'ನಮ್ಮ ಹೆಮ್ಮೆಯ ಭಾರತ'; ಒಂದು ಉತ್ತಮ ಉಡುಗೊರೆ !

'ನಮ್ಮ ಹೆಮ್ಮೆಯ ಭಾರತ'; ಒಂದು ಉತ್ತಮ ಉಡುಗೊರೆ !

ಪುಸ್ತಕಗಳು ಸರ್ವ ಕಾಲಕ್ಕೂ ನಮ್ಮ ಉತ್ತಮ ಗೆಳೆಯರು. ಅವುಗಳು ಎಂದೂ ಮೋಸ ಮಾಡುವುದಿಲ್ಲ, ನಮ್ಮ ಜೊತೆ ಜಗಳ ಮಾಡುವುದಿಲ್ಲ. ಈ ಕಾರಣದಿಂದ ಪುಸ್ತಕಗಳನ್ನು ಓದುವುದು ಒಂದು ಅತ್ಯುತ್ತಮ ಹವ್ಯಾಸ ಎಂದು ಪರಿಗಣಿತವಾಗಿದೆ. ಸುಮಾರು ಎರಡು, ಮೂರು ದಶಕಗಳ ಹಿಂದೆ ನಮ್ಮ-ನಿಮ್ಮ ಮನೆಯ ಕಪಾಟುಗಳಲ್ಲಿ ಪುಸ್ತಕಗಳು ಇದ್ದೇ ಇರುತ್ತಿದ್ದವು. ಕೊನೇ ಪಕ್ಷ ವಾರ, ಮಾಸ ಪತ್ರಿಕೆಗಳಾದರೂ ಇರುತ್ತಿದ್ದವು. ಮನೆಯ ಹೆಂಗಳೆಯರಿಗೆ ಸಾಯಿಸುತೆ, ತ್ರಿವೇಣಿ, ಉಷಾ ನವರತ್ನರಾಮ್ ಕಾದಂಬರಿಗಳು ಅಚ್ಚುಮೆಚ್ಚಾಗಿದ್ದವು. ಮಕ್ಕಳಂತೂ ಕಥೆ ಪುಸ್ತಕ, ಕಾಮಿಕ್ಸ್, ಅಮರಚಿತ್ರ ಕಥೆಗಳ ಪುಸ್ತಕಗಳಿಗಾಗಿ ದುಂಬಾಲು ಬೀಳುತ್ತಿದ್ದವು. ಮನೆಯ ಪುರುಷರಿಗೆ ಮತ್ತು ಸ್ವಲ್ಪ ಬೆಳೆದು ನಿಂತ ಹುಡುಗರಿಗೆ ಪತ್ತೇದಾರಿ ಕಾದಂಬರಿ, ವಿಜ್ಞಾನ ಸಂಬಂಧಿ ಕುತೂಹಲದಾಯಕ ಪುಸ್ತಕಗಳು ಇಷ್ಟವಾಗುತ್ತಿದ್ದವು.

ನಂತರ ಯಾವಾಗ ದೂರದರ್ಶನ ನಮ್ಮ ಮನೆಯೊಳಗೆ ಹೊಕ್ಕಿತೋ ನಾವು ಅದರ ಮೋಹಕ್ಕೆ ಬಿದ್ದೆವು. ಮೊದಲಾದರೆ ಚಾನೆಲ್ ಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ದಿನಕ್ಕೆ ಒಂದೇ ಧಾರಾವಾಹಿ, ವಾರಕ್ಕೆ ಒಂದೇ ಸಿನೆಮಾ ಹೀಗೆ ಎಲ್ಲವೂ ನಿಯಂತ್ರಣದಲ್ಲಿತ್ತು. ಕ್ರಮೇಣ ಚಾನೆಲ್ ಗಳು ನೂರಾರು ಬಂದವು, ದಿನಕ್ಕೆ ಹತ್ತಕ್ಕೂ ಅಧಿಕ ಧಾರಾವಾಹಿಗಳು, ಸಿನೆಮಾಗಳು ಬರುತ್ತಿದ್ದಂತೆ ನಮಗೆ ದಿನದ ೨೪ ಗಂಟೆಗಳೂ ಕಡಿಮೆ ಆಗತೊಡಗಿತು. ನಂತರ ಮೊಬೈಲ್ ಅದರಲ್ಲೂ ಸ್ಮಾರ್ಟ್ ಫೋನ್ ಯಾವಾಗ ನಮ್ಮ ಕೈಯನ್ನು ಅಲಂಕರಿಸತೊಡಗಿದವೋ, ಪುಸ್ತಕ ಕಪಾಟಿನ ಒಳಗೆ ಆತ್ಮಹತ್ಯೆ ಮಾಡಿಕೊಂಡಿತು. ಪುಸ್ತಕವೆಂದರೆ ಪಠ್ಯ ಪುಸ್ತಕ ಎನ್ನುವ ಮಾತಾಗಿ ಹೋಯಿತು. 

ದಿನ, ವಾರ, ಮಾಸ ಪತ್ರಿಕೆಗಳ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿದವು. ಕಥೆ, ಕಾದಂಬರಿಗಳನ್ನು ಓದುವವರೂ ಕಡಿಮೆಯಾದರೂ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಬಂದಾಗ ಸ್ವಲ್ಪ ಮಂದಿ ಪುಸ್ತಕಗಳ ಹಿಂದೆ ಬಿದ್ದರು. ಹಲವಾರು ಮಂದಿ ಬರಹಗಾರರಾದರು. ಹಲವು ಪುಸ್ತಕಗಳು ಲೋಕಾರ್ಪಣೆಗೊಂಡವು. 

ನಾನು ಈಗ ಹೇಳಹೊರಟಿರುವುದು 'ನಮ್ಮ ಹೆಮ್ಮೆಯ ಭಾರತ' ಎಂಬ ಪುಸ್ತಕ ಕುರಿತಾಗಿ. ಈ ಪುಸ್ತಕವು ಕಳೆದ ತಿಂಗಳು ೨೩ರಂದು ಲೋಕಾರ್ಪಣೆಗೊಂಡಿತು. ಈ ಮಾಹಿತಿಯನ್ನು ನೀವು ಈಗಾಗಲೇ ಸಂಪದ'ದಲ್ಲಿ ಓದಿಯೇ ಇರುತ್ತೀರಿ. ಹಲವಾರು ಮಂದಿ ಈ ಪುಸ್ತಕವನ್ನು ಖರೀದಿಸಿರಲೂ ಬಹುದು. ನಮ್ಮ ಭಾರತವು ಬಹು ವೈವಿಧ್ಯಮಯವಾದ ದೇಶ. ವಿಸ್ತಾರದಲ್ಲೂ ಬಹು ದೊಡ್ಡದಾಗಿರುವುದರಿಂದ ವೈಶಿಷ್ಟ್ಯಗಳೂ ಸಾವಿರಾರು. ಪ್ರತೀ ರಾಜ್ಯ, ಪ್ರತೀ ಜಿಲ್ಲೆ, ಪ್ರತೀ ಗ್ರಾಮಗಳಲ್ಲಿ ವಿಶೇಷತೆ ಕಂಡು ಬರುತ್ತದೆ. ಇಂತಹ ನೂರು ವಿಶೇಷತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕರೂ, ಅಂಕಣಕಾರರೂ, ನಿವೃತ್ತ ಬ್ಯಾಂಕ್ ಅಧಿಕಾರಿಯೂ ಆದ ಶ್ರೀ ಅಡ್ಡೂರು ಕೃಷ್ಣ ರಾವ್ ಅವರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಹಲವಾರು ಪತ್ರಿಕೆಗೆ ಅಂಕಣಗಳನ್ನು, ಲೇಖನಗಳನ್ನು ಬರೆಯುತ್ತಾರೆ. 

ಈ ವರ್ಷ ಭಾರತಕ್ಕೆ ಸ್ವಾತಂತ್ರ್ಯ ದೊರೆತ ೭೫ರ ಅಮೃತ ಮಹೋತ್ಸವದ ಸಂಭ್ರಮ. ಈ ಸಂಭ್ರಮದ ಸಮಯದಲ್ಲಿ 'ನಮ್ಮ ಹೆಮ್ಮೆಯ ಭಾರತ' ದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತರಾಗಿದ್ದವರಿಗಾಗಿ ಈ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಅಧ್ಯಾಯಗಳು 'ಸಂಪದ' ಜಾಲತಾಣದಲ್ಲಿ ಪ್ರಕಟವಾದುವುಗಳು. ಭಾರತದ ತುಂಬೆಲ್ಲಾ ವಿವಿಧತೆ ಇದೆ. ಹಾಗೆಯೇ ಪುಸ್ತಕದಲ್ಲೂ ವಿವಿಧತೆಯಿದೆ. ವಿವಿಧ ವಿಷಯಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ ಪುಸ್ತಕರೂಪದಲ್ಲಿ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ ಶ್ರೀಯುತ ಅಡ್ಡೂರು ಇವರು. ಚರಿತ್ರೆ ಮತ್ತು ಸಂಸ್ಕೃತಿ, ಪ್ರಕೃತಿ ಮತ್ತು ವನ್ಯಜೀವಿಗಳು, ಕೃಷಿ ಮತ್ತು ವಾಣಿಜ್ಯ, ವಿಜ್ಞಾನ ಮತ್ತು ಶಿಕ್ಷಣ, ಬಾಹ್ಯಾಕಾಶ ಮತ್ತು ಸಂವಹನ, ಆಟೋಟ, ಮನರಂಜನೆ, ಸಾರಿಗೆ ಮತ್ತು ರಕ್ಷಣಾ ವ್ಯವಸ್ಥೆ ಮೊದಲಾದ ವಿಷಯಗಳ ಬಗ್ಗೆ ಹಲವಾರು ಪುಟ್ಟ ಪುಟ್ಟ ಸಂಗತಿಗಳನ್ನು ಆಯ್ದು ಬರೆದಿದ್ದಾರೆ. 

ಪುಸ್ತಕದಲ್ಲಿ ಭಾರತದ ಕುರಿತಾದ ೧೦೦ ಪುಟ್ಟ ಪುಟ್ಟ ಸಂಗತಿಗಳಿವೆ. ಹಿರಿಯರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಈ ಪುಸ್ತಕ ಬಹಳ ಉಪಯುಕ್ತ. ವಿದ್ಯಾರ್ಥಿಗಳ ಯಾವುದೇ ಶಾಲಾ ಪ್ರಾಜೆಕ್ಟ್ ಗೆ ಈ ಪುಸ್ತಕ ಒಂದು ಗೈಡ್ ಆಗಬಹುದು. ಈ ಪುಸ್ತಕದ ಲೋಕಾರ್ಪಣೆಯ ಬಗ್ಗೆ, ಪುಸ್ತಕವನ್ನು ನಿಮ್ಮ ಮನೆಗೆ ತರಿಸಿಕೊಳ್ಳುವ ಬಗ್ಗೆ ಮತ್ತು ಪುಸ್ತಕ ಸಿಗುವ ಸ್ಥಳಗಳ ಬಗ್ಗೆ ಈಗಾಗಲೇ 'ಸಂಪದ' ದಲ್ಲಿ ಮಾಹಿತಿ ಲೇಖನ ಪ್ರಕಟವಾಗಿದೆ. ನಿಮ್ಮ ಮನೆಯ ಪುಸ್ತಕ ಸಂಗ್ರಹದಲ್ಲಿ ಇಂತಹ ಒಂದು ಪುಸ್ತಕ ಇರಲೇ ಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ನಿಮ್ಮ ಸಂಘ-ಸಂಸ್ಥೆಗಳಲ್ಲಿ, ಶಾಲಾ ಕಾಲೇಜಿನ ಕಾರ್ಯಕ್ರಮಗಳಲ್ಲಿ 'ನಮ್ಮ ಹೆಮ್ಮೆಯ ಭಾರತ' ಪುಸ್ತಕವನ್ನು ಬಹುಮಾನವಾಗಿ, ಸ್ಮರಣಿಕೆಯಾಗಿ ಅಥವಾ ಉಡುಗೊರೆಯಾಗಿ ನೀಡಬಹುದಾಗಿದೆ. 

'ನಮ್ಮ ಹೆಮ್ಮೆಯ ಭಾರತ' ಪುಸ್ತಕವು ನಮ್ಮ ಮನೆಯಲ್ಲಿದ್ದರೆ ಮುಂದಿನ ಪೀಳಿಗೆಗೂ ಮಾರ್ಗದರ್ಶಕವಾಗುವುದರಲ್ಲಿ ಸಂದೇಹವಿಲ್ಲ. ಮೊಬೈಲ್, ಅಂತರ್ಜಾಲ ಯಾವುದೇ ಇರಲಿ, ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುವ ಸುಖಕ್ಕೆ ಪರ್ಯಾಯವಿಲ್ಲ. ಹಾಗಾದರೆ ಇನ್ನು ತಡವೇಕೆ, ನಿಮ್ಮದೊಂದು ಪ್ರತಿಯನ್ನು ಈಗಲೇ ಖರೀದಿಸಿ. ಹೆಚ್ಚಿನ ಮಾಹಿತಿಗಾಗಿ :೯೪೪೮೧೫೨೬೨೦ ಗೆ ಕರೆ ಮಾಡಿ…