ನಮ್ಮ ಹೆಮ್ಮೆಯ ಭಾರತ (ಭಾಗ 65 - 66)

ನಮ್ಮ ಹೆಮ್ಮೆಯ ಭಾರತ (ಭಾಗ 65 - 66)

೬೫.ಭಾರತದ ಟೆಲಿಕಾಮ್ ಕ್ರಾಂತಿಗೆ ಜಗತ್ತಿನಲ್ಲೇ ಸಾಟಿಯಿಲ್ಲ
ಭಾರತದ ಟೆಲಿಕಮ್ಯುನಿಕೇಷನ್ ಜಾಲವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ - ನಮ್ಮ ಟೆಲಿಫೋನ್ ಬಳಕೆದಾರರ ಸಂಖ್ಯೆ  (ಮೊಬೈಲ್ ಮತ್ತು ಲಾಂಡ್-ಲೈನ್ ಬಳಕೆದಾರರ ಸಹಿತ) ಜನವರಿ ೨೦೨೦ರಲ್ಲಿ ೧೦೨ ಕೋಟಿ ದಾಟಿತ್ತು!

ಈ ಶತಮಾನದ ಆರಂಭದಲ್ಲಿ ಟೆಲಿಕಾಮ್ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳಿಗೆ ಸೇವೆ ಒದಗಿಸಲು ಅವಕಾಶ ನೀಡಿದ್ದು ಈ ಕ್ರಾಂತಿಗೆ ನಾಂದಿ. ಈಗ ಜಗತ್ತಿನಲ್ಲೇ ಅತ್ಯಂತ ಕಡಿಮೆ ದರಗಳಲ್ಲಿ ಟೆಲಿಕಾಮ್ ಸೇವೆ ಭಾರತದಲ್ಲಿ ಲಭ್ಯ. ಸರಕಾರಿ ಮಾಲೀಕತ್ವದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೂಡ ಈ ಕ್ಷೇತ್ರದಲ್ಲಿ ಸಕ್ರಿಯವಾಗಿವೆ. ಏರ್-ಟೆಲ್, ರಿಲಯನ್ಸ್, ವೊಡಫೋನ್-ಐಡಿಯಾ ಇತ್ಯಾದಿ ಖಾಸಗಿ ಕಂಪೆನಿಗಳು ವರುಷದಿಂದ ವರುಷಕ್ಕೆ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆ.

ಮೊಬೈಲ್ ಫೋನಿನಲ್ಲಿ ಇಂಟರ್-ನೆಟ್ ಸೇವೆಗಳು, ಹಣಪಾವತಿ ಮತ್ತು ಹಣವರ್ಗಾವಣೆ ಸೇವೆಗಳು,  ಹಾಡುಗಳು, ಚಲನಚಿತ್ರಗಳು, ಕ್ಷಣಕ್ಷಣದ ವಾರ್ತೆಗಳು, ಹವಾಮಾನ ವರದಿಗಳು, ಮಾರುಕಟ್ಟೆ ಧಾರಣೆಗಳು, ಡಿಜಿಟಲ್ ಆಟಗಳು ಇತ್ಯಾದಿ ಸೇವೆಗಳು ಅಂಗೈಯಲ್ಲೇ ಲಭ್ಯವಿರುವುದು ಈ ನಂಬಲಸಾಧ್ಯವಾದ ಭಾರತದ ಟೆಲಿಕಾಮ್ ಕ್ರಾಂತಿಗೆ ಪ್ರಧಾನ ಕಾರಣ.

೬೬.ಭಾರತದ ಮುಂಚೂಣಿ ಉದ್ಯಮ ಮಾಹಿತಿ ತಂತ್ರಜ್ನಾನ (ಐಟಿ)
ಮಾಹಿತಿ ತಂತ್ರಜ್ನಾನವು ಭಾರತದ ಉದ್ಯಮರಂಗದ ಚಿತ್ರಣವನ್ನೇ ಬದಲಾಯಿಸಿತು; ಮಾಹಿತಿ ತಂತ್ರಜ್ನಾನದಿಂದಾಗಿ ಭಾರತವು ಅನುಶೋಧಕ ಉದ್ಯಮಶೀಲರ ದೇಶವೆಂದು ಗುರುತಿಸಲ್ಪಟ್ಟಿತು.

ಭಾರತದ ಮಾಹಿತಿ ತಂತ್ರಜ್ನಾನ ಉದ್ಯಮವು ಸುಮಾರು ೨೫ ಲಕ್ಷ ಜನರಿಗೆ ನೇರ ಉದ್ಯೋಗ ಒದಗಿಸಿದೆ. ಆಧುನಿಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ನಾನದ ಮುಂಚೂಣಿ ದೇಶಗಳಲ್ಲಿ ಭಾರತ ಒಂದಾಗಿದೆ. ಅದಲ್ಲದೆ, ಜಗತ್ತಿನ ಬೃಹತ್ ಐಟಿ ಕಂಪೆನಿಗಳು ಭಾರತದಲ್ಲಿವೆ. ಭಾರತದ ಐಟಿ ಉದ್ಯಮವು ಜಗತ್ತಿನಲ್ಲೇ ಶ್ರೇಷ್ಠವಾದ ಮಾಹಿತಿ ತಂತ್ರಜ್ನಾನ ಪರಿಹಾರಗಳನ್ನೂ ವಾಣಿಜ್ಯ ಸೇವೆಗಳನ್ನೂ ಒದಗಿಸುತ್ತಿದೆ.

೧೯೯೧-೯೨ರ ಆರ್ಥಿಕ ಸುಧಾರಣೆಗಳ ನಂತರ, ಭಾರತ ಸರಕಾರ ಒದಗಿಸಿದ ಪ್ರೋತ್ಸಾಹ (ಕಡಿಮೆ ದರದಲ್ಲಿ ಕಚೇರಿ ನಿರ್ಮಾಣಕ್ಕಾಗಿ ಜಮೀನು ಒದಗಣೆ, ತೆರಿಗೆ ರಿಯಾಯ್ತಿ ಇತ್ಯಾದಿ) ಈ ಅಭೂತಪೂರ್ವ ಬೆಳವಣಿಗೆಗೆ ಕಾರಣ. ಭಾರತದ ಹಲವಾರು ಐಟಿ ಕಂಪೆನಿಗಳ ಸೇವೆ ಜಗತ್ತಿನ ಯಾವುದೇ ಮುಂಚೂಣಿ ಐಟಿ ಕಂಪೆನಿಯ ಸೇವೆಗೆ ಸರಿಸಾಟಿಯಾಗಿದೆ.

ಫೋಟೋ ೧: ಟೆಲಿಕಾಮ್ ಟವರ್

ಫೋಟೋ ೨: ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಕಲಿಕಾ ಕೇಂದ್ರ