ನಮ್ಮ ಹೆಮ್ಮೆಯ ಭಾರತ (ಭಾಗ 59 - 60)

ನಮ್ಮ ಹೆಮ್ಮೆಯ ಭಾರತ (ಭಾಗ 59 - 60)

೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ
ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು.

ಇದಕ್ಕೆ ಪೂರಕವಾಗಿ ಭಾರತದಲ್ಲಿವೆ ಜಗತ್ತಿನ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು; ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ವಿದ್ಯಾಸಂಸ್ಥೆಗಳೆಂದು ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್. ಇದರಿಂದಾಗಿ, ಒಂಭತ್ತು ಶೈಕ್ಷಣಿಕ ವಿಭಾಗಗಳಲ್ಲಿ, ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವೃತ್ತಿಪರರನ್ನು ಹೊಂದಿರುವ ದೇಶಗಳಲ್ಲಿ ಭಾರತಕ್ಕೆ (ಯುಎಸ್‌ಎ ದೇಶದ ನಂತರ) ಎರಡನೆಯ ಸ್ಥಾನ.

ಆ ಶೈಕ್ಷಣಿಕ ವಿಭಾಗಗಳು: ಕಂಪ್ಯೂಟರ್ ಸಾಫ್ಟ್-ವೇರ್, ಗಣಿತ, ಇಂಟರ್ ಪರ್ಸನಲ್ ಕಮ್ಯೂನಿಕೇಷನ್, ಕಂಪ್ಯೂಟರ್ ಹಾರ್ಡ್-ವೇರ್, ಫೈನಾನ್ಸ್, ಆರೋಗ್ಯಸೇವೆ, ಮಾಹಿತಿ ತಂತ್ರಜ್ನಾನ, ಭಾಷೆಗಳು ಮತ್ತು ಸಂವಹನ, ಮೆನೇಜ್‌ಮೆಂಟ್ ಮತ್ತು ಆಫೀಸ್ ಕೌಶಲ್ಯಗಳು.

೬೦.ಜಗತ್ತಿಗೆ ಭಾರತದ ಕೊಡುಗೆ: ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್
ಭಾರತದ ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್‌ಐಆರ್) ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್ ಎಂಬ ವಿಶೇಷ ಪ್ರೋಗ್ರಾಮನ್ನು ಶುರು ಮಾಡಿದೆ. ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಜನರಿಗೆ, ಮುಖ್ಯವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರಗಳಲ್ಲಿ ಔಷಧಿಗಳನ್ನು ಒದಗಿಸುವುದು ಇದರ ಉದ್ದೇಶ.

ಕ್ಷಯ ಮತ್ತು ಮಲೇರಿಯಾ ಇತ್ಯಾದಿ ಉಷ್ಣವಲಯದ ಜನರನ್ನು ಬಾಧಿಸುವ ರೋಗಗಳಿಗೆ ಹೊಸ ಮತ್ತು ಅಗ್ಗದ ದರದ ಔಷಧಿ ಮತ್ತು ಚಿಕಿತ್ಸಾ ವಿಧಾನಗಳನ್ನು ಶೋಧಿಸುವ ಬಗೆಗಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲಿಕ್ಕಾಗಿ ಜಗತ್ತಿನ ಪ್ರತಿಭಾವಂತರು ಒಟ್ಟಾಗಿ ಕೆಲಸ ಮಾಡಲು ವೇದಿಕೆಯೊಂದನ್ನು ಒದಗಿಸುವುದೇ ಈ ಪ್ರೋಗ್ರಾಮಿನ ಪ್ರಧಾನ ಉದ್ದೇಶ.

ಈಗಾಗಲೇ ಸಾಫ್ಟ್-ವೇರ್ ಮತ್ತು ಹ್ಯೂಮನ್ ಜೀನೋಮ್ ಸೀಕ್ವೆನ್ಸಿಂಗ್ ಇಂತಹ ಕ್ಷೇತ್ರಗಳಲ್ಲಿ ಈ ರೀತಿಯ ಜಾಗತಿಕ ಸಹಯೋಗದ ಪ್ರೋಗ್ರಾಮುಗಳು ಚಾಲ್ತಿಯಲ್ಲಿವೆ. ಡ್ರಗ್ ಡಿಸ್ಕವರಿ ಬಗ್ಗೆ ಇಂತಹ ಪ್ರೋಗ್ರಾಮ್ ಮೊದಲಾಗಿ ಕೈಗೆತ್ತಿಕೊಂಡದ್ದು ಭಾರತದ ಹೆಗ್ಗಳಿಕೆ.

ಚಿತ್ರ: ಹ್ಯುಮನ್ ಜೀನೋಮ್ ಪ್ರಾಜೆಕ್ಟಿನ ಸಾಂಕೇತಿಕ ಚಿತ್ರ

ಫೋಟೋ: ಐಐಟಿ, ಮುಂಬೈ