ನಮ್ಮ ಸಾಧನೆಯನ್ನು ದೂರಮಾಡುವ ಮೂರು ಸುಳ್ಳುಗಳು...
ನಾವು ಸಾಧನೆ ಮಾಡಲು ಹೊರಟಾಗ ಈ ಜಗತ್ತಿನಲ್ಲಿ ಬೇರೆ ಯಾರು ನಮಗೆ ಅಡ್ಡಿಪಡಿಸುವುದಿಲ್ಲ, ಹಾಗೇನಾದರೂ ಆದರೆ ಅದು ನಮ್ಮಿಂದಲೇ ಆಗಿರುತ್ತದೆ. ಈ ಸಮಾಜವಾಗಲಿ, ಈ ನಮ್ಮ ಜನರಾಗಲಿ ಕಾರಣವಾಗುವುದಿಲ್ಲ. ಸಾಧಿಸಲು ಪ್ರತಿಯೊಬ್ಬನಲ್ಲೂ ತನ್ನದೇ ಆದ ಸ್ವಸಾಮರ್ಥ್ಯ ಹುದುಗಿರುತ್ತದೆ ಅದರ ಜೊತೆ ಸಾಧನೆಗೆ ಬೇಕಾದ ಪೂರಕ ವಾತಾವರಣವೂ ನಮ್ಮ ಜೊತೆ ಇರುತ್ತದೆ. ಒಂದು ವೇಳೆ ಸಾಧನೆಯ ಹಾದಿಯಿಂದ ದೂರವಾಗಿದ್ದರೆ ಅದು ನಮಗೆ ನಾವೇ ಹೇಳಿಕೊಳ್ಳುವಂತಹ ಮೂರು ಸುಳ್ಳುಗಳಿಂದ ಆಗಿರುತ್ತದೆ.
ಆ ಮೂರು ಸುಳ್ಳುಗಳು ಯಾವವು ಹಾಗೆಯೇ ಅವುಗಳ ಪರಿಣಾಮಗಳ ಬಗ್ಗೆ ನಾವು ಮುಂದೆ ಓದಿ ತಿಳಿದುಕೊಳ್ಳೋಣ...
ಮೊದಲನೇ ಸುಳ್ಳು:- ನಾನು ಅತ್ಯುತ್ತಮ ಪದವಿಯನ್ನು ಪಡೆದಿಲ್ಲ..
ಕೆಲವರು ತಮಗೆ ತಾವೇ ನಾನು ಸರಿಯಾದ ಪದವಿ ಗಳಿಸಲಿಲ್ಲ, ನಾನು ಸರಿಯಾದ ಶಿಕ್ಷಣವನ್ನು ಪಡೆಯಲಿಲ್ಲ ಎಂಬ ಕಾರಣ ಒಡ್ಡಿ ತಮ್ಮ ಸಾಧನೆಯ ಪಥದಲ್ಲಿ ಕಲ್ಲು ಮುಳ್ಳುಗಳ ರಾಶಿ ಹಾಕಿಕೊಂಡು ದಾರಿ ಕಾಣಿಸದೆ ಹತಾಶೆ ಭಾವನೆಯೊಂದಿಗೆ ಸುಮ್ಮನಾಗುತ್ತಾರೆ. ಆದರೆ ಎಣಿಕೆಗೆ ಸಿಗದಷ್ಟು ಅನೇಕ ಸಾಧಕರು ನಮ್ಮ ಕಣ್ಣ ಮುಂದೆ ನೇ ಇದ್ದಾರೆ ಅವರ್ಯಾರೂ ಪದವಿ ಪಡೆಯದೆ ಸಾಧನೆಯ ಮೆಟ್ಟಿಲು ಹತ್ತಿ ಜಗತ್ಪ್ರಸಿದ್ದರಾಗಿದ್ದಾರೆ ಉದಾಹರಣೆಗೆ ಮೈಕ್ರೋಸಾಫ್ಟ್ ನ ಸಂಸ್ಥಾಪಕ ಬಿಲ್ ಗೇಟ್ಸ್ ಯಾವುದೇ ಪದವಿ ಅಗತ್ಯವೆ ಇಲ್ಲದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತು ಕೊಂಡಾಡುವಷ್ಟು ಸಾಧನೆ ಮಾಡಿದರು. ನಾವು ಪಡೆಯುವ ಶಿಕ್ಷಣ ಕೇವಲ ಸಾಧನೆಯ ಹಾದಿಯಲ್ಲಿ ಕರೆದುಕೊಂಡು ಹೋಗುವ ಒಂದು ಮಾಧ್ಯಮವಾಗಿ ತೆಗೆದುಕೊಳ್ಳಬೇಕೆ ವಿನಹ ಅದೊಂದು ಮಾನದಂಡವಾಗಿ ನಾವು ಬಳಸಿದರೆ ನಮಗೆ ಸಾಧನೆ ಮಾಡಲು ಸಾಧ್ಯವಿಲ್ಲ.
ಎರಡನೇ ಸುಳ್ಳು:- ನಮಗೆ ಬೇಕಾದಷ್ಟು ಸಮಯವಿಲ್ಲ..
ಇತ್ತೀಚಿನ ತಾಂತ್ರಿಕ ಜಗತ್ತಿನಲ್ಲಿ ನಾವು ಕೇಳುವ ಮಹಾನ್ ಸುಳ್ಳು ಎಂದರೆ ನನಗೆ ಅದನ್ನು ಮಾಡುವುದಕ್ಕೆ ನನ್ನ ಹತ್ರ ಸಮಯವಿಲ್ಲ, ನಾನು ತುಂಬಾ ಬ್ಯುಸಿಯಾಗಿದ್ದೇನೆ ಎಂಬ ಮಾತುಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಯಾವುದೇ ರೀತಿಯ ಲಾಭವಿಲ್ಲದಿದ್ದರೂ ಫೇಸ್ ಬುಕ್ ,ವಾಟ್ಸಾಪ್, ಟ್ವಿಟ್ಟರ್ ಗಳಲ್ಲಿ ಮಗ್ನರಾಗಿ ಸಮಯ ವ್ಯರ್ಥಮಾಡುತ್ತಿರುವ ನಾವು ನಮ್ಮ ಜೀವನದಲ್ಲಿ ಏಳಿಗೆಯನ್ನು ದೂರ ಮಾಡಿ ಸಮಯವಿಲ್ಲವೆಂಬ ಹುಸಿ ನೆಪವನ್ನೊಡ್ಡಿ ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ. ಪ್ರತಿಯೊಬ್ಬನಿಗೆ ತನ್ನದೇ ಆದ ಸಮಯ ಇದ್ದೇ ಇರುತ್ತದೆ ಅದನ್ನು ಉಳಿಸಿ ವಿನಿಯೋಗಿಸಿಕೊಳ್ಳುವ ಸ್ವಲ್ಪ ಜಾಣ್ಮೆ ತೋರಿಸಿದರೆ ಸಮಯದ ವೇಗದ ಜೊತೆ ನಮ್ಮ ಪಯಣ ಸುಗಮವಾಗಿ ಸಾಗುವುದರ ಜೊತೆಗೆ ನಮಗೆ ಗೊತ್ತಿಲ್ಲದೆಯೇ ನಾವು ಸಾಧನೆಯ ಅಂಗಳದಲ್ಲಿ ಬಂದುಬಿಟ್ಟಿರುತ್ತೇವೆ.
ಮೂರನೇ ಸುಳ್ಳು:- ನನ್ನ ಅದೃಷ್ಟವೇ ಸರಿ ಇಲ್ಲ…
ನಾವು ಯಾವುದೇ ಹೊಸ ಕಾರ್ಯ ಕೈಗೊಳ್ಳುವಾಗ ಸರಿಯಾದ ರೀತಿಯಲ್ಲಿ ಕ್ರಿಯಾಯೋಜನೆ ಹಾಕಿಕೊಳ್ಳದೆ ಶುರು ಮಾಡಿದಾಗ ನಾವು ಅಂದುಕೊಂಡಂತೆ ಯಾವುದು ನಡೆಯುವುದಿಲ್ಲ. ನಾವು ಮೊದಲ ಹೆಜ್ಜೆ ಸರಿಯಾಗಿ ಹಾಕದಿದ್ದರೆ ನಾವು ತಲುಪಬೇಕಾದ ಗುರಿ ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ. ನಾವು ಬಳಸುವ ಜಾಣತನದಲ್ಲಿ ಹುರುಪು ತುಂಬಿದ ಕ್ರಿಯಾಶೀಲತೆ ಇರಬೇಕು ,ಇಲ್ಲದಿದ್ದರೆ ನಮ್ಮ ಸಾಧನೆ ಶೂನ್ಯ. ನಾವು ಹಾಕುವ ಪರಿಶ್ರಮದಲ್ಲಿ ಯಾವುದೇ ಕಾರಣಕ್ಕೂ ಉತ್ಸಾಹದ ಕೊರತೆ ಇರಕೂಡದು. ಈ ರೀತಿಯ ಕ್ರಿಯೆಯೋಜನೆ, ನಾವು ಸಾಧಿಸುವ ಗುರಿಯ ಬಗ್ಗೆ ಹೆಚ್ಚಿನ ಗಮನ ಕೊಡಲಾರದೆ ನಮ್ಮ ಕಾರ್ಯದಲ್ಲಿ ವಿಫಲವಾದರೆ ನಮ್ಮ ಅದೃಷ್ಟ ಸರಿ ಇಲ್ಲ, ನಾವು ಬಯಸಿದ್ದೆಲ್ಲಾ ಪಡೆಯುವುದು ನಮ್ಮ ಹಣೆಯಲ್ಲಿ ಬರೆದಿಲ್ಲ ಎಂಬ ಮಹಾ ಸುಳ್ಳನ್ನು ನಮಗೆ ನಾವೇ ಹೇಳಿಕೊಂಡು ನಮ್ಮ ವಿಫಲತೆಯನ್ನು ಮರೆಮಾಚಿಕೊಳ್ಳುತ್ತೇವೆ.
ಈ ರೀತಿಯ ಸುಳ್ಳುಗಳಿಂದ ನಮ್ಮ ಗುರಿಯ ಸೇತುವೆಯನ್ನು ದಾಟದೆ, ಸಾಧನೆಯ ಮೆಟ್ಟಿಲುಗಳನ್ನು ಏರದಂತಾಗಿ ನಮ್ಮ ಜೀವನದಲ್ಲಿ ಸಿಗುವ ಅವಕಾಶಗಳಿಂದ ವಂಚಿತರಾಗುತ್ತೇವೆ. ಆದ್ದರಿಂದ ಇಂದಿನಿಂದಲೇ ನಾವು ದೃಢನಿರ್ಧಾರ ಮಾಡಿ ಇಂತಹ ಸುಳ್ಳುಗಳಿಂದ ದೂರವಿದ್ದು ಸಾಧನೆಯ ಪಥದಲ್ಲಿ ನಡೆಯೋಣ......
(ಚಿತ್ರ ಕೃಪೆ:ಗೂಗಲ್)