ನಮ್ಮ ಹೆಮ್ಮೆಯ ಭಾರತ (ಭಾಗ 47 - 48)

ನಮ್ಮ ಹೆಮ್ಮೆಯ ಭಾರತ (ಭಾಗ 47 - 48)

೪೭.ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಇರುವ ದೇಶ ಭಾರತ
ಹೀರೋ ಮೋಟೋ ಕೋರ್ಪ್ ಲಿಮಿಟೆಡ್ - ಪಂಜಾಬಿನ ಲುಧಿಯಾನಾದ ಈ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ. ೧೯೮೪ರಲ್ಲಿ ಈ ಕಂಪೆನಿ ಜಪಾನಿನ ಹೊಂಡಾ ಮೋಟಾರ್ಸ್ ಜೊತೆ ಸೇರಿಕೊಂಡು, ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ ಅಗ್ರ ಸ್ಥಾನ ಗಳಿಸಿತು. ಅನಂತರ, ಇದು ಸ್ಕೂಟರುಗಳ ಉತ್ಪಾದನೆಯನ್ನೂ ಆರಂಭಿಸಿತು. ತದನಂತರ ೨೦೧೦ರಲ್ಲಿ, ಈ ಜಂಟಿ-ಕಂಪೆನಿಯಿಂದ ಹೊಂಡಾ ಮೋಟರ್ಸ್ ಹೊರ ಬಂತು.

ಇದೆಲ್ಲ ಶುರುವಾದದ್ದು ೧೯೪೪ರಲ್ಲಿ - ಮುಂಜಾಲ್ ಕುಟುಂಬದ ನಾಲ್ವರು ಸೋದರರು ಸೇರಿಕೊಂಡು, ಅಮೃತಸರದಲ್ಲಿ ಸೈಕಲುಗಳ ಬಿಡಿಭಾಗಗಳನ್ನು ಉತ್ಪಾದಿಸಲು ಆರಂಭಿಸಿದಾಗ. ಭಾರತೀಯರಿಗೆ ಓಡಾಟಕ್ಕೆ ಸರಳ ಹಾಗೂ ದುಬಾರಿಯಲ್ಲದ ವಾಹನವನ್ನು ಒದಗಿಸುವುದು ಅವರ ಕನಸಾಗಿತ್ತು. ಅನಂತರ ಅವರು ಲುಧಿಯಾನಾದಲ್ಲಿ ೧೯೫೬ರಲ್ಲಿ ಹೀರೋ ಸೈಕಲ್ಸ್ ಎಂಬ ಸೈಕಲ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಿದರು. ೧೯೭೫ರಲ್ಲಿ ಈ ಕಂಪೆನಿ ಭಾರತದಲ್ಲಿ ಅತ್ಯಧಿಕ ಸೈಕಲ್ ಉತ್ಪಾದಿಸುವ ಕಂಪೆನಿಯಾಗಿ ಬೆಳೆಯಿತು.

೪೮.ಜಗತ್ತಿನ ಅತ್ಯಂತ ದೊಡ್ಡ ಸೌರಶಕ್ತಿ ಕುಕ್ಕರ್ ಇರುವ ದೇಶ ಭಾರತ
ಸೌರಶಕ್ತಿ ಕುಕ್ಕರಿಗೆ ಸೂರ್ಯನ ಶಕ್ತಿಯೇ ಇಂಧನ. ಹಾಗಾಗಿ ಇದಕ್ಕೆ ಬೇರಾವ ಇಂಧನವೂ ಬೇಕಾಗಿಲ್ಲ; ಇದರಲ್ಲಿ ಅಡುಗೆ ಮಾಡಲು ಯಾವುದೇ ವೆಚ್ಚವಿಲ್ಲ! ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಆಹಾರ ಬೇಯಿಸಲು ಬಳಸುವುದೇ ಇದರ ತಂತ್ರ.

ಜಗತ್ತಿನ ಅತ್ಯಂತ ದೊಡ್ಡ ಸೌರಶಕ್ತಿ ಕುಕ್ಕರ್ ತಿರುಪತಿಯಲ್ಲಿದೆ. ಪ್ರತಿದಿನ ೧೫,೦೦೦ ಯಾತ್ರಿಕರಿಗೆ ಆಹಾರ ಬೇಯಿಸಲು ಅದರ ಬಳಕೆ. ಈಗ ಶಿರಡಿಯಲ್ಲಿ ೧೯ನೆಯ ಶತಮಾನದ ಸಂತ ಸಾಯಿ ಬಾಬಾ ಅವರ ಪುಣ್ಯಕ್ಷೇತ್ರದಲ್ಲಿ ಇದಕ್ಕಿಂತಲೂ ದೊಡ್ಡ ಸೌರಶಕ್ತಿ ಕುಕ್ಕರನ್ನು ಸ್ಥಾಪಿಸಲಾಗಿದೆ. ಇದು, ಪ್ರತಿದಿನ ೨೦,೦೦೦ ಯಾತ್ರಿಕರಿಗೆ ಆಹಾರ ಬೇಯಿಸಲಿಕ್ಕಾಗಿ ೩,೫೦೦ ಕಿಲೋಗ್ರಾಮ್ ಹಬೆ ಉತ್ಪಾದಿಸುತ್ತದೆ.

ಫೋಟೋ ೧: ಹೀರೋ ಮೋಟರ್ ಬೈಕ್

ಫೋಟೋ ೨: ಸೌರ ಫಲಕಗಳು