ನಮ್ಮ ಹೆಮ್ಮೆಯ ಭಾರತ (ಭಾಗ 71 - 72)

ನಮ್ಮ ಹೆಮ್ಮೆಯ ಭಾರತ (ಭಾಗ 71 - 72)

ಆಟೋಟ, ಮನರಂಜನೆ, ಸಾರಿಗೆ ಮತ್ತು ದೇಶದ ರಕ್ಷಣಾ ವ್ಯವಸ್ಥೆ
೭೧.ಜಗತ್ತಿನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿದೆ.
ಅದು ಹಿಮಾಚಲ ಪ್ರದೇಶದ ಚಾಯಿಲ್‌ನಲ್ಲಿದೆ. ಇದನ್ನು ೧೮೯೩ರಲ್ಲಿ ಕಟ್ಟಿಸಿದವರು ಕ್ರಿಕೆಟ್-ಪ್ರಿಯರಾದ ಪಾಟಿಯಾಲಾದ ಮಹಾರಾಜ ಭುಪಿಂದರ್ ಸಿಂಗ್. ಇದಕ್ಕಾಗಿ ಅವರು ಸಮುದ್ರಮಟ್ಟದಿಂದ ೨೪೪೪ ಮೀ. ಎತ್ತರದ ಗುಡ್ಡವನ್ನು ಸಮತಟ್ಟುಗೊಳಿಸ ಬೇಕಾಯಿತು.ದಟ್ಟ ಕಾಡಿನಿಂದ ಸುತ್ತುವರಿದಿರುವ ಈ ಕ್ರಿಕೆಟ್ ಕ್ರೀಡಾಂಗಣವನ್ನು ಚಾಯಿಲ್ ಮಿಲಿಟರಿ ಶಾಲೆ ಆಟದ ಮೈದಾನವಾಗಿ ಬಳಸುತ್ತಿದೆ.

 ೭೨.ಹಾಕಿ - ಭಾರತದ ಹೆಮ್ಮೆಯ ಆಟ
ಭಾರತದ ಹಾಕಿ ಆಟ ಜಗತ್ತಿನ ಪ್ರಾಚೀನ ಆಟಗಳಲ್ಲೊಂದು. ಭಾರತದ ಹಾಕಿ ತಂಡ ಜಗತ್ತಿನ ಮುಂಚೂಣಿ ಹಾಕಿ ತಂಡಗಳಲ್ಲಿ ಒಂದಾಗಿದೆ. ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಅತ್ಯಂತ ಜಾಸ್ತಿ ಗೋಲುಗಳ ಅಂತರದಿಂದ ಜಯ ಸಾಧಿಸಿದ ದಾಖಲೆ ಇಂದಿಗೂ ಭಾರತದ ಹಾಕಿ ತಂಡದ ಹೆಸರಿನಲ್ಲಿದೆ - ೧೯೩೨ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ, ಭಾರತದ ಹಾಕಿ ತಂಡವು ಯುಎಸ್‌ಎ ಹಾಕಿ ತಂಡವನ್ನು ೨೪ - ೧ ಗೋಲುಗಳ ಅಂತರದಿಂದ ಸೋಲಿಸಿತ್ತು.  

ಭಾರತದ ಹಾಕಿ ತಂಡ, ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ಗಳಿಸಿದೆ. ೨೬ ಮೇ ೧೯೨೮ರಲ್ಲಿ ನೆದರ್-ಲ್ಯಾಂಡ್ ಹಾಕಿ ತಂಡವನ್ನು ಸೋಲಿಸುವ ಮೂಲಕ ಭಾರತದ ಹಾಕಿ ತಂಡ ಮೊದಲ ಒಲಿಂಪಿಕ್ ಚಿನ್ನದ ಪದಕ ಗಳಿಸಿತು. ಅನಂತರ ೧೯೬೦ರ ವರೆಗೆ ಭಾರತದ ಹಾಕಿ ತಂಡ ಜಗತ್ತಿನ ಹಾಕಿ ಸಾಮ್ರಾಟನಾಗಿ ಮೆರೆಯಿತು. ತದನಂತರ ಹಾಕಿ ಆಟದಲ್ಲಿ ವೇಗಕ್ಕೆ ಪ್ರಾಧಾನ್ಯತೆ ದೊರೆತ ಕಾರಣ ತನ್ನ ಪಾರಮ್ಯವನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಹಾಕಿ ತಂಡ ಸಫಲವಾಗಿಲ್ಲ.

ಫೋಟೋ ೧: ಹಿಮಾಚಲ ಪ್ರದೇಶದ ಚಾಯಿಲ್‌ನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣದ ನೋಟ

ಫೋಟೋ ೨: ಭಾರತದ ಹಾಕಿ ಆಟದ ಲಾಂಛನ