ತು ಗೇರು ಮರಗಳು, ಕರಿಮೆಣಸು ಬಳ್ಳಿಗಳು.
ಈಗ ಅಲ್ಲಿ ಮಾವಿನ ಜೊತೆಗೆ ಹತ್ತುಹಲವು ಹಣ್ಣಿನ ಮರಗಳಿವೆ: ಪಪ್ಪಾಯಿ, ಚಿಕ್ಕು, ಹಲಸು, ಅನಾನಸ್, ಬಾಳೆ, ಹಿಪ್ಪುನೇರಳೆ, ಟೊಮೆಟೊ, ಕಾಡುಹಣ್ಣುಗಳು ಇತ್ಯಾದಿ. ಅರಿಶಿನ, ಶುಂಠಿ, ಕರಿಮೆಣಸು ಮೊದಲಾದ ಸಾಂಬಾರ ಗಿಡಗಳೂ, ಲೆಟ್ಯೂಸ್, ಬೇಬಿ ಸ್ಪಿನಾಚ್, ತುಳಸಿ, ಸೊರ್ರೆಲ್, ನುಗ್ಗೆ, ಹರಿವೆ ಸೊಪ್ಪಿನ ಸಸಿಗಳು, ಪುಟ್ಟಟೊಮೆಟೊ, ಬದನೆ, ಚೀನಿಕಾಯಿ, ಗೆಣಸು ಇತ್ಯಾದಿ ತರಕಾರಿ ಗಿಡಬಳ್ಳಿಗಳೂ ಅಲ್ಲಿವೆ.
“ಅಮೇರಿಕದಲ್ಲಿನ ನನ್ನ ಕೆಲಸದಿಂದ ನನಗೆ ದೊಡ್ಡ ಬದಲಾವಣೆ ಬೇಕೆನಿಸಿತು. ನಮ್ಮ ಮತ್ತು ಭೂಮಿಯ ಅವಸ್ಥೆ ನೋಡಿನೋಡಿ, ಈ ಬದಲಾವಣೆ ತಳಹಂತದಿಂದಲೇ ಶುರುವಾಗಬೇಕು ಎನಿಸಿತು. ಕೈಗಾರಿಕೆ ಆಧಾರಿತ ಜೀವನಶೈಲಿಯಿಂದಾಗಿ ನಾವು ಭೂಮಿಗೆ ಮಾಡುತ್ತಿರುವ ಹಾನಿಯಿಂದ ಮಾನವ ಜನಾಂಗಕ್ಕೇ ಹಾನಿಯಾಗುತ್ತಿದೆ ಎಂದು ನನಗೆ ಗೊತ್ತಾಗಿತ್ತು. ಇದರಿಂದ ಪಾರಾಗಬೇಕಾದರೆ, ಕೃಷಿ ಒಂದೇ ದಾರಿಯಾಗಿತ್ತು” ಎಂದು ತಾವು ಮಹಾನಗರದಿಂದ ಹಳ್ಳಿಗೆ ಬರಲು ಕಾರಣವಾದ ಸಂಗತಿಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಗಾಯತ್ರಿ ಭಾಟಿಯಾ.
ಜಮೀನನ್ನು ಅದರ ಪಾಡಿಗೆ ಬಿಟ್ಟು, ಅಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರು ಗಾಯತ್ರಿ. ಈ ಕುತೂಹಲವೇ ಅವರನ್ನಿಂದು ಸಾವಯವ ಕೃಷಿಕಳಾಗಿ ಬೆಳೆಸಿದೆ. ವಿಷಮುಕ್ತ ಹಾಗೂ ತಾಜಾ ಆಹಾರ ಬೆಳೆಸಿ ಮಾರುವ ಉದ್ಯಮಶೀಲ ವ್ಯಕ್ತಿಯಾಗಿ, ದೇಸಿ ಬೀಜ ರಕ್ಷಕಿಯಾಗಿ ಅವರನ್ನು ಪರಿವರ್ತಿಸಿದೆ.
ಇದೀಗ ಅವರ ಜಮೀನಿನಿಂದ ಕೊಯ್ಲಿನ ಹಂಗಾಮಿನಲ್ಲಿ ೩,೦೦೦ದಿಂದ ೫,೦೦೦ ಕಿಲೋ ಮಾವಿನ ಹಣ್ಣುಗಳ ಫಸಲು ಲಭ್ಯ. ಸ್ಮೋಕ್‍ಹೌಸ್ ಡೆಲಿ, ಕಾಲಾ ಘೋಡಾ ಕೆಫೆ, ದ-ಪಾಂಟ್ರಿ, ಆಲಿವ್ ಇತ್ಯಾದಿ ಮುಂಬೈಯ ಪ್ರಸಿದ್ಧ ಹೋಟೆಲುಗಳಿಗೆ ಅವರ ತೋಟದ ಮಾವಿನ ಹಣ್ಣುಗಳ ಮಾರಾಟ.
ಅವರು ಕೃಷಿಯಲ್ಲಿ ತೊಡಗುವ ಮುನ್ನ ಆ ಜಮೀನಿನಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತೇ? ಎಂಬ ಪ್ರಶ್ನೆಗೆ ಅವರ ಉತ್ತರ: “ಇಲ್ಲ, ಈ ಜಮೀನಿಗೆ ಯಾವತ್ತೂ ರಾಸಾಯನಿಕಗಳನ್ನು ಹಾಕಿರಲಿಲ್ಲ. ಆದರೆ, ನಾನು ಸಾವಯವ ಕೃಷಿ ಶುರು ಮಾಡಲು ಕಾರಣ ನನ್ನ ಅಕ್ಕಪಕ್ಕದವರು ತಮ್ಮ ಭತ್ತದ ಹೊಲಗಳಲ್ಲಿ ಡಿಡಿಟಿ ಪ್ರಯೋಗಿಸುತ್ತಿದ್ದುದರ ಬಗ್ಗೆ ಮಾತಾಡಿದ್ದು. ಡಿಡಿಟಿ ಜಗತ್ತಿನಲ್ಲೆಲ್ಲ ನಿಷೇಧಿಸಲಾದ ವಿಷ ರಾಸಾಯನಿಕ. ಹೀಗೆ ಕೃಷಿಯ ಸಮಸ್ಯೆಗಳು ಸ್ಪಷ್ಟವಾಗುತ್ತಿದ್ದಂತೆ, ಸಹಜ ಕೃಷಿ ಮಾಡಬೇಕಾಗ ಅಗತ್ಯವೂ ನನಗೆ ಸ್ಪಷ್ಟವಾಯಿತು.”
ಬೀಜವೇ ರೈತರ ಸ್ವಾತಂತ್ರ್ಯ: ಅಧಿಕ ಇಳುವರಿಯ ಹಾಗೂ ಜೈವಿಕವಾಗಿ ಮಾರ್ಪಡಿಸಿದ (ಜಿಎಮ್) ತಳಿಗಳನ್ನು ಹೆಚ್ಚೆಚ್ಚು ರೈತರು ಬೆಳೆಯುತ್ತಿರುವಾಗ, ಗಾಯತ್ರಿ ಭಾಟಿಯಾ ಪಾರಂಪರಿಕ ಹಾಗೂ ದೇಸಿ ತಳಿಗಳ ಬೀಜಗಳನ್ನು ಉಳಿಸಿ, ಬೆಳೆಸಲು ಪಣ ತೊಟ್ಟಿದ್ದಾರೆ. ದೇಸಿ ಬೀಜಗಳನ್ನು ಉಳಿಸಿಕೊಳ್ಳುವ ಬಗೆ ಹೇಗೆಂಬ ಮಾಹಿತಿಯನ್ನು ಗಾಯತ್ರಿ ನೀಡಿದ್ದು ಹೀಗೆ: “ಪ್ರತಿ ವರುಷ ಆಯಾ ಹಂಗಾಮಿನಲ್ಲಿ ಆಯಾ ಬೆಳೆಗಳನ್ನು ಬೆಳೆದು ಬೀಜಗಳನ್ನು ನಮ್ಮ ಬೀಜಬ್ಯಾಂಕಿನಲ್ಲಿ ತೆಗೆದಿಡುತ್ತೇವೆ. ಬೀಜಗಳನ್ನು ಜೋಪಾನವಾಗಿಡುವುದು ಗಾಜಿನ ಭರಣಿಗಳಲ್ಲಿ ಬೂದಿಯಲ್ಲಿ. ಅಕ್ಕಪಕ್ಕದ ರೈತರಿಗೂ ಒಂದಷ್ಟು ಬೀಜಗಳನ್ನು ಹಂಚುತ್ತೇವೆ. ಸದ್ಯ ಮಹಾದಿ ಭತ್ತ ಮತ್ತು ದೇಸಿ ಹೆಸರು ಕಾಳು ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಟೊಮೆಟೊ, ಲೆಟ್ಯೂಸ್, ಬೀಟ್‍ರೂಟ್, ರಾಡಿಷ್ ಇಂತಹ ತರಕಾರಿಗಳು ಮತ್ತು ಪಾರಂಪರಿಕ ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ನಮ್ಮ ಎಲ್ಲ ಬೀಜಗಳೂ ದೇಸಿ ಬೀಜಗಳಲ್ಲ. ಆದರೆ, ಎಲ್ಲವೂ ರೈತರೇ ಬೆಳೆಸಿದ ಬೀಜಗಳು; ಪ್ರಯೋಗಾಲಯದಲ್ಲಿ ಬೆಳೆಸಿದ ಬೀಜಗಳಲ್ಲ.”
“ಬೀಜಗಳ ಸಂಗತಿ ಏನೆಂದರೆ, ಯುದ್ಧಗಳಿಗಾಗಿ ರಾಸಾಯನಿಕಗಳನ್ನು ಅಭಿವೃದ್ಧಿ ಪಡಿಸಿದ ಕಂಪೆನಿಗಳೇ ಈಗ ಬೀಜ ಉತ್ಪಾದನೆಯ ಒಡೆತನ ಹೊಂದಿವೆ. ಆ ಬೀಜಗಳು ರಾಸಾಯನಿಕ (ಅಂದರೆ ರೌಂಡಪ್‍ನಂತಹ ಪೀಡೆನಾಶಕಗಳ) ಬಳಕೆಗೆ ಸ್ಪಂದಿಸುತ್ತವೆ. ಇವು ಆ ಪ್ರದೇಶದ ಪ್ರಾಕೃತಿಕ ವ್ಯವಸ್ಥೆಯನ್ನು ನಾಶ ಮಾಡುತ್ತವೆ. ಆದರೆ, ಬೀಜವೇ ರೈತರ ಸ್ವಾತಂತ್ರ್ಯ. ಅದನ್ನು (ಈ ಸ್ವಾತಂತ್ರ್ಯ ಕಿತ್ತುಕೊಳ್ಳುವ) ಲಾಲಸೆಯ ಕೈಗೆ ಕೊಡುವಂತಿಲ್ಲ; ಅದು ಯಾವಾಗಲೂ ರೈತರ ಕೈಯಲ್ಲೇ ಇರಬೇಕು” ಎನ್ನುತ್ತಾರೆ ಗಾಯತ್ರಿ.
“ಬೀಜದ ಚೈತನ್ಯ ಸಹಜವಾಗಿ ಹೊಮ್ಮುತ್ತದೆ. ಈಗ ಕೆಲವೇ ರೈತರು ಬೀಜಗಳನ್ನು ಹೇಗೆ ಜೋಪಾನ ಮಾಡಿದ್ದಾರೆ ಮತ್ತು ಮಾರುಕಟ್ಟೆಯಿಂದ ತರುವ ಹೈಬ್ರಿಡ್ ಮತ್ತು ಜಿಎಮ್ ಬೀಜಗಳ ಮೇಲಿನ ಅವಲಂಬನೆ ಹೇಗೆ ವ್ಯಾಪಿಸಿದೆ ಎಂಬ ಸಂಗತಿ ನನಗೊಂದು ಅಚ್ಚರಿ” ಎಂದು ತಿಳಿಸುತ್ತಾರೆ ಗಾಯತ್ರಿ.
ಅವರು ಯಾವ ಹಂಗಾಮಿನಲ್ಲಿ ಯಾವೆಲ್ಲ ಬೆಳೆ ಬೆಳೆಯಬೇಕೆಂದು ಯೋಜಿಸುತ್ತಾರೆ; ಬೆಳೆಗಳ ಪರಿವರ್ತನೆ ಮಾಡುವುದಲ್ಲದೆ ಮಿಶ್ರಬೆಳೆಗಳನ್ನೂ ಬೆಳೆಸುತ್ತಾರೆ. ಅವರ ಸಹಿತ ಒಟ್ಟು ಒಂಭತ್ತು ಜನರು ಬೃಂದಾವನ ಫಾರ್ಮಿನಲ್ಲಿ ಕೆಲಸ ಮಾಡುತ್ತಾರೆ. ಆ ಕೆಲಸಗಾರರು ಅದೇ ಹಳ್ಳಿಯವರು. ಬೆಳಗ್ಗೆ ೮ರಿಂದ ಸಂಜೆ ೬ ಗಂಟೆಯ ತನಕ ಹೊಲದಲ್ಲಿ ಅವರ ದುಡಿಮೆ. ಸಂಜೆ ೬ರ  ನಂತರ ಫಾರ್ಮಿನಲ್ಲಿ ಏಕಾಂಗಿಯಾಗಿ ದುಡಿಯುತ್ತಾರೆ ಗಾಯತ್ರಿ.
“ಸಹಜ ಬೇಸಾಯದ ಕೇಂದ್ರ ಬಿಂದು ಹಸು. ನಮ್ಮ ತೋಟದಲ್ಲಿವೆ ಎರಡು ದನಗಳು ಮತ್ತು ಎರಡು ಕರುಗಳು. ಅವುಗಳ ಸೆಗಣಿ ನಮಗಂತೂ ಚಿನ್ನ. ನಮ್ಮೆಲ್ಲ ಗೊಬ್ಬರ ಮತ್ತು ಪೀಡೆನಾಶಕಗಳ ಮೂಲ ಸೆಗಣಿ. ದನಕರುಗಳು ತೋಟದಲ್ಲಿ ಮೇಯುತ್ತಾ ಇರುತ್ತವೆ” ಎಂದು ವಿವರಿಸುತ್ತಾರೆ ಗಾಯತ್ರಿ. ದನದ ಸೆಗಣಿ, ಮೂತ್ರ, ಮೀನುಗಳ ತ್ಯಾಜ್ಯ, ಹಸುರುಪಾಚಿ, ಒಣಎಲೆಗಳು ಮತ್ತು ತೋಟದ ಹಸುರೆಲೆಗಳು – ಇವುಗಳ ಮಿಶ್ರಣ ಕೊಳೆತಾಗ ಸಮೃದ್ಧ ಗೊಬ್ಬರ – ಅದುವೇ ಅವರ ತೋಟದ ಮಣ್ಣಿಗೆ ಪುನರ್ಜೀವದ ಮೂಲ. ಕೀಟ ಹತೋಟಿಗೆ ಬೇವು ಮತ್ತು ಶಿಲೀಂಧ್ರ ನಿಯಂತ್ರಣಕ್ಕೆ ಬೆಳ್ಳುಳ್ಳಿ ಅವರ ರಾಮಬಾಣ.
೨೦೧೩ರಿಂದ ಸುಮಾರು ೫೦ ಕುಟುಂಬಗಳಿಗೆ ಪ್ರತೀ ವಾರ ಹಣ್ಣುತರಕಾರಿ ಮಾರುತ್ತಿದ್ದಾರೆ ಗಾಯತ್ರಿ. ತಾಜಾ ಕೃಷಿ ಉತ್ಪನ್ನಗಳು, ಹಣ್ಣುಗಳು, ಸೊಪ್ಪುಗಳು ಮಾತ್ರವಲ್ಲ ಹರ್ಬಲ್ ಟೀ, ಬೆರ್ರಿ ಜಾಮ್, ಮಾವಿನ ಜಾಮ್, ಮಾವಿನ ಚಟ್ನಿ ಇತ್ಯಾದಿ ಸಂಸ್ಕರಿಸಿದ ಸಾವಯವ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಾರೆ. ಹತ್ತಿರದ ಬೃಹತ್ ಮಾರುಕಟ್ಟೆಯಾದ ಮುಂಬೈ ಮಹಾನಗರದಲ್ಲಿಯೂ ತಮ್ಮ ತೋಟದ ಉತ್ಪನ್ನಗಳ ನೇರ ಮಾರಾಟ ಮಾಡುತ್ತಿರುವುದು ಗಾಯತ್ರಿ ಅವರ ಉದ್ಯಮಶೀಲತೆಯ ಪುರಾವೆ.
ಗಾಯತ್ರಿ ಭಾಟಿಯಾ ಅವರ ಈ ಮಾತುಗಳಂತೂ ನಮ್ಮ ಕಣ್ಣು ತೆರೆಸುವಂತಿವೆ: “ಈಗ ಕೃಷಿ ಅನ್ನೋದು ಕೈಗಾರಿಕೆಯಂತೆ ಆಗಿದ್ದರೂ, ಇಂದಿಗೂ ಜಗತ್ತಿನಲ್ಲಿ ಶೇಕಡಾ ೭೦ರಷ್ಟು ಆಹಾರ ಉತ್ಪಾದಿಸುತ್ತಿರುವುದು ಸಣ್ಣರೈತರು. ಇಂತಹ ಸಣ್ಣರೈತರದು ಸುಸ್ಥಿರ ಸಹಜ ಕೃಷಿ. ಇದು ಶತಮಾನಗಳಿಂದ ಹಾಗೆಯೇ ನಡೆದು ಬಂದಿದೆ, ಮಾನವ ಕುಲಕ್ಕೆ ಪೋಷಣೆ ನೀಡಿದೆ ಮತ್ತು ಭೂಮಿಯನ್ನು ರಕ್ಷಿಸಿದೆ. ಆದರೆ ಮನುಷ್ಯರ ದುರಾಸೆಯನ್ನು ನಿರ್ಲಕ್ಷಿಸುವಂತಿಲ್ಲ; ನಾವು ಜಾಗೃತರಾಗಬೇಕಾಗಿದೆ, ಪಾರಂಪರಿಕ ಕೃಷಿ ಉಳಿಸಲಿಕ್ಕಾಗಿ ವಿವೇಕಯುತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ.”