ನಮ್ಮ ಹೆಮ್ಮೆಯ ಭಾರತ (ಭಾಗ 49 - 50)

ನಮ್ಮ ಹೆಮ್ಮೆಯ ಭಾರತ (ಭಾಗ 49 - 50)

೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್‌ಗಳಿರುವ ದೇಶ ಭಾರತ
ವಿಶ್ವವಿಖ್ಯಾತವಾದ ಹಲವು ಬ್ರಾಂಡ್‌ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್. ಉಕ್ಕಿನ ಸ್ಥಾವರ, ರಾಸಾಯನಿಕ ಉತ್ಪಾದನಾ ಘಟಕಗಳು, ಮಾಹಿತಿ ತಂತ್ರಜ್ನಾನ (ಐಟಿ), ವಾಹನಗಳು, ಮನೆಬಳಕೆಯ ಉತ್ಪನ್ನಗಳು, ಕಮ್ಯುನಿಕೇಷನ್, ಹಾಸ್ಪಿಟಾಲಿಟಿ, ಸಂಶೋಧನೆ - ಹೀಗೆ ಹತ್ತುಹಲವು ಉದ್ಯಮಕ್ಷೇತ್ರಗಳಲ್ಲಿ ಟಾಟಾ ಗ್ರೂಪ್ ತನ್ನ ಛಾಪು ಮೂಡಿಸಿದೆ. ಜೇಮ್ ಷೇಟ್-ಜಿ ೧೮೬೮ರಲ್ಲಿ ಸ್ಥಾಪಿಸಿದ ಈ ವಾಣಿಜ್ಯ ಕಂಪೆನಿ ಈಗ ೮೦ ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಜಗತ್ತಿನ ಪ್ರಭಾವಿ ಹಾಗೂ ಬೃಹತ್ ಉದ್ಯಮ ಸಮೂಹಗಳಲ್ಲಿ ಒಂದಾಗಿದೆ.

ಜಗತ್ತಿನ ಮುಂಚೂಣಿ ಕಂಪೆನಿಗಳಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಒಂದಾಗಿದೆ. ೧೯೬೬ರಲ್ಲಿ ಧೀರೂಭಾಯಿ ಅಂಬಾನಿ ಸ್ಥಾಪಿಸಿದ ಈ ಕಂಪೆನಿಯ ಬೆಳವಣಿಗೆ ಬೆರಗು ಹುಟ್ಟಿಸುತ್ತದೆ. ೨೦೨೦ರಲ್ಲಿ ಇದರ ಮುಖ್ಯಸ್ಥ ಜಗತ್ತಿನ ಐದನೆಯ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ! ಕಚ್ಚಾತೈಲ ಮತ್ತು ಇಂಧನ ಅನಿಲದ ಗನಿಗಾರಿಕೆ ಮತ್ತು ಉತ್ಪಾದನೆ, ಕಚ್ಚಾತೈಲದ ಸಂಸ್ಕರಣೆ ಮತ್ತು ಮಾರಾಟ, ಪೆಟ್ರೋಕೆಮಿಕಲ್ಸ್ ಉತ್ಪಾದನೆ, ಬಟ್ಟೆ ಉತ್ಪಾದನೆ, ರಿಟೈಲ್ ವ್ಯವಹಾರ, ಕಮ್ಯುನಿಕೇಷನ್, ವಿಶೇಷ ಆರ್ಥಿಕ ವಲಯಗಳ ಅಭಿವೃದ್ಧಿ - ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇದು ಬೃಹತ್ ಪ್ರಮಾಣದ ವ್ಯವಹಾರ ನಡೆಸುತ್ತಿದೆ.

ಬ್ಯಾಂಕಿಂಗ್ ಮತ್ತು ಆರ್ಥಿಕ ರಂಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಚೂಣಿಯಲ್ಲಿದೆ. ಇದು ೨೧,೦೦೦ ಬ್ರಾಂಚುಗಳನ್ನು ಹೊಂದಿದೆ! ಭಾರತೀಯ ರೈಲ್ವೇಯಂತೂ ಜಗತ್ತಿನಲ್ಲೇ ಸಾಟಿಯಿಲ್ಲದ ಸಂಸ್ಥೆ. ರೈಲು ಹಳಿಗಳ ಒಟ್ಟು ಉದ್ದ, ಪ್ರತಿದಿನ ಓಡಾಡುವ ರೈಲುಗಳ ಸಂಖ್ಯೆ ಮತ್ತು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ - ಇವೆಲ್ಲವೂ ಬೆಕ್ಕಸಬೆರಗಾಗಿಸುತ್ತವೆ.

ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಹಲವು ಭಾರತೀಯ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವ್ಯವಹಾರ ವಿಸ್ತರಿಸಿಕೊಂಡು ಹೆಸರು ಗಳಿಸುತ್ತಿವೆ. ೨೧ನೆಯ ಶತಮಾನದಲ್ಲಿ ಭಾರತವು ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ.

೫೦.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಭಾರತದ ಹೆಮ್ಮೆಯ ಬ್ಯಾಂಕ್
ಭಾರತದ ಹೆಮ್ಮೆಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳ ಸಂಸ್ಥೆಯಾಗಿ ಬೆಳೆದಿದೆ.

ಸರಕಾರಿ ಸ್ವಾಮ್ಯದ ಈ ಬೃಹತ್ ಬ್ಯಾಂಕಿನ ಪ್ರಧಾನ ಕಚೇರಿ ಮುಂಬೈಯಲ್ಲಿದೆ. ಜಗತ್ತಿನ ಇತರ ಬ್ಯಾಂಕುಗಳಿಗೆ ಹೋಲಿಸಿದಾಗ ಇದರ ೨೧,೦೦೦ ಬ್ರ್ಯಾಂಚುಗಳ ಸಂಖ್ಯೆ ಅತ್ಯಧಿಕ! (ವಿದೇಶಿ ಬ್ರ್ಯಾಂಚುಗಳ ಸಹಿತ) ಅದಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ೨೧,೦೦೦ ಎಟಿಎಂಗಳನ್ನೂ ಸ್ಥಾಪಿಸಿದೆ. ಭಾರತದ ಎಲ್ಲ ಬ್ಯಾಂಕುಗಳ ಠೇವಣಿ ಮತ್ತು ಸಾಲಗಳ ಒಟ್ಟು ಮೊತ್ತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾಲು ಶೇಕಡಾ ೨೦.