ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು (ಭಾಗ 2)

ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು (ಭಾಗ 2)

ಇನ್ನೊಂದು ಜಾನಪದ ಕಥೆ

ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಹೊಡೆಯಲು ಇಟ್ಟಿದ್ದ ವಿವಿಧ ಸುಣ್ಣದ - ಬಣ್ಣದ ಡಬ್ಬಗಳಲ್ಲಿ ಬೀಳುತ್ತದೆ. ಅದರ ದೇಹವೆಲ್ಲಾ ಬಣ್ಣಗಳಿಂದ ತೋಯ್ದು ಹೋಗುತ್ತದೆ. ಗಾಬರಿಯಾದ ತೋಳ ಎದ್ದೆನೋ ಬಿದ್ದೆನೋ ಎಂದು ಅಲ್ಲಿಂದ ಎಗರಿ ಕಾಡಿನತ್ತ ಓಡುತ್ತದೆ.

ಅಲ್ಲಿ ಇಲ್ಲಿ ಅಲೆದು ಬೆಳಗಿನ ಹೊತ್ತಿಗೆ ದಟ್ಟ ಕಾಡಿಗೆ ಹೊಕ್ಕು ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿರುತ್ತದೆ. ಆಶ್ಚರ್ಯ, ಕಾಡಿನ ಕೆಲವು ಪ್ರಾಣಿಗಳು ಅದರಲ್ಲೂ ತೋಳಕ್ಕಿಂತ ಬಲಿಷ್ಠವಾಗಿರುವವು ಸಹ ಇದನ್ನು ನೋಡಿ ಭಯ ಮತ್ತು ಗೌರವದಿಂದ ನಮಸ್ಕಾರ ಮಾಡುತ್ತವೆ. 

ತೋಳಕ್ಕೆ ಆಶ್ಚರ್ಯ ಮತ್ತು ಕುತೂಹಲ ಮೂಡುತ್ತದೆ. ಅರೆ ನನಗೇಕೆ ಈ ಪ್ರಾಣಿಗಳು ನಮಸ್ಕಾರ ಮಾಡುತ್ತಿವೆ. ನಾನು ಕಾಡಿನ ರಾಜನಲ್ಲ. ಸಿಂಹ ಕಾಡಿನ ರಾಜ. ನಾನೊಂದು ಸಣ್ಣ ಪ್ರಾಣಿ. ನನಗೇಕೆ ಮರ್ಯಾದೆ ಎಂದು ಯೋಚಿಸುತ್ತದೆ. ಸ್ವಲ್ಪ ಸಮಯವಾದ ಮೇಲೆ ಬಿಸಿಲು ಹೆಚ್ಚಾಗುತ್ತದೆ. ತೋಳಕ್ಕೆ ಬಾಯಾರಿಕೆಯಾಗಿ ನೀರು ಕುಡಿಯಲು ಕೆರೆಯ ಬಳಿ ಹೋಗಿ  ಬಾಯಿ ಹಾಕುತ್ತದೆ. ಒಂದು ಕ್ಷಣ ಗಾಬರಿಯಾಗುತ್ತದೆ. ನೀರಿನಲ್ಲಿ ತನ್ನ ಪ್ರತಿಬಿಂಬ ಕಂಡು ಅದಕ್ಕೆ ವಿಚಿತ್ರವೆನಿಸುತ್ತದೆ. ಇಡೀ ದೇಹ ವಿವಿಧ ಬಣ್ಣಗಳಿಂದ ಕೂಡಿ ವಿಚಿತ್ರ ರೀತಿಯಲ್ಲಿ ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಅದಕ್ಕೆ ಇತರ ಪ್ರಾಣಿಗಳು ತನಗೆ ನೀಡುತ್ತಿರುವ ಗೌರವಕ್ಕೆ ಕಾರಣ ತಿಳಿಯುತ್ತದೆ. ಅಲ್ಲಿಂದ ಅದರ ವರ್ತನೆಯೇ ಬದಲಾಗುತ್ತದೆ. ಅಹಂ ಬೆಳೆಯುತ್ತದೆ. ನಾನು ಬಲಿಷ್ಠ ಎಂಬ ಭ್ರಮೆ ಬೆಳೆಸಿಕೊಳ್ಳುತ್ತದೆ. 

ಓಹೋ ನಾನೇ ಕಾಡಿನ ರಾಜನಾಗಲು ಅರ್ಹ. ಇನ್ನು ಮೇಲೆ ನಾನೇ ಕಾಡಿನ ಅಧಿಪತಿ ಎಂದು ಭಾವಿಸಿ ಎಲ್ಲಾ ಪ್ರಾಣಿಗಳಿಗೂ ಸಂದೇಶ ರವಾನಿಸುತ್ತದೆ. ಕಾಡಿನ ರಾಜ ಸಿಂಹ ಸೇರಿ ಎಲ್ಲರೂ ಒಪ್ಪಿ ಈ ಬಣ್ಣ ಬಣ್ಣದ ವಿಚಿತ್ರ ಪ್ರಾಣಿಯನ್ನು  ರಾಜನಾಗಿ ಒಪ್ಪುತ್ತವೆ. ಅವುಗಳು ಇದು ತೋಳ ಎಂದು ಗುರುತಿಸಲು ವಿಫಲವಾಗುತ್ತವೆ. ತೋಳ ಸಹ ರಾಜನಂತೆಯೇ ವರ್ತಿಸುತ್ತಾ ಇತರ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುತ್ತಾ ಇಡೀ ಕಾಡನ್ನು ಆಳುತ್ತಿರುತ್ತದೆ.ಅದರ ಅಹಂಕಾರ ಎಲ್ಲೆ ಮೀರಿರುತ್ತದೆ. ರಾಜನಾಗುವ ಸಾಮರ್ಥ್ಯ ಇಲ್ಲದಿದ್ದರೂ ಆಕಸ್ಮಿಕವಾಗಿ ಅದೃಷ್ಟದ ಬಲದಿಂದ ಆ ಸ್ಥಾನ ಸಿಕ್ಕಿರುತ್ತದೆ.

ಹೀಗಿರುವಾಗ ಒಮ್ಮೆ ಕಾಡಿನಲ್ಲಿ ಈ ಬಣ್ಣದ ತೋಳದ ನೇತೃತ್ವದಲ್ಲಿ ಸಭೆ ನಡೆಯುತ್ತಿರುತ್ತದೆ. ಆಗ ಆಕಾಶದಲ್ಲಿ ಮೋಡಗಳು ಸೇರಿ ಮಳೆ ಬರಲಾರಂಭಿಸುತ್ತದೆ. ಆ ಮಳೆಯ ನೀರಿನ ಕಾರಣಕ್ಕೆ ತೋಳದ ಆ ಕೃತಕ ಬಣ್ಣ ತೊಯ್ದು ಅದರ ನಿಜ ಬಣ್ಣ ಬಯಲಾಗುತ್ತದೆ. ಇದನ್ನು ಗಮನಿಸಿದ ಇತರ ಪ್ರಾಣಿಗಳು ಓ ಹೋ ಇದು ವಿಶೇಷ ಶಕ್ತಿಯ ವಿಶೇಷ ಪ್ರಾಣಿಯಲ್ಲ, ಇದು ಒಂದು ಸಾಮಾನ್ಯ ತೋಳ ಎಂದು ಅರ್ಥಮಾಡಿಕೊಂಡು ಅದನ್ನು ಅಲ್ಲಿಂದ ‌ಓಡಿಸುತ್ತವೆ. ತೋಳದ ನಿಜ ಬಣ್ಣ ಒಂದು ದಿನ ಬಯಲಾಗುತ್ತದೆ. ಸಾಧ್ಯವಾದರೆ ಇವುಗಳನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ........

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ