ನಮ್ಮ ಹೆಮ್ಮೆಯ ಭಾರತ (ಭಾಗ 39 - 40)
೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ
ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ - ಜಗತ್ತಿನ ಒಟ್ಟು ಹಣ್ಣು ಉತ್ಪಾದನೆಯಲ್ಲಿ ಭಾರತದ ಪಾಲು ಶೇ.೮.
ತರಕಾರಿ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಚೀನಾದ ನಂತರ ಎರಡನೇ ಸ್ಥಾನ - ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೧೫.
ಬಾಳೆಹಣ್ಣು, ಪಪ್ಪಾಯಿ, ಮಾವು, ಪೇರಳೆ ಮತ್ತು ಮ್ಯಾಂಗೋಸ್ಟೀನ್ ಹಣ್ಣುಗಳ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ. ಪ್ರತಿ ವರುಷ ಭಾರತದಿಂದ ರಫ್ತಾಗುವ ಹಣ್ಣು ಮತ್ತು ತರಕಾರಿಗಳ ಒಟ್ಟು ಮೌಲ್ಯ ರೂ.೬,೦೦೦ ಕೋಟಿಗಿಂತ ಅಧಿಕ.
೪೦.ಭಾರತದ ಕೃಷಿಗೆ ಜಾಗತಿಕ ಮಹತ್ವ
ಭಾರತ ಪ್ರಾಕೃತಿಕವಾಗಿ ಸಂಪನ್ನ ದೇಶ. ಇಲ್ಲಿನ ಫಲವತ್ತಾದ ಮಣ್ಣು, ವಿಸ್ತಾರವಾದ ಬಯಲುಗಳು, ಮುಂಗಾರು ಮತ್ತು ಹಿಂಗಾರು ಮಳೆ, ನೂರಾರು ನದಿಗಳು, ವಿಭಿನ್ನ ಹವಾಮಾನ, ಸಮೃದ್ಧ ಸೂರ್ಯನ ಬಿಸಿಲು - ಇವೆಲ್ಲವೂ ಹಲವು ವಿಧದ ಆಹಾರ ಬೆಳೆಗಳನ್ನೂ, ಹಣ್ಣು-ತರಕಾರಿ ಬೆಳೆಗಳನ್ನು ಬೆಳೆಸಲು ಸೂಕ್ತ ಪರಿಸರ ಒದಗಿಸಿವೆ. ಆದ್ದರಿಂದಲೇ ದೇಶದ ಬಹುಪಾಲು ಜನರಿಗೆ ಕೃಷಿ ಆದಾಯದ ಮುಖ್ಯ ಮೂಲವಾಗಿದೆ.
ಭಾರತದ ಆರ್ಥಿಕತೆಯ ಪ್ರಧಾನ ಅಂಗ ಕೃಷಿ. ಯಾಕೆಂದರೆ, ಆಹಾರ, ಹೈನಪಶುಗಳಿಗೆ ಮೇವು, ಹಲವು ಕೈಗಾರಿಕೆಗಳಿಗೆ ಕಚ್ಚಾವಸ್ತು ಮತ್ತು ಕೋಟಿಗಟ್ಟಲೆ ಜನರಿಗೆ ಉದ್ಯೋಗ ಒದಗಿಸುತ್ತಿದೆ.
ಕೃಷಿ ಉತ್ಪನ್ನಗಳಾದ ಸಕ್ಕರೆ, ಟೀ, ಕಾಫಿ, ಅಕ್ಕಿ, ತಂಬಾಕು ಮತ್ತು ಸಾಂಬಾರ ವಸ್ತುಗಳನ್ನು ಟನ್ನುಗಟ್ಟಲೆ ರಫ್ತು ಮಾಡಿ, ಕೋಟಿಗಟ್ಟಲೆ ರೂಪಾಯಿ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ ಭಾರತ.
ಫೋಟೋ ಕೃಪೆ: ಅಂತರ್ಜಾಲ ದಿನಪತ್ರಿಕೆಗಳು