ನಮ್ಮ ಮನೆಯ ದೀಪ
“ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”.
ಇದರಲ್ಲಿವೆ, ಅವರ ಏಳು ಬರಹಗಳು. ಪ್ರತಿಯೊಂದು ಬರಹವೂ ನಮ್ಮ ಭಾವನೆಗಳನ್ನು ತೀಡಿ, ಹೃದಯವನ್ನು ತಟ್ಟುತ್ತದೆ. ಅವನ್ನು ಓದುತ್ತ ಹೋದಂತೆ, ಮನಸ್ಸು ದ್ರವಿಸುತ್ತದೆ. ಇದು ನಮ್ಮದೇ ಮನೆಯ ತಾಯಿ-ಮಗಳ ಬಗೆಗಿನ ಬರಹಗಳು ಅನಿಸಿ ಬಿಡುತ್ತದೆ. ೨೦೧೧ರಲ್ಲಿ ಬೆಳಗಾವಿಯಲ್ಲಿ ಜರಗಿದ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯಮಾಲೆಯ ಒಂದು ನೂರು ಮೇರು ಕೃತಿಗಳಲ್ಲಿ ಈ ಪುಸ್ತಕವೂ ಆಯ್ಕೆಯಾಗಿ ಮರುಪ್ರಕಟವಾದದ್ದು ಇದರ ಶ್ರೇಷ್ಠತೆಯ ಪುರಾವೆ.
೧೯೫೬ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕದ ಬಗ್ಗೆ, ಹಾ.ಮಾ. ನಾಯಕರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ, “ನಮ್ಮ ಮನೆಯ ದೀಪ – ಕೆಲವು ವರುಷಗಳ ಕೆಳಗೆ ನಾನು ಬರೆದ ಏಳು ಬರಹಗಳ ಸಂಗ್ರಹ ….. ಈ ಬರಹಗಳನ್ನು ಏನೆಂದು ಕರೆಯಬೇಕೆಂದು ನನಗೆ ತಿಳಿದಿಲ್ಲ. ….. ರಮಾ, ಅವಳ ತಾಯಿ ವಸುಂಧರಾ – ನನ್ನ ಕಲ್ಪನೆಯ ಸರಸ್ಸಿನಲ್ಲಿ ಅರಳಿದ ಅರವಿಂದಗಳು. ಅವರು ನನಗೆ ತುಂಬ ಹತ್ತಿರದವರೂ, ಪ್ರಿಯರೂ ಆಗಿದ್ದಾರೆ. ಅವರ ಜೀವನದ ಈ ಚಿತ್ರಗಳನ್ನು ನಾನು ಮನಸ್ಸಿನಲ್ಲಿ ಊಹಿಸಿಕೊಂಡಾಗ ಅವನ್ನು ಕಾಗದದಲ್ಲಿ ಮೂಡಿಸಿದಾಗ, ಅವು ಅಚ್ಚಾಗಿ ಮತ್ತೊಮ್ಮೆ ಓದಬೇಕಾಗಿ ಬಂದಾಗ – ಈ ಎಲ್ಲ ಸಂದರ್ಭಗಳಲ್ಲೂ ನಾನು ಅಪಾರವಾಗಿ ಸಂತೋಷಿಸಿದ್ದೇನೆ, ಹರ್ಷಿಸಿದ್ದೇನೆ. ಇದೇ ಬಗೆಯ ಅನುಭವ ಸ್ವಲ್ಪವಾದರೂ ನನ್ನ ಓದುಗರಿಗೆ ಆದೀತೆಂದು ನಾನು ಭಾವಿಸಿದ್ದೇನೆ. ಹಾಗೆ ಆದರೆ ಅದಕ್ಕಿಂತ ಹೆಚ್ಚಿನ ಸಾರ್ಥಕತೆ ನನಗೆ ಇನ್ನೊಂದಿಲ್ಲ.”
“ನಮ್ಮ ಮನೆಯ ದೀಪ”ದ ಮುನ್ನುಡಿ ಬರೆದವರು ಪು.ತಿ. ನರಸಿಂಹಾಚಾರ್. ಅವರ ಮಾತುಗಳು ಈ ಬರಹಗಳಿಗೆ ಕನ್ನಡಿ ಹಿಡಿದಿರುವುದು ಹೀಗೆ: “ಶ್ರೀ ಹಾ.ಮಾ. ನಾಯಕರ ಈ ಪುಸ್ತಕವನ್ನು ಈಗ ತಾನೆ ಓದಿ ಮುಗಿಸಿ, ನನ್ನ ಮನಸ್ಸಿನ ತುಂಬ ಒಂದು ತರದ ನವುರಾದ ಸಂತೋಷ ಹರಡಿಕೊಂಡಿದೆ. ಬರವಣಿಗೆ ಇಷ್ಟು ಚೆನ್ನಾಗಿರುತ್ತದೆಯೆಂದೂ ನನ್ನ ಮನಸ್ಸು ಇದಕ್ಕೆ ಹೀಗೆ ಒಲಿಯುತ್ತದೆಯೆಂದೂ ನಾನೂ ಈ ಮುನ್ನ ಊಹಿಸಿರಲಿಲ್ಲ. ….”ಆ ಮಾತಿನಲ್ಲಿ ಬಿಂಕವಿತ್ತು, ಬೆಡಗಿತ್ತು; ಆದರೆ ಅದರಲ್ಲೊಂದು ಬನಿಯಿತ್ತು” ಎಂದು ಶ್ರೀ ನಾಯಕರು ತಮ್ಮ “ವಸುಂಧರೆ”ಯ ಮಾತಿನಲ್ಲಿ ಕಂಡುಕೊಂಡ ಗುಣಗಳನ್ನು ಅವರ ಬರಹದಲ್ಲೂ ನಾವು ಕಂಡರೆ ಆಶ್ಚರ್ಯವಿಲ್ಲ. ….. ಈ ಬಂಧಗಳ ಮತ್ತೊಂದು ಗುಣವೇನೆಂದರೆ, ಅವು ಎಲ್ಲೂ “ಪದ್ಯತನ”ವನ್ನು ಮುಟ್ಟದಿರುವುದು; ಹಾಗೆ ಮುಟ್ಟದೆಯೇ ಕಾವ್ಯ ಗುಣವನ್ನು ಪ್ರದರ್ಶಿಸುವುದು. …. ಈ ರಚನೆಗಳಲ್ಲಿ ಕಂಡು ಬರುವ “ಅಹಂರಾಹಿತ್ಯ”ಕ್ಕೆ ನಾನು ನಿಜವಾಗಿ ಅಚ್ಚರಿಗೊಂಡಿದ್ದೇನೆ. ಈ ಬರವಣಿಗೆ ಮೂರು ನಾಲ್ಕು ವರ್ಷಗಳ ಹಿಂದಾದದ್ದು; ಶ್ರೀ ನಾಯಕರಿಗೆ ಮೊನ್ನೆ ತಾನೆ ಮದುವೆಯಾಯಿತು. ಹೀಗಿರುವಲ್ಲಿ ಇವರು “ರಮೆ”ಯನ್ನೂ “ವಸುಂಧರೆ”ಯನ್ನೂ ಇಷ್ಟು ಸ್ಪಷ್ಟವಾಗಿ ಹೇಗೆ ಕಂಡುಕೊಂಡರೋ ಎಂದು ಬೆರಗಾಗುತ್ತದೆ ಮನಸ್ಸು. ಇದನ್ನು ಓದುತ್ತಿರುವಾಗ ನನ್ನ ಮಗುವೊಂದರ ಚಿತ್ರ ನನಗೇ ಸ್ಪಷ್ಟತರವಾಗುತ್ತಾ ಬರಹತ್ತಿತು. ಹಾಗೆಯೇ ಇದನ್ನು ಓದುವ ತಂದೆತಾಯಿಗಳಿಗೆಲ್ಲ ಆಗುವ ಸಂಭವವುಂಟು. “
ಪು.ತಿ. ನರಸಿಂಹಾಚಾರ ಅವರು ಮುನ್ನುಡಿಯ ಮುಕ್ತಾಯದಲ್ಲಿ ಹೀಗೆನ್ನುತ್ತಾರೆ, “…ಈ ಪುಸ್ತಕವನ್ನು ಓದುತ್ತಿರುವಾಗ ನಮ್ಮ ಮಗುವೇ ಬಂದು ಅಡ್ಡಗಿಸಿದರೆ ನಾವು ಅದನ್ನು ಗದರಿಸಿಕೊಳ್ಳುವುದು ಅಸ್ವಾಭಾವಿಕವಲ್ಲ. ಏಕೆಂದರೆ ಈ ಬಂಧಗಳಲ್ಲಿ ಕಾಣ ಬರುವ ವಾತ್ಸಲ್ಯ ರುಚಿಯೂ, ನವದಂಪತಿಗಳ ಶುಚಿಪ್ರಣಯ ರುಚಿಯೂ ನೈಜಾನುಭವದಿಂದ ಪ್ರಾಪ್ತವಾಗುವ ಸಂತೋಷಕ್ಕಿಂತ ಮೇಲ್ತರದ್ದು. ಅಂಥ ಅನುಭೂತಿಗಳನ್ನೇ ರುಚಿಗೊಳಿಸತಕ್ಕ ಮಾಧುರ್ಯವುಳ್ಳದ್ದು…”
ಅವರ ಈ ಮಾತುಗಳನ್ನು ಹೊಗಳಿಕೆ ಎನ್ನಲು ಸಾಧ್ಯವೇ ಇಲ್ಲ. ಮಗಳು “ರಮಾ” ಮತ್ತು ಮಡದಿ “ವಸುಂಧರಾ” ಜೊತೆಗಿನ ’ಅನುಭವ”ಗಳನ್ನು ಅಷ್ಟು ನವಿರಾಗಿ ಪದಗಳಲ್ಲಿ ಚಿತ್ರಿಸಿದ್ದಾರೆ ಹಾ.ಮಾ. ನಾಯಕರು. ಕೇವಲ ಕಲ್ಪನೆಯ ಬಲದಿಂದ ಅಂತಹ “ಅನುಭವ”ಗಳ ಬಗ್ಗೆ ಇಷ್ಟು ಸುಲಲಿತವಾಗಿ, ಮೋಹಕವಾಗಿ ಬರೆಯಲು ಸಾಧ್ಯವೇ ಎಂದು ಓದುಗರು ಬೆರಗಾಗುತ್ತಲೇ ಇರಬೇಕಾಗುತ್ತದೆ. “ನಮ್ಮ ಮನೆಯ ದೀಪ”ದ ಏಳು ಬರಹಗಳಲ್ಲಿ ಕನ್ನಡ ಭಾಷೆಯನ್ನು ಅದ್ಭುತವಾಗಿ ದುಡಿಸಿಕೊಂಡಿರುವ ಹಾ.ಮಾ. ನಾಯಕರು, ಈ ಬರಹಗಳ ಮೂಲಕ ಕನ್ನಡಿಗರ ಮನೆಮನೆಗಳಲ್ಲಿ ದೀಪ ಬೆಳಗಿಸುವ ಕೆಲಸ ಮಾಡಿದ್ದಾರೆ. ಪುಸ್ತಕ ಓದುತ್ತಾ, ಆ ದೀಪಕ್ಕೊಂದಿಷ್ಟು ಎಣ್ಣೆ ಹಾಕೋಣ ಬನ್ನಿ.
Comments
ಉ: ನಮ್ಮ ಮನೆಯ ದೀಪ
ಓದಲು ಪ್ರೇರೇಪಿಸುವ ವಿಮರ್ಶೆ. ಧನ್ಯವಾದಗಳು.