ನಮ್ಮ ಹೆಮ್ಮೆಯ ಭಾರತ (ಭಾಗ 45 - 46)

ನಮ್ಮ ಹೆಮ್ಮೆಯ ಭಾರತ (ಭಾಗ 45 - 46)

೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ
ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲಾಗಿ ತಂದವರು ಮೊಘಲರು. ಮಹಾರಾಜ ಅಕ್ಬರ್ ಆಗ್ರಾದಲ್ಲಿ ಹಾಸುಗಂಬಳಿ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಂದಿನಿಂದ ಭಾರತದ ಹಾಸುಗಂಬಳಿಗಳು ಅದ್ಭುತ ವಿನ್ಯಾಸಗಳು, ಬಣ್ಣ ಸಂಯೋಜನೆ ಮತ್ತು ಕುಶಲ ನೇಯ್ಗೆಗಾಗಿ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ.

ಉಣ್ಣೆ ಮತ್ತು ಸಿಲ್ಕ್  ಹಾಸುಗಂಬಳಿ ಹೆಣಿಗೆಗೆ ಬಳಸುವ ಪ್ರಧಾನ ವಸ್ತುಗಳು. ಇವುಗಳ ವಿನ್ಯಾಸಗಳು ಬಳ್ಳಿ ಮತ್ತು ಹೂಗಳ ನಮೂನೆಗಳು, ಪ್ರಾಣಿ ಮತ್ತು ಹಕ್ಕಿಗಳ ಚಿತ್ರಗಳು ಹಾಗೂ ಕ್ಯಾಲಿಗ್ರಾಫಿ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.

ಈಗ ಕೈಗಳಿಂದ ನೇಯ್ದ ಹಾಸುಗಂಬಳಿಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ ೩೫. ತಂತ್ರಜ್ನಾನದ ಬಳಕೆ ಮತ್ತು ಗುಣಮಟ್ಟ ಸುಧಾರಣೆಯಿಂದ ಈ ಪಾಲು ಹೆಚ್ಚಾಗಲು ಸಾಧ್ಯವಿದೆ.

೪೬.ರತ್ನ  ಮತ್ತು ಬೆಲೆಬಾಳುವ ಮುತ್ತುಮಾಣಿಕ್ಯಗಳ ಉದ್ಯಮದಲ್ಲಿ ಭಾರತಕ್ಕೆ ಅಗ್ರಗಣ್ಯ ಸ್ಥಾನ
ಪುರಾತನ ಕಾಲದಿಂದಲೂ ಭಾರತವು ಅದ್ಭುತ ರತ್ನಗಳು, ಮುತ್ತುಮಾಣಿಕ್ಯಗಳಿಗೆ ಜಗತ್ತಿನಲ್ಲೇ ಪ್ರಸಿದ್ಧ. ಭಾರತದ ರತ್ನದ ಗಣಿಗಳು ವಿಶ್ವವಿಖ್ಯಾತವಾದ ರತ್ನಗಳನ್ನು ಉತ್ಪಾದಿಸಿವೆ.

ಈಗ ಭಾರತದ ರತ್ನ ಕತ್ತರಿಸುವ ಮತ್ತು ಪಾಲಿಷ್ ಮಾಡುವ ಉದ್ಯಮ ಜಗತ್ತಿನಲ್ಲಿ ಅತಿ ದೊಡ್ಡದು. ಅದರಲ್ಲಿ ಆಧುನಿಕ ತಂತ್ರಜ್ನಾನ ಮತ್ತು ಪಾರಂಪರಿಕ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಲಾಗಿದೆ. ಈ ಕಸುಬಿನಲ್ಲಿ ಪರಿಣತರಾಗಿರುವ ಭಾರತದ  ಕುಶಲಕರ್ಮಿಗಳ ಸಂಖ್ಯೆ ೧೦ ಲಕ್ಷಕ್ಕಿಂತ ಅಧಿಕ. ಇದುವೇ ಅಂತರರಾಷ್ಟ್ರೀಯ ಆಭರಣ ತಯಾರಕರು ಭಾರತದಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಕಾರಣ. ಅಂತೂ ಜಗತ್ತಿನ ಅತಿ ದೊಡ್ಡ ರತ್ನ ಉತ್ಪಾದನಾ ಕೇಂದ್ರವಾಗಿ ಭಾರತ ಹೆಸರುವಾಸಿ.