ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದೀತೇ?

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದೀತೇ?

ಲೋಕಸಭೆಯಲ್ಲಿ ರೈತ ಮಸೂದೆಗಳ ಬಗ್ಗೆ ಗದ್ದಲ,

ವಿಧಾನಸಭೆಯಲ್ಲಿ ಜಾತಿ ಮೀಸಲಾತಿಗಳ ಗದ್ದಲ,

ಅಧಿಕಾರಿಗಳ ತಲೆಯಲ್ಲಿ ಕೊರೋನಾ ವೈರಸ್ ಬಗೆಗಿನ ಗೊಂದಲ,

ಮಾಧ್ಯಮಗಳಲ್ಲಿ ಎಲ್ಲವೂ ಗೊಂದಲ,

ಜನರ ಮನಸ್ಸುಗಳಲ್ಲಿ ಬದುಕಿನ ಬಗೆಗಿನ ಗೊಂದಲ..

ಈ ವರ್ಷ ಬಹುತೇಕ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ,

ಕ್ರೀಡಾ ಚಟುವಟಿಕೆಗಳು ಕಾಣೆಯಾಗಿವೆ,

ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವಾಗಿವೆ,

ಆರ್ಥಿಕತೆ ಮತ್ತು ನಿರುದ್ಯೋಗ ಹಾದಿ ತಪ್ಪಿದೆ...

ಇಂತಹ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹಠಮಾರಿ ತನದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಆಡಳಿತ ಮತ್ತು ಸಾರ್ವಜನಿಕರ ನಡುವೆ ಅನುಮಾನ, ಅಸಮಾಧಾನ ಮತ್ತು ನಿರಾಸೆಯ ಭಾವ ಆವರಿಸುತ್ತಿದೆ, ಅನೇಕ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ...

ಹಿಂದಿನ ವರ್ಷದ ಜೀವ ಭಯದ ಮೌನ ಆತಂಕ ಏಕಾಂಗಿತನಗಳು ಈ ಹೊಸ ವರ್ಷದಲ್ಲಿ ಒಮ್ಮೆಲೆ ಆಸ್ಪೋಟಗೊಳ್ಳುತ್ತಿದೆ,

ಅನೇಕ ಜನಪ್ರಿಯ ಮತ್ತು ಪ್ರಖ್ಯಾತ ವ್ಯಕ್ತಿಗಳ ಮುಖವಾಡಗಳು ತೆರೆದುಕೊಳ್ಳುತ್ತಿವೆ, ಕಷ್ಟದ ಸಮಯದಲ್ಲಿ ವ್ಯಕ್ತಿಗಳ ನಿಜ ವ್ಯಕ್ತಿತ್ವಗಳು  ಸಾಮರ್ಥ್ಯಗಳ ಬಣ್ಣ ಬಯಲಾಗುತ್ತಿದೆ, ಅಡಗಿರುವ ಒಳ ಮನಸ್ಸುಗಳ ತಣ್ಣನೆಯ ಕ್ರೌರ್ಯ ಹೊರ ಬರುತ್ತಿದೆ....

ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯಲ್ಲಿ, ಜೀವನಶೈಲಿಯಲ್ಲಿ ಬೆಳೆದು ಬಂದಿದೆ ಅಥವಾ ಅಡಕವಾಗಿದೆ ಎಂದು ಭಾವಿಸಲಾಗಿದ್ದ ಪ್ರೀತಿ ಸಹಕಾರ ಸಮನ್ವಯ ಸಭ್ಯತೆ ಕರುಣೆ ಕ್ಷಮಾಗುಣ ಸಂಸ್ಕಾರ ಮುಂತಾದ ಮಾನವಿಯ ಮೌಲ್ಯಗಳು ಹಣ ಅಧಿಕಾರ ಪ್ರಚಾರದ ಅಬ್ಬರದಲ್ಲಿ, ಮೋಹದಲ್ಲಿ, ಸ್ವಾರ್ಥದಲ್ಲಿ, ದುರಾಸೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಹೇಳಬಹುದೆ ? 

ಅಭಿವೃದ್ಧಿ ಎಂಬ ಮಾಯಾವಿಯನ್ನು ತಪ್ಪಾಗಿ ಅರ್ಥಮಾಡಿಕೊಂಡು ಅದರ ಹಿಂದೆ ಬಿದ್ದು ಈಗ ಅತೃಪ್ತಿಯ ಆತ್ಮವನ್ನು ಅಪ್ಪಿಕೊಂಡಂತಾಗಿದೆ. ಮಾನವಿಯ ಮೌಲ್ಯಗಳು ಅಡಕವಾಗಿರದ ಯಾವುದೇ ಅಭಿವೃದ್ಧಿ ವಿನಾಶಕಾರಿ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. 

ಎಷ್ಟೇ ಆಧುನಿಕತೆ, ಎಷ್ಟೇ ತಾಂತ್ರಿಕತೆ, ಎಷ್ಟೇ ಶ್ರೀಮಂತಿಕೆ, ಎಷ್ಟೇ ಬುದ್ಧಿವಂತಿಕೆ, ಎಷ್ಟೇ ದೊಡ್ಡ ಅಧಿಕಾರ, ಏನೇ ಅಭಿವೃದ್ಧಿ ಆದರೂ ಸಹ ನಾಗರಿಕತೆಯ ಅತ್ಯಂತ ಮಹತ್ವದ ಲಕ್ಷಣವಾದ ಮಾನವಿಯ ಮೌಲ್ಯಗಳನ್ನು ನಿರ್ಲಕ್ಷಿಸಿದರೆ ಈ ಮೇಲಿನ ಯಾವ ಲಾಭಗಳನ್ನು ಈ ಮಾನವ ಪ್ರಾಣಿ ತೃಪ್ತಿಕರವಾಗಿ ಅನುಭವಿಸಲು ಸಾಧ್ಯವಿಲ್ಲ.

ತಂತ್ರ ಪ್ರತಿ ತಂತ್ರ, ಹೋರಾಟ ಪ್ರತಿ ಹೋರಾಟ, ಸಂಕುಚಿತ ಮನೋಭಾವ, ಸೋಲು ಗೆಲುವಿನ ಲೆಕ್ಕ, ಹಿಂಸಾ ಪ್ರವೃತ್ತಿ ಎಲ್ಲವೂ ಈ ಕ್ಷಣದ ಭಾರತೀಯ ಸಂಸ್ಕೃತಿ ಸಮಾಜ ಮತ್ತು ಆಡಳಿತ ವ್ಯವಸ್ಥೆ ವಿನಾಶದ ಅಂಚಿನಲ್ಲಿದೆ ಎಂಬುದನ್ನು ಸಾಬೀತು ಮಾಡುತ್ತಿದೆ.

ಸಮಗ್ರ ಚಿಂತನೆ, ತಾಳ್ಮೆಯ ವಿವೇಚನೆ, ಭವಿಷ್ಯದ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ದಯವಿಟ್ಟು ಇಂದಿನ ಎಲ್ಲಾ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿ ಮತ್ತು ಸ್ಪಂದಿಸಿ. ಕೇವಲ ಭಾವನಾತ್ಮಕ ಪ್ರತಿಕ್ರಿಯೆಗಳು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಅಧೋಗತಿಗೆ ಕಾರಣವಾಗಿ ಅತ್ಯಂತ ಕೆಟ್ಟ ಆಡಳಿತ ವ್ಯವಸ್ಥೆ ನಮ್ಮನ್ನು ಸಂಪೂರ್ಣ ಆಕ್ರಮಿಸುವ ಮುನ್ನ ಎಚ್ಚರಗೊಳ್ಳಿ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 97 ನೆಯ ದಿನ  ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ