ನಮ್ಮ ಹೆಮ್ಮೆಯ ಭಾರತ (ಭಾಗ 90)

ನಮ್ಮ ಹೆಮ್ಮೆಯ ಭಾರತ (ಭಾಗ 90)

೯೦.ವಿಶ್ವವಿಖ್ಯಾತ ಜೋಗ ಜಲಪಾತ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ವಿಶ್ವವಿಖ್ಯಾತ. ೮೩೦ ಅಡಿ (೨೫೩ ಮೀ) ಎತ್ತರದಿಂದ, ರಾಜ, ರೋರರ್, ರಾಕೆಟ್ ಮತ್ತು ಲೇಡಿ ಎಂಬ ಹೆಸರಿನ ನಾಲ್ಕು ಧಾರೆಗಳಾಗಿ ಜೋಗದ ಗುಂಡಿಗೆ ಶರಾವತಿ ನದಿ ಧುಮುಕುವ ದೃಶ್ಯ ಅದ್ಭುತ. ಬೆಂಗಳೂರಿನಿಂದ ೩೩೫ ಕಿಮೀ ಮತ್ತು ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲಿದೆ ಜೋಗ.

ಅದೇನಿದ್ದರೂ, ಮಳೆಗಾಲದ ಜುಲೈ - ಆಗಸ್ಟ್ ತಿಂಗಳಲ್ಲಿ, ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತುಂಬಿದಾಗ, ಅಣೆಕಟ್ಟಿನಿಂದ ನೀರು ಹೊರ ಹರಿಯಲು ಬಿಟ್ಟರೆ ಮಾತ್ರ ಜೋಗ ಜಲಪಾತ ನೋಡುವ ಭಾಗ್ಯ ನಮ್ಮದು. ಉಳಿದ ತಿಂಗಳುಗಳಲ್ಲಿ, ಅಣೆಕಟ್ಟಿನಿಂದ ನೀರು ಹೊರ ಬಿಡದಿದ್ದಾಗ, ಅಲ್ಲಿ ಕಾಣಿಸುವುದು ಕೇವಲ ಬೆಟ್ಟ. ಜೋಗದಲ್ಲಿ ಧುಮ್ಮಿಕ್ಕುವ ಶರಾವತಿ ನದಿ ಮುಂದಕ್ಕೆ ಹರಿದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುತ್ತದೆ.

ಲಿಂಗನಮಕ್ಕಿ ಜಲಾಶಯದಿಂದಾಗಿ, ಮಹಾತ್ಮಾ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವು ೧೯೬೦ರಿಂದ ಕಾರ್ಯಾಚರಿಸುತ್ತಿದೆ (ಸಾಮರ್ಥ್ಯ ೧೨೦ ಮೆಗಾವಾಟ್).

ಕನ್ನಡದ ಹೆಸರುವಾಸಿ ಕವಿ ದಿವಂಗತ ಕೆ.ಎಸ್. ನಿಸಾರ್ ಅಹಮದ್ ಅವರ ಸುಪ್ರಸಿದ್ಧ ಕವನ “ನಿತ್ಯೋತ್ಸವ"ದ ಆರಂಭದ ಪದಗಳೇ “ಜೋಗದ ಸಿರಿ ಬೆಳಕಿನಲ್ಲಿ”. ಜೋಗ ಜಲಪಾತದಲ್ಲಿ ಹರಿಯುವ ನೀರಿನ ಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸಿದ ಕಾರಣ ಕರ್ನಾಟಕ ರಾಜ್ಯಕ್ಕೆ “ಸಿರಿ ಬೆಳಕು" ಲಭ್ಯ; ಅದರಿಂದಾಗಿ "ನಿತ್ಯೋತ್ಸವ" ಎಂಬುದು ಈ ಪದಗಳ ಭಾವ.  

ಫೋಟೋ ೧: ಜೋಗ ಜಲಪಾತದಲ್ಲಿ ಧುಮುಕುವ ನೀರರಾಶಿ

ಫೋಟೋ ೨: ಜೋಗದಲ್ಲಿ ನೀರು ಧುಮುಕದಿದ್ದಾಗ ಕಾಣುವ ಬೆಟ್ಟ