ನಮ್ಮ ವೃತ್ತಪತ್ರಿಕೆಗಳ ಕಥೆ

ನಮ್ಮ ವೃತ್ತಪತ್ರಿಕೆಗಳ ಕಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಚಂಚಲ್ ಸರ್ಕಾರ್, ಕನ್ನಡಕ್ಕೆ: ಬಿ.ಎಸ್. ಮಹದೇವಪ್ಪ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸ ದೆಹಲಿ.
ಪುಸ್ತಕದ ಬೆಲೆ
ರೂ.೧೨.೦೦, ಮುದ್ರಣ: ೨೦೦೪

‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೦೪ರಲ್ಲಿ ನಾಲ್ಕನೇ ಮುದ್ರಣವಾಗಿದೆ.  

ಈ ಪುಸ್ತಕದಲ್ಲಿ ಪತ್ರಿಕೆಗಳ ಪ್ರಾರಂಭದ ದಿನಗಳನ್ನು ತಿಳಿಸಲಾಗಿದೆ. ಒಂದೆಡೆ ಬರೆಯುತ್ತಾರೆ ‘ ಇಂದಿನ ವೃತ್ತಪತ್ರಿಕೆಗಳ ಜನನ ಮೂಲವನ್ನು ನಾವು ಕಾಣಬೇಕಿದ್ದಲ್ಲಿ ಜೂಲಿಯಸ್ ಸೀಸರನ ರೋಮನ್ ಕಾಲಕ್ಕೆ ತೆರಳಬೇಕಾಗುತ್ತದೆ. ‘ಆಕ್ಟ ಡಯುರ್ನ' ಅಂದರೆ ದೈನಂದಿನ ಘಟನೆಗಳು ಎಂಬ ಹೆಸರಿನ ಕೈಬರಹದ ಸಾರ್ವಜನಿಕ ಪ್ರಕಟನೆಗಳನ್ನು ಅವನು ಹೊರಡಿಸಲು ಪ್ರಾರಂಭಿಸಿದ. ನಂತರ ಕ್ರಿ.ಪೂ.೫೯ರಲ್ಲಿ ಸೆನೆಟ್ ಚರ್ಚೆಗಳ ಸಾರಾಂಶವನ್ನೊಳಗೊಂಡ ‘ಆಕ್ಟ ಸೆನೆಟಿಸ್' ಹೊರಡಿಸಲು ಪ್ರಾರಂಭಿಸಿದ. ಇವುಗಳನ್ನು ಜನರಿಗೆ ಓದಲು ಅನುಕೂಲವಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಅಂಟಿಸಲಾಗುತ್ತಿತ್ತು. ಆದರೆ ಸ್ವಲ್ಪ ಕಾಲದಲ್ಲೇ ಜನರು ತಮ್ಮ ಬಗ್ಗೆ ಹೆಚ್ಚು ತಿಳಿಯುವುದನ್ನು ಕೆಲವು ಸರ್ಕಾರಿ ಅಧಿಕಾರಿಗಳು ವಿರೋಧಿಸಿದ್ದರಿಂದ ಸುದ್ದಿ ಪ್ರಕಟಣೆಗಳನ್ನು ನಿಲ್ಲಿಸಲಾಯಿತು. ಪ್ರಾಯಶಃ ಇದು ಸೆನ್ಸಾರ್ ಶಿಪ್ ನ ಮೊದಲ ಕ್ರಮವಾಗಿರಬೇಕು.

ಮುದ್ರಣ ಕಲೆಯನ್ನು ಚೀನೀಯರು ಮೊದಲೇ ಕಂಡು ಹಿಡಿದಿದ್ದರೂ ೧೫ನೇ ಶತಮಾನದಲ್ಲಿ ಮುದ್ರಣಾಲಯಗಳು ಯುರೋಪ್ ನಲ್ಲಿ ಬಳಕೆಗೆ ಬಂದವು. ಮುದ್ರಿತ ಪದ ಈಗ ಅತಿ ಮುಖ್ಯ ಸಂಪರ್ಕ ಸಾಧನವಾಗಿ ಬೆಳೆದಿದೆ. ಸುದ್ಧಿ ಹಾಳೆಗಳನ್ನು ಈಗ ಬಹುಬೇಗ ಅಥವಾ ಬಹು ಸುಲಭವಾಗಿ ಸಿದ್ಧಪಡಿಸಬಹುದು. ಇದರ ನಂತರ ವೃತ್ತಪತ್ರಿಕೆಗಳ ಕಾರ್ಯ ಸುಲಭ ಸಾಧ್ಯವಾಯಿತು.’

ಲೇಖಕರು ಇದರಲ್ಲಿ ಭಾರತೀಯ ವೃತ್ತ ಪತ್ರಿಕೆಗಳ ಇತಿಹಾಸವನ್ನೂ ನೀಡಿದ್ದಾರೆ. ಮೆಹೆಂಜೋದಾರೋವಿನ ಮುದ್ರೆಗಳು, ಕಲ್ಲಿನಲ್ಲಿ ಕೆತ್ತಿದ ಅಶೋಕನ ಕಾಲದ ಶಿಲಾಶಾಸನಗಳು ಮೊದಲಾದ ಸಂಹವನ ಸಾಧನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆದರೆ ಬಟ್ಟೆಗಳ ಮೇಲೆ ಅಚ್ಚೊತ್ತುವ ಕಲೆ ಭಾರತದಲ್ಲಿ ಖ್ಯಾತವಾಗಿದ್ದರೂ ಪ್ರಮುಖ ಸಂಪರ್ಕ ಮಾಧ್ಯಮವಾಗಿ ಮುದ್ರಣ ಕಲೆಯನ್ನು ಬಳಸಿಕೊಳ್ಳುವ ಬಗ್ಗೆ ಯೋಚಿಸಲೇ ಇಲ್ಲ. ಭಾರತದಲ್ಲಿ ಮೊದಲಿಗೆ ವೇಗವಾಗಿ ಸಾಗುವ ಕುದುರೆ ಮೂಲಕ, ಗಾಯಕರು ಗಾಯನದ ಮೂಲಕ ಮಾಹಿತಿಯನ್ನು ತಿಳಿಸುತ್ತಿದ್ದರು.

ಯುರೋಪ್ ನಲ್ಲಿ ಮುದ್ರಣ ಯಂತ್ರಗಳು ಬಳಕೆ ಬಂದ ನೂರು ವರ್ಷಗಳ ಬಳಿಕ ೧೫೫೦ರಲ್ಲಿ ಪೋರ್ಚ್ ಗೀಸ್ ಪಾದ್ರಿಗಳು ಭಾರತಕ್ಕೆ ಮುದ್ರಣ ಯಂತ್ರವನ್ನು ಪರಿಚಯಿಸುತ್ತಾರೆ. ಹೀಗೆ ಭಾರತಕ್ಕೆ ಮುದ್ರಣ ತಂತ್ರಜ್ಞಾನ ಕಾಲಿಡುತ್ತದೆ. ೧೭೮೦ರಲ್ಲಿ ‘ಬೆಂಗಾಲ್ ಗೆಜೆಟ್' ಅಥವಾ ‘ಕಲ್ಕತ್ತಾ ಜನರಲ್ ಅಡ್ವಟೈಸರ್' ಪತ್ರಿಕೆ ಹೊರಬರುತ್ತದೆ. ಇದನ್ನು ಹೊರತಂದದ್ದು ಜೇಮ್ಸ್ ಆಗಸ್ಟಸ್ ಹಿಕಿ ಎಂಬಾತ. ಇವನ ಧೋರಣೆಗಳು ಆಗಿನ ಸರಕಾರಕ್ಕೆ ಹಿಡಿಸದ ಕಾರಣ ಪತ್ರಿಕೆ ಪ್ರಾರಂಭವಾದ ಎರಡು ವರ್ಷಗಳ ನಂತರ ಹಿಕಿಯನ್ನು ಸೆರೆಮನೆಗೆ ಹಾಕಲಾಯಿತು. ನಂತರ ಬಂದ ಎಲ್ಲಾ ವೃತ್ತ ಪತ್ರಿಕೆಗಳ ಮೇಲೆ ಈಸ್ಟ್ ಇಂಡಿಯಾ ಸರಕಾರ ಕಣ್ಣಿಟ್ಟಿತ್ತು.

ಮೊದಲ ಭಾರತೀಯ ಪತ್ರಿಕೆ ಪ್ರಾರಂಭಿಸಿದವರು ಗಂಗಾಧರ ಭಟ್ಟಾಚಾರ್ಜಿ. ಇವರು ೧೮೧೬ರಲ್ಲಿ ‘ವಂಗಲ್ ಗೆಜೆಟ್' ಪ್ರಾರಂಭಿಸಿದರು. ನಂತರ ರಾಜಾರಾಮ್ ಮೋಹನ್ ರಾಯ್ ಅವರು ಪತ್ರಿಕೆಯನ್ನು ಹೊರತಂದರು. ಹೀಗೆ ಒಂದೊಂದಾಗಿ ಪತ್ರಿಕೆಗಳು ಹೊರ ಬರಲಾರಂಭಿಸಿದವು. ‘ಯಂಗ್ ಇಂಡಿಯಾ’, ಕೇಸರಿ, ಭಾರತ ಜೀವನ, ಮಲಯಾಳಂ ದೈನಿಕ ‘ಮಾತೃ ಭೂಮಿ', ತಮಿಳು ದೈನಿಕ ‘ಸ್ವದೇಶಿ ಮಿತ್ರನ್', ಕನ್ನಡ ಪತ್ರಿಕೆ ‘ ಮಂಗಳೂರ ಸಮಾಚಾರ', ವಂದೇ ಮಾತರಂ, ಆಲ್ ಹಿಲಾಲ್, ಸ್ವರಾಜ್ಯ, ಸರ್ವೆಂಟ್ ಆಫ್ ಇಂಡಿಯಾ ಹೀಗೆ ಹತ್ತು ಹಲವಾರು ಪತ್ರಿಕೆಗಳು, ಬೇರೆ ಬೇರೆ ಭಾಷೆಯಲ್ಲಿ ಮುದ್ರಣವಾಗಲು ಪ್ರಾರಂಭವಾಯಿತು.

ಈ ಪುಸ್ತಕದ ಲೇಖಕರು ಪತ್ರಿಕೆಯನ್ನು ಹೊರತರಲು ಬೇಕಾದ ಸಂಗತಿಗಳ ಬಗ್ಗೆಯೂ ಬರೆಯುತ್ತಾರೆ. ಸುದ್ದಿ ಕೊಠಡಿ ಮತ್ತು ಸಂಪಾದಕ, ಪತ್ರಿಕೆಯ ಬಳಗ, ಆಡಳಿತ, ಪತ್ರಿಕೆಯ ಸ್ಥಿತಿಗತಿ ಮೊದಲಾದ ಅಧ್ಯಾಯಗಳಲ್ಲಿ ಅಧಿಕ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈಗಿನ ಮುದ್ರಣ ವ್ಯವಸ್ಥೆಗೂ ಆಗಿನ ಮುದ್ರಣಕ್ಕೂ ಅಜಗಜಾಂತರವಿದೆ. ಆದರೆ ಅಂದಿನ ಮುದ್ರಣದ ಸಂಗತಿಯನ್ನು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಿಕೊಳ್ಳಬಹುದು. ಬೇರೆ ಬೇರೆ ಭಾಷೆಯ ಪತ್ರಿಕೆಗಳ ತುಣುಕುಗಳನ್ನು ಇದರಲ್ಲಿ ನೀಡಿದ್ದಾರೆ. ಆಸಕ್ತರಿಗೆ ಅನುಕೂಲವಾಗಬಹುದು. 

ಸುಮಾರು ೬೫ ಪುಟಗಳ ಪುಟ್ಟ ಪುಸ್ತಕವಿದು. ಈಗಿನ ಕಾಲಕ್ಕೆ ಇದರ ಮಾಹಿತಿಗಳು ಹಳೆಯದ್ದು ಎಂದು ಕಂಡು ಬಂದರೂ ಒಮ್ಮೆ ಓದಲು ಅಡ್ಡಿಯೇನಿಲ್ಲ. ವೃತ್ತಪತ್ರಿಕೆಗಳ ಇತಿಹಾಸ ತಿಳಿಯುವತ್ತ ಒಂದು ಪುಟ್ಟ ಹೆಜ್ಜೆ ಆಗೀತು.