ನಮ್ಮ ನುಡಿಯು

ನಮ್ಮ ನುಡಿಯು

ಕವನ

ದೇವನು ಕರುಣಿಸಿದನೆಮಗೆ ಮಾತಿನ ಭಾಗ್ಯವನ್ನು
ನುಡಿಯಲು ಮನುಜನು ಸೃಷ್ಠಿಸಿದ ಹಲವು ಭಾಷೆಯನ್ನು.
ಭಾಷೆಯು ಒಗ್ಗೂಡಿಸಿದೆ ವಿವಿಧ ಪ್ರಾಂತ್ಯಗಳನ್ನು
ಜನಮನಗಳ ಬಂಧಿಸಿತು ಈ ನುಡಿ - ಹೊನ್ನು.
ನುಡಿ ಕನ್ನಡವಾಗಿರಲು ಎಷ್ಟು ಚೆನ್ನು
ನುಡಿದು ಎಲ್ಲೆಡೆ ಫಸರಿಸು ಕಸ್ತೂರಿ ಸುಗಂಧವನ್ನು.

ತಾಯಿ ಲಾಲಿಹಾಡಿಗೆ ಧನಿಗೂಡಿಸುವ ಈ ನುಡಿಯು.
ತಂದೆಯ ಪ್ರೀತಿಯನು ತಿಳಿಹೇಳಿದ ಈ ನುಡಿಯು.
ಒಡಹುಟ್ಟಿದವರ ಬಾಂದವ್ಯವನು ಬೆಸೆದ ಈ ನುಡಿಯು.
ಅಜ್ಜನ ನೀತಿಕತೆಗಳಲಿ ಕಾಣುವ ಈ ನುಡಿಯು.
ಮಕ್ಕಳಲಿ ತೊದಲನು ನುಡಿಸಿದ ಈ ನುಡಿಯು.
ಗೆಳೆಯರೊಡನೆ ಆಟದಿ ಕಲೆತ ಈ ನುಡಿಯು.

ಮಂದಿಯು ಪದಕಟ್ಟಿ ಹಾಡುವ ಈ ನುಡಿಯು.
ಸುಶ್ರಾವ್ಯ ಗಾಯನದಿ ಕೇಳಿಬರುವ ಈ ನುಡಿಯು.
ದಾಸರು ದೇವನಕೊಂಡಾಡಲು ಹಾಡಿದ ಹೊನ್ನುಡಿಯು.
ಸಾಧುಸಂತರು ಬಳುವಳಿಯಿತ್ತ ಹಿತನುಡಿಯು.
ಕಾವ್ಯ ರಸಧಾರೆಯನು ಚೆಲ್ಲಿದ ಕವಿನುಡಿಯು.
ಕವಿ ಭಾವನೆಗಳಿಗೆ ಜೀವ ತುಂಬಿದ ಸವಿನುಡಿಯು.

ಮನಗಳಲಿ ಭಾವಗಳ ಬೀಜ ಬಿತ್ತಿದ ಈ ನುಡಿಯು.
ಸವಿಗನಸಿಗೆ ಕಥೆಯನೆಣೆದ ಈ ನುಡಿಯು.
ಅತ್ತು ಕರೆವಾಗ ನೆನಪಲುಳಿವ ಈ ನುಡಿಯು.
ಸವಾಲುಗಳನ್ನೆದುರಿಸಲು ಭರವಸೆ ತುಂಬುವ ಈ ನುಡಿಯು.
ಸಾಧನೆಯ ಹಾದಿಯಲಿ ನಿರ್ಭಯ ಸೃಷ್ಠಿಸುವ ಈ ನುಡಿಯು.
ಕಣಕಣದಿ ಬೆರೆತು ಉಸಿರಾಗಿಹ ಈ ನುಡಿಯು.

ಕೊಲ್ಲುವ ಹುದುಗಿರುವ ಭಾಷೆಯ ಮೇಲಿನ ಕೀಳರಿಮೆ
ಬೆಳೆಸಿಕೊಳ್ಳುವ ಕನ್ನಡವು ನಮ್ಮದೆಂಬ ಹಿರಿಮೆ
ಎಮಗೆ ಬಳುವಳಿಯಿತ್ತಿತು ಜೀವನದಿ ಎಲ್ಲಾ ಸೌಖ್ಯವು
ಕನ್ನಡವ ಕಲಿಯಲೇಕೆ ಎಂಬುದು ಎಷ್ಟು ಸೌಜನ್ಯವು?
ಕನ್ನಡ ನಮ್ಮದಾಗಿರುವದೆಮ್ಮ ಭಾಗ್ಯವು
ಕನ್ನಡ ಕಲಿಸಿ ಬೆಳೆಸುವುದೆಮ್ಮ ಕರ್ತವ್ಯವು.