ನಮ್ಮ ಹೆಮ್ಮೆಯ ಕನ್ನಡ ನಾಡು

ನಮ್ಮ ಹೆಮ್ಮೆಯ ಕನ್ನಡ ನಾಡು

ನಾವೆಲ್ಲರು ಕನ್ನಡಾಂಬೆಯ ಮಕ್ಕಳು. ತಾಯಿ ಭುವನೇಶ್ವರಿಯ ಹೆಮ್ಮೆಯ ಕುಡಿಗಳು, *ಕನ್ನಡ* ಎಂಬ ಪದದಲ್ಲೇ ಮೈ ರೋಮಾಂಚನವಾಗುವುದಲ್ಲವೇ? ನವೆಂಬರ ಮಾಸ ಬಂತೆಂದರೆ ಮಾತ್ರ ಕನ್ನಡದ ನೆನಪಾಗುವುದು ನಮಗೆ. ಇದು ಸಲ್ಲದು. ನಾವು ಹುಟ್ಟಿ ಬೆಳೆದ ಈ ಮಣ್ಣಿನ ಋಣವ ತೀರಿಸಲು ನಮ್ಮಿಂದಾಗದು. ಆದರೆ  *ಕನ್ನಡ* ಭಾಷೆಯ ಬಳಕೆ, ವ್ಯವಹಾರದಲ್ಲಿಯಾದರೂ ನಾಡು ನುಡಿಯ ಬಳಸಿ, ಹೊತ್ತ ತಾಯಿಯ ಕಿಂಚಿತ್ ಋಣವ ತೀರಿಸೋಣ.

ನಾವು ಹೀಗೆ ಸಂಭಾಷಣೆ ನಡೆಸುವಾಗ ,ಆಡುವ ಒಂದು ವಾಕ್ಯದ ಮುಕ್ಕಾಲು ಭಾಗವೂ ಆಂಗ್ಲ ಪದಗಳೇ ಆಗಿರುತ್ತದೆ. ಅದ್ಯಾಕೋ ನಾವೆಲ್ಲ ಆ ಸುಳಿಯೊಳಗೆ ಸಿಲುಕಿ, ಹೊರಬರಲಾರದೆ ಒದ್ದಾಟ ನಡೆಸ್ತಾ ಇದ್ದೇವೆ ಎಂಬುದು ನಗ್ನ ಸತ್ಯ. ಕನ್ನಡದಲ್ಲಿ ಬಳಸುವ ಸರಳ ಅಕ್ಷರಗಳು, ಪದಗಳನ್ನು ಏನೇನೋ ಮಾಡಿಕೊಂಡು ಮೋಡಿಯಲ್ಲಿ ಬರೆಯುವುದು ಇತ್ತೀಚೆಗೆ ಕಾಣ್ತಾ ಇದ್ದೇವೆ. ಇದು ಸಲ್ಲದು. ಎಲ್ಲದಕೂ ಒಂದು*ಚೌಕಟ್ಟು*ಇದೆ. ಅದರೊಳಗಿದ್ದರೆ ಅಂದ-ಚಂದ.

ಪಾಯಸ ಕುದಿಯುವಾಗ ಪಾತ್ರೆಯ ಹೊರ ಚೆಲ್ಲುವಂತೆ ಕುದಿದರೆ, ನೋಡುವಾಗಲೇ ಅಸಹ್ಯವಾಗಿ ಕಾಣುತ್ತದೆ. ಅದನ್ನೇ ಸಣ್ಣ ಉರಿಯಲ್ಲಿ ಕುದಿಸಿದಾಗ, ಅದರ ಪರಿಮಳವೂ ಚಂದ, ನೋಡಲೂ ಅಂದ.

ಕನ್ನಡ ಅಕ್ಷರಗಳು ಸರಳ, ಸುಂದರ ಆದರೆ ಬರೆಯುವಾಗ ಸ್ವಲ್ಪ ಗೊಂದಲ, ಗೋಜಲು, ಗಡಿಬಿಡಿ. ಇದರಿಂದ ಅರ್ಥ ಹೋಗಿ ಅನರ್ಥವಾಗಬಹುದು. ಹಾಗಾಗಿ ನಮ್ಮ ತಾಯ್ನುಡಿಯನ್ನು, ಸಹಜವಾಗಿ ಬರೆಯಲು ಪ್ರಯತ್ನಿಸೋಣ. *ಕನ್ನಡವೇ ಸತ್ಯ, ಕನ್ನಡವೇ ನಿತ್ಯ *ಇದು ಬರಿಯ ಮಾತಿನಲ್ಲಿ, ಘೋಷಣೆಯಲ್ಲಿ, ಮಾಧ್ಯಮಗಳಲ್ಲಿ ಬಂದರೆ ಸಾಲದು, ಅನುಷ್ಠಾನದಲ್ಲಿಯೂ ಆದಾಗ ಮಾತ್ರ  ಒಂದು  ಅರ್ಥ ಸಿಗಬಹುದು.

ನಮ್ಮ ಕನ್ನಡ ನಾಡು ಬಹಳ ವಿಶಾಲವಾದುದು, ಹೃದಯ ವೈಶಾಲ್ಯತೆಯ ಕನ್ನಡಿಗರಾಗಿ ನಾವು ಮೆರೆಯೋಣ. ಎಲ್ಲಾ ಭಾಷೆಗಳೂ ವ್ಯವಹಾರ ದೃಷ್ಟಿಯಿಂದ ಬೇಕು, ಕಲಿಯೋಣ, ಆದರೆ *ನಮ್ಮ ನಾಡು-ನುಡಿಯ* ತುಳಿದು, ಅದರ ಮೇಲೆ ಗೋರಿ ಕಟ್ಟುವ ಕೆಲಸವನ್ನು, ಕನ್ನಡಿಗರಾಗಿ ಮಾಡದೆ, ಎಲ್ಲವನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ನಮ್ಮ ಹೆಮ್ಮೆಯ ತಾಯಿನಾಡಿಗೆ *ಅಳಿಲಸೇವೆ* ನಮ್ಮ ಕನ್ನಡ ಭಾಷೆಯ ಮೂಲಕ ಸಲ್ಲಿಸೋಣ.

ಜೈ ಕನ್ನಡಾಂಬೆ

-ರತ್ನಾ ಭಟ್ ತಲಂಜೇರಿ