ನಮ್ಮ ಹೆಮ್ಮೆಯ ಭಾರತ (ಭಾಗ 63 - 64)
೬೩.ಭಾರತದ ಏರ್-ಮೆಯಿಲ್ ಚರಿತ್ರೆ ರೋಚಕ
ಭಾರತದಲ್ಲಿ ಮೊತ್ತಮೊದಲ ಏರ್-ಮೆಯಿಲನ್ನು ವಿಮಾನದಲ್ಲಿ ಸಾಗಿಸಿದ್ದು ೧೯೧೧ರಲ್ಲಿ. ಈ ಏರ್-ಮೆಯಿಲ್ ಸೇವೆಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಅವರಿಂದ ಬ್ರಿಟಿಷ್ ವೈಮಾನಿಕ ಸರ್ ವಾಲ್ಟರ್ ಜಾರ್ಜ್ ವಿನ್-ಧಾಮ್ ಅನುಮತಿ ಪಡೆದು ಕೊಂಡರು. ಜನಸೇವೆಯ ಉದ್ದೇಶಕ್ಕೆ ಹಣ ಸಂಗ್ರಹಿಸಲಿಕ್ಕಾಗಿ, ತಾನು ನಡೆಸಲಿದ್ದ ಒಂದು ವಸ್ತುಪ್ರದರ್ಶನಕ್ಕೆ ಪ್ರಚಾರ ಪಡೆಯಲಿಕ್ಕಾಗಿ ಅವರು ಈ ಅನುಮತಿ ಪಡೆದರು.
೧೮ ಫೆಬ್ರವರಿ ೧೯೧೧ರಂದು ೬,೦೦೦ ಪತ್ರಗಳ ಮೂಟೆಯನ್ನು ಅಲ್ಲಹಾಬಾದಿನಿಂದ ನೈನಿಗೆ ವಿಮಾನದಲ್ಲಿ ಒಯ್ದ ಪೈಲೆಟ್ ಹೆನ್ರಿ ಪೆಕೆಟ್. ಆ ಪತ್ರಗಳಿಗೆ ಹಾಕಲಾದ ವಿಶೇಷ ಅಂಚೆಮುದ್ರೆಯಲ್ಲಿ ಪರ್ವತಗಳ ಮೇಲೆ ಹಾರುತ್ತಿರುವ ಒಂದು ವಿಮಾನದ ಚಿತ್ರವಿತ್ತು ಮತ್ತು “ಮೊದಲ ಏರಿಯಲ್ ಪೋಸ್ಟ್, ೧೯೧೧, ಯುಪಿ ಎಕ್ಸಿಬಿಷನ್ ಅಲ್ಲಹಾಬಾದ್" ಎಂದು ಮುದ್ರಿಸಲಾಗಿತ್ತು.
೬೪.ಭಾರತದ ವಾರ್ತಾಪತ್ರಿಕೆಗಳ ಉದ್ಯಮಕ್ಕೆ ಜಗತ್ತಿನಲ್ಲಿ ಮುಂಚೂಣಿ ಸ್ಥಾನ
ಟೆಲಿವಿಷನ್ ಮತ್ತು ಇಂಟರ್-ನೆಟ್ನಿಂದಾಗಿ ವಾರ್ತಾಪತ್ರಿಕೆಗಳು ಓದುಗರನ್ನು ಕಳೆದುಕೊಳ್ಳುತ್ತಿವೆ ಎಂಬ ಕೂಗು ಕಳೆದ ಇಪ್ಪತ್ತು ವರುಷಗಳಲ್ಲಿ ಜೋರಾಗಿದೆ. ಆದರೆ ಹಾಗೇನೂ ಆಗಿಲ್ಲ. ಅಂಕೆಸಂಖ್ಯೆಗಳ ಅನುಸಾರ ವಾರ್ತಾಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ವರುಷದಿಂದ ವರುಷಕ್ಕೆ ಗಣನೀಯ ಹೆಚ್ಚಳ ದಾಖಲಾಗಿದೆ - ಮುಖ್ಯವಾಗಿ ಭಾರತ ಮತ್ತು ಚೀನಾದಲ್ಲಿ.
ಭಾರತದಲ್ಲಿ ಹಣ ತೆತ್ತು ಪತ್ರಿಕೆ ಖರೀದಿಸುವವರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಸುಮಾರು ೪೦ ಲಕ್ಷ ಓದುಗರನ್ನು ಹೊಂದಿರುವ ಜಗತ್ತಿನ ಅತ್ಯಧಿಕ ಪ್ರಸಾರದ ಇಂಗ್ಲಿಷ್ ಪತ್ರಿಕೆ - ಭಾರತದ “ಟೈಮ್ಸ್ ಆಫ್ ಇಂಡಿಯಾ".
ಫೋಟೋ ೧: ಭಾರತದ ಏರ್-ಮೇಯಿಲಿಗೆ ೧೦೦ ವರುಷ ತುಂಬಿದಾಗಿನ ವಿಶೇಷ ಅಂಚೆ ಕವರ್
ಫೋಟೋ ೨: ಭಾರತದ ಕೆಲವು ವಾರ್ತಾ ಪತ್ರಿಕೆಗಳು