ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ.
ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳಿಗೆ ಸಹಾಯ ಮಾಡುವುದು ಮತ್ತು ಹಿಂಸಾಚಾರ ಭುಗಿಲೆದ್ದಾಗ ಅದನ್ನು ನಿಯಂತ್ರಿಸಲು ಸಹಕರಿಸುವುದು.

ಭಾರತದಲ್ಲಿ ಚುನಾವಣೆಗಳು ಶಾಂತಿಯುತವಾಗಿ ಜರಗಲು ಈ ಪಡೆ ಸಹಕರಿಸುತ್ತದೆ. ಶಾಂತಿ ಕಾಪಾಡುವ ವಿಶ್ವಸಂಸ್ಥೆಯ ಕಾರ್ಯಾಚರಣೆಗಳಿಗಾಗಿ ಈ ಪಡೆಯನ್ನು ವಿದೇಶಗಳಿಗೆ ಕಳಿಸಲಾಗುತ್ತದೆ. ಇದು ಭಾರತ ಸರಕಾರದ ಆಡಳಿತಕ್ಕೆ ಒಳಪಟ್ಟಿದೆ. ೨೨೦ ಬೆಟಾಲಿಯನುಗಳನ್ನು ಹೊಂದಿರುವ ಸಿ.ಆರ್.ಪಿ.ಎಫ್. ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ.

೮೪.ಸಿಯಾಚಿನ್ ಗ್ಲೇಸಿಯರ್ - ಜಗತ್ತಿನ ಅತಿ ದುರ್ಗಮ ಪ್ರದೇಶ
ಸಿಯಾಚಿನ್ ಗ್ಲೇಸಿಯರ್ - ಇದು ಜಗತ್ತಿನ ಅತಿ ಉದ್ದದ ಪರ್ವತ ಗ್ಲೇಸಿಯರ್. ಭಾರತ - ಪಾಕಿಸ್ಥಾನ ಗಡಿಯಲ್ಲಿ ಕಾರಕೋರಮ್ ಪ್ರದೇಶದಲ್ಲಿದೆ. ಇದರ ಉದ್ದ ೭೮ ಕಿಮೀ. ಇಲ್ಲಿ ಹಲವಾರು ತೊರೆಗಳಿವೆ. ನುಬ್ರಾ ನದಿ ಇಲ್ಲೇ ಉಗಮವಾಗುತ್ತದೆ. ಇದು ವಿಪರೀತ ಚಳಿ ಪ್ರದೇಶ - ಚಳಿಗಾಲದಲ್ಲಿ ಇಲ್ಲಿನ ಉಷ್ಣತೆ -೫೦ (ಮೈನಸ್ ಐವತ್ತು) ಡಿಗ್ರಿ ಸೆಲ್ಸಿಯಸ್ಸಿಗೆ ಕುಸಿಯಬಹುದು!

೧೯೮೪ರಿಂದ ಭಾರತ ಮತ್ತು ಪಾಕಿಸ್ಥಾನ ಈ ಪ್ರದೇಶದ ನಿಯಂತ್ರಣಕ್ಕಾಗಿ ಯುದ್ಧ ನಡೆಸುತ್ತಲೇ ಇವೆ. ಸಮುದ್ರಮಟ್ಟದಿಂದ ೬,೩೦೦ ಮೀ. ಎತ್ತರದಲ್ಲಿರುವ ಸಿಯಾಚಿನ್, ಜಗತ್ತಿನ ಅತ್ಯಂತ ಎತ್ತರದ ರಣರಂಗವಾಗಿದೆ.

ಫೋಟೋ ೧: ಸಿ.ಆರ್.ಪಿ.ಎಫ್. ಪಡೆಯ ಕವಾಯತು .... ಕೃಪೆ: ವಿಕಿಪೀಡಿಯಾ

ಫೋಟೋ ೨: ಸಿಯಾಚಿನ ಗ್ಲೇಸಿಯರ್ .... ಕೃಪೆ: ಈಸ್ ಮೈ ಟ್ರಿಪ್. ಕಾಮ್