ನಮ್ಮ ಹೆಮ್ಮೆಯ ಭಾರತ (ಭಾಗ 92)
೯೨.ಹಂಪಿ - ವಿಜಯನಗರ ಸಾಮ್ರಾಜ್ಯದ ರಾಜಧಾನಿ
ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಹಾಗೂ ಜನಪರ ಆಡಳಿತದ ಸಾರ್ವಕಾಲಿಕ ಸಾಕ್ಷಿ ಕರ್ನಾಟಕದ ಹಂಪಿ. ಇದೀಗ ಜಗತ್ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ. ಬೆಂಗಳೂರಿನಿಂದ ೩೭೬ ಕಿಮೀ ಮತ್ತು ಹುಬ್ಬಳ್ಳಿಯಿಂದ ೧೬೫ ಕಿಮೀ ದೂರದಲ್ಲಿದೆ.
ಈಗ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ, ೧೪ನೆಯ ಶತಮಾನದಲ್ಲಿ ಸಮೃದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಪರ್ಷಿಯನ್ ಮತ್ತು ಯುರೋಪಿಯನ್ (ಮುಖ್ಯವಾಗಿ ಪೋರ್ಚುಗೀಸ್) ಪ್ರವಾಸಿಗಳು ಬರೆದಿರುವ ಪ್ರವಾಸ ಕಥನಗಳ ಅನುಸಾರ, ಇದು ಸಂಪತ್ತು ತುಂಬಿ ತುಳುಕುತ್ತಿದ್ದ ಮಹಾನಗರವಾಗಿತ್ತು. ಪರ್ಷಿಯಾ ಮತ್ತು ಪೋರ್ಚುಗಲ್ ವರ್ತಕರನ್ನು ಆಕರ್ಷಿಸುತ್ತಿದ್ದ ಹಂಪಿ, ಆಗ ಬಹುಶಃ ಭಾರತದ ಅತ್ಯಂತ ಸಂಪದ್ಭರಿತ ನಗರವಾಗಿತ್ತು. ಕ್ರಿ.ಶ. ೧೫೦೦ರಲ್ಲಿ ಚೀನಾದ ಬೀಜಿಂಗಿನ ನಂತರ, ಜಗತ್ತಿನ ೨ನೇ ಅತ್ಯಂತ ದೊಡ್ಡ ನಗರವಾಗಿ ರಾರಾಜಿಸುತ್ತಿತ್ತು.
ಆದರೆ, ೧೫೬೫ರಲ್ಲಿ ಕೆಲವು ಮುಸ್ಲಿಂ ಸುಲ್ತಾನರ ಸಂಯುಕ್ತ ಸೈನ್ಯವು ವಿಜಯನಗರ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿ, ರಾಜಧಾನು ಹಂಪಿಗೆ ನುಗ್ಗಿ, ಅಲ್ಲಿನ ಮನೆಮಠಗಳನ್ನು ಲೂಟಿ ಮಾಡಿತು; ಅಲ್ಲಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳನ್ನು ಹಾಳುಗೆಡವಿತು. ಅನಂತರ ಪಾಳುಬಿದ್ದ ಊರಾಯಿತು ಹಂಪಿ.
ಹಂಪಿ ಎನ್ನುವ ಸ್ಥಳದ ಬಗ್ಗೆ ಪಂಪಾದೇವಿ ತೀರ್ಥಕ್ಷೇತ್ರ ಎಂಬ ಹೆಸರಿನಲ್ಲಿ ರಾಮಾಯಣ ಮತ್ತು ಹಿಂದೂ ಪುರಾಣಗಳಲ್ಲಿಯೂ ಉಲ್ಲೇಖವಿದೆ.
ಹಂಪಿಯ ವಿಸ್ತಾರ ೪,೧೮೭ ಹೆಕ್ಟೇರ್. ತುಂಗಭದ್ರಾ ನದಿಯ ಹತ್ತಿರವಿರುವ ಹಂಪಿಯಲ್ಲಿ ಇಂದಿಗೂ ಹೆಜ್ಜೆಹೆಜ್ಜೆಗೆ ಚಾರಿತ್ರಿಕ ಸ್ಮಾರಕಗಳಿವೆ (ಒಟ್ಟು ೧,೬೦೦). ಅವುಗಳಲ್ಲಿ ಮುಖ್ಯವಾದವು: ವಿರೂಪಾಕ್ಷ ದೇವಸ್ಥಾನ, ಪ್ರಾಚಿನ ಮಾರುಕಟ್ಟೆ ಕೇಂದ್ರಗಳು, ಕೃಷ್ಣ ದೇವಸ್ಥಾನ, ಉಗ್ರನರಸಿಂಹ ಮೂರ್ತಿ, ನೀರಿನಿಂದ ಆವರಿಸಲ್ಪಟ್ಟ ಶಿವಲಿಂಗ, ವಿಠಲ ದೇವಸ್ಥಾನ, ಹಜಾರ ರಾಮ ದೇವಸ್ಥಾನ, ಅಚ್ಚುತರಾಯ ದೇವಸ್ಥಾನ, ಕೋದಂಡರಾಮ ದೇವಸ್ಥಾನ, ಪಟ್ಟಾಭಿರಾಮ ದೇವಸ್ಥಾನ, ಮಹಾನವಮಿ ದಿಬ್ಬ, ಕಲ್ಲುಗಳನ್ನು ಜೋಡಿಸಿ ಕಟ್ಟಿದ ಬೃಹತ್ ಕೆರೆಗಳು, ಆನೆಲಾಯ, ಹೇಮಕೂಟ ಬೆಟ್ಟದ ಸ್ಮಾರಕಗಳು.
ಫೋಟೋ ೧: ಜಗತ್ಪ್ರಸಿದ್ಧ ಹಂಪಿ ..... ಫೋಟೋ ಕೃಪೆ: ವಿಕಿಪಿಡಿಯ
ಫೋಟೋ ೨: ವಿಜಯ ವಿಠಲ ದೇವಸ್ಥಾನ, ಹಂಪಿ
ಫೋಟೋ ೩: ಉಗ್ರ ನರಸಿಂಹ ವಿಗ್ರಹ, ಹಂಪಿ
ಫೋಟೋ ೪: ಶಿಲಾ ರಥ, ಹಂಪಿ