ನಮ್ಮ ಹೆಮ್ಮೆಯ ಭಾರತ (ಭಾಗ 88)

ನಮ್ಮ ಹೆಮ್ಮೆಯ ಭಾರತ (ಭಾಗ 88)

೮೮.ಅಜಂತಾ ಗುಹೆಗಳ ಅದ್ಭುತ ಶಿಲ್ಪಗಳು ಮತ್ತು ಚಿತ್ರಗಳು
ಬೌದ್ಧ ಧರ್ಮದ ಅಪೂರ್ವ ಸ್ಮಾರಕಗಳಾಗಿರುವ ಅಜಂತಾ ಗುಹೆಗಳು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಸೇರಿವೆ. ಇಲ್ಲಿ ಮನಸೆಳೆಯುವ ಶಿಲ್ಪಗಳೂ, ವಿವಿಧ ಬಣ್ಣಗಳಿಂದ ರಚಿಸಿರುವ ಅಧ್ಬುತ ಚಿತ್ರಗಳೂ ಇವೆ. ಮಹಾರಾಷ್ಟ್ರದ ಜೌರಂಗಾಬಾದಿನಿಂದ ೧೦೦ ಕಿಮೀ ದೂರದಲ್ಲಿ ೮,೨೪೨ ಹೆಕ್ಟೇರ್ ಪ್ರದೇಶದಲ್ಲಿ ಇವು ಹರಡಿಕೊಂಡಿವೆ.

ಇಲ್ಲಿನ ಗುಹೆಗಳು ಪತ್ತೆಯಾದದ್ದು ಆಕಸ್ಮಿಕ. ೧೮೧೯ರಲ್ಲಿ ಬ್ರಿಟಿಷ್ ಸೈನಿಕರು ಬೇಟೆಯಾಡುತ್ತಿದ್ದಾಗ ಇವು ಕಾಣಿಸಿದವು. ಈ ಗುಹೆಗಳಲ್ಲಿ ಕ್ರಿ.ಪೂ.೨ನೇ ಶತಮಾನದಿಂದ ಕ್ರಿ.ಶ. ೪೮೦ ನಡುವೆ ಶಿಲ್ಪಗಳನ್ನೂ ಚಿತ್ರಗಳನ್ನೂ ರಚಿಸಲಾಗಿದೆ ಎನ್ನುತ್ತಾರೆ ಇತಿಹಾಸಕಾರರು. ಅನಂತರ ಅವುಗಳ ಕೆಲವು ಭಾಗಗಳನ್ನು ನಾಶಪಡಿಸಲಾಯಿತು.

ಈ ಗುಹೆಗಳಲ್ಲಿ ವಿಭಿನ್ನ ಬೌದ್ಧ ಪರಂಪರೆಗಳ ಪ್ರಾಚೀನ ಪಾಠಶಾಲೆಗಳೂ ಪ್ರಾರ್ಥನಾ ಭವನಗಳೂ ಇವೆ. ಅಲ್ಲಿದ್ದ ಅಗಾಧ ಶಿಲಾರಾಶಿಯಲ್ಲಿ ಇವನ್ನೆಲ್ಲ ಕೊರೆದುಕೊರೆದು ನಿರ್ಮಿಸಿರುವುದು ನೋಡುಗರನ್ನು ಬೆಕ್ಕಸಬೆರಗಾಗಿಸುತ್ತದೆ.

ಗುಹೆಗಳ ಪ್ರವೇಶದಲ್ಲಿರುವ ಮತ್ತು ಒಳಗಿನ ಸ್ತಂಭಗಳಲ್ಲಿರುವ ಶಿಲ್ಪಕಲೆ ಜಗತ್ತಿನ ಶ್ರೇಷ್ಠ ಶಿಲ್ಪಕಲೆಗಳಲ್ಲೊಂದು ಎಂದು ದಾಖಲಾಗಿದೆ. ಅದಲ್ಲದೆ, ಗುಹೆಗಳ ಒಳಗೆ ಗೋಡೆಗಳಲ್ಲಿ ಮತ್ತು ಚಾವಣಿಗಳಲ್ಲಿ ಚಿತ್ರಿಸಿರುವ ಅಪೂರ್ವ ವರ್ಣಚಿತ್ರಗಳು, ಆ ಕಾಲದ ಭಾರತೀಯ ಚಿತ್ರಕಲೆಯ ಉತ್ತುಂಗತೆಯನ್ನು ಜಗತ್ತಿಗೆ ಸಾರುತ್ತವೆ.ಈ ಚಿತ್ರಗಳಲ್ಲಿ ಗೌತಮ ಬುದ್ಧನ ಪೂರ್ವಜನ್ಮದ ವಿವರಗಳನ್ನು ಮತ್ತು ಆರ್ಯಸುರನ ಜಾತಕಮಾಲಾದ ಜಾತಕ ಕತೆಗಳ ಹಲವು ಪ್ರಸಂಗಗಳನ್ನು ಚಿತ್ರಿಸಲಾಗಿದೆ. ಇವನ್ನೆಲ್ಲ ವಿವರವಾಗಿ ಮತ್ತು ಸೂಕ್ಷ್ಮವಾಗಿ ನೋಡಲು ಒಂದು ತಿಂಗಳ ಅವಧಿಯೂ ಸಾಲದು.

ಮಧ್ಯಕಾಲೀನ ಚೀನೀ-ಬೌದ್ಧ ಯಾತ್ರಿಗಳ ಪ್ರವಾಸ ಕಥನಗಳಲ್ಲಿ ಮತ್ತು ೧೭ನೇ ಶತಮಾನದ ಮೊಘಲ್ ಸಾಮ್ರಾಟ ಅಕ್ಬರನ ಅಧಿಕಾರಿಯೊಬ್ಬನ ನೆನಪಿನ ಸಂಪುಟದಲ್ಲಿ ಅಜಂತಾ ಗುಹೆಗಳ ಬಗ್ಗೆ ದಾಖಲಿಸಲಾಗಿದೆ.

ಅಜಂತಾದಿಂದ ೧೦೦ ಕಿಮೀ ದೂರದಲ್ಲಿರುವ ಎಲ್ಲೋರಾ ಗುಹೆಗಳಲ್ಲಿಯೂ ಇಂತಹದೇ ಸ್ಮಾರಕಗಳಿವೆ. ಅಲ್ಲಿ ಹಿಂದೂ, ಜೈನ ಮತ್ತು ಬೌದ್ಧ ಪರಂಪರೆಯ ಗುಹೆಗಳಿವೆ.

ಫೋಟೋ ೧) ಚೈತ್ಯ ಸಭಾಂಗಣ (೧೯ನೇ ಗುಹೆ)

ಫೋಟೋ ೨) ಬೋಧಿಸತ್ವ-ಪದ್ಮಪಾಣಿ ಚಿತ್ರ (ಒಂದನೇ ಗುಹೆ) 

ಫೋಟೋ ೩) ೨೪ನೆಯ ಗುಹೆಯ ಕೆತ್ತನೆ