ನಮ್ಮ ಬಾಳು
ನನ್ನ ಗೆಳತಿ ನೀನು, ಜೊತೆಗಾತಿ ನೀನು
ನೀ ನಿಗಲು ಚೆನ್ನ ಬಾಳು
ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ
ಆಗುವುದು ಬಾಳು ಗೋಳು.
ನನ್ನ ಚೆಲುವೆ ನೀನು, ನನ್ನ ಒಲವೆ ನೀನು
ನೀ ನಿರಲು ಚೆನ್ನ ಬಾಳು
ನೀ ನೊಂದುಕೊಂಡ್ರೆ, ನೀ ಬೆಂದುಕೊಂಡ್ರೆ
ಆಗುವುದು ಬಾಳು ಗೋಳು.
ಮಲ್ಲಿಗೆಯೇ ನೀನು, ಸಂಪಿಗೆಯೇ ನೀನು
ನೀ ನಗಲು ಕಂಪು ಬಾಳು
ನೀ ಬಾಡಿಹೋದ್ರೆ, ನೀ ಮುದುಡಿಕೊಂಡ್ರೆ
ಆಗುವುದು ಬಾಳು ಗೋಳು.
ಎಡಗಾಲಿ ನೀನು, ಬಲಗಾಲಿ ನೀನು
ಬಂಡಿಯಂತೆ ನಮ್ಮ ಬಾಳು
ಬಲಗಾಲೆ ಮುರಿದ್ರು, ಎಡಗಾಲೆ ಮುರಿದ್ರು
ಆಗುವುದು ಬಾಳು ಗೋಳು.
ನೀನೊಂದು ದಡವು, ನಾನೊಂದು ದಡವು
ನದಿಯಂತೆ ನಮ್ಮ ಬಾಳು
ಪೈಪೋಟಿ ನಮ್ಮ ನಡುವಲ್ಲಿ ಬರಲು
ಆಗುವುದು ಬಾಳು ಗೋಳು
ನಾ ನಿನ್ನ ದನಿಯು, ನೀ ನನ್ನ ದನಿಯು
ಆದಾಗ ಚೆಂದ ಬಾಳು
ನಾನದನು ಮರೆತ್ರೆ, ನೀನದನು ಮರೆತ್ರೆ
ಆಗುವುದು ಬಾಳು ಗೋಳು
ಏನಿದ್ದರೇನು, ಇರದಿದ್ದರೇನು
ನಗುವಿರಲು ಸಗ್ಗ ಬಾಳು
ಬೇರೆಲ್ಲ ಇದ್ದು ನಗುವಿರದೆ ಹೋದ್ರೆ
ಆಗುವುದು ಬಾಳು ಗೋಳು
ನಾನೊಂದು ಒಡವೆ, ನೀನೊಂದು ಒಡವೆ
ಆದಾಗ ಚೆನ್ನ ಬಾಳು
ಬಂಗಾರಕ್ಕಿಂತ ಒಳ್ಳೆ ಬಣ್ಣ ಬಂದು
ಹೊಳೆಯುವುದು ನಮ್ಮ ಬಾಳು
- ಜಯಪ್ರಕಾಶ ನೇ ಶಿವಕವಿ