ನಮ್ಮ ಆರೋಗ್ಯದ ಸುತ್ತ...

ನಮ್ಮ ಆರೋಗ್ಯದ ಸುತ್ತ...

ಬಹುಶಃ ಭಾರತವನ್ನು ಮುಂದಿನ 15-20 ವರ್ಷಗಳಲ್ಲಿ ಅತಿಹೆಚ್ಚು ಕಾಡಬಹುದಾದ ಸಮಸ್ಯೆಗಳಲ್ಲಿ ಅನಾರೋಗ್ಯವೂ ಬಹುಮುಖ್ಯವಾಗಬಹುದು ಎಂದೆನಿಸುತ್ತದೆ. ನಮ್ಮ ಸುತ್ತಮುತ್ತಲಿನ ಯಾವುದೇ ಕುಟುಂಬವನ್ನು ಗಮನಿಸಿ. ಬಹುತೇಕ ಒಬ್ಬರಲ್ಲ ಒಬ್ಬರು ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬರುತ್ತದೆ. ಪ್ರತಿ ಮನೆಯಲ್ಲು‌ ಔಷಧಗಳ ಶಾಶ್ವತ  ಬಾಕ್ಸ್ ಕಾಣುತ್ತದೆ.

ಸುಮಾರು 40-50 ವರ್ಷಗಳ ಹಿಂದೆ ಇಡೀ ಭಾರತದ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಅನಾರೋಗ್ಯ ಪೀಡಿತ ಜನರನ್ನು ಎಣಿಸಬಹುದಿತ್ತು ಅಥವಾ ಅವರ ಸಂಖ್ಯೆ ಎಣಿಕೆಗೆ ಸಿಗುವಷ್ಟು ಇರುತ್ತಿತ್ತು. ಆದರೆ ಈಗ 2023 ರಲ್ಲಿ ಸಂಪೂರ್ಣ ಆರೋಗ್ಯವಂತರನ್ನು ಹುಡುಕುವುದೇ ಕಷ್ಟವಾಗುತ್ತಿದೆ. ಹಿಂದೆ ಅನಾರೋಗ್ಯ ಎಂಬುದು ಅರವತ್ತರ ನಂತರ ಎಂದೇ ಭಾವಿಸಲಾಗಿತ್ತು. ಈಗ ವಯಸ್ಸಿನ ವ್ಯತ್ಯಾಸವೇ ಇಲ್ಲ. ಬಿಪಿ, ಶುಗರ್, ಅಸಿಡಿಟಿ, ಥೈರಾಯ್ಡ್, ಕ್ಯಾನ್ಸರ್, ಕಿಡ್ನಿ, ಸ್ಟೋನ್, ಕೊಲೆಸ್ಟ್ರಾಲ್, ಹೃದ್ರೋಗ ಜೊತೆಗೆ ಕಣ್ಣಿನ ದೃಷ್ಟಿ ಸಮಸ್ಯೆ, ತೂಕ ಹೆಚ್ಚಳ, ಬೆನ್ನು ನೋವು, ಹಲ್ಲು ನೋವು, ಚರ್ಮದ ಸಮಸ್ಯೆ, ಅಲರ್ಜಿ, ಶ್ವಾಸಕೋಶದ ಖಾಯಿಲೆ, ಕಾಮಾಲೆ ರೋಗ, ಅಲ್ಸರ್, ಆಸ್ತಮಾ, ಸೋರಿಯಾಸಿಸ್, ನಿದ್ರಾಹೀನತೆ ಒಂದೇ ಎರಡೇ...

ಅಲ್ಲದೇ ಜೀವಾಮೃತಗಳಾದ ಮತ್ತು ಪರಿಸರದ ಮೂಲ ಬೇರುಗಳಾದ ಗಾಳಿ ನೀರು ಆಹಾರಗಳೇ ರೋಗಗಳ ಸೃಷ್ಟಿಕರ್ತರಾಗುತ್ತಿರುವುದು ಮತ್ತಷ್ಟು ಆತಂಕದ ವಿಷಯ. ಅದಕ್ಕೆ ತಕ್ಕಂತೆ ಆಸ್ಪತ್ರೆ, ಲ್ಯಾಬೋರೇಟರಿ, ಔಷಧ ಉತ್ಪಾದಕರು, ಆರೋಗ್ಯ ವಿಮೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಮತ್ತು ವ್ಯಾಪಾರೀಕರಣವಾಗುತ್ತಿದೆ. ನಮ್ಮ ಸಂಪಾದನೆಯ ಬಹಳಷ್ಟು ಹಣ ಇದಕ್ಕಾಗಿಯೇ ಮೀಸಲಿಡುವ ಮತ್ತು ವೆಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅನಾರೋಗ್ಯದ ವಾತಾವರಣ ತನ್ನ ನಿಯಂತ್ರಣ ಮೀರುತ್ತಿದೆ. ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಸ್ಥಿಮಿತವೂ ಇಲ್ಲವಾಗಿದೆ. ಹಣ ಕೇಂದ್ರೀಕೃತ ವ್ಯವಸ್ಥೆ ನೆಮ್ಮದಿಯನ್ನು ಕಸಿಯುತ್ತಿದೆ. ಹೀಗೆ ಮುಂದುವರಿದರೆ ನಾಳಿನ ದಿನಗಳು ಹೇಗಿರಬಹುದು ಊಹಿಸಿ. ಅದರಲ್ಲೂ 2000 ನಂತರ ಜನಿಸಿದ ಮಕ್ಕಳ ಆರೋಗ್ಯದ ಭವಿಷ್ಯ ನಿಜಕ್ಕೂ ಕಳವಳಕಾರಿಯಾಗಿದೆ. ಹುಟ್ಟಿನಿಂದ ಸಾಯುವವರೆಗೆ ತೀವ್ರ ಸ್ಪರ್ಧೆ, ವೇಗ, ದುಡಿತ ಮನುಷ್ಯನ ದೇಹ ಮತ್ತು ಮನಸ್ಸುಗಳ ಮೇಲೆ ಅತೀವ ಒತ್ತಡ ಹೇರುತ್ತಿದೆ. ಅದರ ಪರಿಣಾಮವೇ ಅನಾರೋಗ್ಯ.

ಇದರ ಮಧ್ಯೆ ಆರೋಗ್ಯವೇ ಭಾಗ್ಯ ಎಂಬ ನಾಟಕ, ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ, ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್, ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ. ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ,  ಆತನ ಅಸ್ತಿತ್ವವದ ಮೂಲವೇ ಪರಿಸರ,  ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ ಮನುಷ್ಯನಿಗೆ ಪರಿಸರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ, ಇದೊಂದು ಆತ್ಮವಂಚನೆ - ಬೂಟಾಟಿಕೆ. ಸ್ವತಃ ತನ್ನ ಕಣ್ಣನ್ನು ತಾನೇ ತಿವಿದುಕೊಂಡು ನನ್ನ ಕಣ್ಣನ್ನು ಉಳಿಸಿ ಎಂದು ಗೋಗರೆಯುವ ನಾಟಕವೇಕೆ? ಹೃದಯವನ್ನು ಇರಿದುಕೊಂಡು ಹೃದಯ ಉಳಿಸಿ ಎಂಬ ಕಣ್ಣೀರೇಕೆ? ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಕುಡಿದು ಜೀವ ಉಳಿಸಿ ಎಂದು ಬೇಡುವಂತ ದೈನೇಸಿ ಸ್ಥಿತಿ ಏಕೆ?

ಈ ಮನುಷ್ಯನಿಗೆ ಬೇಕಿರುವುದು ದೊಡ್ಡ ದೊಡ್ಡ ಉದ್ದುದ್ದದ ವಿಶಾಲ ರಸ್ತೆಗಳು, ವೈಭವೋಪೇತ ಅಪಾರ್ಟ್‌ಮೆಂಟ್ ಗಳು, ಬೃಹತ್ ಕಟ್ಟಡಗಳು, ಜಂಗಲ್ ಲಾಡ್ಜ್ ಗಳು, ಸ್ಮಾರ್ಟ್ ಸಿಟಿಗಳು, ನಿರಂತರ ವಿದ್ಯುತ್, ವಿಮಾನ ನಿಲ್ದಾಣಗಳು, ಭವ್ಯ ಆಸ್ಪತ್ರೆಗಳು, ರಾಸಾಯನಿಕ ಕಾರ್ಖಾನೆಗಳು, ಮೊಬೈಲ್, ಷೂ, ಲಿಪ್ ಸ್ಟಿಕ್, ಡ್ರೆಸ್, ಕಾರ್, ಕಮೋಡ್ ಗಳಲ್ಲಿ ಅತ್ಯುತ್ತಮ ಕ್ವಾಲಿಟಿ ನಿರೀಕ್ಷಿಸುವ - ಬಯಸುವ ಇದೇ ಮನುಷ್ಯನಲ್ಲಿ ಆತನ ದೇಹ ಮತ್ತು ಮಾನಸಿಕ ಆರೋಗ್ಯದಲ್ಲಿ ಯಾವುದೇ ಕ್ವಾಲಿಟಿ ಇರುವುದಿಲ್ಲ.

ಅಭಿವೃದ್ಧಿಯ ಮಾನದಂಡಗಳನ್ನು ತಪ್ಪಾಗಿ ಅರ್ಥೈಸಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಒಂದು ಕಡೆ ಪರಿಸರ ನಾಶ, ಇನ್ನೊಂದು ಕಡೆ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ. ಅಭಿವೃದ್ಧಿಯೂ ಬೇಕು, ಆಧುನಿಕತೆಯೂ ಬೇಕು, ತಂತ್ರಜ್ಞಾನವೂ ಬೇಕು, ಬೃಹತ್ ಜನಸಂಖ್ಯೆಯ ಬೇಡಿಯನ್ನೂ ಪೂರೈಸಬೇಕು, ಅದರಲ್ಲಿ ಯಾವುದೇ ರಾಜಿ ಬೇಡ. ಆದರೆ ಅದರ ಅರ್ಥ ಪರಿಸರ ಮತ್ತು ಮಾನವೀಯತೆಯ ನಾಶ ಎಂದಲ್ಲ. ಅವುಗಳ ಸಮತೋಲನ ಮತ್ತು ಸಮನ್ವಯ.

ದುರಾದೃಷ್ಟವಶಾತ್ ಇಂದಿನ ಅಭಿವೃದ್ಧಿ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಆಗಿದೆ. ತಲೆ ತಿರುಗುತ್ತಿದೆ ಕೆಟ್ಟ ಬಿಸಿಲಿನ ಝಳಕ್ಕೆ ಸಿಲುಕಿ,  ಕಣ್ಣು ಉರಿಯುತ್ತಿದೆ ಧೂಳು ತುಂಬಿದ ಗಾಳಿಗೆ ಸಿಲುಕಿ, ಉಸಿರಾಡುವುದೂ ಕಷ್ಟವಾಗುತ್ತಿದೆ ವಿಷಪೂರಿತ ಗಾಳಿಗೆ ಸಿಲುಕಿ, ಕಿವಿ ನೋಯುತ್ತಿದೆ ಕರ್ಕಶ ಶಬ್ದಕ್ಕೆ ಸಿಲುಕಿ, ಬಾಯಿ ಹುಣ್ಣಾಗಿದೆ ಕಲುಷಿತ ನೀರಿಗೆ ಸಿಲುಕಿ, ನಾಲಿಗೆ ಹೆಪ್ಪುಗಟ್ಟಿದೆ ರಾಸಾಯನಿಕ ಬೆರೆಸಿದ ತಂಪು ಪಾನೀಯಕ್ಕೆ ಸಿಲುಕಿ, ಗಂಟಲು ಕೆಟ್ಟಿದೆ ಮಲಿನ ನೀರಿಗೆ ಸಿಲುಕಿ, ಹೊಟ್ಟೆ ನೋಯುತ್ತಿದೆ ಕಲಬೆರಕೆ ಆಹಾರಕ್ಕೆ ಸಿಲುಕಿ, ಸಾಕೇ, ಇನ್ನೂ ಬೇಕೇ....ಆದರೂ,

ಹೇಳುತ್ತಿದ್ದೇವೆ ಅಭಿವೃದ್ಧಿ ಹೊಂದುತ್ತಿದ್ದೇವೆಂದು, ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ, ಆಡಳಿತ ವ್ಯವಸ್ಥೆ ಹದಗೆಡುತ್ತಿದೆ, ಚುನಾವಣಾ ರಾಜಕೀಯ ಹಳ್ಳ ಹಿಡಿಯುತ್ತಿದೆ, ನ್ಯೆತಿಕತೆ ಕುಸಿಯುತ್ತಿದೆ, ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ, ಆದರೂ, ಹೇಳುತ್ತಿದ್ದೇವೆ ಅಭಿವೃದ್ಧಿ ಹೊಂದುತ್ತಿದ್ದೇವೆಂದು, ಸ್ಮಾರ್ಟ್ ಸಿಟಿ ಆಗುತ್ತಿದೆ,  ಬುಲೆಟ್ ಟ್ರೈನ್ ಬರುತ್ತಿದೆ, ಇ ಆಡಳಿತ ಜಾರಿಯಲ್ಲಿದೆ, ಡಿಜಿಟಲ್ ಇಂಡಿಯಾ ನೋಡುತ್ತಿದ್ದೇವೆ, ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿದ್ದವಾಗಿವೆ, ಫಸ್ಟ್ ಕ್ಲಾಸ್ ರಸ್ತೆಗಳು ಬರುತ್ತಿವೆ, ಶ್ರೀಮಂತರು ಜಾಸ್ತಿಯಾಗುತ್ತಿದ್ದಾರೆ, ತಂತ್ರಜ್ಞಾನ ಮುಂದುವರಿಯುತ್ತಿದೆ, ಆದರೆ,

ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ನಾವು ಮುಂದುವರಿಯುತ್ತಿದ್ದೇವೆಂದು. ಈ ಅಭಿವೃದ್ಧಿ, ಹಣ ಕೇಂದ್ರಿತ, ತಂತ್ರಜ್ಞಾನ ಆಧಾರಿತ, ಅಂಕಿ ಸಂಖ್ಯೆ ಪ್ರೇರಿತ, ವ್ಯಕ್ತಿತ್ವಗಳೇ ಕುಸಿಯುತ್ತಿರುವಾಗ, ಮಾನವೀಯತೆ ಮರೆಯಾಗುತ್ತಿರುವಾಗ, ಸಮಾನತೆ ಕಾಣದಾದಾಗ, ಪ್ರಬುದ್ಧತೆ ಬೆಳೆಯದಾದಾಗ, ಅಭಿವೃದ್ಧಿ ತಾತ್ಕಾಲಿಕ ಮತ್ತು ವಿನಾಶಕಾರಕ, ಪ್ರಕೃತಿ ಪರಿಸರಗಳನ್ನೇ ದೇವರೆಂದು ಹೇಳಿ ಅದರ ಹೃದಯಕ್ಕೆ ಬೆನ್ನಿಗೆ ಚೂರಿ ಹಾಕುವ ಈ ಮನುಷ್ಯ ಪ್ರಾಣಿಗೆ ಏನು ಮಾಡುವುದು. ಇದಕ್ಕಾಗಿ ತಕ್ಷಣ ಮಾಡಬೇಕಾದ ಕೆಲಸ ಬಹಳಷ್ಟಿದೆ. ಆದರೆ ಮಾಡುವವರು ಯಾರು ಎಂಬುದೇ ದೊಡ್ಡ ಪ್ರಶ್ನೆ. ಜನರು ಈ ಅನಾರೋಗ್ಯ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸ್ವಾತಂತ್ರ್ಯದ ನೂರರ ಸಂಭ್ರಮಕ್ಕೆ ಅರ್ಥವಿರುವುದಿಲ್ಲ. ದಯವಿಟ್ಟು ಸ್ವಲ್ಪ ಯೋಚಿಸಿ...

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ