ನಮ್ಮ ಮನೆಗಳಲ್ಲಿ ಕನ್ನಡದಲ್ಲಿ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟೆವಾ?
ಈ ಕೆಳಗಿನ ಲೇಖನ ಓದಿ ಮುಗಿಸಿದಾಗ ನನ್ನ ಮನಸ್ಸಿನಲ್ಲಿ ಹುಟ್ಟಿದ ಸಂಶಯವೇ ನಿಮ್ಮ ಮನಸ್ಸಿನಲ್ಲೂ ಹುಟ್ಟುವುದು ಖಂಡಿತ. ಈ ಲೇಖನ ವಾಟ್ಸಾಪ್ ಮೂಲಕ ಹಂಚಿಕೊಂಡು ನನಗೆ ಬರುವಾಗ ಅದರ ಮೂಲ ಲೇಖಕರ ಹೆಸರೇ ಮಾಯವಾಗಿದೆ. ಆದರೆ ಬರಹದ ಆಶಯ ಬಹಳ ಚೆನ್ನಾಗಿರುವ ಕಾರಣ ಆ ಅಜ್ಞಾತ ಲೇಖಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಈ ಬರಹವನ್ನು ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ.
***
ಡೋರ್ ಲಾಕ್ ಮಾಡಿಕೊಳ್ಳಿ , ನಾನು ಹೋಗಿ ಬರ್ತಿನಿ ಡೋರ್ ಲಾಕ್ ಮಾಡಿಕೋ. ನನ್ನ ಕೀಸ್ ಎಲ್ಲಿ , ಇಲ್ಲಿ ಕೀಸ್ ಪದಕ್ಕೆ ಬದಲಾಗಿ ಅಚ್ಚ ಕನ್ನಡ ಪದ ಬಳಸಬಹುದಲ್ಲವೇ...ಇಲ್ಲ ನಾವು ಬಳಸುವುದಿಲ್ಲ.
ಕಾರಣ,
ಒಂದು ಇಪ್ಪತ್ತು, ಇಪ್ಪತ್ತೈದು ವರ್ಷಗಳ ಹಿಂದೆ ಬಾಗಿಲು ಹಾಕ್ಕೊಳ್ಳಿ, ಕದಾ ಹಾಕ್ಕೊಳ್ಳಿ, ಬೀಗ ಹಾಕಿ, ಚಿಲಕ ಹಾಕಿ ಎನ್ನುತ್ತಿದ್ದೆವು. ನಮ್ಮ ಚಿಕ್ಕಂದಿನ ಕನ್ನಡ ಮಾತುಗಳನ್ನು ಕ್ರಮೇಣ ಮರೆಯುತ್ತಿದ್ದೇವೆ. ನಮ್ಮ ಮನೆಗಳಲ್ಲಿ ಇದುವರೆಗೂ ಬಳಸುತ್ತಿದ್ದ ಕನ್ನಡ ಪದಗಳನ್ನು ನಮ್ಮ ಮಕ್ಕಳಿಗೆ ರೂಢಿ ಮಾಡಿಸುವುದನ್ನು ಬಿಟ್ಟು ನಾವೇ ಇತರ ಭಾಷೆಯ ಪದಗಳನ್ನು ನಮ್ಮ ಕನ್ನಡದಲ್ಲಿ ಬೆರೆಸುತ್ತಿದ್ದೇವೆ....ನಾವು ಹೀಗೇಕೆ ಬದಲಾದೆವು ?
ನಮ್ಮ ಕನ್ನಡದಲ್ಲಿ ಪದಗಳ ಕೊರತೆಯೇ? ಹಾಗೇನಿಲ್ಲ, ಕನ್ನಡದ ಪದಕೋಶ ಸಂಪದ್ಭರಿತವಾಗಿದೆ. ಆದರೂ, ನಾವು ಪ್ರಯೋಗಿಸುವುದಿಲ್ಲ ಅಷ್ಟೆ.
ಅಡುಗೆ ಮನೆ ಕಿಚನ್ ಆಗಿದೆ. ಬಚ್ಚಲು ಮನೆ ಬಾತ್ರೂಂ ಆಗಿದೆ ಹಾಗೆನೇ ಚಾವಡಿ, ಪಂಚೆ, ಹಜಾರ, ನಡುಮನೆ , ತಲೆಬಾಗಿಲು, ಹಿತ್ತಲು, ಕೊಟ್ಟಿಗೆ ಇವುಗಳನ್ನು ಮರೆತೇ ಬಿಟ್ಟಿದ್ದೇವೆ.
ನಮ್ಮ ಮನೆಗಳಿಗೆ ಬಂಧು ಬಾಂಧವರು,ನೆಂಟರಿಷ್ಟರು ಬರುವುದೇ ಇಲ್ಲ...ಗೆಸ್ಟ್ ಗಳೇ ಬರುತ್ತಾರೆ.
ಆ ಬಂದವರು, ನಮ್ಮ ಮನೆಯಲ್ಲಿ ಊಟ ಮಾಡುವುದಿಲ್, ತಿಂಡಿ ತಿನ್ನುವುದಿಲ್ಲ ಬದಲಾಗಿ ಲಂಚೋ, ಡಿನ್ನರೋ, ಬ್ರೇಕ್ ಫಾಸ್ಟೋ (ಗೆಟ್ ಟು ಗೆದರ್) ಮಾಡುತ್ತಾರೆ.
ಊಟಕ್ಕೆ ಕುಳಿತಾಗ ತಟ್ಟೆ, ಬಾಳೆ ಎಲೆಗಳ ಜಾಗವನ್ನು ಪ್ಲೇಟ್ ಗಳು ತುಂಬಿವೆ. ಅವುಗಳಲ್ಲಿ ಬಡಿಸುವ ಪದಾರ್ಥಗಳೆಲ್ಲಾ ರೈಸ್, ಕರ್ರೀ, ಗ್ರೇವಿ, ಫ್ರೈ ಮುಂತಾದುವೆ.
ಅನ್ನ, ಪಲ್ಯ, ಚಟ್ನಿ, ಹುಳಿ, ಸಾರು, ಮೊಸರು ತಿನ್ನಿ ಅಂದರೆ ಉಂಟೇ..? ಬಂದವರು ಏನು ತಿಳಿದುಕೊಂಡಾರು ಎಂಬ ಭಯ. ಅಂಗಡಿಗೆ ಹೋಗುವಾಗ ಚೀಲ ತೆಗೆದುಕೊಂಡು ಹೋಗುವುದಿಲ್ಲ. ಬ್ಯಾಗ್ ತೆಗೆದುಕೊಂಡು ಶಾಪ್ ಗೆ ಹೋಗ್ತೀವಿ. ಅವುಗಳಲ್ಲಿ ವೆಜಿಟಬಲ್ಸ್, ಫ್ರೂಟ್ಸ್, ಹಾಕಿಕೊಂಡು ಬರುತ್ತೇವೆ. ಏಕೆಂದರೆ ತರಕಾರಿ, ಹಣ್ಣು, ಎಂಬ ಪದಗಳು ಬಳಸದೆ ಕೊಳೆತು ನಾರುತ್ತಿವೆ..ಅಲ್ಲವೇ.?
"ಏನ್ರೀ ನಿಮ್ಮ ಮೊಮ್ಮಗಳ ಹೆರಿಗೆ ಆಯ್ತಾ " ಎಂದು ನಮ್ಮ ಪಕ್ಕದ ಮನೆಯ ಅಜ್ಜಿಯನ್ನು ವಿಚಾರಿಸಿದಾಗ ಅವರು ಹೇಳಿದ್ದು " ಏನಮ್ಮಾ ನೀನು " ಡೆಲಿವರೀ ಆಯ್ತಾ"ಎಂದು ಕೇಳುವುದನ್ನು ಬಿಟ್ಟು ನೀನು ಅಡುಗೋಲು ಅಜ್ಜಿಯ ತರ ಹೆರಿಗೆ ಪರಿಗೆ ಅಂತೀಯಲ್ಲಾ.?” ಎಂದು ನನ್ನನ್ನೇ ಮರು ಪ್ರಶ್ನೆ ಮಾಡಿ ದಂಗಾಯಿಸಿದರು.
ಇನ್ನು ದೂರದರ್ಶನದ ಅಡುಗೆ ಕಾರ್ಯಕ್ರಮಗಳು. ಒಬ್ಬ ಮಹಿಳೆ ಅಡುಗೆ ಮಾಡುವ ವಿಧಾನವನ್ನು ನಮಗೆ ತಿಳಿಸುತ್ತಾಳೆ. ಅದು ಯಾವ ಭಾಷೆಯೋ ನೀವೇ ನಿರ್ಧರಿಸಿ.
"ಸ್ವಲ್ಪ ಸಾಲ್ಟು, ಮಿರ್ಚಿ ಪೌಡರ್, ದನಿಯಾ ಪೌಡರ್, ಜಿಂಜರ್- ಗಾರ್ಲಿಕ್ ಪೇಸ್ಟ, ಆಡ್ ಮಾಡಿ ಫೈವ್ ಮಿನಿಟ್ಸ್ ಕುಕ್ ಮಾಡ್ಬೇಕು. ಸ್ಟವ್ ಅಥವಾ ಗ್ಯಾಸ್ ಆಫ್ ಮಾಡಿ ಮಸಾಲಾ ಪೌಡರ್ ಆಡ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡ್ಬೇಕು...ಹೀಗೇ ಮುಂದುವರಿಯುತ್ತದೆ. ಹೀಗಿರುವಾಗ, ನಮ್ಮ ತಿನಸುಗಳಿಗೆ ಶುಂಠಿ, ಬೆಳ್ಳುಳ್ಳಿ, ಉಪ್ಪು, ಖಾರ ಹುಳಿಯ ರುಚಿ ಎಲ್ಲಿಂದ ಬರಬೇಕು ?
ನಿನ್ನೆ ನಮ್ಮ ಪಕ್ಕದ ಮನೆಯವರು ಬಂದು. "ಸಾರ್ ನಾಳೆ ನಮ್ಮ ನೇಟಿವ್ ಪ್ಲೇಸ್ನಲ್ಲಿ, ನಮ್ಮ ಸಿಸ್ಟರ್ ಸನ್ ಮ್ಯಾರೇಜ್ ಇದೆ ಹೋಗಿ ಬರುತ್ತೇವೆ ಸ್ವಲ್ಪ ಮನೆ ಕಡೆ ನಿಗಾ ಇಟ್ಟಿರಿ "ಎಂದರು.
ಸೋದರ ಅಳಿಯ ಎನ್ನುವುದರಲ್ಲಿ ಎಷ್ಟು ಆಪ್ಯಾಯತೆ ಗೋಚರಿಸುತ್ತದೆ. ನಾವೇಕೆ ಇಂತಹ ಆಪ್ಯಾಯಮಾನವಾದ ಪದಗಳನ್ನು ಬಳಸುವುದರಲ್ಲಿ ಸಂಕೋಚಪಡುತ್ತೇವೆ? ಅಮ್ಮ, ಅಪ್ಪ, ಎಂದು ಕರೆಯುವುದು ವಿರಳವಾಗಿದೆ.
ಅತ್ತೆ,ಮಾಮ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪಾ, ಎಲ್ಲರೂ ಮಾಯವಾಗಿ ಅಂಕಲ್..ಆಂಟಿ ಉಳಿದಿದ್ದಾರೆ. ಹಾಗೇನೇ...ಅಕ್ಕ ,ಅಣ್ಣಾ, ಬಾವ,ಅತ್ತಿಗೆ, ಬಾಮೈದ, ಮುಂತಾದವರು ದೂರವಾಗಿ ಎಲ್ಲರೂ ಕಜಿನ್ಸ್ ಆಗಿದ್ದಾರೆ.
ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲಾ, ಸ್ಕೂಲ್ ಗೆ ಕಳಿಸುತ್ತಿದ್ದೇವೆ. ಹೌದು ಶಾಲೆಗೆ ಹೋಗಬೇಕು ಅಲ್ಲಿ ಇಂಗ್ಲಿಷ್ ಕಲಿಯಬೇಕು..ಇಂಗ್ಲಿಷ್ ನಲ್ಲೇ ಮಾತನಾಡಬೇಕು ಅನಿವಾರ್ಯ. ಆದರೆ ಮನೆಯಲ್ಲಿ, ನೆರಹೊರೆಯವರ ಹತ್ತಿರ ಕನ್ನಡದಲ್ಲಿ ಮಾತನಾಡಲು ನಾವು ಏಕೆ ಬಿಡುತ್ತಿಲ್ಲಾ?
ನಾವು ನಮ್ಮತನದಿಂದ ಏಕೆ ವಿಮುಖರಾಗುತ್ತಿದ್ದೇವೆ. ಹೆಚ್ಚು ಹೆಚ್ಚು ಆಂಗ್ಲ ಪದಗಳನ್ನು ಬಳಸಿದರೆ ಸಮಾಜದಲ್ಲಿ ನಮ್ಮ ಗೌರವ ಹೆಚ್ಚುವುದು ಎನ್ನು ಭ್ರಮೆಯೇ ? ಕನ್ನಡದ ಪದಗಳು ಒರಟು ಎನ್ನುವ ಅಪನಂಬಿಕೆಯೇ ? ಇದು ಖಂಡಿತಾ ಪರಭಾಷಾ ವ್ಯಾಮೋಹ ಮಾತ್ರವೇ ಅಲ್ಲಾ , "ನನಗೂ ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ನಾನೇನೂ ಯಾರಿಗೂ ಕಡಿಮೆ ಅಲ್ಲಾ ಎಂಬ ಸ್ವಯಂಕೃತ ಮಾನಸಿಕ ದೌರ್ಬಲ್ಯವೇ ಸರಿ.
ಇಂತಹ ಆಲೋಚನೆಗಳಿಂದ ನಮ್ಮ ಕಸ್ತೂರಿ ಕನ್ನಡದ ಬಳಕೆಯಲ್ಲಿ ಹಿಂಜರಿಕೆಯಾಗಿದೆ ಎಂದರೆ ಅತಿಶಯೋಕ್ತಿ ಅಲ್ಲಾ. ಇಂದಿನ ಕಾಲಮಾನದಲ್ಲಿ, ಹಳ್ಳಿಗಳೂ ,ಪಟ್ಟಣಗಳೂ ಎನ್ನುವ ತಾರತಮ್ಯ ವಿಲ್ಲದೆ ಆಂಗ್ಲಪದಗಳ ಬಳಕೆ ಅಭ್ಯಾಸವಾಗಿ ಹೋಗಿದೆ.
ಹಾಗೆಂದು ದಿನಬಳಕೆಯ ಪದಗಳನ್ನು ಬಿಟ್ಟು ಪರಭಾಷಾ ಪದಬಳಕೆಯಿಂದ ನಮ್ಮ ಭಾಷೆ ಕ್ಷೀಣಿಸುತ್ತಿದೆ. ಮನೆ ಹೊರಗಡೆ ಇತರ ಭಾಷೆಯ ಪದಬಳಕೆ ಸರಿ ಎನಿಸಿದರೂ..ನಮ್ಮ ನಾಲ್ಕು ಗೋಡೆಗಳ ಮಧ್ಯೆ ನಮ್ಮ ಭಾಷೆ ನಮ್ಮತನ...ನಮ್ಮ ಆಚಾರ ವಿಚಾರಗಳನ್ನು ಮುಂದುವರಿಸಲು ಯಾವ ಸಂಕೋಚವೂ ಇರುವುದಿಲ್ಲ.
ಓ ನನ್ನ ಕನ್ನಡ ಬಾಂಧವರೇ....ಇನ್ನು ಮೇಲಾದರೂ ಅವಶ್ಯಕತೆ ಇಲ್ಲದ ಆಂಗ್ಲ ಪದಗಳಿಗೆ...ಕದಮುಚ್ಚಿ....ನಮ್ಮ ಸವಿಗನ್ನಡ ಪದಗಳ ಯಥೇಚ್ಛ ಬಳಕೆಗೆ ನಮ್ಮ ಕನ್ನಡದ ಮನೆಯ ಬಾಗಿಲನ್ನು ಸದಾ ತೆರೆದಿಡೋಣ.
ಕನ್ನಡವನ್ನು ದಿನದಿನವೂ ಬಳಸಿದರಷ್ಟೆ ಉಳಿಯುತ್ತದೆ, ಬೆಳೆಯುತ್ತದೆ, ನಲಿಯುತ್ತದೆ. ಬಳಸದೆ ಇದ್ದಲ್ಲಿ, ಸೊರಗುತ್ತಾ ನಾಶವಾಗುತ್ತದೆ.
ಜೈ ಜೈ ಕನ್ನಡ ಮಾತೆ...ಜೈ ಜೈ ತಾಯಿ ಭುವನೇಶ್ವರಿ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ