ನಮ್ಮ ಕೈತೋಟ - ನಮ್ಮ ಹೆಮ್ಮೆ
ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್ತು ತರಬೇತಿ ನೀಡುವವರಿಗೆ ಬಹಳ ಮಾಹಿತಿ ಪೂರ್ಣವಾಗಿದೆ. ಈ ಅಂಗೈ ಅಗಲದ (ಪಾಕೆಟ್ ಬುಕ್) ೨೬ ಪುಟಗಳ ಪುಸ್ತಕದಲ್ಲಿ ಬಹಳಷ್ಟು ಆಸಕ್ತಿದಾಯಕ ಮಾಹಿತಿಗಳನ್ನು ನೀಡಲಾಗಿದೆ.
ಈ ಕೃತಿಯ ಬಗ್ಗೆ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷರಾದ ಜಿ ಆರ್ ಪ್ರಸಾದ್ ಅವರು ತಮ್ಮ ಅಧ್ಯಕ್ಷರ ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳು ಹೀಗಿವೆ “ವಿಷ ಮುಕ್ತ, ಕಲಬೆರಕೆ ರಹಿತ ಆಹಾರ ಸೇವನೆ ನಮ್ಮನ್ನು ಮಾರಕ ರೋಗಗಳಿಂದ ರಕ್ಷಿಸಲು ಇರುವ ಏಕೈಕ ದಾರಿ ಹಾಗೂ ಈಗಿನ ವಾಸ್ತವ ಅನಿವಾರ್ಯ ಕೂಡ. ಆರೋಗ್ಯ ಕಾಪಾಡುವಲ್ಲಿ ಬಹುಷಃ ಇದು ಪ್ರಥಮ ಹೆಜ್ಜೆ ಮತ್ತು ಗಮನದಲ್ಲಿ ಇಡಬೇಕಾದ ಬಹಳ ಮುಖ್ಯ ಅಂಶ. ನಮ್ಮ ಕೈತೋಟ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಇದು ಸಾಧ್ಯವೇ ಎಂಬ ಪ್ರಶ್ನೆಗೆ ಈ ಹೊತ್ತಗೆಯಲ್ಲಿ ಲೇಖಕಿಯವರು ಬೆಳಕು ಚೆಲ್ಲಿ ದಾರಿ ತೋರಿಸಿದ್ದಾರೆ. ನಮ್ಮಲ್ಲಿಯ ಇಚ್ಛಾ ಶಕ್ತಿಯ ಕೊರತೆ ನಮ್ಮನ್ನು ಈ ನಿಟ್ಟಿನಲ್ಲಿ ಪ್ರಯತ್ನಿಸಲು ಬಿಡುತ್ತಿಲ್ಲ ಎಂಬುದು ಪ್ರಾಮಾಣಿಕ ಆತ್ಮಾವಲೋಕನದಿಂದ ಕಂಡುಕೊಳ್ಳಬಹುದಾದ ಸತ್ಯ. ಲಭ್ಯವಿರುವ ಸ್ಥಳಾವಕಾಶದಲ್ಲಿ ನಮ್ಮ ಕಿಂಚಿತ್ತು ಸಮಯ ನಮ್ಮ ಸಮಗ್ರ ಆರೋಗ್ಯಕ್ಕೋಸ್ಕರ ನಾವು ವ್ಯಯಿಸಿದ್ದೇ ಆದರೆ ಅದರಿಂದ ಸಿಗುವ ಪರೋಕ್ಷ ಲಾಭವೂ ಅಧಿಕ."
ಲೇಖಕಿಯಾದ ಸರೋಜಾ ಪ್ರಕಾಶ್ ಅವರು ತಮ್ಮ ‘ಮೊದಲ ಮಾತು’ ಬರಹದಲ್ಲಿ “ಭಾರತವು ಹಳ್ಳಿಗಳ ದೇಶ ಎಂಬ ಹೇಳಿಕೆ ಇಂದಿನ ದಿನಕ್ಕೆ ಅನ್ವಯಿಸುತ್ತದೆಯೇ? ಯೋಚಿಸಿ ನೋಡಿ. ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಅಧಿಕವಾಗುತ್ತಿದೆ. ಪಟ್ಟಣ, ನಗರಗಳು ಹಿಗ್ಗುತ್ತಿವೆ. ಅವರೆಲ್ಲರ ಹೊಟ್ಟೆ ತುಂಬಿಸಲು ಎಲ್ಲೆಲ್ಲಿಂದಲೋ ಆಹಾರ ವಸ್ತುಗಳು ಸರಬರಾಜಾಗುತ್ತಿವೆ. ಜಾಗತೀಕರಣದಿಂದಾಗಿ ಕಾಶ್ಮೀರಿ ಸೇಬು, ಮಧ್ಯಪ್ರದೇಶದ ಸಿಹಿ ಜೋಳ ದೂರದಲ್ಲಿರುವವರಿಗೂ ಲಭ್ಯವಾಗುತ್ತಿವೆ. ಆದರೆ ಪೋಷಕಾಂಶಗಳು? ತಾಜಾತನ? ಅವು ಮರೀಚಿಕೆಯಾಗುತ್ತಿವೆಯಲ್ಲವೇ?
ಎಷ್ಟೋ ಜನರಿಗೆ ಬೆಳೆಯುವ ಮನಸ್ಸಿದ್ದರೂ ಮುಂದಡಿ ಇಡುವುದಕ್ಕೆ ಹಿಂಜರಿಕೆಯಿರುತ್ತದೆ. ಯಾವ ಗಿಡ, ಯಾವ ಬೀಜ ಎಲ್ಲಿ ಹೇಗೆ ನೆಡಬೇಕು ಎಂಬ ಗೊಂದಲದಲ್ಲಿ ಅವರಿರುತ್ತಾರೆ. ಕಸ ಹೊರಗೆ ದಾಟಿಸುವ ಸಮಯ ಬಂದಾಗ ತಪ್ಪಿತಸ್ಥ ಭಾವನೆ ಕೆಲವರಲ್ಲಿ ಉಂಟಾಗುತ್ತದೆ. ಇನ್ನು ಕೆಲವರಿಗೆ ಸ್ಥಳ ಇಲ್ಲವೆಂಬ ಕೊರಗು. ಮತ್ತೂ ಕೆಲವರು ಒಂದೆರಡು ಬಾರಿ ಬೆಳೆದು ಮುಂದೆ ಆ ಹವ್ಯಾಸವನ್ನು ಮುಂದುವರೆಸಲಾಗದೆ ಕೈಚೆಲ್ಲುತ್ತಾರೆ. ಅಂಥವರಿಗೆ ಹಾಗೂ ಅವರಿಗೆ ನೆರವಾಗಹೊರಟ ತರಬೇತುದಾರರಿಗಾಗಿ ಈ ಹೊತ್ತಿಗೆ.
ತರಬೇತುದಾರರು ತಾವು ಸ್ವತಃ ಕೈತೋಟ ಬೆಳೆದ ಅನುಭವ ಇರುವವರು ಎಂಬ ಆಧಾರದ ಮೇಲೆ ಕೈತೋಟ ಬೆಳೆಯುವವರಿಗೆ ದಾರಿ ತೋರಿಸುವ ಬಗೆಯನ್ನು ಇದರಲ್ಲಿ ವಿವರಿಸಲಾಗಿದೆ. ಆದರೆ ಇದೇ ಅತ್ಯುತ್ತಮ ಬಗೆ ಎಂತೇನೂ ಅಲ್ಲ. ತರಬೇತುದಾರರು ಇದರಲ್ಲಿರುವ ವಿಷಯಗಳ ಜೊತೆಗೆ ತಮ್ಮ ವಿಚಾರಗಳನ್ನೂ ಬಳಸಿಕೊಂಡು ಮುಂದಾಗಬಹುದು, ಮುಂದಾಗಬೇಕು. ನೆರೆದಿರುವ ಸಭಿಕರನ್ನು ಗಮನಿಸಿ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಬೇಕು. ಎದುರಾಗುವ ಸಮಸ್ಯೆ, ಸವಾಲುಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ತಿಳಿಸಿಕೊಡಬೇಕು. ಕೈತೋಟ ಕೈ ಬಿಡಲಾಗದ ಒಂದು ನಂಟಾಗಿ, ಒಂದು ಸಂಸ್ಕೃತಿಯಾಗಿ ರೂಪುಗೊಳ್ಳಲು ಸಹಕರಿಸಬೇಕು.” ಎಂದು ಹೇಳುವ ಮೂಲಕ ಕೈತೋಟ ಮಾಡುವವರಿಗೆ ಮತ್ತು ತರಬೇತುದಾರಿಗೆ ಹುಮ್ಮಸ್ಸು ಮೂಡಿಸಿದ್ದಾರೆ.
ಈ ಪುಟ್ಟ ಕೃತಿಯಲ್ಲಿ ಕೈತೋಟದ ಪ್ರಾಮುಖ್ಯತೆ, ಕೈತೋಟದ ಅನೇಕ ವಿಧಗಳು, ಕೈತೋಟದ ಸಿದ್ದತೆ, ಆದ್ಯತೆಯ ಬೆಳೆಗಳು, ಸಸಿ ನಾಟಿ, ಬೆಳವಣಿಗೆ, ನಿರ್ವಹಣೆ, ಗೊಬ್ಬರ, ಕೀಟಬಾಧೆ ಮತ್ತು ರೋಗಗಳು, ಕೀಟನಾಶಕ/ಗೊಬ್ಬರವಾಗಿ ಸಸ್ಯಗಳು, ಕೊಯ್ಲು ಮತ್ತು ಕೊಯ್ಲಿನ ನಂತರದ ಕೆಲಸಗಳು, ಕೈತೋಟ ಸಂಭ್ರಮಾಚರಣೆ, ಕೈತೋಟದಲ್ಲಿ ಸುಲಭವಾಗಿ ಬೆಳೆಯುವ ಹಣ್ಣುಗಳು, ಬಹುವಾರ್ಷಿಕ ಗಿಡ/ ಮರಗಳು, ಕರಾವಳಿಗೆ ಸೂಕ್ತ ಸೊಪ್ಪುಗಳು, ಔಷಧೀಯ ಗಿಡಗಳು, ತರಕಾರಿಗಳು, ಗಡ್ಡೆಗಳು ಹಾಗೂ ಎದುರಿಸಬೇಕಾದ ಸಮಸ್ಯೆಗಳು ಮತ್ತು ಸವಾಲುಗಳು ಎನ್ನುವ ಬಗ್ಗೆ ಪುಟ್ಟದಾದ ಮಾಹಿತಿಗಳನು ನೀಡಿದ್ದಾರೆ. ಪುಸ್ತಕದ ಒಳಪುಟದಲ್ಲಿ ನೀಡಲಾದ ಚಿತ್ರಗಳು ಬಹಳ ಸಣ್ಣ ಗಾತ್ರದಲ್ಲಿರುವುದರಿಂದ ಅಷ್ಟೊಂದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಉಳಿದಂತೆ ಎಲ್ಲಾ ವಿಷಯಗಳಲ್ಲಿ ಈ ಕೃತಿ ಮಾಹಿತಿ ಪೂರ್ಣವಾಗಿದೆ.