ನಮ್ಮ ಸ್ಕೂಲ್ ಡೈರಿ

ನಮ್ಮ ಸ್ಕೂಲ್ ಡೈರಿ

ಪುಸ್ತಕದ ಲೇಖಕ/ಕವಿಯ ಹೆಸರು
ಬೇದ್ರೆ ಮಂಜುನಾಥ
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೦.೦೦, ಮುದ್ರಣ: ೨೦೨೩

‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ ಬರೆದಂತೆ “ ಇದು ಬೆಳೆಯುವ ಪುಸ್ತಕ! ಜ್ಞಾನ-ವಿಜ್ಞಾನ ಸಂವಾಹಕ!”. ಲೇಖಕರ ಮಾತಿನಿಂದ ಆಯ್ದ ಭಾಗಗಳು ನಿಮಗಾಗಿ...

“ಮಾಹಿತಿ ಮಹಾಪೂರ ಹರಿದು ಬಂದಂತೆಲ್ಲಾ ಈ ಪುಸ್ತಕದ ಗಾತ್ರವೂ ಹಿಗ್ಗುತ್ತದೆ. ಹೊಸ ವಿಷಯಗಳನ್ನು ತಿಳಿಯುವ ತವಕ ಹೆಚ್ಚುತ್ತದೆ. ಇದುವರೆಗೆ ತಿಳಿದದ್ದು ಎಷ್ಟು ಕಡಿಮೆ, ಇನ್ನೂ ತಿಳಿಯಬೇಕಿರುವ ವಿಷಯಗಳೆಷ್ಟು, ಹೇಗೆ ಕಲಿಯಲು ಸಾಧ್ಯ. ಎಲ್ಲಿ ಮಾಹಿತಿ ದೊರೆಯುತ್ತದೆ, ಇವೇ ಮೊದಲಾದ ವಿಷಯಗಳನ್ನು ಒಂದೆಡೆ ಸೇರಿಸಿ, ಸಂತಸ ಕಲಿಕೆಯ ನೂತನ ಸಂಪುಟ 'ನಮ್ಮ ಸ್ಕೂಲ್ ಡೈರಿ' ರೂಪಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರು ಕೊಡುವ ಮಾಹಿತಿಯಷ್ಟನ್ನೇ ಆಧರಿಸಿ ವಿದ್ಯಾರ್ಥಿಗಳು ಕಲಿಯುವ ಕಾಲ ಹೊರಟುಹೋಗಿದೆ. ಈಗ ವಿದ್ಯಾರ್ಥಿಗಳೇ ಹೆಚ್ಚು ಹೆಚ್ಚು ಕಲಿತು ತರಗತಿಗಳನ್ನು ಸಮೃದ್ಧ ಮಾಹಿತಿಯಿಂದ ತುಂಬುತ್ತಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಾಗಿ ಎಲ್ಲರಿಗೂ ಕಂಪ್ಯೂಟರ್ ಪರಿಚಯ ಆಗುತ್ತಿರುವುದು, ಚಿಕ್ಕಂದಿನಿಂದಲೇ ಕಂಪ್ಯೂಟರ್ ಬಳಸುವುದು, ಸಾಮಾನ್ಯವಾಗುತ್ತಿದೆ. ಕೆ.ಜಿ.ಯಿಂದ ಪಿ.ಜಿ. ತರಗತಿಗಳವರೆಗೆ ಆನ್‌ಲೈನ್‌ ಕ್ಲಾಸ್ ಮೊಬೈಲ್, ಲ್ಯಾಪ್‌ಟಾಪ್ ಇಲ್ಲವೇ ಕಂಪ್ಯೂಟರ್‌ಗಳಲ್ಲಿ ನಡೆಯುತ್ತಲೇ ಇದೆ. ಎಲ್ಲ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸೌಲಭ್ಯ ಇದ್ದು ಪಠ್ಯಬೋಧನೆಗೆ ಬಳಕೆಯಾಗುತ್ತಿದೆ. ಆನ್‌ಲೈನ್‌ ಕಲಿಕೆ ಸಾಮಾನ್ಯವಾಗುತ್ತಿದೆ. ಶಾಲೆಯಿಂದ ಮನೆಗೆ ತರಗತಿ ಶಿಫ್ಟ್ ಆಗಿದೆ. ರೋಟ್ ಲರ್ನಿಂಗ್ ಕಾಣೆಯಾಗಿ 'ಸಂತಸ ಕಲಿಕೆ' ಬುಗ್ಗೆಯಾಗಿ ಚಿಮ್ಮಿದೆ!

೧೯೮೫ಲ್ಲಿ ಶಿವಮೊಗ್ಗದಲ್ಲಿ ಆರಂಭಗೊಂಡ 'ಶಿವಮೊಗ್ಗ ಕ್ವಿಜ್ ಅಂಡ್ ಅಡ್ವೆಂಚರ್ ಕ್ಲಬ್‌' ಮತ್ತು ೧೯೯೧ರಲ್ಲಿ ಚಿತ್ರದುರ್ಗದಲ್ಲಿ ರೂಪುಗೊಂಡ 'ಹಾಬಿ ಅಂಡ್ ಅಡ್ವೆಂಚರ್ ಯುನೆಸ್ಕೊ ಕ್ಲಬ್'ಗಳಲ್ಲಿ ಪ್ರತಿ ಭಾನುವಾರ ನಡೆಸಲಾಗುತ್ತಿದ್ದ ತರಬೇತಿ ತರಗತಿಗಳು ಮತ್ತು ಬೇಸಿಗೆ ರಜೆಯಲ್ಲಿ ಏರ್ಪಡಿಸಲಾಗುತ್ತಿದ್ದ 'ಮಾಸ್ಟರ್ ಮೈಂಡ್ ವ್ಯಕ್ತಿತ್ವ ವಿಕಸನ ಶಿಬಿರ'ಗಳು ಶಾಲಾ ಪಠ್ಯಗಳಲ್ಲಿ ಇರುವ ವಿಷಯಗಳಿಗೆ ಪೂರಕ ಮತ್ತು ಪ್ರಾಯೋಗಿಕ ಕಲಿಕಾ ವಾತಾವರಣವನ್ನು ಕಲ್ಪಿಸಿಕೊಡಲಾಗಿತ್ತು. ಕೆ.ಜಿ.ಯಿಂದ ಪಿ.ಜಿ. ತರಗತಿಗಳ ವಿದ್ಯಾರ್ಥಿಗಳೇ ಇಲ್ಲಿನ ಸದಸ್ಯರು ಮತ್ತು ತರಬೇತುದಾರರು! ಪುರಾಣ ಇತಿಹಾಸಗಳಿಂದ ಹಿಡಿದು ಪ್ರಚಲಿತ ವಿಶ್ವವಿದ್ಯಮಾನಗಳವರೆಗೆ ಇಲ್ಲಿ ಚರ್ಚಿಸದ ವಿಷಯಗಳೇ ಇಲ್ಲ! ಶಾಲಾ ಯುನೆಸ್ಕೊ ಕ್ಲಬ್‌ಗಳ ಮೂಲಕ ಈ ತರಬೇತಿಗಳು ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ನಡೆದಿದ್ದವು.

೧೯೯೯-೨೦೦೦ನೇ ಶೈಕ್ಷಣಿಕ ವರ್ಷದಲ್ಲಿ, ಶಾಲೆಯೊಂದರ ದೈನಂದಿನ ಚಟುವಟಿಕೆಗಳ ಪ್ರಾಯೋಗಗಳ ಫಲವಾಗಿ ರೂಪುಗೊಂಡಿದ್ದ 'ಸ್ಕೂಲ್ ಡೈರಿ' ಕೃತಿ ರಾಜ್ಯದ ಹಲವು ಶಾಲೆಗಳಲ್ಲಿ ಅದೇ ಮಾದರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರೇಪಿಸಿತ್ತು. ಶಾಲಾ ಪ್ರಾರ್ಥನಾ ಸಮಯದಲ್ಲಿ ಆಯಾ ದಿನದ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನಾವಳಿಗಳು, ಗಣ್ಯರ ಜನ್ಮದಿನ, ಸ್ಥಳೀಯ ಹಬ್ಬ ಹರಿದಿನಗಳ ಆಚರಣೆ ಕುರಿತು ಸಂಕ್ಷಿಪ್ತ ಮಾಹಿತಿ ಹಂಚಿಕೊಳ್ಳುವ ಪರಿಪಾಠ ಈಗಲೂ ಮುಂದುವರೆದಿದೆ. ಶಿಕ್ಷಕರ ಬಳಿ ಇರಲೇಬೇಕಾದ ಕೃತಿಗಳಲ್ಲಿ 'ಸ್ಕೂಲ್ ಡೈರಿ' ಕೂಡ ಒಂದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು. ‘ಸ್ಕೂಲ್ ಡೈರಿ' ನವಕರ್ನಾಟಕ ಪ್ರಕಾಶನದಿಂದ ಹತ್ತು ಬಾರಿ ಪ್ರಕಟವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವ ಕೈಪಿಡಿಯಾಗಿತ್ತು. ಹಲವು ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಕ್ಕಿತ್ತು. ಸಾಮಾನ್ಯಜ್ಞಾನದ ರಸಪ್ರಶ್ನೆ ಸ್ಪರ್ಧೆಗಳಿಗೂ ಇದು ಉಪಯುಕ್ತವಾಗಿತ್ತು. ಸಂತಸ ಕಲಿಕೆಯ ದಾಖಲೆ, ಶಾಲಾ ದಿನಚರಿಯ ದಾಖಲೆಯೂ ಆಗಿತ್ತು!

೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕಲಿಕಾ ವಾತಾವರಣವೇ ಸೃಜನಶೀಲವಾಗಿ ಬದಲಾಗಿದೆ. ಅಂತರ್ಜಾಲದ ಮಾಹಿತಿ ಮಹಾಪೂರದಲ್ಲಿ ಏನನ್ನು ತೆಗೆದುಕೊಳ್ಳಬೇಕು, ಏನನ್ನು ಬಿಡಬೇಕು, ಎಷ್ಟು ಮಾಹಿತಿ ಬಳಸಿಕೊಂಡರೆ ಸೂಕ್ತ ಎನ್ನುವುದನ್ನು ನಿರ್ಧರಿಸಲು ಆಗದಿರುವ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಸಂದರ್ಭಕ್ಕಾಗಿ, ಶಾಲೆಗಳಲ್ಲಿ ನಡೆಸಬಹುದಾದ ಒಂದಷ್ಟು ಚಟುವಟಿಕೆಗಳ ಪಟ್ಟಿ ಸಿದ್ಧಗೊಳಿಸಿ, ಪೂರಕ ಮಾಹಿತಿ ಸಂಗ್ರಹಿಸಿ, ಜ್ಞಾನದ ಪರಿಧಿಯನ್ನು ವಿಸ್ತರಿಸುವ ಹಲವು ಅಂಶಗಳನ್ನು ಈ “ನಮ್ಮ ಸ್ಕೂಲ್ ಡೈರಿ' ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಮೊಗೆದಷ್ಟೂ ಮುಗಿಯದ ಒರತೆ ಅಂತರ್ಜಾಲದಲ್ಲಿ ಸಾವಿರಾರು ತಾಣಗಳನ್ನು ತಡಕಾಡಿ, ಸಿಕ್ಕದ್ದನ್ನು ಜೋಡಿಸಿ, ಹೊಸತನ್ನು ಹುಡುಕುವ, ಕಲಿಯುವ, ಪ್ರವೃತ್ತಿಯನ್ನು ಉತ್ತೇಜಿಸಲು ಪ್ರಯತ್ನಿಸಲಾಗಿದೆ. ಸ್ಪರ್ಧಾರ್ಥಿಗಳಿಗೆ ಬೇಕಾದ ಮಾಹಿತಿ ಇಲ್ಲಿದೆ."