ನಮ್ಮ ನಾಡು

ನಮ್ಮ ನಾಡು

ಕವನ

ಹಸಿರ ರಾಶಿ ಚೆಲ್ಲಿರುವ ಗಿರಿವನ,
ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ,
ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ,
ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ.

ಮಕ್ಕಳ ತೊದಲಲಿ ಸರಿಗಮ ಗಾನ,
ತಾಯಿಯ ನುಡಿಯಲಿ ಜೋಗುಳ ಗಾನ,
ಮಂದಿಯ ನುಡಿಯಲಿ ಜನಪದ ಗಾನ,
ನುಡಿ ಇದು ನುಡಿದರೆ, ಅಮೃತಪಾನ.

ಕವಿತಾಲೋಕಕೆ ಎಲ್ಲರ ಕೊಂಡೊಯ್ಯುತ,
ಕಾವ್ಯರಸಧಾರೆಯ ಹೊನಲನು ಹರಿಸುತ,
ನುಡಿಯನು ಕಾವ್ಯಮಾಲೆಯಿಂದಲಂಕರಿಸಿ ಶ್ರೀಮಂತವಾಗಿಸಿಹ,
ಶಾರದೆ ಪೀಠವಿದು, ಕವಿಗಳ ತಾಣ.

ನೀತಿಗಳ ಸಾರುವ ವಚನಾಮೃತವು,
ಭಕ್ತಿಯ ಪಾಡುವ ದಾಸರ ಪದವು,
ಸಂತರು ತೋರಿದ ಮುಕ್ತಿಯ ನಿಲುವು,
ಮಾರ್ಗವ ತೋರಿದವು ಗುರಿ ಸೇರಲು ಮನವು.

ಆಚಾರ್ಯರುಗಳ ತತ್ವ ವಿಚಾರ,
ಭೂಸ್ವರ್ಗವಾಗಿಸಿಹ ದೇವನವತಾರ,
ದೇಗುಲಗಳಲಿ ದೈವ ಸಾಕ್ಷಾತ್ಕಾರ,
ದರ್ಶನಭಾಗ್ಯದಿ ಕಳೆವುದು ಪಾಪದ ಭಾರ.

ಶಿಲ್ಪಕಲೆಗಳಾ ವಿಸ್ಮಯ ತಾಣ.
ಕಣ್ಮನ ಸೆಳೆಯುವ ಕಲೆಯುದ್ಯಾನ.
ಕಲಾ ಸಾಧಕರ ನೆನಪಿಸುವ ತಾಣ,
ಕಲಾದೇವತೆ ಒಲಿದುದು ನಮಗೆ ವರದಾನ.

ಈ ನಾಡಲಿ ಜನಿಸಿದುದು ನಮ್ಮಯ ವರವು,
ಮುಡುಪಾಗಿರಲಿ ನಿನಗೀ ತನುವು ಮನವು.
ನಿನಿಗಿದೊ ಜನನ, ನಿನಗಿದೊ ಮರಣ
ತುಂಬು ಭಾವದಿ ನುಡಿದಿದೆ ಅಂತಃಕರಣ.