ನಮ್ಮ ಹೆಮ್ಮೆಯ ಭಾರತ (ಭಾಗ 55 - 56)
ವಿಜ್ನಾನ ಮತ್ತು ಶಿಕ್ಷಣ
೫೫.ಐ.ಜಿ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ: ಜಗತ್ತಿನ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ
ಭಾರತದ ಸಂಸತ್ತಿನಲ್ಲಿ ೧೯೮೫ರಲ್ಲಿ ಮಂಜೂರಾದ ಕಾನೂನಿನ ಅನುಸಾರ ಈ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದರ ಮುಖ್ಯ ಕಚೇರಿ ನವದೆಹಲಿಯಲ್ಲಿದೆ. ಲಕ್ಷಗಟ್ಟಲೆ ಆಸಕ್ತರಿಗೆ ದೂರಶಿಕ್ಷಣ ಒದಗಿಸುತ್ತಿದೆ.
ಎರಡು ಶಿಕ್ಷಣ ಕೋರ್ಸುಗಳ ಮೂಲಕ ೧೯೮೭ರಲ್ಲಿ ಇದು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಿತು. ಈಗ ಭಾರತ ಮತ್ತು ೩೬ ವಿದೇಶಗಳ ಸುಮಾರು ೫೦ ಲಕ್ಷ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುತ್ತಿದೆ.
ಜನಸಾಮಾನ್ಯರ ವಿಶ್ವವಿದ್ಯಾಲಯ ಎಂದು ಹೆಸರಾಗಿರುವ ಈ ರಾಷ್ಟ್ರೀಯ ವಿಶ್ವವಿದ್ಯಾಲಯ ಎಲ್ಲ ವರ್ಗದ ಜನರಿಗೂ ಉನ್ನತ ಶಿಕ್ಷಣ ನೀಡುತ್ತಿದೆ. ಉದ್ಯೋಗಿಗಳಿಗೂ ತಮ್ಮ ಶಿಕ್ಷಣ ಮುಂದುವರಿಸಲು ಅವಕಾಶ ಒದಗಿಸುತ್ತಿದೆ. ಪ್ರತ್ಯೇಕ ಟಿವಿ ಚಾನೆಲಿನ ಮೂಲಕ ತನ್ನ ಪಾಠಗಳ ಪ್ರಸಾರ ಮಾಡುತ್ತಿದೆ. ಹಾಗಾಗಿ, ಮನೆಯಲ್ಲೇ ಕುಳಿತು ಅಧ್ಯಯನ ಮಾಡಲು ಸಾಧ್ಯ.
ಇದು ವರುಷಕ್ಕೆ ಎರಡು ಬಾರಿ (ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ) ಪರೀಕ್ಷೆಗಳನ್ನು ನಡೆಸುತ್ತದೆ. ಯಾವುದೇ ಕೋರ್ಸಿಗೆ ಶುಲ್ಕ ಪಾವತಿಸಿದರೆ, ಅನಂತರ ಮೂರು ವರುಷ ಅದರ ಪರೀಕ್ಷೆ ಹಾಜರಾಗಲು ಅವಕಾಶವಿರುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ವಿದ್ಯಾರ್ಥಿಗಳು ಅಧ್ಯಯನ ಪ್ರಬಂಧಗಳನ್ನು ಮನೆಯಲ್ಲೇ ಕೈಯಲ್ಲಿ ಬರೆದು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಿಗೆ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ, ಈ ಅಧ್ಯಯನ ಪ್ರಬಂಧಗಳಿಗೆ ಅಂತಿಮ ಮೌಲ್ಯಮಾಪನದಲ್ಲಿ ಶೇಕಡಾ ೩೦ ಅಂಕಗಳಿರುತ್ತವೆ. ಉಳಿದ ಶೇಕಡಾ ೭೦ ಅಂಕಗಳನ್ನು ವಾರ್ಷಿಕ ಪರೀಕ್ಷೆಯಲ್ಲಿ ಬರೆದ ಉತ್ತರಗಳಿಗೆ ಮೀಸಲಿಡಲಾಗಿದೆ.
೫೬.ಜಗದ್ವಿಖ್ಯಾತ ಸಿಟಿ ಮೊಂಟೆಸ್ಸೊರಿ ಶಾಲೆ, ಲಕ್ನೋ
ಡಾ. ಜಗಧೀಶ್ ಗಾಂಧಿ ೧೯೫೯ರಲ್ಲಿ ಕೇವಲ ಐದು ವಿದ್ಯಾರ್ಥಿಗಳೊಂದಿಗೆ ಸಿಟಿ ಮೊಂಟೆಸ್ಸೊರಿ ಶಾಲೆಯನ್ನು ಲಕ್ನೋದಲ್ಲಿ ಆರಂಭಿಸಿದರು. ಇದೀಗ ಜಗತ್ತಿನ ಅತಿ ದೊಡ್ಡ ಶಾಲೆಯಾಗಿ ಬೆಳೆದಿದೆ. ಇದರ ವಿದ್ಯಾರ್ಥಿಗಳ ಸಂಖ್ಯೆ ೪೭,೦೦೦! ಈ ಶಾಲೆಯ ಕ್ಲಾಸ್-ರೂಮುಗಳ ಸಂಖ್ಯೆ ೧,೦೦೦ ಮತ್ತು ಇಲ್ಲಿವೆ ೩,೭೦೦ ಕಂಪ್ಯೂಟರುಗಳು. ಇಲ್ಲಿನ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಸಂಖ್ಯೆ ೩,೮೦೦.
ತಮ್ಮ ಶಾಲೆಯ ವಿದ್ಯಾರ್ಥಿಗಳು ಜಾಗತಿಕ ಐಕ್ಯತೆ ಮತ್ತು ಶಾಂತಿಯ ಸಂದೇಶವನ್ನು ಸಮಾಜಕ್ಕೆ ಒಯ್ಯುತ್ತಾರೆಂಬುದು ಡಾ. ಜಗಧೀಶ್ ಗಾಂಧಿ ಅವರ ಕನಸಾಗಿತ್ತು. ೨೦೦೨ರಲ್ಲಿ ಈ ಶಾಲೆಗೆ ಯುನೆಸ್ಕೋ ಶಾಂತಿ ಶಿಕ್ಷಣದ ಪುರಸ್ಕಾರ ಲಭಿಸಿತು. ಇಡೀ ಜಗತ್ತಿನಲ್ಲಿ ಈ ಪುರಸ್ಕಾರ ಗಳಿಸಿದ ಶಾಲೆ ಇದೊಂದೇ ಆಗಿದೆ.