ನಮ್ಮ ಮನೆ ಹೇಗಿರಬೇಕು?

ನಮ್ಮ ಮನೆ ಹೇಗಿರಬೇಕು?

ಈ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶದ್ದೇ ಭರಾಟೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತಿನಂತೆ ಮನೆಯೊಂದನ್ನು ಕಟ್ಟಿ ಮುಗಿಸುವಾಗ ಆ ವ್ಯಕ್ತಿ ಬಹಳ ಜವಾಬ್ದಾರಿಯುತ ಮನುಷ್ಯನಾಗಿ ಬದಲಾಗುತ್ತಾನೆ. ಏಕೆಂದರೆ ಮನೆ ಕಟ್ಟುವಾಗ ಮಾಡಿದ ಸಾಲ, ಅದಕ್ಕೆ ಕಟ್ಟ ಬೇಕಾದ ಬಡ್ಡಿ ಎಲ್ಲವೂ ಆತನ ತಲೆ ಮೇಲಿರುತ್ತದೆ. ಮೊದಲಿನಂತೆ ಸಂಬಳವನ್ನು ಬೇಕಾಬಿಟ್ಟಿ ಖರ್ಚು ಮಾಡುವಂತಿಲ್ಲ. ಮನೆ ಸಾಲ ತುಂಬಲು ಇಂತಿಷ್ಟೇ ನಿಗದಿತ ಮೊತ್ತವನ್ನು ತೆಗೆದಿಡಲೇ ಬೇಕು. ಈ ಕಾರಣದಿಂದಲೇ ಹಿರಿಯರು ‘ಮನೆ ಕಟ್ಟಿ ನೋಡು' ಎಂದು ಹೇಳಿರಬಹುದು. 

ಸ್ವಂತ ಮನೆ ಕಟ್ಟುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ನೀವು ಬಾಳಿ ಬದುಕಬೇಕಾದ ಮನೆ ಹೇಗಿರಬೇಕು? ಎನ್ನುವ ಕಲ್ಪನೆ ನಿಮಗಿದೆಯೇ? ಮನೆಯೊಂದು ಹೇಗಿರಬೇಕು? ಎನ್ನುವ ಬಗ್ಗೆ ಇತ್ತೀಚೆಗೆ ನಾನು ಒಂದು ಪುಟ್ಟ ಬರಹವನ್ನು ‘ವಿಶ್ವವಾಣಿ' ಪತ್ರಿಕೆಯಲ್ಲಿ ಕಂಡೆ. ನಿಮ್ಮೊಂದಿಗೆ ಹಂಚಿಕೊಳ್ಳುವ ಎಂಬ ಉದ್ದೇಶದಿಂದ ಆ ಬರಹವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ವಿಶ್ವವಾಣಿಗೆ ಕೃತಜ್ಞತೆಗಳು.

ಮನೆ ಅಂದ್ರೆ ಹೇಗಿರಬೇಕು ಎನ್ನುವುದಕ್ಕೆ ನಮ್ಮದೇ ಆದ ಕಲ್ಪನೆ ಎಲ್ಲರಿಗೂ ಇರುತ್ತದೆ. ಬೀದಿ ಎಷ್ಟೇ ಗಲೀಜಾಗಿದ್ದರೂ ಮನೆ ಮಾತ್ರ ಸುಂದರವಾಗಿರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ‘ಮನೆಯೇ ಮಂತ್ರಾಲಯ' ಎಂಬ ಭಾವನೆ ನಮ್ಮದು. ನಮ್ಮ ನಮ್ಮ ಮನೆಗಳಿಗಿಂತ ಮಿಗಿಲಾದ ಸುಂದರ ತಾಣ ಮತ್ತೊಂದಿಲ್ಲ. ನಮ್ಮ ಮನೆಯಲ್ಲಿ ಸಿಗುವಷ್ಟು ಸ್ವಾತಂತ್ರ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಗುಡಿಸಲೇ ಇರಬಹುದು, ಅರಮನೆಯೇ ಇರಬಹುದು. ಎಲ್ಲರಿಗೂ ಅವರವರ ಮನೆ ಅಂದ್ರೆ ಅತ್ಯಂತ ಇಷ್ಟದ ತಾಣ. ‘ಭೂಮಿಯ ಮೇಲಿನ ಸ್ವರ್ಗ' ಎಂದು ಹೆಸರುವಾಸಿಯಾದ ಸ್ವಿಝರ್ ಲ್ಯಾಂಡಿಗೆ ಹೋಗಿ ಖುಷಿ ಅನುಭವಿಸಿದವರಿಗೂ, ಮನೆಗೆ ಮರಳಿದಾಗ ಸಿಗುವ ಆನಂದವೇ ಬೇರೆ. ಮನೆಯ ಕುರಿತು ಈ ರೀತಿಯ ಅನುಭವ ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಜಗತ್ತಿನ ಎಲ್ಲ ದೇಶಗಳಲ್ಲಿರುವ ಜನರ ಅಭಿಪ್ರಾಯವೂ ಅದೇ.  ಈ ಕಾರಣದಿಂದ ಮನೆಯನ್ನು ಸುಂದರವಾಗಿಟ್ಟುಕೊಳ್ಳಲು ಬಯಸುತ್ತಾರೆ. ಇತ್ತೀಚೆಗೆ “The Korean Book of Happiness : Joy, Resilience and the Art of Giving” ಎಂಬ ಪುಸ್ತಕದಲ್ಲಿ ಮನೆ ಹೇಗಿರಬೇಕು ಎನ್ನುವ ಮಾಹಿತಿ ನೋಡಿದೆ. ಕೊರಿಯಾದಲ್ಲಿ ಮನೆ ಕಲ್ಪನೆ ಅಂದ್ರೆ ಏನು, ಮನೆ ಹೇಗಿರಬೇಕು, ಮನೆಯಲ್ಲಿ ಹೇಗಿರಬೇಕು ಎಂಬ ಬಗ್ಗೆ ಅದರಲ್ಲೊಂದು ಪುಟ್ಟ ಬರಹವಿತ್ತು. ಅದರಲ್ಲಿ ಹತ್ತು ಅಂಶಗಳಿದ್ದವು. 

೧. ಸಾಧ್ಯವಾದಷ್ಟು ಮನೆಯಲ್ಲಿ ನೆಲದ ಮೇಲೆ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ನೀವು ಯಾವತ್ತೂ ನೆಲಕ್ಕೆ ಹತ್ತಿರವಿರುತ್ತೀರಿ. ಎಲ್ಲಿ ತನಕ ನೆಲಕ್ಕೆ ಹತ್ತಿರವಿರುತ್ತೀರೋ, ಅಲ್ಲಿ ತನಕ ನಿಮ್ಮ ಬೇರುಗಳೂ ಗಟ್ಟಿಯಾಗಿರುತ್ತವೆ. 

೨. ಮನೆಯಲ್ಲಿ ಇದ್ದಾಗ ಬೂಟು ಮತ್ತು ಸಾಕ್ಸ್ ಧರಿಸಬೇಡಿ. ನಿಮ್ಮ ಪಾದ ಫ್ರೀ ಆಗಿರಲಿ. ಬೇರೆಯವರ ಮನೆಗೆ ಹೋದಾಗಲೂ ಈ ಮಾತು ಅನ್ವಯ. ಹೊರಗಿನ ಧೂಳು ಮನೆಯೊಳಗೆ ಬರಬಾರದು. 

೩. ಮನೆಯಲ್ಲಿ ಎಷ್ಟು ಕಡಿಮೆ ಸಾಮಾನುಗಳಿರುತ್ತವೆಯೋ, ಅಷ್ಟು ಒಳ್ಳೆಯದು. ಕಂಡ ಕಂಡ ಸಾಮಾನುಗಳನ್ನು ಮನೆಯಲ್ಲಿ ತಂದು ಇಡಬೇಡಿ.

೪. ಸಾಧ್ಯವಾದಷ್ಟು ಮನೆಯ ಎಲ್ಲಾ ಕಿಟಕಿಗಳನ್ನು ತೆರೆದಿಡಿ. ಇದರಿಂದ ಯಾವತ್ತೂ ತಾಜಾ ಗಾಳಿ ಬರುತ್ತಿರುತ್ತದೆ. ತಾಜಾ ಗಾಳಿಯು ಮನಸ್ಸಿಗೆ ಮುದ ನೀಡುತ್ತದೆ.

೫. ಮನೆಯಲ್ಲಿ ಪ್ರತಿದಿನವೂ ತಾಜಾಹೂವುಗಳನ್ನು ಇಡಿ. ಹೂವುಗಳು ಏರ್ ಫಿಲ್ಟರ್ ನಂತೆ ಕೆಲಸ ಮಾಡುತ್ತವೆ. ಮನಸ್ಸು ಖಿನ್ನವಾಗಿದ್ದಾಗ, ಹೂವುಗಳು ನಮಗರಿವಿಲ್ಲದಂತೆಯೇ ಸಂತಸ ನೀಡುತ್ತವೆ.

೬. ಮನೆಯ ಗೋಡೆಗಳಿಗೆ ಒಳ್ಳೆಯ ಪೇಂಟಿಂಗ್, ಫೋಟೋಗಳನ್ನು ನೇತು ಹಾಕಿ. ಸಾಧ್ಯವಾದಷ್ಟು ಅವು ಪ್ರಕೃತಿಗೆ ಸಂಬಂಧಿಸಿದಾಗಿರಲಿ. ಯಾವ ಗೋಡೆಯನ್ನೂ ಫೊಟೋ, ಪೇಂಟಿಂಗ್ ಇಲ್ಲದೇ ಬೋಳು ಬೋಳಾಗಿ ಬಿಡಬೇಡಿ.

೭. ಮನೆಯಲ್ಲಿ ಸಾಧ್ಯವಾದಷ್ಟು ಕಟ್ಟಿಗೆಯ ಸಾಮಾನುಗಳನ್ನು ಬಳಸಿ. ಪ್ಲಾಸ್ಟಿಕ್, ಕಬ್ಬಿಣದ ಸಾಮಾನುಗಳು ಬೇಡವೇ ಬೇಡ ಅಥವಾ ಕಡಿಮೆ ಬಳಸಿ. ಮರಗಳಿಂದ ಮಾಡಿದ ಸಾಮಾನುಗಳು ಪ್ರಕೃತಿಯ ಭಾಗವೇ ಆಗಿರುವುದರಿಂದ ಮನೆಗೆ ವಿಶೇಷ ಲಕ್ಷಣವನ್ನು ನೀಡುತ್ತದೆ.

೮. ಮನೆ ಸಣ್ಣದಾಗಿರುವುದು ಸಮಸ್ಯೆ ಅಲ್ಲ, ದೊಡ್ದ ಮನಸ್ಸು ಎಷ್ಟು ಜನರನ್ನಾದರೂ ಸೇರಿಸಿಕೊಳ್ಳುತ್ತದೆ. 

೯. ಮನೆಯಲ್ಲಿ ಅತಿಥಿಗಳಿಗಾಗಿ ಒಂದು ಪ್ರತ್ಯೇಕ ಕೋಣೆಯಿರಲಿ. ಅತಿಥಿಗಳಿಗೆ ಅವರ ಖಾಸಗಿತನ ಮುಖ್ಯ. 

೧೦. ಮನೆಯಲ್ಲಿದ್ದಷ್ಟು ಹೊತ್ತು ಫ್ರೆಶ್ ಆದ ಬಟ್ಟೆಯನ್ನೇ ಧರಿಸಿರಿ. ‘ಇದು ನನ್ನ ಮನೆ, ಹೇಗಿದ್ದರೂ ನಡೆಯುತ್ತದೆ’ ಎನ್ನುವ ಭಾವನೆ ಬೇಡ. ಮನೆಯಲ್ಲಿದ್ದಾಗಲೂ ಠಾಕು-ಠೀಕಾಗಿ ಇರಿ. ಆಗ ನಿಮ್ಮ ದಿನಚರಿಗೊಂದು ಚೌಕಟ್ಟು ಮೂಡುತ್ತದೆ. ಯಾವ ಕಾರಣಕ್ಕೂ ಮನೆಯಲ್ಲಿ ಶಾಂತಿಯನ್ನು ಕಾಪಾಡಿ. ಕಾರಣ ನಿಮಗೆ ಗರಿಷ್ಟ ಶಾಂತಿ ಸಿಗುವುದು ಮನೆಯಲ್ಲಿಯೇ. ಹೀಗಾಗಿ ಯಾವ ಕಾರಣಕ್ಕೂ ಮನೆಯನ್ನು ನರಕ ಮಾಡಿಕೊಳ್ಳದಿರಿ.

ಕೃಪೆ: ವಿಶ್ವವಾಣಿ 

ಚಿತ್ರ ಕೃಪೆ: ಅಂತರ್ಜಾಲ ತಾಣ