ನಮ್ಮ ಹೆಮ್ಮೆಯ ಭಾರತ (ಭಾಗ 85 - 86)

ನಮ್ಮ ಹೆಮ್ಮೆಯ ಭಾರತ (ಭಾಗ 85 - 86)

೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ.
ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್ಯತೆ. ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಸ್ಥಾಪನೆಯಾದದ್ದು - ೧೨ ಜೂನ್ ೧೮೯೭ರಂದು, ಕೊಲ್ಕತಾದ ರೈಟರ್ಸ್ ಬಿಲ್ಡಿಂಗಿನಲ್ಲಿ ಎಂಬುದು ನಮ್ಮ ದೇಶದ ಹೆಗ್ಗಳಿಕೆ.

೮೬.ಜಗದ್ವಿಖ್ಯಾತ ಡಾರ್ಜಿಲಿಂಗ್ ಚಹಾ
ಡಾರ್ಜಿಲಿಂಗ್ ಚಹಾ ಜಗತ್ತಿನಲ್ಲೆಲ್ಲ ಹೆಸರುವಾಸಿ. ಚಹಾ ಗಿಡಗಳ ಮೂಲ ಭಾರತವಲ್ಲ; ಚೀನಾ. ಶತಮಾನಗಳಿಂದ ಚೀನಾದಲ್ಲಿ ಬೆಳೆಯುತ್ತಿದ್ದ ಚಹಾ ಬೀಜಗಳನ್ನು “ಕದ್ದು" ಭಾರತಕ್ಕೆ ಸುಮಾರು ೧೬೦ ವರುಷ ಮುಂಚೆ ಬ್ರಿಟಿಷರು ತಂದದ್ದು ರೋಚಕ ಕತೆ.

ಡಾಕ್ಟರ್ ಕ್ಯಾಂಪ್‌ಬೆಲ್ ಎಂಬ ಸರಕಾರಿ ಸರ್ಜನ್ ವರ್ಗಾವಣೆಯಾಗಿ ೧೮೪೧ರಲ್ಲಿ ಕಾಠ್ಮಂಡುವಿನಿಂದ ಡಾರ್ಜಿಲಿಂಗಿಗೆ ಬಂದಾಗ, ಕಳ್ಳಸಾಗಣೆ ಮೂಲಕ ಚೀನಾದಿಂದ ಚಹಾ ಬೀಜಗಳನ್ನು ತರಿಸುವುದರಲ್ಲಿ ಯಶಸ್ವಿಯಾದ. ಅವನ್ನು ಡಾರ್ಜಿಲಿಂಗಿನ ಬೆಟ್ಟಗಳಲ್ಲಿ ಬೆಳೆಸಿದ. ಚಹಾ ಉತ್ಪಾದನೆಯಲ್ಲಿ ಚೀನಾದ ಏಕಸ್ವಾಮಿತ್ವವನ್ನು ತೊಡೆದು ಹಾಕಲಿಕ್ಕಾಗಿ ಬ್ರಿಟಿಷರು ಹೂಡಿದ ತಂತ್ರ ಕೊನೆಗೂ ಯಶಸ್ವಿಯಾಯಿತು. ಅನಂತರ ಅಸ್ಸಾಮಿನ ಬೆಟ್ಟಗಳಲ್ಲಿ ಚಹಾ ತೋಟಗಳನ್ನು ಬೆಳೆಸಿದ್ದು ಚರಿತ್ರೆ.

ನಮ್ಮ ದೇಶದ ಜನಸಾಮಾನ್ಯರು ಚಹಾ ಆಸ್ವಾದಿಸಲು ಸಾಧ್ಯವಾದದ್ದು ೧೯೫೦ರ ನಂತರ. ಅಲ್ಲಿಯ ವರೆಗೆ ಅದು ಬ್ರಿಟಿಷರು ಮತ್ತು ಕೆಲವೇ ಗಣ್ಯರಿಗೆ ಮಾತ್ರ ಲಭ್ಯವಿತ್ತು.

ಈಗ ಚಹಾ ತೋಟಗಳು ನೀಲಗಿರಿ ಹಾಗೂ ಚಿಕ್ಕಮಗಳೂರಿನ ಬೆಟ್ಟಗಳಲ್ಲೂ ಇವೆ. ಆದರೆ ಡಾರ್ಜಿಲಿಂಗ್ ಚಹಾದ ವಿಶೇಷ ಕಂಪು ಬೇರೆ ಯಾವುದೇ ಸ್ಥಳದಲ್ಲಿ ಬೆಳೆಯುವ ಚಹಾಕ್ಕೆ ಇಲ್ಲ. ಆದ್ದರಿಂದಲೇ ಮಿತವಾದ ಪರಿಮಾಣದಲ್ಲಿ ಉತ್ಪಾದನೆಯಾಗುವ ಡಾರ್ಜಿಲಿಂಗ್ ಚಹಾ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತದೆ. ಅಲ್ಲಿನ ಚಹಾದ ವಾರ್ಷಿಕ ಉತ್ಪಾದನೆ ಸುಮಾರು ೧೦,೦೦೦ ಟನ್. ಸ್ಥಳೀಯ ಬೇಡಿಕೆ ಪೂರೈಸಿ ರಫ್ತಾಗುವುದು ಕೇವಲ ೬,೦೦೦ ಟನ್. ಆದರೆ, ಡಾರ್ಜಿಲಿಂಗ್ ಚಹಾದ ಹೆಸರಿನಲ್ಲಿ ಜಗತ್ತಿನಲ್ಲಿ ಮಾರಾಟವಾಗುವ ಚಹಾದ ಒಟ್ಟು ಪರಿಮಾಣ ೪೦,೦೦೦ ಟನ್!

ಈ ಅವಾಂತರವನ್ನು ತಡೆಯಲಿಕ್ಕಾಗಿ, ಭಾರತದ ಚಹಾ ಮಂಡಲಿ ಡಾರ್ಜಿಲಿಂಗ್ ಚಹಾಕ್ಕೆ ಭೌಗೋಲಿಕ ಸೂಚಕ (ಜಿ.ಐ.) ಛಾಪು ಪಡೆಯಿತು. ಈ ಛಾಪು ಪಡೆದ ಭಾರತದ ಮೊತ್ತ ಮೊದಲ ಕೃಷಿ ಉತ್ಪನ್ನ ಡಾರ್ಜಿಲಿಂಗ್ ಚಹಾ. ಇದರಿಂದಾಗಿ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಾಲ್ಕು ಸಬ್-ಡಿವಿಜನಿನ (ಸದಾರ್, ಕಾಲಿಮ್‌ಪೋಂಗ್, ಕುರ್ಸೆಯೋಂಗ್ ಮತ್ತು ಸಿಲಿಗುರಿ) ಬೆಟ್ಟಗಳಲ್ಲಿರುವ ೮೭ ಚಹಾ ಎಸ್ಟೇಟುಗಳಲ್ಲಿ ಬೆಳೆಯುವ ಚಹಾಕ್ಕೆ ಮಾತ್ರ “ಡಾರ್ಜಿಲಿಂಗ್ ಚಹಾ” ಎಂಬ ಲೇಬಲ್ ನೀಡುವುದು ಕಾನೂನುಸಮ್ಮತ.

ಫೋಟೋ ೧: ಕೊಲ್ಕೊತಾದ ರೈಟರ್ಸ್ ಬಿಲ್ಡಿಂಗ್

ಫೋಟೋ ೨: ಡಾರ್ಜಿಲಿಂಗಿನ ಚಹಾ ತೋಟ