ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)
ಇಂದು ಬೆಳಿಗ್ಗೆ, ಸಿಂಗಪುರದ ಸಾಹಿತ್ಯಾಸಕ್ತರ ಸ್ನೇಹಕೂಟದ ವತಿಯಿಂದ ನಿಯಮಿತವಾಗಿ ಕಳಿಸಲ್ಪಡುವ ನೆನಪೋಲೆ ಶ್ರೀ. ಎನ್.ನರಸಿಂಹಯ್ಯನವರ ಹುಟ್ಟುಹಬ್ಬ ಇಂದೆ ಎಂದು ನೆನಪಿಸಿತು. ಅದನ್ನು ನೋಡುತ್ತಿದ್ದ ಹಾಗೆ ಮನ ನೇರ ಬಾಲ್ಯದ ದಿನಗಳತ್ತ ಓಡಿತ್ತು. ಆ ದಿನಗಳಲ್ಲಿ ಕನ್ನಡ ಓದಲು ಹಚ್ಚಿದ್ದೆ ನರಸಿಂಹಯ್ಯ, ಮಾಭೀಶೆ, ಜಿಂದೆ ನಂಜುಂಡಸ್ವಾಮಿ ಇತ್ಯಾದಿಯವರ ಪತ್ತೇದಾರಿ ಕಾದಂಬರಿಗಳ ಮೂಲಕ. ಏಳನೆ ಕ್ಲಾಸಿಗೂ ಮೊದಲೆ ಹತ್ತಿದ ಈ ಹುಚ್ಚು ಎಷ್ಟರಮಟ್ಟಿಗಾಯ್ತೆಂದರೆ, ನೂರು ಪುಟದ ಕನ್ನಡ ಪುಸ್ತಕವೊಂದನ್ನು ಹೆಚ್ಚು ಕಡಿಮೆ ಒಂದೆ ಗಂಟೆಯಲ್ಲಿ ಓದಿ ಮುಗಿಸುವಷ್ಟು! ( ಅದಕ್ಕೆ ಎಂಟನೆ ಕ್ಲಾಸಿಗೂ ಮೊದಲೆ ಮೂಗಿನ ಮೇಲೆ ಕನ್ನಡಕ ಬಿತ್ತು - ಎನ್ನುತ್ತಿದೆ ಭೂನಾರದ ಉವಾಚ). ಈ ಹುಚ್ಚು ಕ್ರಮೇಣ ಕಾದಂಬರಿಗಳತ್ತ ತಿರುಗಿ ಅನಕೃ, ತರಾಸು, ಟೀ.ಕೆ.ರಾಮರಾವ್, ತ್ರಿವೇಣಿ ತರವಷ್ಟೆ ಅಲ್ಲದೆ, ಉಷಾ ನವರತ್ನಾರಾಂ, ಸಾಯಿಸುತೆ ಇತ್ಯಾದಿಗಳೆಲ್ಲರ ಪುಸ್ತಕವನ್ನು ಓದಿಸಿ, ಬರಿ ಭಾಷೇ ಮಾತ್ರವಲ್ಲದೆ, ನಮ್ಮ ಆಚಾರ, ವಿಚಾರ, ಸಂಪ್ರದಾಯಗಳನ್ನು ಅಂತರ್ಗತವಾಗಿಸಿತು. ಈಗಿನ ಬರೆಯುವ ಸಾಮರ್ಥ್ಯವೇನಾದರೂ ಇದ್ದಲ್ಲಿ, ಅದರ ಮೂಲ ಬೀಜ ಬಿತ್ತನೆಯಾಗಿದ್ದು ಇವುಗಳಿಂದೆ ಎನ್ನಬಹುದು.
ನರಸಿಂಹಯ್ಯನವರ ನೆನಪಿನಲ್ಲಿ ಇದೊಂದು ಕಾವ್ಯ ನಮನ.
ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)
______________________________________________
ನೆನಪಿದೆಯ ಎನ್. ನರಸಿಂಹಯ್ಯ
ಪತ್ತೇದಾರಿ ಕಾದಂಬರಿಗಳ ದೈತ್ಯ
ಮಾಭೀಶೇ ಜಿಂದೇಗಳ ಜೊತೆಯಲೆ
ಕಟ್ಟಿದ ಕನ್ನಡ ಪತ್ತೆದಾರರದೆ ಜಾಲ ||
ಕನ್ನಡ ಶರ್ಲಾಕ್ ಹೋಂಗಳ ತುರುಸ
ಪತ್ತೇದಾರ ಪುರುಷೋತ್ತಮ ಸಾಹಸ
ಮಧುಸೂಧನನೇನು ಕಮ್ಮಿಯೆ ಬಿಡಿ
ಎಷ್ಟೊ ಕೊರಮರ ಹಿಡಿದ ಭಲೆಜೋಡಿ ||
ದೊಡ್ಡ ಕರ್ನಾಟಕ ಇಬ್ಬರೆ ಇಬ್ಬರು ಸಾಕೆ
ಪತ್ತೇದಾರ ಅರಿಂಜಯ ಹುಟ್ಟಿದ್ದಿನ್ಯಾಕೆ!
ಗಾಳಿ ಬಂದಾಗ ಗಾಳಿರಾಯನೂ ತೂರಿ
ಎಲ್ಲಿ ನೋಡುವ, ಯಾರಾಗುವರು ಪರಾರಿ?
ಮಾತು ಗಾದೆ ಕಥೆಗಳೆಲ್ಲ ಈ ಮಣ್ಣಿನದೆ
ಊರು ಕೇರಿ ಹೆಸರುಗಳು ಬರಿ ನಮದೆ
ಪೋಲೀಸ್ ಠಾಣೆ ಜಾಗವು ನಾಡ ಸೊಗಡು
ನಾವ್ಹುಡುಗರಿಗೆ ಪಾಠ ಕಲಿಸಿಕೊಟ್ಟ ಜಾಡು ||
ಕೆರಳಿಸುತ ಕುತೂಹಲಾಸಕ್ತಿಗಳ ಬಹಳ
ಓದಿಸಿ ಕನ್ನಡ ಕಲಿಸಿದಾ ಕಾದಂಬರಿಗಳ
ವಿಹಂಗಮ ಊಹನಾ ಲೋಕದ ಮೇಲೇರಿ
ಸವಾರಿ ಮಾಡಿಸಿದವೆ ನಮದೆ ಪತ್ತೇದಾರಿ ||
ಬರೆದದ್ದು ಯಾರಿಟ್ಟ ಲೆಕ್ಕ, ಬರಿದಾಗಿದ್ದಷ್ಟೆ
ಭಯಂಕರ ಬೈರಾಗಿ ಜೀವನ ಇರಿದಿದ್ದೆಷ್ಟೆ?
ಕಂಗೆಟ್ಟವೇನು ಪತ್ತೆದಾರರ ಸಾಹಸ ತಂಡ
ಒಂದರ ಹಿಂದೊಂದ ಪುಸ್ತಕದಾ ಪ್ರಚಂಡ ||
ಇಂದು ಹುಟ್ಟಿದ ದಿನ ನೆನಪಾಗಿಸಿದವೆ ವೃಷ್ಟಿ
ಮೃತ್ಯುಂಜಯ ಕುಮಾರ ರವಿಕಾಂತರಾ ಸೃಷ್ಟಿ
ಪ್ರೇಯಸಿ ರಜನಿ ಜತೆ ಯಾವ ಬಾಂಡಿಗೆ ಕಮ್ಮಿ
ನಮ್ಮ ಪತ್ತೇದಾರಿ ಸಾಹಿತ್ಯಲೋಕ ಅಮರದನಿ ||
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
Comments
ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)
In reply to ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ) by partha1059
ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)
ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)
In reply to ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ) by ಗಣೇಶ
ಉ: ನಮ್ಮ ಬಾಲ್ಯದ 'ಶರ್ಲಾಕ್ ಹೋಂ' (ಎನ್. ನರಸಿಂಹಯ್ಯ ನೆನಪಲಿ)