ನಮ್ಮ ಜವಾಬ್ದಾರಿಗಳೇನು?
ವಾಸ್ತವ ಸತ್ಯದ ಚಿಂತನೆ. ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೇನು, ಜವಾಬ್ದಾರಿ ಏನು? ಮಳೆರಾಯನ ಅರ್ಭಟಕ್ಕೆ ತತ್ತರಿಸಿರುವ ಜನರ ಆಕ್ರೋಶಕ್ಕೆ ಮೊದಲು ಯಾವಾಗಲೂ ಗುರಿಯಾಗುವುದು-
ಪಾಲಿಕೆ / ಮುನ್ಸಿಪಾಲಿಟಿ
ಕಾರ್ಪೋರೇಟರಗಳು
ಶಾಸಕರು ಮತ್ತು ಸಂಸದರು
ಬಿಲ್ಡರುಗಳು/ ಗುತ್ತಿಗೆದಾರರು
ರಾಜ್ಯ ಸರಕಾರ
ಖಂಡಿತವಾಗಿಯೂ.. ಇವರೆಲ್ಲ ನಮ್ಮ ಸಂಕಷ್ಟಕ್ಕೆ ಜವಾಬ್ದಾರರು ಹೌದು. ಜನರ ಆಕ್ರೋಶಕ್ಕೆ ಎಗ್ಗಿಲ್ಲದೆ ವೇದಿಕೆ ಒದಗಿಸಿ ಉಪ್ಪುಖಾರ ಹಚ್ಚಿ ದಿನವಿಡೀ ಪ್ರಸಾರ ಮಾಡುವ 24X7 ಟೀವಿ ಚಾನೆಲ್ ಗಳು. ಆದರೆ... ಈ ನೈಸರ್ಗಿಕ ವಿಕೋಪದಲ್ಲಿ ಜನಸಾಮಾನ್ಯರ ತಪ್ಪು ಏನೂ ಇಲ್ಲವೆ?
* ನಾವು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನೀರಿನ ಬಾಟಲಗಳು, ಥರ್ಮೋಕೋಲ, ಇತರೆ ಕಸಕಡ್ಡಿ ವಸ್ತುಗಳನ್ನ ಚರಂಡಿಯಲ್ಲಿ ಎಸೆದಿಲ್ಲವೆ?
* ಮನೆಯ ರಿಪೇರಿ ಮಾಡಿಸುವಾಗ ಉತ್ಪಾದಿಸುವ ಇಟ್ಟಿಗೆ-ಸಿಮೆಂಟು ತುಂಡುಗಳನ್ನು ಪಕ್ಕದ ಖಾಲಿ ಪ್ಲಾಟನಲ್ಲಿ ಹಾಕಿಲ್ಲವೆ?
* ಮನೆಯ ಕಂಪೌಂಡಿನಲ್ಲಿ ಒಂದು ಹನಿ ನೀರೂ ಇಂಗದಂತೆ ಸಿಮೆಂಟ್ ಸವರಿ ಮುಚ್ಚಿಲ್ಲವೆ?
* ರಾಜಕಾಲುವೆ ಮೇಲೆ ಬಿಲ್ಡರ್ ಮನೆ ಕಟ್ಟುವಾಗ ಅಥವಾ ಡೆವಲಪರ್ ಪ್ಲಾಟು ಮಾರುವಾಗ ವಿರೋಧಿಸಿದ್ದೆವೆಯೇ?
* ವರ್ಷದಲ್ಲಿ ಎಷ್ಟು ಮರಗಳನ್ನು ನೆಟ್ಟಿದ್ದೇವೆ ಅಥವಾ ಬೆಳೆದ ಮರಗಳ ಮಾರಣಹೋಮ ವಿರೋಧಿಸಿದ್ದೇವೆಯೇ?
* ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್/ಪೇಪರ್ ಟೇಬಲ್ ಹೊದಿಕೆ, ನೀರಿನ ಲೋಟ-ಬಟ್ಟಲು, ತಟ್ಟೆ... ಉಪಯೋಗ ನಿಲ್ಲಿಸಿದ್ದೇವೆಯೆ? ವಿರೋಧಿಸಿದ್ದೇವೆಯೆ? ನಾವೇ ಸೃಷ್ಟಿಸಿದ ಈ ಟನ್ ಗಳಷ್ಟು ಕಸ ಸಮಾರಂಭದ ನಂತರ ಏನಾಯಿತು ಅಂತ ಚಿಂತೆ ಮಾಡಿ ಗಾಬರಿಯಾಗಿದ್ದೇವೆಯೆ?
* ಮನೆಯ ಹಸಿ-ಒಣ ಕಸ ಅಚ್ಚುಕಟ್ಟಾಗಿ ವಿಂಗಡನೆ ಮಾಡುತ್ತಿದ್ದೆವೆಯೆ? ಇವಕ್ಕೆ ಪ್ರಾಮಾಣಿಕ ಉತ್ತರ ಹುಡುಕಿದರೆ ಇವತ್ತಿನ ಈ ನಗರಗಳಲ್ಲಿಯ ಪ್ರವಾಹದ ಸಮಸ್ಯೆಗೆ ನಮ್ಮ 'ಕೊಡುಗೆ' ಅರ್ಥವಾದೀತು.
ನಮ್ಮ ಆಡಳಿತದಲ್ಲಿ ಬೇಜವಾಬ್ದಾರಿಯ ಭ್ರಷ್ಟ ವ್ಯವಸ್ಥೆಯ ಜೊತೆಗೆ ಈ ಸಮಸ್ಯೆಗೆ ನಾವೂ ಸಹ ಸಮಾನ ಜವಾಬ್ದಾರರು. ನೀವೇನಂತೀರಿ?
-ಮನು ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ