ನಮ್ಮ ಹೆಮ್ಮೆಯ ಭಾರತ (ಭಾಗ 96)
೯೬.ಏಕತಾ ಪ್ರತಿಮೆ - ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕ
ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕವಾಗಿ ನಿರ್ಮಿಸಲಾಗಿರುವ ಈ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ನರ್ಮದಾ ಕಣಿವೆಯಲ್ಲಿದೆ (ಬರೋಡಾದಿಂದ ೧೦೦ ಕಿಮೀ ದೂರದಲ್ಲಿ). ೧೮೨ ಮೀ. (೫೯೭ ಅಡಿ) ಎತ್ತರದ ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ೩೧.೧೦.೨೦೧೮ರಂದು ರಾಷ್ಟ್ರಕ್ಕೆ ಸಮರ್ಪಿಸಿದರು.
ಇದರ ಶಿಲ್ಪಿ ಭಾರತದ ರಾಮ್ ವಿ. ಸುತಾರ್. ಲಾರೆನ್ಸ್ ಆಂಡ್ ಟ್ಯುಬ್ರೋ ಕಂಪೆನಿ ಉಕ್ಕು ಮತ್ತು ಕಾಂಕ್ರೀಟಿನಿಂದ ನಿರ್ಮಿಸಿದ ಈ ಬೃಹತ್ ಪ್ರತಿಮೆಗೆ ಕಂಚಿನ ಲೇಪ ನೀಡಲಾಗಿದೆ. ೩೧.೧೦.೨೦೧೩ರಂದು ಶುರುವಾದ ಇದರ ನಿರ್ಮಾಣ ೩೦.೧೦.೨೦೧೮ರಂದು ಮುಕ್ತಾಯವಾಯಿತು. ಸರ್ದಾರ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಇದರ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿತು. ಈ ಪ್ರತಿಮೆಯ ನಿರ್ಮಾಣಕ್ಕೆ ತಗಲಿದ ವೆಚ್ಚ ರೂ.೨,೯೮೯ ಕೋಟಿ.
ಭಾರತ ಸರಕಾರದ ಪ್ರಪ್ರಥಮ ಉಪಪ್ರಧಾನಿಯೂ, ಗೃಹ ಸಚಿವರೂ ಆದ ಸರ್ದಾರ್ ವಲ್ಲಭಬಾಯ್ ಪಟೇಲರು ೫೬೨ ಸಂಸ್ಥಾನಗಳನ್ನು ಭಾರತ ದೇಶಕ್ಕೆ ಸೇರಿಸಿಕೊಳ್ಳುವುದರಲ್ಲಿ ಪ್ರಧಾನ ಪಾತ್ರ ವಹಿಸಿದವರು. ಅಂತಹ ಧೀಮಂತ ರಾಷ್ಟ್ರ ನಾಯಕರ ಸ್ಮರಣೆಗೆ ಮೀಸಲು ಜಗತ್ತಿನ ಅತ್ಯಂತ ಎತ್ತರದ ಈ ಪ್ರತಿಮೆ.
ಜಗತ್ತಿನಲ್ಲಿ ೨ನೇ ಅತ್ಯಂತ ಎತ್ತರದ (೧೫೩ ಮೀ. ೫೦೨ ಅಡಿ) ಪ್ರತಿಮೆ ಸ್ಪ್ರಿಂಗ್ ಟೆಂಪಲ್ ಬುದ್ಧ ಚೀನಾದ ಹೆನಾನ್ ಪ್ರಾಂತ್ಯದಲ್ಲಿದೆ.
ಫೋಟೋ: ಏಕತಾ ಪ್ರತಿಮೆ ..... ಕೃಪೆ: ಫೈನಾನ್ಸಿಯಲ್ ಎಕ್ಸ್-ಪ್ರೆಸ್