ನಮ್ಮ ಮನೆಗೆ ಬೇಟಿ ನೀಡಿದ ಬ್ಯಾಟ್ ಮ್ಯಾನ್

ನಮ್ಮ ಮನೆಗೆ ಬೇಟಿ ನೀಡಿದ ಬ್ಯಾಟ್ ಮ್ಯಾನ್

ಬರಹ

ಮೊನ್ನೆ ಏನಾಯ್ತೂ ಅಂತೀರಿ, ಸಂಜೆಯ ಮಳೆ ಬಂದು ನಿಂತಿತ್ತು, ಚಳಿ ಕೊರೆಯಹತ್ತಿತ್ತು. ಹೊರ ಬಾಗಿಲು ಕೊಂಚ ವಾರೆಯಾಗಿತ್ತು. ಒಳಗಿನ ಬೆಳಕಿಗೋ ಏನೋ ಆಕರ್ಷಿತನಾಗಿ ಬ್ಯಾಟ್ ಮ್ಯಾನ್ ದಡಕ್ಕನೆ ಒಳಗೆ ನುಗ್ಗಿಬಂದ. ಬಂದವನೇ ನೇರವಾಗಿ ಫ್ಯಾನಿನ ಬ್ಲೇಡಿಗೆ ನೇತು ಹಾಕಿಕೊಳ್ಳಲು ನೋಡಿದ. ಆದರೆ ಏನೆನ್ನಿಸಿತೋ ಏನೋ ಮೂಲೆಯಲ್ಲಿ ಇಟ್ಟಿದ್ದ ಹಸಿರು ಗಿಡವನ್ನು ಕಂಡು ಅಲ್ಲಿಗೆ ಜಿಗಿದು, ಅದರ ಸಣ್ಣ ಕೊಂಬೆಗೆ ತಲೆಕೆಳಗಾಗಿ ನೇತು ಹಾಕಿಕೊಂಡ. ಅವನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು ಮೆಲ್ಲಗೆ ಪಾಟಿನ ಹತ್ತಿರ ಹೋಗಿ ಹಾಗೆಯೇ ಗಮನಿಸಿದೆ. ಅವನೂ ನನ್ನನ್ನು ಗಮನಿಸುತ್ತಿದ್ದ ಎನ್ನುವುದಕ್ಕೆ ತನ್ನ ಇಲಿ ಮೂತಿಯನ್ನು ನಡುಗುವ ರೀತಿಯಲ್ಲಿ ಅಲುಗಿಸುತ್ತಿದ್ದುದರಿಂದ ತಿಳಿಯುತ್ತಿತ್ತು. ಬಂದ ಅತಿಥಿಯ ಯೋಗ ಕ್ಷೇಮವನ್ನು ವಿಚಾರಿಸಲು "ಹಲೋ ಬ್ಯಾಟ್ ಮ್ಯಾನ್ ಹೌ ಆರ್ ಯೂ?" ಎಂದೆ.
"ಐ ಆಮ್ ಫೈನ್, ನೀನು ಕನ್ನಡದವನಲ್ಲವೇ, ಕನ್ನಡದಲ್ಲಿಯೇ ಮಾತನಾಡು. ನನ್ನನ್ನು ಬ್ಯಾಟ್ ಮ್ಯಾನ್ ಅನ್ನುವ ಬದಲಾಗಿ ಕಬಟ (ಕಪಟಿಯಲ್ಲ) ಎಂದು ಕರೆಯಬಹುದು, ಬಾವಲಿ ಎಂದೂ ಕರೆಯಬಹುದು" ಎಂದ.
ಆಯ್ತಪ್ಪ, ಇದೇನು ತಲೆಕೆಳಗಾಗಿ ನೇತಾಡುತ್ತಾ ನೋಡುತಿದ್ದೀಯ, ನೆಟ್ಟಗೆ ನೋಡಿದರೆ ನಾನು ಸರಿಯಾಗಿ ಕಾಣೋಲ್ಲವೆ? ಎಂದೆ.
ಕಾಣುತ್ತೀ, ಆದರೆ ನಿಮ್ಮ ಬುದ್ದಿಯನ್ನು ಸರಿಯಾಗಿ ತಿಳಿಯಬೇಕಾದರೆ ಇದೇ ಸರಿಯಾದ ರೀತಿ ಎಂದ.
ಇದೇನಪ್ಪಾ ಒಂದೇ ಸಾರಿಗೆ ನನ್ನ ಬುದ್ದಿ ಉಲ್ಟಪುಲ್ಟ ಎಂದುಬಿಟ್ಟೆಯಲ್ಲಾ, ಅಂಥಾದ್ದೇನನ್ನು ನೋಡಿದೆ ಎಂದೆ.
ನೋಡೋದೇನು ಬಂತು ಮಣ್ಣು. ದಿನ ಪತ್ರಿಕೆ ಓದಿದರೆ ತಿಳಿಯೋದಿಲ್ಲವೆ. ಹೇಳೋದೊಂದು, ಮಾಡೋದೊಂದು. ಊರೆಲ್ಲಾ ಗಿಡ ಮರ ಬೆಳೆಯುತ್ತೀವೆನ್ನುತ್ತೀರ, ಒಂದು ಮರ ಉಳಿಯದಂತೆ ಕಡಿಯುತ್ತೀರ. ಕೆರೆ ಕುಂಟೆ ಬೇಕು ಅಂತೀರ, ಕೆರೆ ಅಂಗಳವನ್ನೆಲ್ಲಾ ಮುಚ್ಚಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುತ್ತೀರ. ಸಾಕಾ ಇನ್ನೂ ಬೇಕಾ? ಎಂದ.
ಸಾಕಪ್ಪಾ ಸಾಕು. ಕೇಳಿ ಕೇಳಿ ಬೋರಾಗಿ ಹೋಗಿದೆ. ಇಲ್ಲೇ ಇರುತ್ತೀಯೋ, ಹೊರಡುತ್ತೀಯೋ ಎಂದೆ.
ಬಂದಾಯ್ತಲ್ಲ, ಇನ್ನು ಹೊರಟೆ ನೋಡು ಎಂದು ಬರ್ ಎಂದು ಬಂದ ದಾರಿಯಲ್ಲಿಯೇ ಹಾರಿಹೋದ.

ಎ.ವಿ. ನಾಗರಾಜು