ನಮ್ಮ ತಂದೆಯ ನೆನಪಿನ ಸುರಳಿಗಳು - 2
ಸಿನೆಮಾ ಹುಚ್ಚು - ನನ್ನ ತಂದೆಯವರಿಗೆ ಬಾಲ್ಯದಿಂದಲೂ ಸಿನೆಮಾ ಹುಚ್ಚು ಅಧಿಕ. ಆಗ ಮುಳಬಾಗಿಲಿನಲ್ಲಿ ಇದ್ದದ್ದು ೨-೩ ಚಿತ್ರಮಂದಿರಗಳು ಮಾತ್ರ, ಆಂಧ್ರದ ಗಡಿಗೆ ಹತ್ತಿರದಲ್ಲಿದ್ದರಿಂದ ಅಲ್ಲಿ ಬಿಡುಗಡೆಯಾಗುತ್ತಿದ್ದ ಬಹುಪಾಲು ಸಿನೆಮಾಗಳು ತೆಲುಗಿನವೇ. ನಮ್ಮ ತಂದೆಯವರಿಗೆ ತೆಲುಗಿನ ಸೂಪರ್ ಸ್ಟಾರ್ N T R ಎಂದರೆ ಸಿಕಾಪಟ್ಟೆ ಅಭಿಮಾನ, ಈ ವಿಷಯಕ್ಕೆ ಯಾವಾಗಲೂ ನನ್ನ ತಂದೆಗೆ ಹಾಗೂ ಅವರ ಅಣ್ಣನಿಗೆ ಗಲಾಟೆ ನಡೆಯುತ್ತಿತ್ತಂತೆ. ಏಕೆಂದರೆ ಅವರ ಅಣ್ಣ ಡಾ.ರಾಜ್ ಅಭಿಮಾನಿ. ಈ ವಿಷಯದಲ್ಲಿ ಹತ್ತಿದ ಜಗಳ ಹರಿಯುತ್ತಿರಲಿಲ್ಲವಂತೆ. ನಮ್ಮ ತಂದೆ ಮನೆಯಲ್ಲಿ NTR ಭಾವಚಿತ್ರಗಳನು ಅಂಟಿಸಿದ್ದರೆ ಅವರ ಅಣ್ಣ ಬಂದು ಅವುಗಳನ್ನು ಕಿತ್ತು ಹಾಕುತ್ತಿದ್ದರಂತೆ. ಸಂಸಾರ ನಡೆಸುವುದೇ ಕಷ್ಟವಾಗಿದ್ದ ಕಾಲದಲ್ಲಿ ಸಿನೆಮಾಗೆ ಎಂದರೆ ಕಾಸು ಕೊಡುತ್ತಿದ್ದರೆ? ಆದರೂ ಸಿನೆಮಾಗಳನ್ನು ನೋಡುತ್ತಿದ್ದರು ಹೇಗೆ?
ದಿನ ರಾತ್ರಿ ಸಿನಿಮಾ ಶುರುವಾಗುತ್ತಿದ್ದದ್ದು ೯.೩೦ ಕ್ಕೆ. ೮.೩೦ ಕ್ಕೆ ಊಟ ಮುಗಿಸಿ ಮನೆಯ ಮೇಲೆ ಹೋಗಿ ಮಲಗುವುದು. ೮.೪೫ ಕ್ಕೆ ಪಕ್ಕದ ಮನೆಯಿಂದ ನಮ್ಮ ತಂದೆಯ ಸಿನಿಮಾ ಮಿತ್ರ ರಂಗಣ್ಣ ಸಿಳ್ಳೆ ಹೊಡೆದು ಕರೆಯುವುದು. ನನ್ನ ತಂದೆ ಮಹಡಿಯಿಂದ ಜಿಗಿದು ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ನಮ್ಮ ತಾತನ ಸೈಕಲ್ ತೆಗೆದುಕೊಂಡು ನಿಧಾನವಾಗಿ ಅಲ್ಲಿಂದ ತಳ್ಳಿಕೊಂಡು ಊರ ಮುಂದಕ್ಕೆ ಬಂದು ಅಲ್ಲಿಂದ ಇಬ್ಬರೂ ಮುಳಬಾಗಿಲಿಗೆ ಹೋಗುತ್ತಿದ್ದರಂತೆ. ಅರ್ಧ ದಾರಿಗೆ ಬರುವ ವೇಳೆಗೆ ಚಿತ್ರಮಂದಿರದಲ್ಲಿ "ನಮೋ ವೆಂಕಟೇಶ" ಹಾಡು ಹಾಕುತ್ತಿದ್ದರಂತೆ, ಆ ಹಾಡು ಶುರುವಾದರೆ ಇನ್ನೇನು ಕೆಲವು ನಿಮಿಷಗಳಲ್ಲಿ ಸಿನೆಮಾ ಶುರು ಎಂದು ಅರ್ಥ. ತಕ್ಷಣ ಸೈಕಲ್ ತುಳಿತವನ್ನು ಜೋರು ಮಾಡಿ ಚಿತ್ರಮಂದಿರದ ಬಳಿ ಬರುತ್ತಿದ್ದರು. ಚಿತ್ರಮಂದಿರದ ಗೇಟ್ ಕೀಪೆರ್ ಇವರಿಬ್ಬರ ಸ್ನೇಹಿತ, ಹಾಗಾಗಿ ಇಬ್ಬರಿಗೂ ಉಚಿತ ಪ್ರವೇಶ. ಹೋಗಿ ಸಿನೆಮಾ ನೋಡಿ ವಾಪಸ್ ಬರುವ ವೇಳೆಗೆ ೧-೧.೩೦ ಸಮಯ. ಸೈಕಲ್ ಅನ್ನು ಯಥಾಸ್ಥಾನದಲ್ಲಿ ನಿಲ್ಲಿಸಿ ಮತ್ತೆ ಮಹಡಿಗೆ ಹೋಗಿ ಮಲಗಿಬಿಡುವುದು. ಕೆಲವೊಂದು ಸಿನಿಮಾಗಳನ್ನು ೨೦ ಸಾರಿ ನೋಡಿರುವುದೂ ಉಂಟು. ಅಕಸ್ಮಾತ್ NTR ಸಿನಿಮಾ ಆ ಚಿತ್ರಮಂದಿರದಲ್ಲಿ ಹಾಕದೆ ಬೇರೆ ಚಿತ್ರಮಂದಿರದಲ್ಲಿ ಹಾಕಿದರೆ ಮನೆಯಲ್ಲಿ ಅವರ ತಾಯಿಯನ್ನು ಕಾಡಿ ಬೇಡಿ ಕಾಸು ತೆಗೆದುಕೊಂಡು ಸಿನೆಮಾ ನೋಡುತ್ತಿದ್ದರು.
ಒಮ್ಮೆ ಹೀಗೆಯೇ ರಾತ್ರಿ ಸೈಕಲ್ ತೆಗೆದುಕೊಂಡು ಸಿನೆಮಾಗೆ ಹೋಗಿ ಬರಬೇಕಾದರೆ ಮಧ್ಯದಲ್ಲಿ ಸೈಕಲ್ ಪಂಚರ್ ಆಗಿದೆ. ಆಗ ಸಮಯ ೧ ಗಂಟೆ. ಅಂದು ದ್ವಾದಶಿ ಇನ್ನೇನು ಎರಡು ಗಂಟೆಗಳ ಸಮಯದಲ್ಲಿ ನಮ್ಮ ತಾತ ಸೈಕಲ್ ತೆಗೆದುಕೊಂಡು ನರಸಿಂಹ ತೀರ್ಥಕ್ಕೆ ಹೋಗಬೇಕು. ಏನು ಮಾಡುವುದು ಎಂದು ಗೊತ್ತಾಗದೆ ಸೀದಾ ಊರಿಗೆ ಬಂದು ಆ ಸಮಯದಲ್ಲಿ ಗೊತ್ತಿರುವ ಗೆಳೆಯನ ಮನೆ ಬಳಿ ಹೋಗಿ ಅವನನ್ನು ಎಬ್ಬಿಸಿ ಅವನ ಬಳಿಯಿದ್ದ ಪಂಚರ್ ಉಪಕರಣಗಳಿಂದ ಸೈಕಲ್ ಸಿದ್ಧಪಡಿಸಿ ಯಥಾಸ್ಥಾನದಲ್ಲಿ ಸೈಕಲ್ ನಿಲ್ಲಿಸಿ ಹೋಗಿ ಮಲಗಿದಾಗ ಬದುಕಿದೆಯಾ ಬಡಜೀವವೇ ಎಂದಂತಾಗಿತ್ತು..
NTR ಸತ್ತ ನಂತರ ನಮ್ಮ ತಂದೆಯವರು ಚಿತ್ರಮಂದಿರದ ಕಡೆ ಸುಳಿದಿಲ್ಲ...ಈಗಲೂ ಟಿ.ವಿ.ಯಲ್ಲಿ NTR ಸಿನೆಮಾಗಳು ಬಂದರೆ ತಪ್ಪದೆ ನೋಡುತ್ತಾರೆ.
ದೆವ್ವದ ಅನುಭವ -
ಹಳ್ಳಿ ಎಂದರೆ ಅಲ್ಲಿ ನಿಮಗೆ ದೆವ್ವದ ಅನುಭವಗಳು ಹೇರಳವಾಗಿ ಸಿಗುತ್ತದೆ. ನಮ್ಮ ಹಳ್ಳಿ ಬಿಟ್ಟರೆ ಮತ್ತೆ ಜನ ಎಂದು ಸಿಗುವುದು ಆರು ಕಿ.ಮೀ ಆದ ಮೇಲೆ ಮುಳಬಾಗಿಲಿನಲ್ಲಿ ಮಾತ್ರ. ಅಲ್ಲಿಯವರೆಗೂ ನಿರ್ಮಾನುಷ ಪ್ರದೇಶ, ನಾಲ್ಕು ಕಿ.ಮೀ ದಾಟಿದ ಮೇಲೆ ಸಿಗುವ ನ್ಯಾಷನಲ್ ಹೈವೇ. ಆವಾಗೊಂದು ಈವಾಗೊಂದು ಓಡಾಡುವ ವಾಹನಗಳು. ನಮ್ಮ ಹಳ್ಳಿ ಆದ ಮೇಲೆ ರಸ್ತೆ ಉದ್ದಕ್ಕೂ ಹುಣಸೆ ಮರಗಳು, ಮಾವಿನ ಮರಗಳು, ಬೇವಿನ ಮರಗಳು, ಹೊಂಗೆ ಮರಗಳು, ಕೆರೆಗಳು ಇದನ್ನೆಲ್ಲಾ ದಾಟಿ ಹೈವೇಗೆ ಬಂದರೆ ಅಲ್ಲೂ ರಸ್ತೆ ಉದ್ದಕ್ಕೂ ಮರಗಳು. ರಾತ್ರಿಯ ಹೊತ್ತು ಆ ಬೃಹತ್ ಮರಗಳನ್ನು ನೋಡಿದರೇನೇ ಹೆದರಿಕೆ ಆಗುವುದು. (ಇದಿಷ್ಟು ಆಗಿನ ಮಾತುಗಳು, ಈಗ ಅಭಿವೃದ್ಧಿಯ ನೆಪದಲ್ಲಿ ಎಷ್ಟೊಂದ್ ಮರಗಳು ನೆಲಕ್ಕುರುಳಿ ಬೋಳು ಬೋಳಾಗಿವೆ).
ಅಂಥಹ ರಸ್ತೆಯಲ್ಲಿ ರಾತ್ರಿಯ ಹೊತ್ತು ಓಡಾಡುವುದು ಎಷ್ಟು ಭಯವಾಗಿರುವುದು ಎಂದು ಊಹಿಸಬಹುದು. ಅದೂ ಅಲ್ಲದೆ ರಸ್ತೆ ದೀಪಗಳು ಇಲ್ಲದ ಕಾಲ. ಡೈನಮೋ ಸಹಾಯದಿಂದ ಉರಿಯುತ್ತಿದ್ದ ಸೈಕಲ್ ದೀಪವೆ ದಾರಿದೀಪ. ಹೀಗೆ ಒಮ್ಮೆ ಸೆಕಂಡ್ ಶೋ ಸಿನೆಮಾ ನೋಡಿಕೊಂಡು ನಮ್ಮ ತಂದೆ ಹಾಗು ಅವರ ಸ್ನೇಹಿತ ರಂಗಣ್ಣ ಹಳ್ಳಿಯ ದಾರಿಯಲ್ಲಿ ಸೈಕಲ್ ತುಳಿದುಕೊಂಡು ವಾಪಸ್ ಬರುತ್ತಿದ್ದಾಗ ಇನ್ನೇನು ಕೆರೆಯನ್ನು ದಾಟಿ ಮುಂದೆ ಬರುತ್ತಿರಬೇಕಾದರೆ ಅವರಿಗೆ ಸ್ವಲ್ಪ ದೂರದಲ್ಲಿ ಏನೂ ಆಧಾರವಿಲ್ಲದೆ ಬರೀ ಬೆಂಕಿ ಚಲಿಸುತ್ತಿತ್ತಂತೆ. ಇವರಿಗೆ ಕೂಡಲೇ ಅದು ಕೊಳ್ಳಿದೆವ್ವ ಎಂದು ಅರಿವಾಗಿ ಕದಲದೆ ಅಲ್ಲೇ ನಿಂತು ನೋಡುತ್ತಿದ್ದರಂತೆ. ಸ್ವಲ್ಪ ಹೊತ್ತಾದ ಮೇಲೆ ಅದು ಇದ್ದಕ್ಕಿದ್ದಂತೆ ಮಾಯವಾಗಿ ಬಿಟ್ಟಿತು. ನಂತರ ಏನೂ ತೊಂದರೆ ಇಲ್ಲದೆ ಊರಿಗೆ ಬಂದು ತಲುಪಿದರಂತೆ.
ಇನ್ನೊಮ್ಮೆ ನಮ್ಮ ತಂದೆ ಹಾಗೂ ಅವರ ಅಣ್ಣ, ಅಕ್ಕಂದಿರ ಜೊತೆ ಮುಳಬಾಗಿಲಿನಿಂದ ಸ್ವಲ್ಪ ತಡವಾಗಿ ಹಳ್ಳಿಗೆ ನಡೆದುಕೊಂಡು ಬರುತ್ತಿರುವಾಗ ದೂರದಲ್ಲಿ ಒಂದು ಬೃಹತ್ ಆಕೃತಿ ಅಂದರೆ ಸುಮಾರು ೧೦ ಅಡಿ ಉದ್ದದ ಬಿಳೀ ಆಕೃತಿ ನಡೆದು ಹೋದಂತೆ ಭಾಸವಾಗಿ ಮತ್ತೊಮ್ಮೆ ಅದೇ ದಿಕ್ಕಿನಲ್ಲಿ ನೋಡಿದಾಗ ಅಲ್ಲೇನು ಕಾಣಿಸುತ್ತಿರಲಿಲ್ಲವಂತೆ.
ಒಮ್ಮೆ ನಮ್ಮ ತಂದೆಯ ಸ್ನೇಹಿತ ರಂಗಣ್ಣ ತಡರಾತ್ರಿಯಲ್ಲಿ ಹಳ್ಳಿಗೆ ನಡೆದು ಬರುತ್ತಿರುವಾಗ ಆತನಿಗೊಂದು ವಿಚಿತ್ರವಾದ ಅನುಭವವಾಯಿತಂತೆ. ಹಳ್ಳಿಗೆ ಇನ್ನೊಂದು ಐದು ನಿಮಿಷ ಬಾಕಿ ಇದ್ದಿರಬಹುದು. ಅಷ್ಟರಲ್ಲಿ ಆತನಿಗೆ ಏನಾಯಿತು ಎಂದು ಅರಿವಿಲ್ಲ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟರೆ ಆತ ಪಕ್ಕದ ಹಳ್ಳಿಯ ಒಂದು ಮನೆಯ ಮುಂದೆ ಮಲಗಿದ್ದರಂತೆ. ನಂತರ ಹಳ್ಳಿಗೆ ಬಂದ ಆತನನ್ನು ವಿಚಾರಿಸಿದಾಗ ಏನಾಯಿತೋ ಗೊತ್ತಿಲ್ಲ, ಹಳ್ಳಿಗೆ ಐದು ನಿಮಿಷ ಬಾಕಿ ಇದ್ದ ಹಾಗೆ ಎದುರಿಗೆ ಯಾರೋ ಬಂದರು ಅಷ್ಟೇ ಗೊತ್ತಿರುವುದು ಬೆಳಿಗ್ಗೆ ಎದ್ದು ಕಣ್ಣು ಬಿಟ್ಟರೆ ಅಲ್ಲಿದ್ದೆ ಎಂದರಂತೆ.
Comments
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2
In reply to ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2 by malleshgowda
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2
In reply to ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2 by prasannakulkarni
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2
ಉ: ನಮ್ಮ ತಂದೆಯ ನೆನಪಿನ ಸುರಳಿಗಳು - 2