ನಮ್ಮ ಹೆಮ್ಮೆಯ ಭಾರತ (ಭಾಗ 93)

ನಮ್ಮ ಹೆಮ್ಮೆಯ ಭಾರತ (ಭಾಗ 93)

೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್
ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ ಜೀವಂತ ಎನಿಸುವಂತಿದೆ!
ಆರೂವರೆ ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಉತ್ಸವ್ ರಾಕ್ ಗಾರ್ಡನ್ ಕಲಾಕಾರ (ದಿವಂಗತ) ಟಿ.ಬಿ. ಸೊಲಬಕ್ಕನವರ್ ಅವರ ಕನಸಿನ ಕೂಸು. "ಒಬ್ಬ ಕಲಾವಿದ ಏನು ಮಾಡಬಹುದು?” ಎಂಬುದನ್ನು  ನಾವಲ್ಲಿ ಕಣ್ಣಾರೆ ಕಾಣಬಹುದು. ಒಂದು ಕಾಲದಲ್ಲಿ ಸೊಲಬಕ್ಕನವರ್ ಬೆಂಗಳೂರಿನಲ್ಲಿ ಮೊಡರ್ನ ಆರ್ಟ್ ಮಾಡ್ತಾ ಇದ್ದರು. ಆದರೆ ಅವರ ಕಲೆ ನೋಡಲು ಬರುತ್ತಿದ್ದವರು ಬೆರಳೆಣಿಕೆಯ ಜನರು. ಇದು ಸೊಲಬಕ್ಕನವರನ್ನು ಆಳವಾದ ಚಿಂತನೆಗೆ ಹಚ್ಚಿತು. ಕೊನೆಗೆ, ಸೊಲಬಕ್ಕನವರ್ ತನ್ನೂರಿಗೆ ಬಂದರು. ಅಲ್ಲಿನ ದಿಬ್ಬದಲ್ಲಿ ಎತ್ತುಗಳ ಕಲಾಕೃತಿ ಮಾಡಿ ನಿಲ್ಲಿಸಿದ್ರು. ಅದನ್ನು ನೋಡಲು ಜನ ಬರಲು ಶುರು ಮಾಡಿದ್ರು. ಅನಂತರ ಅವರು “ದಾಸನೂರು ಸಂಸ್ಥೆ” ಕಟ್ಟಿದರು. ೧೯೯೦ರಿಂದ ಶುರು ಮಾಡಿ ಹಂತಹಂತವಾಗಿ ಉತ್ಸವ್ ರಾಕ್ ಗಾರ್ಡನ್ ರೂಪಿಸಿದರು. ಈಗ ಮೂರು ಸಾವಿರ ಕಲಾವಿದರು ಬೇರೆಬೇರೆ ಊರುಗಳಲ್ಲಿ ದಾಸನೂರು ಸಂಸ್ಥೆ ವತಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಇಲ್ಲಿರುವಂತಹ ಶಿಲ್ಪಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದನ್ನೆಲ್ಲ ಕಣ್ಣಾರೆ ಕಂಡ ನಂತರವಾದರೂ ನಾವೆಲ್ಲ ಸಾಂಪ್ರದಾಯಿಕ ಶಿಕ್ಷಣವೇ ಮುಖ್ಯ ಎಂಬ ಭ್ರಾಂತಿ ಬಿಟ್ಟುಬಿಡಬೇಕು.

ಇಂತಹ ಅಪೂರ್ವ ಸಮಕಾಲೀನ ಶಿಲ್ಪಸಂಗ್ರಹಾಲಯ ರೂಪಿಸುವ ಕಲ್ಪನೆ ಸೊಲಬಕ್ಕನವರ್ ಅವರಲ್ಲಿ ಹೇಗೆ ಮೂಡಿ ಬಂತು? ಈ ಅದ್ಭುತ ಶಿಲ್ಪಕಲಾಲೋಕ ಅವರ ಕಲ್ಪನೆಯಂತೆ ಬೆಳೆದು ಬಂದದ್ದು ಹೇಗೆ? ಇಂತಹ ಪ್ರಶ್ನೆಗಳಿಗೆ ಸೊಲಬಕ್ಕನವರ್ ಖುದ್ದಾಗಿ ನೀಡಿದ ಉತ್ತರಗಳು ಹೀಗಿವೆ: “ಆಧುನಿಕ ಕಲೆ ಸಮಾಜದ ಮಧ್ಯಕ್ಕೆ ಬಂದಿಲ್ಲ. ಅದೊಂದು ಕಮರ್ಷಿಯಲ್ ವಿಷಯ ಆಗಿದೆ. ಮಹಾನಗರಗಳ ಆರ್ಟ್ ಗ್ಯಾಲರಿಗಳಿಗೆ ಯಾರು ಬರ್ತಾರೆ? ಆರ್ಟ್ ಐಟಂಗಳನ್ನು ಖರೀದಿ ಮಾಡೋರು ಬರ್ತಾರೆ. ಹಾಗಾಗಿ, ಜನರಿಗೆ ಕಲಾವಿದರ ಪರಿಚಯ ಆಗಲ್ಲ. ಅಂದ್ ಮೇಲೆ ಜನರಿಗೆ ಕಲೆಯ ಪರಿಚಯ ಹೆಂಗಾಗ್ತದೆ?

ಪಕ್ಕದಲ್ಲಿದ್ದ ಕಲಾಕೃತಿಯನ್ನು ತೋರಿಸುತ್ತಾ ಅವರು ಹೀಗೆಂದಿದ್ದರು: “ನೋಡಿ, ಇದೊಂದು ಕಟ್ಟಿಗೆ ತುಂಡ್ ಆಗಿತ್ತು. ಕಲಾವಿದ ಅದ್ರಲ್ಲೊಂದು ಕಲಾಕೃತಿ ಸೃಷ್ಟಿ ಮಾಡಿದ್ದಾನೆ. ಅದು ಅವನ ದೃಷ್ಠಿ. ನಮ್ಮ ಮನೆ ಹ್ಯಾಗಿದೆ ನೋಡಿ. ಇದು ಎರಡು ಲಕ್ಷ ರೂಪಾಯಿ ಖರ್ಚಿನಲ್ಲಿ, ಕಟ್ಟಿಗೆ ಮತ್ತು ಇಟ್ಟಿಗೆ ವೇಸ್ಟಿನಿಂದ (waste) ಕಟ್ಟಿದ್ದು. ಇದರಲ್ಲಿದೆ ಕ್ರಿಯೇಟಿವಿಟಿ. ಇದು ನಮ್ಮ ಸೃಷ್ಠಿ.

ದಾವಣಗೆರೆ ಸರಕಾರಿ ಕಲಾ ಕಾಲೇಜಿನಲ್ಲಿ ನಾನು ಶಿಕ್ಷಕನಾಗಿದ್ದೆ. ಅಲ್ಲಿ ಕಾಲೇಜಿನ ೨೨ ಎಕ್ರೆ ಜಮೀನಿನಲ್ಲಿ ಇದ್ದವರು ೨೦೦ ಕಲಾವಿದರು ಮತ್ತು ೩೦ ಸಿಬ್ಬಂದಿ. ಅಲ್ಲಿ ನಾನು ೨೦ ವರುಷ ಇದ್ದೆ; ಆದರೆ ಆ ೨೦ ವರುಷದಲ್ಲಿ ಒಂದೇ ಒಂದು ಕಲಾಕೃತಿ ಮಾಡಲು ನನಗೆ ಸಾಧ್ಯ ಆಗಲಿಲ್ಲ. ಆದರೆ, ಇಲ್ಲಿಗೆ ಬಂದ ನಂತರ ಸಾವಿರಾರು ಕಲಾಕೃತಿಗಳನ್ನು ರಚಿಸಲು ಸಾಧ್ಯವಾಯಿತು. ಇವನ್ನು ನೋಡಲಿಕ್ಕಾಗಿ ದಿನದಿನವೂ ಸಾವಿರಾರು ಜನಸಾಮಾನ್ಯರು ಬರುವಂತೆ ಮಾಡಲಿಕ್ಕೂ ಸಾಧ್ಯವಾಯಿತು. ಕಲೆಯ ಮೂಲಕ ನೂರಾರು ಜನರಿಗೆ ಜೀವನೋಪಾಯ ಕಲ್ಪಿಸಲಿಕ್ಕೂ ಸಾಧ್ಯವಾಯಿತು.”

ಈಗ, ಉತ್ಸವ್ ರಾಕ್ ಗಾರ್ಡನ್ “ಕಲೆಯನ್ನು ಜನಸಾಮಾನ್ಯರಿಗೆ ತಲಪಿಸುವುದು ಹೇಗೆ?’ ಮತ್ತು “ಕಲೆಯ ಮೂಲಕ ಸಾವಿರಾರು ಉದ್ಯೋಗವಕಾಶಗಳನ್ನು ಸೃಷ್ಟಿಸುವುದು ಹೇಗೆ?" ಎಂಬುದಕ್ಕೆ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ.

ಫೋಟೋ ೧: ಉತ್ಸವ್ ರಾಕ್ ಗಾರ್ಡನಿನ ರೂವಾರಿ ದಿವಂಗತ ಟಿ.ಬಿ. ಸೊಲಬಕ್ಕನವರ್

ಫೋಟೋ ೨, ೩ ಮತ್ತು ೪: ಉತ್ಸವ್ ರಾಕ್ ಗಾರ್ಡನಿನ ಕಲಾಕೃತಿಗಳು