ನಮ್ಮ ಬಾಪು - ನಮ್ಮ ಶಾಸ್ತ್ರೀಜಿ

ನಮ್ಮ ಬಾಪು - ನಮ್ಮ ಶಾಸ್ತ್ರೀಜಿ

ರಾಷ್ಟ್ರಪಿತ ಬಾಪೂಜಿ ಹಾಗೂ “ಜೈ ಜವಾನ್ ಜೈ ಕಿಸಾನ್” ರುವಾರಿ ಹಿರಿಯ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಹುಟ್ಟಿದ್ದು ಅಕ್ಟೋಬರ್ ೨ರಂದು. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಇವರ ಚರಿತ್ರೆಯನ್ನು ಅಭಿನಯಿಸಿ ಹಾಡಿದವರು. ಮಹಾನುಭಾವರಾದ ಬಾಪೂಜಿಯವರ  ಜನ್ಮ ದಿನವನ್ನು ನಾವೆಲ್ಲ ಸೇರಿ ಆಚರಿಸೋಣ.

ಅಕ್ಟೋಬರ್ ೨ರಂದು ನಾವು ಗಾಂಧೀಜಿಯವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಅದೇ ದಿನ ಭಾರತದ ಶ್ರೇಷ್ಠ ದಾರ್ಶನಿಕ, ಮುತ್ಸದ್ದಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಸಹ. ಇವೆರಡನ್ನೂ ಒಟ್ಟಿಗೆ ಆಚರಿಸುತ್ತೇವೆ.

೧೮೬೯ ಅಕ್ಟೋಬರ ೨ರಂದು ಗುಜರಾತ್ ನ ಪೋರಬಂದರಿನಲ್ಲಿ ಕರಮಚಂದ್ ಗಾಂಧಿ, ಪುತಲೀಬಾಯಿ ದಂಪತಿಗಳಿಗೆ ಬಾಲಕ ಮೋಹನ್ ದಾಸನ ಜನನವಾಯಿತು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸತ್ಯದ ಪ್ರತಿಪಾದಕರು. ಸತ್ಯ ಹರಿಶ್ಚಂದ್ರ, ಶ್ರವಣನ ಪಿತೃಭಕ್ತಿ ಗಾಂಧೀಜಿಯವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪುಸ್ತಕಗಳು. ತಾವೇ ಆ ಪುಸ್ತಕದ ಪಾತ್ರಧಾರಿಗಳಾಗಿ ನಟಿಸಿ ಸಂತೋಷಪಡುತ್ತಿದ್ದರಂತೆ. 

ಬಾಲ್ಯದಲ್ಲಿ ಕಲಿಯುತ್ತಿದ್ದಾಗ ತಂದೆಯವರನ್ನು ಎದುರಿಸಲು ಧೈರ್ಯ ಸಾಲದೆ ಪತ್ರ ಬರೆದಿದ್ದರಂತೆ. ಅಪ್ಪಟ ಸಸ್ಯಾಹಾರಿ ಕುಟುಂಬದವರಾದ ಬಾಪು ಗೆಳೆಯರ ಜೊತೆ ಸೇರಿ ಮಾಂಸಾಹಾರ ಸೇವಿಸಿದ್ದರಂತೆ. ತಪ್ಪು ಮಾಡಿದ್ದೇನೆಂದು ಅವರ ಆತ್ಮ ಚುಚ್ಚುತ್ತಿತ್ತಂತೆ. ತಂದೆಯವರಿಗೆ ತನ್ನ ಮಗನ ಸತ್ಯ ನೋಡಿ ಸಂತೋಷದ ಕಣ್ಣೀರು ಧಾರಕಾರವಾಗಿ ಸುರಿಯಿತಂತೆ. ಅದೇ ಕೊನೆ, ನಂತರ ಸೇವಿಸಿಲ್ಲವಂತೆ. ವಿದೇಶಕ್ಕೆ(ಲಂಡನ್ ಗೆ) ಓದಲು ಹೋಗುವಾಗ, ಅವರ ತಾಯಿಯವರು ಮಾಂಸ, ಮದ್ಯ, ಕಾಮದಾಹ, ಹಿಂದೂ ಆಚಾರ ‌ಸೂತ್ರಗಳನ್ನು ಪಾಲಿಸುತ್ತೇನೆಂದು ಪ್ರಮಾಣ ಮಾಡಿಸಿದ್ದರಂತೆ. “ಸತ್ಯದೊಂದಿಗೆ ನನ್ನ ಪ್ರಯೋಗಗಳು” ಬಾಪೂರವರ ಆತ್ಮಚರಿತ್ರೆ ಯಲ್ಲಿ ಎಲ್ಲವನ್ನು ಬರೆದಿದ್ದಾರೆ.

ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಧುಮುಕಿದವರು. ಸತ್ಯ, ಪ್ರೇಮ, ನ್ಯಾಯ, ನಿಷ್ಠೆ, ತ್ಯಾಗ, ಬಲಿದಾನ, ಅಹಿಂಸೆ ಇವರ ಅಸ್ತ್ರಗಳಾಗಿದ್ದವು. ಭಾರತದ ಸರ್ವೋತ್ಕ್ರೃಷ್ಟ ವ್ಯಕ್ತಿ ,ಧಾರ್ಮಿಕ ಚಿಂತಕ. ಲಂಡನ್ ನಲ್ಲಿ ಭಗವದ್ಗೀತೆಯ ಅನುವಾದ ಜವಾಬ್ದಾರಿ ನಿಭಾಯಿಸಿದರು. ಹಿಂದೂ ಧರ್ಮದ ಸಾರವನ್ನು, ಕ್ರ್ಯೆಸ್ತ ಧರ್ಮದ ಬಗ್ಗೆ ಆಳವಾದ ಅಧ್ಯಯನ ಕೈಗೊಂಡರು. ಥಿಯೋಫಿಕಲ್ ಸೊಸೈಟಿ ಸೇರಿ ವಿಶ್ವವೇ ನನ್ನ ಮನೆ, ಎಲ್ಲರೂ ಒಂದೇ, ಸಹೋದರರಂತೆ  ಪರಸ್ಪರ ಜೀವಿಸೋಣ ಎಂಬ ಕರೆಯಿತ್ತರು. ಎಲ್ಲಾ ಧರ್ಮಗಳ ಸಾರವನ್ನು ಅರಿಯುವ ನಿಟ್ಟಿನಲ್ಲಿ ಅಧ್ಯಯನ ಮಾಡಿ, ಒಳತಿರುಳನ್ನು ಕರಗತ ಮಾಡಿಕೊಂಡರು.

೧೮೯೧ರಲ್ಲಿ ವಕೀಲಿ ವೃತ್ತಿಗಿಳಿದರೂ ಸಮಾಧಾನವಿರಲಿಲ್ಲ. ದಬ್ಬಾಳಿಕೆ, ಹಿಂಸೆ, ಲಂಚ, ಭ್ರಷ್ಟಾಚಾರ ಅವರಿಗೆ ಹಿಡಿಸುತ್ತಿರಲಿಲ್ಲ. ದಕ್ಷಿಣ ಆಫ್ರಿಕಾದ ಕರಿಯ ಜನಾಂಗದವರ ನಾಗರಿಕ ಹಕ್ಕು ಗಳಿಗಾಗಿ ಸತತ ಹೋರಾಡಿ ಗೆದ್ದ ಧೀಮಂತ ರು. ಆಫ್ರಿಕಾದಲ್ಲಿನ ವರ್ಣಭೇಧ ನೀತಿ ಅವರ ಮನಸ್ಸನ್ನು ಕಲಕಿತು. ಮಾನವರೆಲ್ಲ ಒಂದೇ ಎಂಬ ವಿಶ್ವ ಮಾನವತೆಯ ಸಂದೇಶ ಸಾರಿದರು.

ಬಹಳ ಸರಳ ವ್ಯಕ್ತಿತ್ವ, ನಡೆನುಡಿ, ಸತತ ಪರಿಶ್ರಮ, ನಮ್ಮ ಕೆಲಸವನ್ನು ನಾವೇ ಮಾಡಬೇಕು, ‘ಕಾಯಕದಲ್ಲಿ ದೇವನಕಾಣು’ ತತ್ವ, ಉಪವಾಸ, ತನಗೆ ತಾನೇ ಶಿಕ್ಷೆ ವಿಧಿಸುವುದು, ತ್ಯಾಗಿ, ಭೋಗ ವರ್ಜ್ಯ, ಶಾಂತಿಯಲ್ಲಿ ಎಲ್ಲವೂ ಅಡಗಿದೆ ಎಂದು ಸಾರಿದವರು, ಈ ಎಲ್ಲಾ ಗುಣಗಳಿಂದ ಮಹಾತ್ಮಾ, ಬಾಪೂ, ಮಕ್ಕಳ ತಾತ, ರಾಷ್ಟ್ರಪಿತ ಅನಿಸಿಕೊಂಡ ಮಹಾಚೇತನ. ಉಪ್ಪು ಎನ್ನುವುದು ಅವಶ್ಯವಸ್ತು, ಅದಕ್ಕೂ ಕರ ವಿಧಿಸಿದಾಗ ಸತ್ಯಾಗ್ರಹವನ್ನೇ ಮಾಡಿದವರು. ಬ್ರಿಟಿಷರ ದಬ್ಬಾಳಿಕೆ, ಅರಸೊತ್ತಿಗೆ ವಿರುದ್ಧ ಮೌನ ಪ್ರತಿಭಟನೆ, ಯಾರು ಏನೇ ಹೇಳಿದರೂ ಹಿಂಸೆ ಬೇಡ, ಪ್ರೀತಿ ವಿಶ್ವಾಸದಿಂದಲೇ ಜನಮಾನಸದಲ್ಲಿ ನೆಲೆ ನಿಂತ ರಾಷ್ಟ್ರ ಸೇವಕರೆಂದರೂ ತಪ್ಪಾಗಲಾರದು. ನಿರ್ಭೀತಿಯಿಂದ ದುಡಿಯಬೇಕು, ತನ್ನೊಂದಿಗೆ ಪರಹಿತ ಸಾಧಿಸಬೇಕು.ಸಮಾಜಕ್ಕೆ ಹಿತವಾದುದನ್ನು ನೀಡಬೇಕು. ಹಗೆತನ, ದ್ವೇಷ, ಅಸೂಯೆ ಬೇಡ, ಇದು ಮನುಷ್ಯ ನ ನಾಶಕ್ಕೆ ಕಾರಣವೆಂದರು. ಯಾರಲ್ಲಿ ಹಗೆತನವಿಲ್ಲವೋ, ಮನಶುದ್ಧಿ ಇದೆಯೋ, ಮತ್ಸರವಿಲ್ಲವೋ ಅವರೇ ನಿಜವಾದ ಶ್ರೀಮಂತರೆಂದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವ ಕೆಲಸ ಇಂದಿನ ನಮ್ಮ ಕೈಯಲ್ಲಿದೆ.

“ತೃಪ್ತಿ ಎನ್ನುವುದು ಪ್ರಯತ್ನದಲ್ಲಿದೆ, ದೊಡ್ಡ ದೊಡ್ಡ ಸಾಧನೆಯಲ್ಲಿ ಅಲ್ಲ” ಎಂದರು. ಅದಮ್ಯ ಇಚ್ಛೆ  ಎಲ್ಲಿದೆಯೋ ಅಲ್ಲಿ ಸಾಧನೆ ತನ್ನಿಂದ ತಾನೆ ಬರುತ್ತದೆ. ಆರೋಗ್ಯಕರ ಚರ್ಚೆಗಳು ಪ್ರಗತಿಯ ಸಂಕೇತ. ಭಗವಂತನಿಗೆ ಯಾವುದೇ ಕಟ್ಟುಪಾಡುಗಳಿಲ್ಲ ,ನಮಗ್ಯಾಕೆ ಅದೆಲ್ಲ ಎಂದು ಹೇಳಿದ ಮಹಾನುಭಾವರವರು. ಶಾಲೆಗಳಲ್ಲಿ, ಸಂಘಸಂಸ್ಥೆಗಳಲ್ಲಿ ಈ ದಿನ ರಾಷ್ಟ್ರನಾಯಕರೀರ್ವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ, ಸ್ವಚ್ಛತಾ ಕಾರ್ಯಕ್ರಮ, ಭಾಷಣ, ಛದ್ಮವೇಷ, ಕೆಲವು ಸ್ಥಳೀಯ ಆಟಗಳನ್ನು ಹಮ್ಮಿಕೊಳ್ಳುತ್ತಾರೆ. ಕೆಲವೆಡೆ ಗಿಡನೆಡುವುದೂ ಇದೆ. ಈ ರೀತಿಯಾಗಿ ನಮನಗಳನ್ನು ಸಲ್ಲಿಸಿ ನೆನಪಿಸಿಕೊಳ್ಳುವರು. ಬಾಪೂಜಿಯವರ ಧ್ವನಿಗೆ ನಾವು ಧ್ವನಿ ಗೂಡಿಸೋಣ.

ಸ್ವಾತಂತ್ರ್ಯ ಹೋರಾಟದ ಲ್ಲಿ ಧುಮುಕಿದ ಧೀಮಂತರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಮುಖರು. ಪ್ರಾಮಾಣಿಕ, ಸ್ವಾಭಿಮಾನಿ, ದೇಶಾಭಿಮಾನಿ, ಬಡತನದ ಜೀವನ ಇವೆಲ್ಲವೂ ಶಾಸ್ತ್ರಿಯವರನ್ನು ಉನ್ನತ ಸ್ಥಾನಕ್ಕೇರಿಸಿತು. ಶ್ರೇಷ್ಠ ಮುತ್ಸದ್ದಿ, ಸಜ್ಜನ ರಾಜಕಾರಿಣಿ, ಅಪ್ರತಿಮನಾಯಕ, ಪಾಕಿಸ್ತಾನ ಯುದ್ಧ ನಿಭಾಯಿಸಿ ಜಯಶಾಲಿಯಾದ, ಆಹಾರ ಕೊರತೆಗಾಗಿ ರೈತಪರ ಹೋರಾಟ ಆ ನಿಟ್ಟಿನಲ್ಲಿ ದುಡಿದ ಸಾಹಸಿಗ. ಭಾರತಿಯ ಸಂಸ್ಕೃತಿಯನ್ನು ಪ್ರತಿಪಾದಿಸಿದ ರಾಷ್ಟ್ರ ನಾಯಕ. ಶಾಸ್ತ್ರೀಜಿಯವರ ಜನ್ಮದಿನವನ್ನು ಜೊತೆಗೆ ಆಚರಿಸೋಣ. ಇಬ್ಬರೂ ಮಹಾ ನಾಯಕರುಗಳೂ ದೇಶಕ್ಕಾಗಿ ಹೋರಾಡಿದ, ರಾಷ್ಟ್ರಕಂಡ ಮಹಾ ಚೇತನಗಳು, ಇದೋ ನನ್ನ ನಮನಗಳು.

-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ