ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!

ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!

ಬರಹ

ನಮ್ಮ ರೈತರಿಗೆ ಪರಿಸರವೇ ಶಿಕ್ಷಕ ಎಂಬುದರಲ್ಲಿ ಎರಡು ಮಾತಿಲ್ಲ. ನಿಸರ್ಗವೇ ಅವರ ‘ಅನುಭವ ಕಲಿಕೆ’ಯ ಅತ್ಯುತ್ತಮ ಅನುಭಾವಿ ಪ್ರಯೋಗಶಾಲೆ ಎಂಬುದರಲ್ಲಿ ಸಂದೇಹವೇ ಇಲ್ಲ. ಕೃಷಿ, ಕೃಷಿ ಸಂಬಂಧಿ ಕಾಯಕ ಹಾಗು ಗ್ರಾಮೀಣ ಬದುಕಿಗೆ ಸಂಬಂಧಿಸಿದಂತೆ ಅವರಲ್ಲಿರುವ ಪರಿಸರ ಸ್ನೇಹಿ ನೆಲಮೂಲಜ್ನಾನದ ಪ್ರಯೋಗಗಳು ನಮಗೆ ಬೆರಗು ಹುಟ್ಟಿಸಬಲ್ಲವು. ಇರಲಿ..ಇಲ್ಲದಿರಲಿ. ಶಿವ ಕೊಡಲಿ..ಕೊಡದಿರಲಿ. ಆ ಸಂತೃಪ್ತಿಯ, ನೆಮ್ಮದಿಯ ಬದುಕು ಅವರು ಕಂಡುಕೊಂಡಿದ್ದು, ಕಟ್ಟಿಕೊಂಡಿದ್ದು ಇದೆಯಲ್ಲ..ಬಹಳ ಸಾರಿ ನನ್ನಲ್ಲಿ ವಿಸ್ಮಯ ಮೂಡಿಸಿದೆ.

ಯಾವ ವಿಶ್ವವಿದ್ಯಾಲಯದಲ್ಲಿಯೂ ಕಲಿಸಲಾಗದ. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡಲಾಗದ, ತಮ್ಮ ಅನುಭವ, ಸಾಂದರ್ಭಿಕ ಸಮಸ್ಯೆಗಳನ್ನು ಆಧರಿಸಿ ತಕ್ಷಣ ಪರಿಹಾರ ಕಂಡುಕೊಳ್ಳುವ ವಿಶಿಷ್ಠ ಪ್ರಯೋಗಗಳ ಜ್ನಾನ ಭಂಡಾರ ಅವರಲ್ಲಿದೆ. ಹಾಗಾಗಿ ‘ವಿಜ್ನಾನಿಗಳು’ ನಮ್ಮ ನೇಗಿಲಯೋಗಿಗಳು. ಅನುಭವದಲ್ಲಿ ಅಮೃತತ್ವ ಸವಿದ, ಸಿಹಿ-ಕಹಿಯ ಸಮಪಾಕದ ಬದುಕನ್ನು ಅನುಭವಿಸಿ ಅರಿತವರು ಅವರು.

ಇತ್ತೀಚೆಗೆ ಕಾರ್ಯ ನಿಮಿತ್ತ ನಾನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹನುಮಸಾಗರಕ್ಕೆ ಹೋಗಿದ್ದೆ. ನನ್ನ ಆತ್ಮೀಯ ಸಹೋದ್ಯೋಗಿ ಡಾ.ಎ.ಎಂ.ಕಡಕೋಳ ಪ್ರೀತಿಯಿಂದ ತಮ್ಮ ತಂದೆಯವರ ಭೇಟಿಗೆ ಕರೆದೊಯ್ದರು. ೬೨ ವರ್ಷದ ಜ್ನಾನವೃದ್ಧ, ಪ್ರಗತಿಪರ ಕೃಷಿಕ ಹಾಗು ಆ ಊರಿನ ಪಂಚಾಯತ ಎಂಬ ಗೌರವ ಸಂಪಾದಿಸಿದ ಶ್ರೀ ಮರಿಯಪ್ಪ ಅಡಿವೆಪ್ಪ ಕಡಕೋಳ ಸ್ವಂತ ಮಕ್ಕಳಂತೆ ನಮ್ಮನ್ನು ಬರಮಾಡಿಕೊಂಡರು. ಈ ಆತ್ಮೀಯತೆಗೆ ನಮ್ಮ ಪಟ್ಟಣದಲ್ಲಿ ನಾವು ‘ಓಯಾಸಿಸ್’ ಗೌರವ ನೀಡಿದ್ದೇವೆ!

ಕೃಷಿಕ ಮರಿಯಪ್ಪ ಶಾಲೆಯ ಮುಖ ನೋಡಿಲ್ಲ. ಹಾಗಂತ ಅನಕ್ಷರಸ್ಥ ಅಂತ ಭಾವಿಸಬೇಕಿಲ್ಲ. ಅವರು ಅಕ್ಷರಸ್ಥರಲ್ಲ ಆದರೆ ಶಿಕ್ಷಣಸ್ಥರು. ಹಿರಿಯರಿಂದ ಪಾಲಿಗೆ ಬಂದ ೧೦ ಎಕರೆ ಜಮೀನಿದೆ. ಸ್ವಂತ ಪ್ರಯತ್ನದಿಂದ ಮತ್ತೆ ೨ ಎಕರೆ ಸಾಗುವಳಿ ಮಾಡಿಕೊಂಡಿದ್ದಾರೆ. ಮೊದಲು ಒಣ ಬೇಸಾಯ ಪದ್ಧತಿ ಆಶ್ರಯಿಸಿದ್ದ ಅವರು ಇತ್ತೀಚೆಗೆ ಕೊಳವೆ ಬಾವಿ ಕೊರೆಯಿಸಿ ನೀರಾವರಿ ವ್ಯವಸಾಯಕ್ಕೆ ಮುನ್ನುಡಿ ಬರೆದಿದ್ದಾರೆ. ದಿನಕ್ಕೆ ಶಿಫ್ಟ್ ಮೇಲೆ ದೊರಕುವ ೬ ತಾಸು ವಿದ್ಯುತ್ ಆಶ್ರಯಿಸಿ ಈ ಸರ್ಕಸ್ ಮಾಡಲು ಇಳಿದಿದ್ದಾರೆ ಮರಿಯಪ್ಪನವರು.

೫ ಇಂಚಿನ ಬೋರ್ ಆಶ್ರಯಿಸಿ ೧೨ ಎಕರೆ ನೀರಾವರಿ ಮಾಡಿಕೊಂಡು ಶೇಂಗಾ, ಗೋವಿನಜೋಳ, ಸಜ್ಜೆ, ಭತ್ತ ಹಾಗು ಹತ್ತಿ ಬೆಳೆಯುತ್ತಿದ್ದಾರೆ. ತಕ್ಕ ಮಟ್ಟಿಗೆ ಮಿಶ್ರಬೇಸಾಯ ಪದ್ಧತಿ ಅವರದ್ದು. ಜೊತೆಗೆ ಬದನೆಕಾಯಿ, ಟೊಮೆಟೋ, ಚವಳಿಕಾಯಿ, ಅವರೆಕಾಯಿ, ಅಲಸಂದಿ, ಮೆಣಸಿನಕಾಯಿ, ಹೀರಿಕಾಯಿ, ಕುಂಬಳಕಾಯಿ ಹಾಗು ಹಾಗಲಕಾಯಿ ಮೊದಲಾದ ಕಾಯಿಪಲ್ಲೆ ಬೆಳೆಗಳನ್ನು ಸಹ ಅವರು ಬೆಳೆಯುತ್ತಿದ್ದಾರೆ. ಮನೆಗೆ ದಕ್ಕಿ, ಮಿಕ್ಕಿದ್ದು ಮಾರಾಟಕ್ಕೆ. ಅಷ್ಟರಮಟ್ಟಿಗೆ ಸ್ವಾವಲಂಬಿ ಅವರು.

ಮಗ ಡಾ.ಎ.ಎಂ.ಕಡಕೋಳ ಅವರ ಒತ್ತಾಸೆಗೆ ಮಣಿದು ಮರಿಯಪ್ಪ ಬಾರಿಹಣ್ಣು, ಪಪ್ಪಾಯಿ, ಚಿಕ್ಕು, ಮಾವು, ಹಲಸು, ದಾಳಿಂಬೆ, ಗುಡ್ಡದನೆಲ್ಲಿ, ಪೇರಲ, ನೀರಲಹಣ್ಣು ಮೊದಲಾದ ಹಣ್ಣಿನ ಗಿಡಗಳನ್ನು ಸಹ ನೆಟ್ಟು ಪೋಷಿಸುತ್ತಿದ್ದಾರೆ. ಸಂಪಿಗೆ, ದಾಸವಾಳ ಹಾಗು ಗುಲಾಬಿ ಗಿಡಗಳನ್ನು ಸಹ ತೋಟದಲ್ಲಿ ನೆಡಲಾಗಿದ್ದು ಸದ್ಯ ಹೂಬಿಡಲು ಆರಂಭಿಸಿವೆ.

ಮರಿಯಪ್ಪನವರ ಸಾಂಪ್ರದಾಯಿಕ ಜಾಣ್ಮೆ ಎಂದರೆ ಹೊಲಕ್ಕೆ ಹತ್ತಿಕೊಂಡಿರುವ ಗುಡ್ಡದಿಂದ ತೊಟ್ಟಿಕ್ಕುವ ಎಲ್ಲ ನೀರಿನ ತೊರೆಗಳನ್ನು ಸೇರಿಸಿ ಹೊಲದ ಮೂಲೆಯಲ್ಲಿರುವ ಹಳೆಯ ಬಾವಿಗೆ ಜೋಡಿಸಿರುವುದು. ಈ ಬಾರಿ ಅದನ್ನು ವ್ಯವಸ್ಥಿತವಾಗಿ ಕೈಗೆತ್ತಿಕೊಂಡು ಅದೇ ನೀರಿನಿಂದ ಬೋರ್ ವೆಲ್ ರಿಚಾರ್ಜಿಂಗ್ ಯೋಜನೆ ಕೈಗೆತ್ತಿಕೊಳ್ಳುವ ತವಕದಲ್ಲಿ ಇದ್ದಾರೆ. ಹೊಲದ ನೆತ್ತಿಯ ಮೇಲೆ ಈ ಬಾವಿ ನೈಸರ್ಗಿಕ ಕೃಷಿ ಹೊಂಡದ ತರಹ ಇರುವುದರಿಂದ ಇಡೀ ಹೊಲದ ನೆತ್ತಿ, ಹೊಟ್ಟಿ ತಂಪಾಗಿರುತ್ತದೆ ಎಂಬ ಅಭಿಮತ ಅವರದ್ದು.

ದೊಡ್ಡ ಜಮೀನುದಾರ ಹೊಲದ ಬದುಗಳು ಹಾಗೆಯೇ ಪಡ ಬಿದ್ದಿದ್ದು ನಾನು ಸಾಕಷ್ಟು ಕಡೆಗಳಲ್ಲಿ ಕಂಡಿದ್ದೇನೆ. ಆದರೆ ಮರಿಯಪ್ಪನವರು ಇಲ್ಲಿಯೂ ಭಿನ್ನವಾಗಿ ನಿಲ್ಲುತ್ತಾರೆ. ೧೨ ಎಕರೆ ಹೊಲದ ನಾಲ್ಕೂ ಬದುವಿಗೆ ದನಗಳಿಗೆ ಮೇವಾಗಿ ಬಳಕೆಯಾಗುವ ಹುಲ್ಲನ್ನು ವೈಜ್ನಾನಿಕವಾಗಿ ಬೆಳೆಸಿ ತಮ್ಮ ಹೈನಿನ ಆಹಾರದ ಅವಶ್ಯಕತೆಯ ಜೊತೆಗೆ, ಮಣ್ಣಿನ ಸವಕಳಿ ಹಾಗು ಹೊಲದಲ್ಲಿ ಬಿದ್ದ ಮಳೆ ನೀರು ಪಕ್ಕಕ್ಕೆ ಜಾರಿ ಹೋಗದಂತೆ ಮಳೆ ನೀರು ಕೊಯ್ಲುಸಹ ಕೈಗೊಂಡಿದ್ದಾರೆ. ಈ ಎಲ್ಲ ಅನುಭವ ಹಾಗು ಜ್ನಾನ ಅವರಿಗೆ ನೆಲಮೂಲದ್ದು.

ಸದ್ಯ ಈ ಹನುಮಸಾಗರದಲ್ಲಿ ಗೋವಿನಜೋಳಕ್ಕೆ ವಿಪರೀತ ಕಾಟವಿರುವುದು ನರಿ, ತೋಳ ಹಾಗು ಮಿಕ ಎಂದು ಕರೆಯಿಸಿಕೊಳ್ಳುವ ಕಾಡು ಹಂದಿಯದ್ದು. ಇದನ್ನು ತಡೆಯಲು ಅವರು ಪರಿಸರ ಸ್ನೇಹಿ ಉಪಾಯ ಕಂಡುಕೊಂಡಿದ್ದಾರೆ. ಗೋವಿನಜೋಳ ಬೆಳೆದಿರುವ ಹೊಲದ ಗುಡ್ಡದ ಬದಿಯಲ್ಲಿ ಕಟ್ಟಿಗೆಯ ಗೂಟಗಳನ್ನು ಹುಗಿದು, ಎರಡು ಸಾಲು ತಂತಿಯನ್ನು ಬಿಗಿದ್ದಾರೆ. ಒಂದು ಸಾಲು ಗೋವಿನ ಜೋಳದ ಬೀಜಗಳನ್ನು ಈ ತಂತಿಗಳಿಗೆ ಸವರಿಕೊಂಡು ಹೋಗುವಂತೆ ಬಿತ್ತಿದ್ದಾರೆ. ಉದ್ದೇಶ ಇಷ್ಟೇ. ನರಿ ಅಥವಾ ತೋಳ ಗೋವಿನ ಜೋಳದ ತೆನೆಗಳನ್ನು ತಿನ್ನಲು ಬಂದರೆ ಈ ತಂತಿಗೆ ಮೈ ತಾಗಿಸುತ್ತವೆ. ಕೂಡಲೇ ಇಡೀ ಸಾಲಿನ ದಂಟುಗಳು ತೀವ್ರ ಸಪ್ಪಳ ಮಾಡುತ್ತವೆ. ಪುಕ್ಕಲು ಪ್ರಾಣಿ ಹೆದರಿ ಯಾರೋ ಮನುಷ್ಯರು ಕಾವಲು ಕಾಯುತ್ತಿದ್ದರೆ ಎಂದು ಅಲ್ಲಿಂದ ಕಾಲು ಕೀಳುತ್ತವೆ. ಆದರೆ ಮಿಕಗಳು ಮಾತ್ರ ಹೆದರದೇ ಈ ತಂತಿಯನ್ನು ಕಿತ್ತೊಗೆದು ಮೇಯ್ದಿವೆ. ಆದರೂ ಮರಿಯಪ್ಪ ಆ ತಂತಿಗಳಿಗೆ ವಿದ್ಯುತ್ ಹಾಯಿಸುವ ವಿಚಾರ ಮಾಡಿಲ್ಲ. ಕಾರಣ ಕೇಳಿದರೆ ‘ಅನ್ನದಾತನೂ ಅವುಗಳಿಗೆ ಆಹಾರ ಹಾಕುವುದಿಲ್ಲ ಎಂದರೆ ಹೇಗೆ? ಅವುಗಳ ಪಾಲಿಂದು ಅವುಗಳಿಗೆ ದಕ್ಕಲಿ. ಜೊತೆಗೆ ನಮ್ಮ ಪಾಲಿಂದು ಅವು ಹಾಳುಗೆಡವಬಾರದು. ಅಷ್ಟೇ!’ ಈ ಪ್ರಶ್ನೆ/ ಉತ್ತರ ಸಾತ್ವಿಕವಾದದ್ದಾದರೂ ವ್ಯಾವಹಾರಿಕವಲ್ಲ!

ಹಾಗೆಯೇ ಸಜ್ಜೆಗೆ ಗುಬ್ಬಿ ಹಾಗು ಆ ಪ್ರವರ್ಗಕ್ಕೆ ಸೇರಿದ ಹಕ್ಕಿಗಳ ಉಪಟಳ ಬಹಳ. ಒಂದು ಹೊಲಕ್ಕೆ ಒಮ್ಮೆ ಲಗ್ಗೆ ಹಾಕಿದರೆ ನೂರಾರು ಪಕ್ಷಿಗಳ ಸೈನ್ಯವೇ ಅಲ್ಲಿ ನೆರೆದಿರುತ್ತದೆ. ಹಾಗಾಗಿ ಅವುಗಳನ್ನು ಹೆದರಿಸಲು ಅವರು ಕಂಡುಕೊಂಡಿದ್ದು ಸಜ್ಜೆಯ ದಂಟಿಗೆ ಪ್ಲಾಸ್ಟಿಕ್ ಕಟ್ಟುವುದು. ಗಾಳಿ ಬೀಸಿದ ಕೂಡಲೇ ‘ಪರ್ರ್..ಪರ್ರ್..’ ಎಂದು ಭೀಕರವಾಗಿ ಸದ್ದು ಮಾಡುವುದರಿಂದ ಪಕ್ಷ್ಗಿಸಮೂಹ ಹೆದರಿ ಪಕ್ಕದ ಹೊಲಕ್ಕೆ ಪಲಾಯನ ಮಾಡುತ್ತವೆ. ಕೆಲವೊಮ್ಮೆ ಗಾಳಿ ತೀರ ಮಂದವಾಗಿ ಬೀಸಿದರೆ ಆಳುಮಗ ಎಕ್ಕೇರಪ್ಪ ಕವಣಿಯಲ್ಲಿ ಕಲ್ಲು ಹಾಕಿ ಬೀಸಿ ದಂಟಿನ ಸದ್ದು ಮಾಡುವ ಮೂಲಕ ಓಡಿಸುವಲ್ಲಿ ಯಶಸ್ವಿಯಾಗುತ್ತಾನೆ!

ಮರಿಯಪ್ಪನವರಿಗೆ ಎರಡನೇ ಮಗ ವಿಠ್ಠಲ್ ಹಾಗು ಸೊಸೆ ಸಾವಕ್ಕ, ಪತ್ನಿ ಹನುಮವ್ವ, ಪ್ರಾಧ್ಯಾಪಕ ಪುತ್ರ ಡಾ.ಎ.ಎಂ.ಕಡಕೋಳ ಹೆಗಲೆಣೆಯಾಗಿದ್ದಾರೆ. ಪ್ರಾಣಿ ಪಕ್ಷಿಗಳ ವಾಸಸ್ಥಾನಗಳನ್ನು ನಾವು ಅತಿಕ್ರಮಿಸಿದ್ದೇವೆಯೋ? ಅಥವಾ ಅವು ನಮ್ಮ ವಾಸಸ್ಥಳಗಳನ್ನು ಅತಿಕ್ರಮಿಸಿವೆಯೋ? ಇದು ಪ್ರಶ್ನೆ. ಸಾತ್ವಿಕವಾಗಿ, ಮಾನವೀಯತೆಯಿಂದ ಮೂಕ ಪ್ರಾಣಿಗಳ ಪ್ರತಿ ಸಹೃದಯತೆ ಹಾಗು ಸಂಯಮದಿಂದ ವರ್ತಿಸಿ; ಅವುಗಳಿಗೆ ಪ್ರಾಣಘಾತುಕವಾಗಿ ಪರಿಣಮಿಸುವ ಯಾವುದೇ ಪ್ರಯೋಗಗಳಿಗೆ ಇಳಿಯದೇ ಪರಿಸರ ಸ್ನೇಹಿ ನೆಲಮೂಲ ಜ್ನಾನ ಬಳಸಿಕೊಳ್ಳುತ್ತಿರುವ ಈ ನೇಗಿಲಯೋಗಿ ನಿಜಕ್ಕೂ ನನಗೆ ತಪಸ್ವಿಯಾಗಿ ಕಂಡರು. ಮನುಷ್ಯ ಪರಿಸರದ ಕೂಸು ಎಂದು ಅಂತರ್ಮುಖಿಯಾಗಿ ಬೋಧಿಸುತ್ತಿರುವಂತೆ ಭಾಸವಾದರು. ಮನುಷ್ಯನ ಲೋಲುಪತೆ ಮುಂದೆ ಈ ದೊಡ್ಡಗುಣದ ಮಾನವನ ಪ್ರಯೋಗಗಳೂ ಅನುಕರಣೀಯವಾಗಿ ಕಂಡವು. ಇದು ಅತಿಶಯೋಕ್ತಿ ಅಲ್ಲ. ಅಲ್ಲವೇ?

‘ಬರೆಯುವವನಿಗಿಂತ ಓದುಗ ಜಾಣ’ - ಇದು ಪತ್ರಿಕೋದ್ಯಮದ ಸುವರ್ಣ ಸೂತ್ರ. ಬರಹಗಾರನಿಗೆ ಈ ಸೂತ್ರ ಮೂಗುದಾರ. ಹಾಗೆಯೇ ಪ್ರಯೋಗಶಾಲೆಯ ವಿಜ್ನಾನಿಗಿಂತ ಜಗತ್ತಿನ ಬದುಕೆಂಬ ಪಾಠ ಶಾಲೆಯ ಈ ನೇಗಿಲಯೋಗಿಯ ಪ್ರಯೋಗ ನನಗೆ ಮಹತ್ವದ್ದಾಗಿ ಕಂಡಿದೆ.