ನಮ್ಮ ಮಕ್ಕಳನ್ನು ತಿದ್ದುವುದು ಹೇಗೆ?
ಸುದ್ದಿ ಬೆಚ್ಚಿಬೀಳಿಸುವಂತಿತ್ತು. ಸ್ಕೂಟರ್ ಪಿಕ್ ಅಪ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇಬ್ಬರು ಹದಿಹರೆಯದ ಬಾಲಕರು ರಕ್ತದ ಮಡುವಿನಲ್ಲಿ ಹೊರಳಾಡಿ ಕ್ಷಣ ಮಾತ್ರದಲ್ಲಿ ಪ್ರಾಣಬಿಟ್ಟಿದ್ದರು. ಇಬ್ಬರೂ ದ್ವಿತೀಯ ಪಿಯು ವಿದ್ಯಾರ್ಥಿಗಳು. ಸ್ನೇಹಿತರಾಗಿದ್ದ ಅವರಿಬ್ಬರು ಅನಗತ್ಯ ವೇಗಕ್ಕೆ ಬಲಿಯಾಗಿದ್ದರು. ಓದುತ್ತಿದ್ದಂತೆ ರವಿಯ ಕಣ್ಣುಗಳು ತೇವಗೊಂಡವು. ತಮ್ಮ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಹೊತ್ತ ತಂದೆ ತಾಯಿಯರ ಪರಿಸ್ಥಿತಿ ಆತನ ಕಣ್ಣ ಮುಂದೆ ತೇಲಿ ಬಂತು. ಮಕ್ಕಳಿಗೆ ಸ್ಕೂಟರ್ ಕೊಡೋದು ತಪ್ಪಲ್ವಾ? ಎಂದು ಯೋಚಿಸುತ್ತಿದ್ದಂತೆ ಮನೆಯ ಶೆಡ್ ನಲ್ಲಿದ್ದ ಸ್ಕೂಟರ್ ಶಬ್ಧವಾಯಿತು. ಅಪ್ಪನ ಮಾತನ್ನು ಲೆಕ್ಕಿಸದೆ ರವಿಯ ಮಗ ಅವಿನಾಶ್ ಸ್ಕೂಟರ್ ನಲ್ಲಿ ಅದೆಲ್ಲಿಗೋ ವೇಗವಾಗಿ ಹೋಗಿ ಬಿಟ್ಟ. ಅವನಿನ್ನೂ ಪ್ರಥಮ ಪಿಯು ವಿದ್ಯಾರ್ಥಿ. ರವಿಯ ಏಕಮಾತ್ರ ಪುತ್ರ. ಸ್ಕೂಟರ್ ನಲ್ಲಿ ಹೋಗಬೇಡವೆಂದು ಅದೆಷ್ಟೋ ಬಾರಿ ಹೇಳಿದ್ದರೂ ಕೇಳುವ ಸ್ಥಿತಿಯಲ್ಲಿ ಮಗನಿಲ್ಲ.
ಸುಷ್ಮಾ ಕೋಣೆಯೊಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೊಬೈಲ್ ನಲ್ಲಿ ವಿಪರೀತ ಮುಳುಗಿ ಹೋಗುತ್ತಿದ್ದ ಮಗಳಿಗೆ ಅಮ್ಮ ಅಂದು ಬುದ್ದಿ ಹೇಳಿದ್ದಳು. ಅದರಿಂದ ವಿಪರೀತ ಸಿಟ್ಟುಗೊಂಡ ಮಗಳು ತನ್ನ ಕೋಣೆಯ ಬಾಗಿಲು ಹಾಕಿ, ನೇಣು ಬಿಗಿದುಕೊಂಡಿದ್ದಳು. ತನಗಿದ್ದ ಏಕೈಕ ಮಗಳನ್ನು ಕಳೆದುಕೊಂಡ ಅಮ್ಮನ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ತಡರಾತ್ರಿ ಈ ಸುದ್ದಿ ಓದಿದ ರಮ್ಯ ಸಂಪೂರ್ಣ ವಿಚಲಿತಲಾಗಿದ್ದಳು. ಮಕ್ಕಳ ಕೈಗೆ ಮೊಬೈಲ್ ಕೊಡೋದು ತಪ್ಪಲ್ವಾ? ಎಂದು ಯೋಚಿಸುತ್ತಾ ಆಕೆ ತನ್ನ ಮಗಳ ಕೋಣೆಯತ್ತ ಬಂದು ಇಣುಕಿ ನೋಡಿದಳು. ಮಗಳು ಇನ್ನೂ ನಿದ್ದೆ ಮಾಡದೆ ಮೊಬೈಲ್ ನಲ್ಲೇ ಮುಳುಗಿದ್ದಳು. ಹೊತ್ತು ಹನ್ನೆರಡು ಮೀರಿದ್ದರೂ ಮಗಳನ್ನು ಎಚ್ಚರಿಸುವ ಧೈರ್ಯ ಆಕೆ ತೋರಲಿಲ್ಲ.
ಗೀತಾಳ ಮಗ ಇನ್ನೂ ಹದಿಹೆರಯದ ಹುಡುಗ. ಇರುವ ಒಬ್ಬನೇ ಮಗನನ್ನು ಅತೀ ಮುದ್ದಿನಿಂದ ಸಾಕಿದ್ದಳು. ಶಾಲೆಗೆ ಬೇಸಿಗೆ ರಜೆ ಬರುತ್ತಿದ್ದಂತೆ ಸ್ನೇಹಿತರೊಂದಿಗೆ ಸುತ್ತಾಡಲು ಹೊರಟಿದ್ದ. ಅಪ್ಪ ಅಮ್ಮ ಎಷ್ಟೇ ಬೇಡಿಕೊಂಡರೂ ಕೇಳದೆ ಆತ ಮನೆಬಿಟ್ಟಿದ್ದ. ಅಂದು ಸಂಜೆ ನೀರಿನಲ್ಲಿ ಈಜಲು ಹೋದ ಗೀತಾಳ ಮಗ ಆತನ ಸ್ನೇಹಿತರೊಂದಿಗೆ ಪ್ರಾಣ ಬಿಟ್ಟಿದ್ದ. ವಾಟ್ಸಪ್ ನಲ್ಲಿ ಬಂದ ಈ ಸುದ್ದಿ ನೋಡಿ ಆಯಿಷಾಳ ಕರುಳು ಕಿತ್ತು ಬಂದಂತಾಯಿತು. ತನ್ನ ಮಗನದೇ ಪ್ರಾಯದ ಮಕ್ಕಳು ಪ್ರಾಣಬಿಟ್ಟದ್ದು ಕೇಳಿ ಬೇಸರಗೊಂಡಿದ್ದಳು. ಮಕ್ಕಳನ್ನು ಸ್ನೇಹಿತರೊಂದಿಗೆ ಸುತ್ತಾಡಲು ಕಳುಹಿಸುವುದು ತಪ್ಪಲ್ವಾ? ಎಂದು ಯೋಚಿಸುತ್ತಾ ಬೆಳಿಗ್ಗಿನ ತಿಂಡಿ ರೆಡಿಮಾಡುತ್ತಿದ್ದ ಆಯಿಷಾಳ ಬಳಿ ಬಂದ ಮಗ ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ತೆರಳುವುದಾಗಿ ಹೇಳಿ ಅಮ್ಮನ ಉತ್ತರಕ್ಕೂ ಕಾಯದೆ ಮನೆಯಿಂದ ಹೊರಟು ಬಿಟ್ಟಿದ್ದ.
ಉಷಾಳ ಮಗಳು ಕಾಲೇಜು ವಿದ್ಯಾರ್ಥಿನಿ. ಮಗಳನ್ನು ಬಹಳನೇ ಮುದ್ದಿನಿಂದ ಬೆಳೆಸಿದ್ದಳು. ಕಾಲೇಜಿಗೆ ಹೋಗಿದ್ದ ಆಕೆ ಸಂಜೆ ಮನೆಗೆ ಬಂದಿರಲಿಲ್ಲ. ತನ್ನ ಮುದ್ದಿನ ಮಗಳನ್ನು ಕಾಣದೆ ಉಷಾ ಹೌಹಾರಿದಳು. ಕಡೆಗೂ ವಿಷಯ ತಿಳಿದಾಗ ಆಕೆ ತಾನು ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗಿದ್ದಳು. ತನ್ನ ಪ್ರೀತಿಯ ಮಗಳ ಕೃತ್ಯ ತಿಳಿಯುತ್ತಿದ್ದಂತೆ ಉಷಾ ಪ್ರಜ್ಞೆ ಕಳೆದುಕೊಂಡಿದ್ದಳು. ಅಕ್ಕ ಫೋನ್ ನಲ್ಲಿ ಪಕ್ಕದ ಮನೆಯಲ್ಲಿ ನಡೆದ ಈ ಘಟನೆಯನ್ನು ಹೇಳುತ್ತಿದ್ದಂತೆ ಸವಿತಾಳಿಗೆ ಬಹಳನೇ ದು:ಖವಾಯಿತು. ಮಕ್ಕಳನ್ನು ತಾಯಿಂದಿರು ಗಮನಿಸದೇ ಇದ್ದರೇ ಹೀಗಾಗುತ್ತದೆ ಎಂದು ಮನದಲ್ಲೇ ಅಂದುಕೊಳ್ಳುತ್ತಿದ್ದಂತೆ, ತನ್ನ ಮಗಳಿನ್ನೂ ಮನೆಗೆ ಬಾರದನ್ನು ಆಕೆ ಗಮನಿಸಿರಲಿಲ್ಲ. ಮೊಬೈಲ್ ರಿಂಗಾಗುತ್ತಿದ್ದಂತೆ ಅತ್ತ ಕಡೆಯಿಂದ ಮಗಳು “ಅಮ್ಮಾ ನನ್ನನ್ನು ಹುಡುಕಬೇಡ, ನಾನು ಮತ್ತು ರಮೇಶ್ ಒಟ್ಟಿಗೆ ಹೋಗುತ್ತಿದ್ದೇವೆ. ನಾವಿಬ್ಬರು ಪ್ರೀತಿಸುತ್ತಿದ್ದು ಮದುವೆಯಾಗುತ್ತೇವೆ” ಎಂದು ಹೇಳುತ್ತಿದ್ದಂತೆ ಸವಿತಾ ಕುಸಿದು ಬಿದ್ದಳು.
ರಾಜು ಕಂಪೆನಿಯೊಂದರ ಉದ್ಯೋಗಿ. ಮಗನಿನ್ನೂ ಹದಿಹರೆಯದ ಹುಡುಗ. ಪ್ರಥಮ ಪಿಯು ಕಲಿಯುತ್ತಿದ್ದ. ಆತ ಆನ್ ಲೈನ್ ಆಟಕ್ಕೆ ಮರುಳಾಗಿದ್ದ. ಆಟದ ಹುಚ್ಚು ವಿಪರೀತವಾಗಿತ್ತು. ಇದ್ಯಾವುದೂ ತಂದೆ ತಾಯಿಯ ಗಮನಕ್ಕೆ ಬಂದಿರಲಿಲ್ಲ. ಅಂದು ರಾಜು ತುರ್ತಾಗಿ ಹಣ ಪಾವತಿಸಬೇಕಿತ್ತು. ಗೂಗಲ್ ಪೇನಲ್ಲಿ ಐವತ್ತು ಸಾವಿರ ಪೇ ಮಾಡಿದರೆ, ಅಕೌಂಟ್ ನಲ್ಲಿ ಅಷ್ಟು ಹಣವಿಲ್ಲ ಎಂಬ ಮೆಸೇಜ್. ರಾಜುಗೆ ಆಶ್ಚರ್ಯ. ಆತನ ಅಕೌಂಟ್ ನಲ್ಲಿ ಸುಮಾರು ಎರಡು ಲಕ್ಷದಷ್ಟು ಹಣ ಮಾಯವಾಗಿತ್ತು. ಆತ ಬೆಚ್ಚಿ ಬಿದ್ದಿದ್ದ. ನಂತರ ತಿಳಿದು ಬಂದದ್ದು, ಆತನ ಮಗ ಅಷ್ಟೂ ಹಣವನ್ನು ಆನ್ ಲೈನ್ ಆಟದಲ್ಲಿ ಕಳೆದು ಕೊಂಡಿದ್ದ. ತಾನು ಕಷ್ಟಪಟ್ಟು ಉಳಿಕೆ ಮಾಡಿದ ಹಣ ಕಳೆದುಕೊಂಡ ರಾಜು ಮಾನಸಿಕವಾಗಿ ಕುಸಿದಿದ್ದ. ಪತ್ರಿಕೆಯಲ್ಲಿ ಸುದ್ದಿ ಓದಿದ ಗಿರಿಧರ್ “ಮಕ್ಕಳ ಮೇಲೆ ನಿಗಾ ಇಡದಿದ್ದರೆ ಹೀಗೇ ಆಗುತ್ತದೆ” ಎಂದು ಮನಸ್ಸಿನಲ್ಲೇ ಅಂದುಕೊಂಡ. ಅದೇ ಪ್ರಾಯದ ತನ್ನ ಮಗ ಕಣ್ಣ ಮುಂದೆ ಹಾದು ಹೋದ. ಅಷ್ಟಕ್ಕೂ ಆತನಿಗೆ ತನ್ನ ಖಾತೆಯಲ್ಲಿ ಉಳಿಕೆ ಮಾಡಿದ್ದ ಮೂರು ಲಕ್ಷ ಹಣದ ಬಗ್ಗೆ ಒಮ್ಮೆ ಕಣ್ಣಾಡಿಸಿದ. ಆತನಿಗೆ ನಂಬಲಾಗುತ್ತಿಲ್ಲ ಖಾತೆಯಲ್ಲಿ ಕೇವಲ ಹತ್ತು ಸಾವಿರ ಮಾತ್ರವಿದೆ. ಶಾಕ್ ಹೊಡೆದವನಂತೆ ನಿಂತಿದ್ದಾಗ ಸೋಫಾದಲ್ಲಿ ಕುಳಿತ ಮಗ ಮೊಬೈಲ್ ಹಿಡಿದು ಅದ್ಯಾವುದೋ ಆಟವಾಡುತ್ತಿದ್ದ.
ಈ ಮೇಲಿನ ಸಹಜ ಉದಾಹರಣೆಗಳು ಪ್ರತಿಯೊಬ್ಬರ ಮನಸ್ಸನ್ನು ಕದಡದೆ ಇರಲಾರದು. ಪ್ರತಿಯೊಂದು ಘಟನೆಗಳು ಎಲ್ಲೋ ನಡೆಯುತ್ತಿದೆ ಎಂದು ಭಾವಿಸಿ, ನಮ್ಮೊಳಗೇ ಇಣುಕಿದಾಗ ಅದೇ ಸಮಸ್ಯೆ ನಮ್ಮ ಮನೆಯಲ್ಲೂ ನಡೆಯುತ್ತಿರುವುದು ಅಕ್ಷರಶಃ ಸತ್ಯ. ನನ್ನ ಮಗ ಇಲ್ಲವೇ ಮಗಳನ್ನು ಚೆನ್ನಾಗಿ ಬೆಳೆಸಿದ್ದೇನೆ. ಅವರು ನನ್ನ ಮಾತು ಮೀರಲಾರರು ಎಂಬ ಭ್ರಮೆ ಪ್ರತಿಯೊಬ್ಬ ಪೋಷಕರನ್ನು ಆವರಿಸಿದೆ. ಆದರೆ ಪಕ್ಕದ ಮನೆಯ ಕಿಟಕಿಯಲ್ಲಿ ಕಂಡುಬರುವ ನಮ್ಮ ಮನೆಯ ಸತ್ಯ, ಮನೆಯಲ್ಲೇ ಇರುವ ನಮಗೆ ಕಾಣಿಸದು.
ಇಂತಹ ಇನ್ನಷ್ಟು ಚಟುವಟಿಕೆಗಳಲ್ಲಿ ವ್ಯಸ್ತಗೊಂಡು, ಕಟ್ಟ ಕಡೆಗೆ ಪೋಷಕರ ನಿದ್ದೆಗೆಡಿಸುತ್ತಿರುವ ಮಕ್ಕಳು ನಮ್ಮ ಮಧ್ಯೆ ಬೆಳೆಯುತ್ತಿದ್ದಾರೆ. ತಿನ್ನುವ ಆಹಾರ, ತೊಡುವ ಬಟ್ಟೆ, ಹೇರ್ ಸ್ಟೈಲ್.... ಇವ್ಯಾವುದೂ ಪೋಷಕರ ಹಿಡಿತದಿಂದ ಜಾರಿಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪರಿಣಾಮವಾಗಿ ಮಕ್ಕಳ ಮೇಲಿನ ಸಂಪೂರ್ಣ ಹಿಡಿತ ತಪ್ಪಿದ ಸನ್ನಿವೇಶ ಎದುರಾಗುತ್ತಿದೆ. ಮಕ್ಕಳ ಬೇಕು ಬೇಡಗಳನ್ನು ಪೂರೈಸುವ ಯಂತ್ರಗಳಾಗಿ ಪೋಷಕರು ಬದಲಾಗಿರುವುದು ಕಳವಳಕಾರಿಯಾಗಿದೆ.
ಹಿಡಿತ ತಪ್ಪುತ್ತಿರುವ ಮಕ್ಕಳು ಬೆಳೆದು ಯುವಕರಾಗುತ್ತಿದ್ದಂತೆ ಸಮಾಜಕ್ಕೆ ಕಂಟಕರಾಗುತ್ತಿದ್ದರೆ, ಅಸಹಾಯಕರಾಗಿ ಪೋಷಕರು ಮೌನ ವೀಕ್ಷಕರಾಗುತ್ತಿದ್ದಾರೆ. ಮಕ್ಕಳು ಬೆಳೆಯುವ ವಿಧಾನ ಬದಲಾಗಿದೆ. ಬದಲಾದ ವಿಧಾನದಲ್ಲಿ ಬೆಳೆದ ಮಕ್ಕಳು ಮತ್ತೆ ಬದಲಾಗದ ಹಂತ ತಲುಪುತ್ತಿರುವುದು ದುರಂತ. ಸ್ವಾಸ್ಥ್ಯ ಸಮಾಜ ಬಯಸುವ ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತಗೊಳ್ಳಬೇಕಿದೆ. ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಲ್ಲವಾದಲ್ಲಿ ನಾಳೆಯ ಘಟನೆ ನಮ್ಮ ಮನೆಯದ್ದೇ ಆಗಿರಬಹುದು!
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ