ನಮ್ಮ ಹೆಮ್ಮೆಯ ಭಾರತ (ಭಾಗ 94)

ನಮ್ಮ ಹೆಮ್ಮೆಯ ಭಾರತ (ಭಾಗ 94)

೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ
“ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು. ಇದೀಗ ೪೦ ಎಕರೆಯಲ್ಲಿ ವ್ಯಾಪಿಸಿ, ಪ್ರತಿ ವರುಷ ಲಕ್ಷಗಟ್ಟಲೆ ಪ್ರವಾಸಿಗಳನ್ನು ಸ್ವಾಗತಿಸುತ್ತಿದೆ. ಇಲ್ಲಿರುವ ಪ್ರತಿಯೊಂದು ಕಲಾಕೃತಿಯೂ ಕೈಗಾರಿಕೆಗಳ ಅಥವಾ ಮನೆಗಳ ತ್ಯಾಜ್ಯ ವಸ್ತುಗಳಿಂದಲೇ ರೂಪಿಸಲ್ಪಟ್ಟಿದೆ ಎಂಬುದೇ ಇದರ ವಿಶೇಷ.

ಕಸವಾಗಿ ಎಸೆದ ಬಾಟಲಿಗಳು; ಗಾಜಿನ ಚೂರುಗಳು; ಬಳೆಗಳ, ನೆಲಕ್ಕೆ ಹಾಸುವ ಟೈಲುಗಳ, ಸೆರಾಮಿಕ್ ಕುಂಡಗಳ, ಸಿಂಕುಗಳ, ಪೈಪುಗಳ ತುಂಡುಗಳು; ವಿದ್ಯುತ್ ಉಪಕರಣಗಳ ಭಾಗಗಳು - ಎಲ್ಲೆಲ್ಲೋ ಕಸವಾಗಿ ಬಿದ್ದಿರಬೇಕಾಗಿದ್ದ ಈ ತ್ಯಾಜ್ಯ ವಸ್ತುಗಳು ಇಲ್ಲಿ ಚಂದವಾಗಿ ಜೋಡಿಸಲ್ಪಟ್ಟು, ಮನಮೋಹಕ ಕಲಾಕೃತಿಗಳಾಗಿ ಎದ್ದು ನಿಂತಿವೆ. ಉದ್ಯಾನದೊಳಗೆ ಸುತ್ತಿಸುತ್ತಿ ಸಾಗುವ ಕಾಲುಹಾದಿಗಳ ಅಕ್ಕಪಕ್ಕದಲ್ಲಿ ಈ ಕಲಾಕೃತಿಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ. ಅಲ್ಲಲ್ಲಿ ನಿರ್ಮಿಸಿರುವ ಪುಟ್ಟ ಜಲಪಾತಗಳು, ಆಯಾ ಸ್ಥಳಗಳಿಗೆ ಪ್ರಾಕೃತಿಕ ಸೊಬಗು ಒದಗಿಸಿವೆ.

ರಾಕ್ ಗಾರ್ಡನಿನಲ್ಲಿ ಒಂದು ಗೊಂಬೆಗಳ ಸಂಗ್ರಹಾಲಯವೂ ಇದೆ. ನೆಕ್ ಚಂದ್ ಹರಿದ ಬಟ್ಟೆ ಚೂರುಗಳಿಂದ ೧೯೭೦ರಲ್ಲಿ ರಚಿಸಿದ್ದ ೨೦೦ ಗೊಂಬೆಗಳನ್ನು ಅಲ್ಲಿ ರಕ್ಷಿಸಿಡಲಾಗಿದೆ.

ಚಂಡಿಘಡದ ಸುಖ್‌ನಾ ಸರೋವರದ ಹತ್ತಿರವಿರುವ ಗಿಡಮರಗಳಿದ್ದ ಪ್ರದೇಶವನ್ನು ೧೯೦೨ರಲ್ಲಿ ರಕ್ಷಿತ ಪ್ರದೇಶವೆಂದು ಸರಕಾರ ಘೋಷಿಸಿತ್ತು. ಅಲ್ಲಿಗೆ ಊರಿನ ತ್ಯಾಜ್ಯವಸ್ತುಗಳನ್ನು ಗುಟ್ಟಾಗಿ ಒಯ್ದು, ಅವುಗಳಿಂದ ತನ್ನ ಕಲ್ಪನೆಗೆ ಅನುಸಾರವಾಗಿ ಕಲಾಕೃತಿಗಳನ್ನು ರಚಿಸತೊಡಗಿದರು ನೆಕ್ ಚಂದ್. ಅವರ ಈ ಕೆಲಸ ೧೯೫೭ರಿಂದ ೧೯೭೬ರ ವರೆಗೆ ಗುಟ್ಟಾಗಿಯೇ ನಡೆಯುತ್ತಿತ್ತು. ಆಗಲೇ ಇದು ೧೨ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿತ್ತು. ೧೯೭೬ರಲ್ಲಿ ಇದು ಬಹಿರಂಗವಾದಾಗ ಭಾರೀ ವಿರೋಧ ವ್ಯಕ್ತವಾಗಿ, ಇದನ್ನು ಧ್ವಂಸ ಮಾಡಬೇಕೆಂಬ ಒತ್ತಾಯವೂ ಮೂಡಿಬಂತು. ಅದೃಷ್ಟವಶಾತ್, ನೆಕ್ ಚಂದ್ ಅವರ ಪರವಾಗಿ ಪ್ರಬಲ ಸಾರ್ವಜನಿಕ ಅಭಿಪ್ರಾಯ ರೂಪುಗೊಂಡಿತು. ಹಾಗಾಗಿ ಇದನ್ನು ೧೯೭೬ರಲ್ಲಿ ಸಾರ್ವಜನಿಕ ಸ್ಥಳವೆಂದು ಘೋಷಿಸಲಾಯಿತು. ಸ್ಥಳೀಯ ಆಡಳಿತವು, ರಾಕ್ ಗಾರ್ಡನಿನ ಮೇಲುಸ್ತುವಾರಿಗೆ ನೆಕ್ ಚಂದ್ ಅವರನ್ನೇ ನೇಮಿಸಿ, ಅವರಿಗೆ ೫೦ ಕೆಲಸಗಾರರನ್ನೂ ಒದಗಿಸಿತು.

ವಿದೇಶಗಳಲ್ಲಿ ಉಪನ್ಯಾಸ ನೀಡಲಿಕ್ಕಾಗಿ ೧೯೯೬ರಲ್ಲಿ ನೆಕ್ ಚಂದ್ ಹೋದಾಗ, ನಮ್ಮ ದೇಶದ ಹೆಮ್ಮೆಯಾದ ಈ ಉದ್ಯಾನಕ್ಕೆ ಧಾಳಿ ಮಾಡಿದ ಸಮಾಜವಿರೋಧಿ ಜನರು ಅಲ್ಲಿನ ಹಲವಾರು ಕಲಾಕೃತಿಗಳನ್ನು ಹಾಳು ಮಾಡಿದರು. ಅನಂತರ “ರಾಕ್ ಗಾರ್ಡನ್ ಸೊಸೈಟಿ" ಇದರ ನಿರ್ವಹಣೆಯನ್ನು ವಹಿಸಿಕೊಂಡು, ಈ ಅದ್ಭುತ ಕಲಾಉದ್ಯಾನವನ್ನು ರಕ್ಷಿಸಿದೆ.  

ಈ ರಾಕ್ ಗಾರ್ಡನಿಗೆ ಪ್ರತಿದಿನ ಭೇಟಿ ನೀಡುವ ಜನರ ಸಂಖ್ಯೆ ೫,೦೦೦ಕ್ಕಿಂತ ಅಧಿಕ. ಈ ಉದ್ಯಾನದಲ್ಲಿ ಸಾವಿರಾರು ಮರಗಿಡಗಳಿರುವ ಕಾರಣ ಅಲ್ಲಿನ ವಾತಾವರಣ ತಂಪು. ಹಗಲಿಡೀ ಸುತ್ತಾಡಿದರೂ ದಣಿವಾಗದು. ಬದಲಾಗಿ ಮೈಮನಸ್ಸಿಗೆ ಹಿತವೆನಿಸುತ್ತದೆ.