ನಮ್ಮ ಹೆಮ್ಮೆಯ ಭಾರತ (ಭಾಗ 43 - 44)

ನಮ್ಮ ಹೆಮ್ಮೆಯ ಭಾರತ (ಭಾಗ 43 - 44)

೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.

ಜಗತ್ತಿನ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇಕಡಾ ೮೫ ಗಂಗಾ ನದಿಯ ಬಯಲಿನ ಕೊಡುಗೆ. ಆದ್ದರಿಂದಲೇ ಸೆಣಬಿನ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ. ಸೆಣಬಿನ ಉದ್ಯಮ ಸುಮಾರು ೪೦ ಲಕ್ಷ ಕುಟುಂಬಗಳಿಗೆ ಆಸರೆಯಾಗಿದೆ. ಜೊತೆಗೆ ೨೦ ಲಕ್ಷ ಕೈಗಾರಿಕಾ ಕಾರ್ಮಿಕರಿಗೆ ನೇರ ಉದ್ಯೋಗವನ್ನೂ, ಹತ್ತು ಲಕ್ಷ ಜನರಿಗೆ ಜೀವನೋಪಾಯವನ್ನೂ ಸೆಣಬು ಉದ್ಯಮ ಒದಗಿಸಿದೆ.

೪೪.ಹಲವು ರಂಗಗಳಲ್ಲಿ ಜಗತ್ತಿನ ಮುಂಚೂಣಿಯಲ್ಲಿದೆ ಭಾರತ
ಸಕ್ಕರೆ, ಮಿಲ್ಲೆಟ್, ಬಾಳೆಹಣ್ಣು ಮತ್ತು ಲಿಂಬೆಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಪ್ರಥಮ ಸ್ಥಾನ. ಅಡಿಕೆ, ಸಾಂಬಾರವಸ್ತುಗಳು, ಫೆನ್ನೆಲ್, ಶುಂಠಿ, ತೊಗರಿ, ಲೆಂಟಿಲ್ ಮತ್ತು ಸೆಣಬು - ಇವುಗಳ ಉತ್ಪಾದನೆಯಲ್ಲಿಯೂ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ.

ಅತ್ಯಧಿಕ ಸಂಖ್ಯೆಯ ಆಕಳುಗಳು ಮತ್ತು ಎಮ್ಮೆ ಹಾಗೂ ಕೋಣಗಳು ಇರುವುದು ಭಾರತದಲ್ಲಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿಯೂ ಜಗತ್ತಿನಲ್ಲಿ ಭಾರತವೇ ಮುಂಚೂಣಿಯಲ್ಲಿದೆ.

ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು ಇರುವುದೂ ಭಾರತದಲ್ಲಿ; 54 ಕೇಂದ್ರೀಯ ವಿಶ್ವವಿದ್ಯಾಲಯಗಳು, 411 ರಾಜ್ಯ ವಿಶ್ವವಿದ್ಯಾಲಯಗಳು 123 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 288 ಖಾಸಗಿ ವಿಶ್ವವಿದ್ಯಾಲಯಗಳು (ಒಟ್ಟು   875). ಅಂತೂ ತನ್ನ ಸರ್ವತೋಮುಖ ಅಭಿವೃದ್ಧಿಯಿಂದಾಗಿ ಜಗತ್ತಿನಲ್ಲಿ ಭಾರತವು ಹಲವು ರಂಗಗಳಲ್ಲಿ ಅಗ್ರಸ್ಥಾನ ಗಳಿಸಿದೆ.

ಫೋಟೋ ೧: ಸೆಣಬಿನ ನೂಲು ಮತ್ತು ಚಾಪೆ

ಫೋಟೋ ೨: ಮಂಗಳೂರು ವಿಶ್ವವಿದ್ಯಾಲಯ