ನಮ್ಮ ಹೆಮ್ಮೆಯ ಭಾರತ (ಭಾಗ 29 - 30)

ನಮ್ಮ ಹೆಮ್ಮೆಯ ಭಾರತ (ಭಾಗ 29 - 30)

೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.

ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "ಆನೆ ಸಾಗಿದ ದಾರಿ" ಎಂಬ ನಾಣ್ಣುಡಿಯೇ ಬಳಕೆಯಲ್ಲಿದೆ.

ಆನೆಗಳನ್ನು ಖೆಡ್ಡಾಕ್ಕೆ ಬೀಳಿಸಿ, ಹಿಡಿದು, ಪಳಗಿಸುತ್ತಾರೆ. ಪಳಗಿಸಿದ ಆನೆಗಳನ್ನು ಕಾಡುಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ದಕ್ಷಿಣ ಭಾರತದ ಹಲವು ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುತ್ತಾರೆ. ಇವು ಆಯಾ ದೇವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುತ್ತವೆ. ಆನೆಗಳನ್ನು ಸಾಕುವುದು ಸುಲಭವಲ್ಲ. ಯಾಕೆಂದರೆ ಅವಕ್ಕೆ ದಿನದಿನವೂ ದೊಡ್ಡ ಪ್ರಮಾಣದಲ್ಲಿ ಆಹಾರ ಒದಗಿಸಬೇಕು.

ಆನೆಗಳ ದಂತಗಳಿಗೆ ಭಾರೀ ಬೇಡಿಕೆಯಿದೆ. ಅದರಿಂದಾಗಿಯೇ ದುಷ್ಕರ್ಮಿಗಳು ಆನೆಗಳನ್ನು ಗುಂಡಿಟ್ಟು ಅಥವಾ ವಿಷ ಹಾಕಿ ಕೊಲ್ಲುತ್ತಿದ್ದಾರೆ. ಆದ್ದರಿಂದಲೇ ಹುಲಿಗಳಂತೆ ಆನೆಗಳಿಗೂ ಮನುಷ್ಯನಿಂದ ಯಾವಾಗಲೂ ಅಪಾಯ.

೩೦.ಭಾರತದ ಜಗದ್ವಿಖ್ಯಾತ ಗಿರ್ ಅರಣ್ಯ - ಏಷ್ಯಾ ಸಿಂಹಗಳ ಏಕೈಕ ವಾಸಸ್ಥಾನ
ಭಾರತದ ಗಿರ್ ಅರಣ್ಯ ಜಗದ್ವಿಖ್ಯಾತ ಯಾಕೆಂದರೆ ಅದು ಏಷ್ಯಾದ ಸಿಂಹಗಳ ಏಕೈಕ ಆಶ್ರಯ ತಾಣ. ಈ ಸಿಂಹಗಳು ಅಳಿವಿನ ಅಂಚಿನಲ್ಲಿವೆ ಎಂಬುದು ಆತಂಕದ ಸಂಗತಿ.

ಇವು ಗಾತ್ರದಲ್ಲಿ ಆಫ್ರಿಕಾದ ಸಿಂಹಗಳಿಗಿಂತ ಸಣ್ಣವು. ಇವು ಆಫ್ರಿಕಾದ ಸಿಂಹಗಳಿಗಿಂತ ಸಣ್ಣ ಗುಂಪುಗಳಲ್ಲಿ ವಾಸ ಮಾಡುತ್ತವೆ. ಮುಖ್ಯವಾಗಿ ಜಿಂಕೆ ಮತ್ತು ಕಾಡುಹಂದಿಗಳನ್ನು ಬೇಟೆಯಾಡಿ ತಿನ್ನುತ್ತವೆ.

ಗಿರ್ ಸ್ಯಾಂಕ್ಚುವರಿ, ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಪನಿಯಾ ಸ್ಯಾಂಕ್ಚುವರಿ ರಕ್ಷಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇವೆಲ್ಲವೂ ಒಟ್ಟಾಗಿ ಏಷ್ಯಾದ ಸಿಂಹಗಳ ವಾಸಪ್ರದೇಶ.

ಗಿರ್ ಅರಣ್ಯಗಳು ಇತರ ಹಲವು ವನ್ಯಜೀವಿಗಳಿಗೂ ಆವಾಸಸ್ಥಾನ. ಸಸ್ತನಿಗಳ ೩೮ ಸ್ಪಿಷೀಸ್, ಹಕ್ಕಿಗಳ ೩೦೦ ಸ್ಪಿಷೀಸ್ ಮತ್ತು ಕೀಟಗಳ ೨,೦೦೦ ಸ್ಪಿಷೀಸ್ ಇಲ್ಲಿ ವಾಸಿಸುತ್ತವೆ. ಜೊತೆಗೆ ಮಾಲ್ಧಾರಿ ಸಮುದಾಯದವರೂ ಗಿರ್ ಅರಣ್ಯದ ಅಂಚಿನಲ್ಲಿ ವಾಸ ಮಾಡುತ್ತಾರೆ.  

ಚಿತ್ರ ಕೃಪೆ: (೧) ಏಷ್ಯಾದ ಆನೆಗಳ ಗುಂಪು: ಪಿನ್-ಟ್ರೆಸ್ಟ್ -ಡಾಟ್-ಕಾಮ್

             (೨) ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಂಹಗಳು: ವಿಕಿಪೀಡಿಯಾ