ನಮ್ಮ ರಾಷ್ಟ್ರ ನಿರ್ಮಾಪಕರು (ಭಾಗ ೧)

ನಮ್ಮ ರಾಷ್ಟ್ರ ನಿರ್ಮಾಪಕರು (ಭಾಗ ೧)

ಪುಸ್ತಕದ ಲೇಖಕ/ಕವಿಯ ಹೆಸರು
ಹಿಂದಿ ಮೂಲ: ಡಾ. ಶ್ಯಾಮಸುಂದರ ತ್ರಿಪಾಠಿ, ಅನುವಾದ: ಮಾಲತಿ ಎಂ. ಕಾನಿಟ್ಕರ್
ಪ್ರಕಾಶಕರು
ವಿದ್ಯಾಭಾರತಿ ಕರ್ನಾಟಕ, ಶೇಷಾದ್ರಿಪುರಂ, ಬೆಂಗಳೂರು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೧೪

ವಿದ್ಯಾಭಾರತಿ ಕರ್ನಾಟಕ ಇವರು “ನಮ್ಮ ರಾಷ್ಟ್ರ ನಿರ್ಮಾಪಕರು" ಎಂಬ ಪುಸ್ತಕದಲ್ಲಿ ಭಾರತ ಮಾತೆಯ ಹೆಮ್ಮೆಯ ಮಕ್ಕಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಪುಸ್ತಕದ ಹಿಂದಿ ಮೂಲ ಡಾ॥ ಶ್ಯಾಮಸುಂದರ ತ್ರಿಪಾಠಿ ಮತ್ತು ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಶ್ರೀಮತಿ ಮಾಲತಿ ಎಂ. ಕಾನಿಟ್ಕರ್. ಈ ಬರಹಗಳನ್ನು ಸಂಪಾದಿಸಿದವರು ಡಾ॥ ಹಿಮ್ಮತ್ ಸಿಂಹ್ ಸಿನ್ಹಾ ಇವರು. 

ಲೇಖಕರಾದ ಶ್ಯಾಮಸುಂದರ ತ್ರಿಪಾಠಿ ಇವರು ತಮ್ಮ ನುಡಿಯಲ್ಲಿ “ನಮ್ಮ ರಾಷ್ಟ್ರ ನಿರ್ಮಾಪಕರ ಸಂಕ್ಷಿಪ್ತ ಪರಿಚಯ ನೀಡುವಂತಹ ಒಂದು ಪುಸ್ತಕವನ್ನು ಬರೆಯಬೇಕೆಂಬ ಇಚ್ಛೆ ಅನೇಕ ದಿನಗಳಿಂದ ಮನದಲ್ಲಿತ್ತು. ಮಾನನೀಯ ಲಜ್ಜಾರಾಮ ತೋಮರರು ಜಯಪುರದಲ್ಲಿನ ವಿಶಾಲವಾದ ಸಂಶೋಧನಾ ಕೊಠಡಿಯಲ್ಲಿ ನಡೆಸಿದ ಬೈಠಕ್ ನನ್ನನ್ನು ಈ ಕಾರ್ಯದ ಬಗ್ಗೆ ಪ್ರೇರೇಪಿಸಿತು. ವಿದ್ಯಾಭಾರತಿಯ ಮೂಲಕ ಅನೇಕ ಮಹಾಪುರುಷರ ಚಿತ್ರಗಳನ್ನು ದೊಡ್ಡ ಆಕಾರದಲ್ಲಿ ಪ್ರಕಾಶಿತಗೊಳಿಸಲಾಗಿದೆ. ಈ ಚಿತ್ರಗಳು ದೇಶದ ಸಾವಿರಾರು ವಿದ್ಯಾಲಯಗಳ ಶೋಭೆಯನ್ನು ಹೆಚ್ಚಿಸಿವೆ. 

ಪರಿಚಯವನ್ನು ಬಹಳ ಸಂಕ್ಷೇಪವಾಗಿ ನೀಡಲಾಗಿದೆ. ಆದರೂ ಮಹಾಪುರುಷರಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳ ಉಲ್ಲೇಖ ಮಾಡಲು ಅನುಕೂಲವಾಗುವ ರೀತಿಯಲ್ಲಿ  ಪ್ರಯತ್ನ ನಡೆಸಲಾಗಿದೆ. ‘ರಾಷ್ಟ್ರ ನಿರ್ಮಾಪಕರು’ ಈ ಮಾಲಿಕೆಯಲ್ಲಿ ಮಹಾಪುರುಷರಾದ ಸಂತರು, ಮಹಾತ್ಮರು, ದಾರ್ಶನಿಕರು, ಸಾಹಿತ್ಯಕಾರರು, ವಿಜ್ಞಾನಿಗಳು ಹಾಗೂ ಹಿಂದೂ ಸಮಾಜದಲ್ಲಿ ಜಾಗೃತಿಯ ಅಲೆಯನ್ನು ಹರಡುವಂಥ ಸಮಾಜ ಸುಧಾರಕರು, ಸಂಘಟನಾಕಾರರು ಹಾಗೂ ಮಾರ್ಗದರ್ಶಕರನ್ನು ಸಮ್ಮಿಳಿತಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದ ಬಗ್ಗೆ ಪ್ರಕಾಶಕರು ತಮ್ಮ ಅನಿಸಿಕೆಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ - “ ‘ವಿದ್ಯಾ ಭಾರತಿಯು' ಶಿಕ್ಷಣ ಕ್ಷೇತ್ರದಲ್ಲಿ ಇದೇ ಈಶ್ವರೀಯ ವಿಧಾನಕ್ಕನುಗುಣವಾಗಿ ದೇಶದಲ್ಲೆಲ್ಲಾ ಹರಡಿರುವ ತನ್ನ ೧೫,೦೦೦ ವಿದ್ಯಾಲಯಗಳಲ್ಲಿ ಹಾಗೂ ೫೭ ಸಾವಿರ ಆಚಾರ್ಯರು ಹಾಗೂ ೨೦ ಲಕ್ಷ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ರಾಷ್ಟ್ರೀಯತೆಯ ಬಗ್ಗೆ ಆತ್ಮಜ್ಞಾನವನ್ನು ಜಾಗೃತಗೊಳಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿದೆ. ವಿದ್ಯಾಭಾರತಿಯು ಸಂಸ್ಕೃತಿ ಜ್ಞಾನ ಪರಿಚಯದ ಯೋಜನೆಯ ಮೂಲಕ ಹೊಸ ಪೀಳಿಗೆಯವರಲ್ಲಿ ತಮ್ಮ ಧರ್ಮ, ಸಂಸ್ಕೃತಿ, ಇತಿಹಾಸ ಹಾಗೂ ಪೂರ್ವಜರ ಬಗ್ಗೆ ಜ್ಞಾನ ಸಹಿತ ಶೃದ್ಧೆಯ ಭಾವನೆಯನ್ನು ಜಾಗೃತಗೊಳಿಸುವಲ್ಲಿ ಸಫಲತೆ ಪಡೆಯುತ್ತಾ ಮುಂದಿನ ಪ್ರಗತಿ ಪಥದಲ್ಲಿ ಅಗ್ರಗಣ್ಯವಾಗಿದೆ." 

ಈ ಪುಸ್ತಕದಲ್ಲಿ ೫೦ ಮಂದಿ ಮಹನೀಯರ ಹಾಗೂ ‘ಓಂ’ ಕುರಿತಾದ ಒಂದು ಅಧ್ಯಾಯ ಒಟ್ಟಿಗೆ ೫೧ ಅಧ್ಯಯಗಳಿವೆ. ಇದರಲ್ಲಿ ಪ್ರಮುಖವಾಗಿ ಶ್ರೀರಾಮ, ಶ್ರೀಕೃಷ್ಣ, ಮಹಾತ್ಮ ಬುದ್ಧ, ವಿಕ್ರಮಾದಿತ್ಯ, ಗುರುನಾನಕ, ಏಕಲವ್ಯ, ವೇದವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ಕಬೀರ, ಬಸವೇಶ್ವರ, ರಾಮತೀರ್ಥ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಗೂರ್ ಇತ್ಯಾದಿ ಅಧ್ಯಾಯಗಳಿವೆ. ಎಲ್ಲಾ ಅಧ್ಯಯಗಳು ೨-೩ ಪುಟಗಳಿಗೆ ಸೀಮಿತವಾಗಿರುವುದರಿಂದ ಬರಹಗಳು ಬಹಳ ಸಂಕ್ಷಿಪ್ತವಾಗಿದೆ. ಆದರೂ ನಮಗೆ ಗೊತ್ತಿರದ ಹಲವಾರು ವಿಷಯಗಳು ಈ ಹೊತ್ತಗೆಯಲ್ಲಿವೆ. ಪ್ರತೀ ಅಧ್ಯಾಯದಲ್ಲಿ ಸೊಗಸಾದ ಛಾಯಾಚಿತ್ರವನ್ನು ಮುದ್ರಿಸಿದ್ದಾರೆ. ೧೬೦ ಪುಟಗಳ ಈ ಪುಸ್ತಕವು ಶಾಲಾ ವಿದ್ಯಾರ್ಥಿಗಳಿಗೆ ಮಹತ್ವಪೂರ್ಣವಾಗಿದೆ. ಈ ಪುಸ್ತಕವು ಒಂದನೇ ಭಾಗವಾಗಿದ್ದು, ಎರಡನೇ ಭಾಗವೂ ಇಷ್ಟೇ ಮಹತ್ವಪೂರ್ಣವಾಗಿದೆ ಎನ್ನುತ್ತಾರೆ ಪ್ರಕಾಶಕರು.