ನಮ್ಮ ಬೇರನ್ನೂ ಭೂಮಿ ‘ನಮ್ಮಂತೆ’ ಕತ್ತರಿಸಿದರೆ..‘ದಾನಾ-ಪಾನಿ ಕಟ್’!
ಒಮ್ಮೆ ಕುವೆಂಪು ಅವರಿಗೆ ಯಾರೋ ವಿಮರ್ಶಕರ ಕುರಿತು ಪ್ರಶ್ನೆ ಕೇಳಿದರು..ಅದಕ್ಕೆ ಕುವೆಂಪು ‘ಅವನೇರಬಲ್ಲನೇ ನಾನೇರುವೆತ್ತರಕೆ?’ ಎಂದು ಪ್ರತಿಕ್ರಿಯಿಸಿದರು.
ಈ ಮಾತನ್ನು ತೇಜಸ್ವಿ ಅವರಿಗೆ ಹೇಳಿ ಪ್ರತಿಕ್ರಿಯೆ ಬಯಸಿದರು ಕೆಲವರು. ತೇಜಸ್ವಿ ಉತ್ತರಿಸಿದರಂತೆ..‘ಹೋಗ್ರಯ್ಯ..ಸುಮ್ನೆ, ನಾನಿಳಿದ ಆಳಕ್ಕೆ ನಿಮ್ಮ ಕುವೆಂಪು ಇಳೀತಾರಾ?!’
ಇಂಥದ್ದೇ ಬೆಳವಣಿಗೆ ಇಲ್ಲಿದೆ: ಮರಭೂಮಿಯಲ್ಲಿ ನೀರಿಗಾಗಿ ‘ಓಯಾಸಿಸ್’ಗಳನ್ನು ಆಧರಿಸಿದಂತೆ, ನಮ್ಮ ಉತ್ತರ ಕರ್ನಾಟಕದ ಹಳ್ಳಿಗಾಡಿನಲ್ಲಿ ಕುಡಿಯುವ ನೀರಿಗಾಗಿ ಜನ ಹಳ್ಳಿ ಪಕ್ಕದ ಹಳ್ಳದ ‘ವರ್ತಿ’ನೀರು ಆಶ್ರಯಿಸುತ್ತಾರೆ. ಇನ್ನು ನಗರ, ಪಟ್ಟಣಗಳಲ್ಲಿ ನಾವೆಲ್ಲ ‘ಸರಕಾರಿ ನೀರು’ಆಶ್ರಯಿಸಿದ್ದೇವೆ. ಅರ್ಥಾತ್, ನಲ್ಲಿ ಮೂಲಕ ಹರಿದು ಬರುವ ನೀರನ್ನು ಮನೆಗಳ ಮೇಲಿನ ‘ಓವರ್ ಹೆಡ್’ ಟ್ಯಾಂಕಿಗೆ ಸಾಗಿಸಿ ಬೇಕಾದಾಗ ಬಳಸಿಕೊಳ್ಳುತ್ತೇವೆ. ಆದರೆ ಈ ‘ಓವರ್ ಹೆಡ್’ ಟ್ಯಾಂಕ್ ಗಳು ಹತ್ತಾರು ವರ್ಷಗಳಲ್ಲಿ ತಾರಸಿಗೆ ಹೊಡೆತ ಕೊಟ್ಟು, ಸೋರಲು ಪ್ರಾರಂಭಿಸುತ್ತಿದ್ದಂತೆ ‘ಸಿಂಟೆಕ್ಸ್’ ಮಾದರಿಯ ಪ್ಲಾಸ್ಟಿಕ್ ತೊಟ್ಟಿಗಳಿಗೆ ಮೊರೆ ಹೋಗಬೇಕಾಗುತ್ತದೆ. ತನ್ಮೂಲಕ ಬಾಯ್ದೆರೆದ ‘ಓವರ್ ಹೆಡ್’ ಟ್ಯಾಂಕ್ ಗಳಿಗೆ ಇತಿಶ್ರೀ ಹಾಡಲಾಗುತ್ತದೆ.
ಇತ್ತೀಚಿನ ಬದಲಾವಣೆ ಎಂದರೆ ನೇರವಾಗಿ ಎಲ್ಲರೂ ಈ ಪ್ಲಾಸ್ಟಿಕ್ ‘ಸಿಂಟೆಕ್ಸ್’ ನಮೂನೆಯ ಟ್ಯಾಂಕ್ ಗಳಿಗೆ ಮೊರೆ ಹೋಗಿರುವುದು. ಹೆಚ್ಚು ಕಡಿಮೆ ಕುಡಿಯಲು ಹೊರತು ಪಡಿಸಿ ದಿನ ಬಳಕೆಗಾಗಿ ಮಾತ್ರ ಇಲ್ಲಿ ನೀರನ್ನು ಸಂಗ್ರಹಿಸಲಾಗುತ್ತದೆ. ಮೇಲೆ ಮುಚ್ಚಳವಿರುವುದರಿಂದ ಕಸ-ಕಡ್ಡಿ ಬೀಳುವ, ಗಾಳಿಯ ಮೂಲಕ ಹಾರಿ ಬಂದ ಧೂಳು ಸಂಗ್ರಹಗೊಳ್ಳುವ ಪ್ರಮೇಯವಿಲ್ಲ. ಸರಿ ಇದು ನಮ್ಮ ಅನುಕೂಲ ಸಿಂಧು ಬಂದೋಬಸ್ತಿಯಾಯಿತು. ಆದರೆ, ನಮ್ಮ ಅತಿಯಾದ ಪ್ರಯೋಗಶೀಲತೆಯಿಂದಾಗಿ ನರರ ನಾಡಿಗೆ ಸದಾ ಲಗ್ಗೆ ಇಡುತ್ತಿರುವ ವಾನರರು, ಜಾಡಮಾಲಿ ಕಾಗೆಯ ಬಳಗ, ಶಾಂತಿ ದೂತ ಪಾರಿವಾಳಗಳ ಪರಿವಾರ ಹಾಗೂ ನೈಸರ್ಗಿಕ ತೋಟಿಗ ಅಳಿಲು ಕುಟುಂಬ ಹೀಗೆ ಹತ್ತು ಹಲವು ಜೀವ ಸಂಕುಲದ ಕೊಂಡಿಗಳು ಕುಡಿಯುವ ನೀರಿಗಾಗಿ ‘ಓವರ್ ಹೆಡ್’ ಟ್ಯಾಂಕ್ ಗಳನ್ನೇ ಆಶ್ರಯಿಸಿದ್ದವು. ಅರ್ಥಾತ್, ತಮ್ಮ ಪಾಲು ನಮ್ಮಿಂದ ಬೇಡುತ್ತಿದ್ದವು.
ಹಸನು ಮಾಡಿದ, ಸ್ವಚ್ಛ ಹಾಗೂ ‘ಪ್ಯಾಕ್ಡ್’ಕಿರಾಣಿ ಸಾಮಾನು ಅಂಗಡಿಯಿಂದ ನೇರವಾಗಿ ಅಡುಗೆ ಮನೆಗೆ ಧಾವಿಸುತ್ತಿರುವಂತೆ, ನೀರು ಕೂಡ ನದಿ ಪಾತ್ರದಿಂದ ಪಂಪ್ ಹೌಸ್ ಗೆ ನಂತರ ಥರಹೇವಾರಿ ಗಾತ್ರದ ಕೊಳವೆಗಳ ಮೂಲಕ ನೇರವಾಗಿ ಮನೆಗೆ, ನಂತರ ಭದ್ರವಾಗಿ ಪ್ಲಾಸ್ಟಿಕ್ ಸಿಂಟೆಕ್ಸ್ ನಮೂನೆಯ ಟ್ಯಾಂಕಿಗೆ ಬಿದ್ದು ಬಳಕೆಯಾಗುತ್ತದೆ. ಬಾಯ್ದೆರೆದ ಬಾವಿಗಳನ್ನೂ ಸಹ ಬಿಡದೇ ಎಲ್ಲವನ್ನೂ ಅತಿಕ್ರಮಿಸಿ ವಾಸಯೋಗ್ಯ ಮಾಡಿಕೊಂಡಿರುವ ನಾವು, ನೈಸರ್ಗಿಕವಾಗಿಯೇ ನೀರು ಈ ಜೀವ ಸಂಕುಲಕ್ಕೆ ದೊರಕುವುದನ್ನು ಕಸಿದುಕೊಂಡಿದ್ದೇ ಅಲ್ಲದೇ, ‘ದಾನಾ-ಪಾನಿ ಕಟ್’ಮಾಡಿ ಭೂಮಿಯ ಮೇಲಿಂದ ನಿರ್ನಾಮ ಮಾಡುವ ರೀತ್ಯಾ ಯೋಜಿಸುತ್ತಿದ್ದೇವೆ. ನಿಸರ್ಗದಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕಿರುವ ಈ ‘ಸ್ಟೇಕ್ ಹೋಲ್ಡರ್’ ಗಳನ್ನು ನಿರ್ಲಕ್ಷಿಸಿದ್ದೇ ಆದರೆ? ಮಾನವ ಪೀಳಿಗೆ ಬಲು ದುಬಾರಿ ಬೆಲೆ ತೆರೆಬೇಕು.
ಉದಾಹರಣೆಗೆ ಫಿಲಿಪೀನ್ಸ್ ದೇಶದಲ್ಲಿ ಬೆಳೆಗಳಿಗೆ ಮಿಡತೆಗಳ ಹಾವಳಿ ಹೆಚ್ಚಾದಾಗ ಭಾರತದಿಂದ ಮೈನಾ ಪಕ್ಷಿಗಳನ್ನು ಆಮದು ಮಾಡಿಕೊಂಡು ನೈಸರ್ಗಿಕವಾಗಿ ಅವುಗಳನ್ನು ನಿಯಂತ್ರಿಸಲು ಅಲ್ಲಿನ ರೈತರು ಪ್ರಯಾಸ ಪಟ್ಟು, ಯಶಸ್ವಿಯಾದ ಕಥೆ ನಮ್ಮ ಕಣ್ಣು ತೆರೆಸಬೇಕು. ವರ್ಷವೊಂದಕ್ಕೆ ಸಾವಿರಾರು ಹಣ್ಣುಗಳನ್ನು ತಿಂದು, ಲಕ್ಷಾಂತರ ಬೀಜಗಳಿಗೆ ತಮ್ಮ ಮಲ ಲೇಪಿಸಿ ಫಲವತ್ತಾಗಿಸಿ, ಅಲ್ಲಲ್ಲಿ ಹುಗಿದಿಟ್ಟು ನಂತರ ಮರೆತೂ ಬಿಡುವ ಅಳಿಲಿನ ಉಪಕಾರ ನಾವು ಸ್ಮರಿಸದೇ ಇರಲಾದೀತೆ? ಕಾಲಕ್ರಮೇಣ ಕಾಡಿನ ಸದೃಶವಾಗಿ ಹಣ್ಣಿನ ಗಿಡಗಳು ಬೆಳೆಯಲು ಅಳಿಲು ನೈಸರ್ಗಿಕ ಕೃಷಿಕ! ನಾವು ನೆಟ್ಟು-ಬೆಳೆಸಿದರೆ ಅದು ಮಾನವ ನಿರ್ಮಿತ ತೋಪಾದೀತೇ ವಿನ: ಕಾಡಾಗಲು ಸಾಧ್ಯವಿಲ್ಲ!
ನಿನ್ನೆ ಧಾರವಾಡದ ಎಮ್ಮಿಕೇರಿ ಬಳಿಯ ಎಮ್.ಎಮ್. ಕುಲಕರ್ಣಿ ಅವರ ಮನೆಗೆ ಮಧ್ಯಾನ್ಹದ ವೇಳೆ ಆಗಂತುಕ ಅತಿಥಿಯೋರ್ವ ಬಂದಿದ್ದ. ಮನೆಯ ಎಲ್ಲ ಕಿಟಕಿಗಳೂ, ಅವುಗಳಿಗಿರುವ ಮೆಶ್ ಗಳನ್ನೂ, ಬಾಗಿಲುಗಳನ್ನು ಭದ್ರವಾಗಿಸಿ ಮನೆಯವರು ಹೊರಹೋಗಿದ್ದರೂ ಆತ ಮನೆಗೆ ಕಾವಲಿದ್ದ ಜರ್ಮನ್ ಶೆಫರ್ಡ್ ನಾಯಿಕರಿಗೂ ಚಳ್ಳೆ ಹಣ್ಣು ತಿನ್ನಿಸಿ ಒಳ ನುಗ್ಗಿದ್ದ. ಡೈನಿಂಗ್ ಟೇಬಲ್ ಮೇಲೆ ಇಡಲಾಗಿದ್ದ ಬಾಳೆ ಹಣ್ಣು ಮತ್ತು ಸೇಬುಗಳನ್ನು ಕಬಳಿಸಿ, ನೀರಿನ ಜಗ್ ಕೆಳಕ್ಕೆ ಉರುಳಿಸಿ ದಾಹ ತೀರಿಸಿಕೊಂಡು ಯಾರಿಗೂ ಕಾಣದ ಹಾಗೆ ಅವಿತುಕೊಂಡ. ಮನೆಯವರು ಬಂದು ನೋಡಿ, ಇದು ಬೆಕ್ಕಿನ ಕೆಲಸವೇ ಇರಬೇಕು ಎಂದು, ಶಪಿಸಿ ಬೆಕ್ಕು ಕಂಡಾಗೊಮ್ಮೆ ಓಡಿಸಿದರು; ಸಿಕ್ಕಗೊಮ್ಮೆ ನಾಲ್ಕು ಬಾರಿಸಿದರು. ಆದರೆ ವಾರಗಟ್ಟಲೇ ಇದೇ ಮುಂದುವರೆದಾಗ ಆತಂಕಿತರಾದರು. ಕೊನೆಗೆ ಯಾವುದೋ ಕಾರಣಕ್ಕೆ ಸಂಧ್ಯಾ ಮಾಮಿ ‘ಸ್ಟೋರ್ ರೂಂ’ಹೊಕ್ಕಾಗ ಆಶ್ಚರ್ಯ ಕಾದಿತ್ತು. ಅಲ್ಲಿನ ಎಲ್ಲ ಸಾಮನುಗಳನ್ನು ನೆಲಕ್ಕುರುಳಿಸಿ, ಕಪಾಟಿನ ಬಾಗಿಲುಗಳನ್ನು ತೆಗೆದು, ಒಳ ಹೊಕ್ಕು ಕಳ್ಳರು ಕೆದಕಿದ ರೀತಿಯ ‘ಸೀನ್’ನಿರ್ಮಾಣವಾಗಿತ್ತು. ಕೊನೆಗೆ ಮನೆಯವರೆಲ್ಲ ಸೇರಿ ಇಡೀ ಸ್ಟೋರ್ ರೂಂ ಕೆದಕಿದಾಗ ಕಣ್ಣಗಲಿಸಿ, ಬಾಯರಳಿಸಿ ಪುನಗು ಬೆಕ್ಕಿಲಿ ಮೊಲ್ಲೆಯೊಂದರಲ್ಲಿ ಅವಿತುಕೊಂಡಿದ್ದು ಕಾಣಿಸಿತು!
ಮಾಡುವುದೇನು? ಯಾರಿಗೆ ತಿಳಿಸುವುದು? ಹಿಡಿಯುವುದು ಹೇಗೆ? ಹಾಗೆ ಬಿಟ್ಟರೆ ಏನು ಗತಿ? ಯಾರಿಗಾದರೂ ಕಚ್ಚಿದರೆ? ನಮ್ಮ ಮಧು ಮಾಮಾ ಅವರ ಕಾಳಜಿ ಹೇಳತೀರದ್ದು. ಪುನುಗಿಗೂ ಪೆಟ್ಟು ಬೀಳಬಾರದು; ಆದಷ್ಟು ಬೇಗ ಅದನ್ನು ಬಂಧಿಸಿ ಕಾಡಿಗೆ ಕಳುಹಿಸಬೇಕು ಇದು ಅವರ ಮಿಷನ್. ಸಂಧ್ಯಾ ಮಾಮಿ ಚಿಂತೆ ‘ಅದಕ್ಕೆ ಇಂದು ರಾತ್ರಿ ಊಟಕ್ಕೆ ಏನು ಕೊಡಲಿ?’ ಪ್ರೊ. ಕಮಲಾಪೂರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಂತುಕ ಅತಿಥಿ ನೋಡಲು ಕುಲಕರ್ಣಿ ಅವರ ಮನೆಗೆ ಆಗಮಿಸಿದ್ದರು. ‘ಪ್ರೊ. ಗಂಗಾಧರ ಕಲ್ಲೂರ್ ಊರಲ್ಲಿ ಇಲ್ಲ; ಹರ್ಷನೇ ಹಿಡಿದು ಕಾಡಿಗೆ ಬಿಡುತ್ತಾನೆ..ಅವನೇ ಯೋಗ್ಯ ವ್ಯಕ್ತಿ ಈ ಕೆಲಸಕ್ಕೆ’ ಎಂಬ ಲೆಕ್ಕಾಚಾರ ಅವರದ್ದು.
ಆದರೆ ಪುನಗು ಅಡಗಿದ್ದು ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ. ಹಾಗಾಗಿ ನಾನು ರಿಸ್ಕ್ ತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಮೇಲಾಗಿ ಅದು ಬಳಕೆಯಲ್ಲಿರದ ಸ್ಟೋರ್ ರೂಂ ಆಗಿರುವುದರಿಂದ..ಮಧು ಮಾಮಾ ಅವರಿಗೆ ಈ ರಾತ್ರಿಯ ಕೊನೆಯ ಭೋಜನಕ್ಕೆ ಹಣ್ಣುಗಳನ್ನಿಡಲು ಹೇಳಿದೆ. ಅವರು ಹಣ್ಣುಗಳನ್ನಿಟ್ಟು ಬಂದರು; ನಾನು ಭದ್ರವಾಗಿ ಬಾಗಿಲು ಮುಚ್ಚಿದೆ. ಮರು ದಿನ ಬೆಳಿಗ್ಗೆ ನಮ್ಮ ಛಾಯಾಪತ್ರಕರ್ತ ಕೇದಾರ ಅಣ್ಣನ ಸಹಾಯದಿಂದ ಅರಣ್ಯ ಇಲಾಖೆಯವರನ್ನು ಕರೆಸಿ, ಜೊತೆಗೆ ಪ್ರೊ. ಕಲ್ಲೂರ್ ಉಳವಿಯಿಂದ ಆಗಮಿಸಿದ್ದರಿಂದ ಅವರೂ ಸಹ ಕೈಜೋಡಿಸಿ ಸುಮಾರು ೧ ಗಂಟೆಯ ಕಾರ್ಯಾಚರಣೆ ನಡೆಸಿ, ಪೆಟ್ಟಾಗದಂತೆ ಪುನಗು ಬೆಕ್ಕಿಲಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪ್ರಕರಣ ಸುಖಾಂತ್ಯ ಕಂಡಿತು.
ಇನ್ನಾದರೂ ನಮ್ಮ ಮನೆಗಳ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡೋಣ; ಅಲ್ಲಲ್ಲಿ ನೀರಿನ ಅರವಟ್ಟಿಗೆಗಳನ್ನು, ಕೊಳಗಳನ್ನು ಅಥವಾ ತೆರೆದ ಟ್ಯಾಂಕ್ ಗಳನ್ನು ಇಂತಹ ಆಗಂತುಕ ಅತಿಥಿಗಳಿಗಾಗಿ ಕಾಯ್ದಿಡೋಣ. ಟೆರೆಸ್ ಸೋರಿದರೆ ‘ವಾಟರ್ ಪ್ರೂಫಿಂಗ್’ಎಂಬ ರಿಪೇರಿ ವ್ಯವಸ್ಥೆ ಇದೆ. ನಮ್ಮ ಆಶ್ರಯ ಬೇಡಿ, ಬಯಸಿ ಬರುವ ಈ ಕಾಡಿನ ಪ್ರಾಣಿಗಳಿಗೆ ಸೂರು ಕಿತ್ತಿರುವ ನಾವು ತಾತ್ಕಾಲಿಕ ಶೆಡ್ ಆದರೂ ಹಾಕೋಣ. ನಮ್ಮ ಉಳಿವಿಗಾದರೂ, ನಮ್ಮ ಸ್ವಾರ್ಥ ಅನುಲಕ್ಷಿಸಿ ಅವುಗಳನ್ನು ರಕ್ಷಿಸುವ ಪ್ರಯತ್ನ ಮಾಡೋಣ. ಇಲ್ಲದಿದ್ದರೆ ಅವುಗಳ ದಾನಾ-ಪಾನಿ ಕತ್ತರಿಸಿರುವ ನಮ್ಮ ಬೇರುಗಳನ್ನು ಭೂಮಿ ಕತ್ತರಿಸುವ ಕಾಲ ದೂರವಿಲ್ಲ.