ನಮ್ಮ ಹೆಮ್ಮೆಯ ಭಾರತ (ಭಾಗ 98)

ನಮ್ಮ ಹೆಮ್ಮೆಯ ಭಾರತ (ಭಾಗ 98)

೯೮.ಭಾರತೀಯ ಚಿತ್ರಕಲೆ - ವಿವಿಧತೆಯಲ್ಲಿ ಏಕತೆ ಸಾರುವ ಸಾಂಸ್ಕೃತಿಕ ಸಂಪತ್ತು
             
ಸೂಕ್ಷ್ಮತೆ ಮತ್ತು ವಿವಿಧತೆಗೆ ಹೆಸರಾದ ಭಾರತೀಯ ಚಿತ್ರಕಲೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಹಲವಾರು ಸ್ಥಳಗಳಲ್ಲಿ ಪ್ರಾಚೀನ ಜನರು ಗವಿಗಳಲ್ಲಿ ಬರೆದ ಚಿತ್ರಗಳನ್ನು ಪತ್ತೆ ಮಾಡಲಾಗಿದೆ. ಭಾರತದ ಅತ್ಯಂತ ಪುರಾತನ ಚಿತ್ರಗಳು ಮಧ್ಯಪ್ರದೇಶದ ವಿಂಧ್ಯಾ ಪರ್ವತ ಶ್ರೇಣಿಯ ಭೀಮ್ ಬೇಟ್ಕಾದಲ್ಲಿ ಪತ್ತೆಯಾಗಿವೆ. ಇವು ೧೦,೦೦೦ ವರುಷ ಹಳೆಯ ಚಿತ್ರಗಳೆಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಮನುಷ್ಯರು, ಪ್ರಾಣಿಗಳು ಮತ್ತು ಬೇಟೆಯ ಚಿತ್ರಗಳನ್ನು ಕಾಣಬಹುದು.

ಪ್ರಾಚೀನ ಭಾರತೀಯ ಚಿತ್ರಗಳಿಗೆ ರಾಮಾಯಣ, ಮಹಾಭಾರತದ ಪ್ರಸಂಗಗಳೂ, ಪುರಾಣದ ಕತೆಗಳೂ ಸ್ಫೂರ್ತಿ ಎಂಬುದನ್ನು ಕಾಣಬಹುದು. ಜೊತೆಗೆ, ಭಾರತೀಯ ಚಿತ್ರಕಲೆಯಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಗಾಢ ಪ್ರಭಾವವನ್ನು ಗುರುತಿಸಬಹುದು.

೧೯ನೇ ಶತಮಾನದಿಂದ ಭಾರತದಲ್ಲಿ ಆಧುನಿಕ ಚಿತ್ರಕಲೆಯ ಬೆಳವಣಿಗೆಯನ್ನು ಗುರುತಿಸಬಹುದು. ೨೦ನೇ ಶತಮಾನದ ಭಾರತದ ಚಿತ್ರಕಾರರಲ್ಲಿ ಕೇರಳದ ರಾಜಾ ರವಿವರ್ಮ ಅವರನ್ನು ಉಲ್ಲೇಖಿಸಲೇ ಬೇಕು. ಅವರು ಚಿತ್ರಿಸಿದ ಅದ್ಭುತ ಚಿತ್ರಗಳು ಇಂದಿಗೂ ಭಾರತದಲ್ಲಿ ಭಾರೀ ಜನಪ್ರಿಯ. ಭಾರತದಲ್ಲಿ ಆಧುನಿಕ ಶೈಲಿಯ ಚಿತ್ರಕಾರರಲ್ಲಿ ಅಗ್ರಣಿ ಅಮೃತಾ ಶೇರ್ ಗಿಲ್. ಅವರು ಕೇವಲ ೨೮ನೆಯ ವಯಸ್ಸಿನಲ್ಲಿ ನಿಧನರಾದರು. ೧೪ ಜುಲಾಯಿ ೨೦೨೧ರಂದು, “ಇನ್ ದ ಲೇಡೀಸ್ ಎನ್‌ಕ್ಲೋಸರ್” (ರಚನೆ ೧೯೩೮) ಎಂಬ ಅವರ ಕಲಾಕೃತಿ ಮುಂಬೈಯ ಸಾಫ್ರೋನ್-ಆರ್ಟ್ ಹರಾಜಿನಲ್ಲಿ ರೂ.೩೭.೮ ಕೋಟಿಗೆ ಮಾರಾಟವಾಯಿತು. ಭಾರತೀಯ ಚಿತ್ರ ಕಲಾವಿದರ ಅತ್ಯಧಿಕ ಮೊತ್ತ ಗಳಿಕೆಯ ಚಿತ್ರ-ಕಲಾಕೃತಿಗಳಲ್ಲಿ ಇದಕ್ಕೆ ಎರಡನೇ ಸ್ಥಾನ; ಮೊದಲ ಸ್ಥಾನ ವಿ.ಎಸ್. ಗಾಯ್‌ತೊಂಡೆ ಅವರ ೧೯೬೧ರ ಚಿತ್ರ-ಕಲಾಕೃತಿಗೆ ಸಂದಿದೆ.  

ಭಾರತೀಯ ಚಿತ್ರಕಲೆಯಲ್ಲಿ ಮುಖ್ಯವಾಗಿ ಹತ್ತು ಶೈಲಿಗಳನ್ನು ಗುರುತಿಸಲಾಗಿದೆ.

ಮಧುಬನಿ ಚಿತ್ರಕಲೆ: ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ. ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅಲ್ಲಿನ ಮಹಿಳೆಯರು ರಚಿಸುತ್ತಿದ್ದರು. ಅದಕ್ಕಾಗಿ ಅವರು ಬಳಸುವುದು ಅರೆದ ಅಕ್ಕಿ ಮತ್ತು ಬಣ್ಣಗಳ ಮಿಶ್ರಣದ ಅಂಟು (ಪೇಸ್ಟ್). ಅಲ್ಲಿ ಮಗುವಿನ ಜನ್ಮ, ಚೌರ (ತಲೆಗೂದಲು ಕತ್ತರಿಸುವ) ಸಮಾರಂಭ, ಹಬ್ಬಗಳು, ಉಪವಾಸ - ಈ ಸಂದರ್ಭಗಳಲ್ಲಿ ಮತ್ತು ದೇವರನ್ನು ಪೂಜಿಸಲಿಕ್ಕಾಗಿ ಮಧುಬನಿ ಚಿತ್ರಗಳನ್ನು ಬಿಡಿಸುವ ವಾಡಿಕೆ.

ವರ್ಲಿ ಚಿತ್ರಕಲೆ: ಮಹಾರಾಷ್ಟ್ರದ ಒಂದು ಬುಡಕಟ್ಟಿನ ಹೆಸರು ವರ್ಲಿ. ಈ ಜನರ ವಾಸ ಮಣ್ಣು ಮತ್ತು ದನದ ಸೆಗಣಿ ಸಾರಣೆ ಮಾಡಿದ ಬಿದಿರಿನ ಗೋಡೆಗಳ ಸರಳ ಗುಡಿಸಲುಗಳಲ್ಲಿ. ಈ ಗುಡಿಸಲುಗಳ ಗೋಡೆಗಳಲ್ಲಿ ಬಿಳಿಅಕ್ಕಿಯ ಪೇಸ್ಟಿನಿಂದ ಅವರು ಬರೆಯುವ ಚಿತ್ರಗಳಿಗೆ ವರ್ಲಿ ಚಿತ್ರಗಳೆಂಬ ಹೆಸರು. ಇವು ಪೌರಾಣಿಕ ಹಾಗೂ ದಂತಕತೆಗಳನ್ನು ಮತ್ತು ನಿತ್ಯಜೀವನದ ದೃಶ್ಯಗಳನ್ನು ಕಟ್ಟಿ ಕೊಡುತ್ತವೆ. ಎರಡು ತ್ರಿಕೋನಗಳನ್ನು ಜೋಡಿಸಿ, ಮನುಷ್ಯನ ದೇಹ ಬರೆದು, ಅದರ ಕೈ ಮತ್ತು ಕಾಲುಗಳನ್ನು ಸರಳರೇಖೆ ಮೂಲಕ, ತಲೆಯನ್ನು ವೃತ್ತದ ಮೂಲಕ ಚಿತ್ರಿಸಿ ಚಂದವಾಗಿ ಮನುಷ್ಯಾಕೃತಿ ಬರೆಯುತ್ತಾರೆ. (ಫೋಟೋ ೨ ನೋಡಿ)

ನೆರಳು - ಗೊಂಬೆಯಾಟದ ಚಿತ್ರಕಲೆ: ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬೆಗಳನ್ನು ಎತ್ತಿ ಹಿಡಿದು ಆಡಿಸುತ್ತಾ, ರಾಮಾಯಣ, ಮಹಾಭಾರತ ಮತ್ತು ಪೌರಾಣಿಕ ಕತೆಗಳನ್ನು ಪ್ರದರ್ಶಿಸುತ್ತಾರೆ.

ಕಾಳಿಘಾಟ್ ಚಿತ್ರಕಲೆ: ಕೊಲ್ಕತಾದಲ್ಲಿ ೧೮೧೯ರಲ್ಲಿ ನಿರ್ಮಿಸಲಾದ ಕಾಳಿ ದೇವಸ್ಥಾನದಲ್ಲಿ ರಚಿಸಿರುವ ಚಿತ್ರಗಳ ಶೈಲಿಗೆ ಈ ಹೆಸರು. ದೇವಸ್ಥಾನಗಳಿಗೆ ಬರುವ ಯಾತ್ರಾರ್ಥಿಗಳಿಗೆ ಅಲ್ಲಿನ ಪೇಟೆಯ ಅಂಗಡಿಗಳಲ್ಲಿ ಈ ಚಿತ್ರಪಟಗಳನ್ನು ಮಾರುತ್ತಾರೆ.

ಪಟ ಚಿತ್ರಕಲೆ: ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಸಂಬಂಧಿಸಿದ ಚಿತ್ರಗಳೂ ಇರುತ್ತವೆ. ಪ್ರಾಕೃತಿಕ ವಸ್ತುಗಳನ್ನೇ ಬಳಸಿ, ಕೆಂಪು, ಹಳದಿ ಮತ್ತು ಹಸುರು ಬಣ್ಣಗಳಲ್ಲಿ ಚಿತ್ರಗಳ ರಚನೆ.
ಪೈತಾನ್ ಚಿತ್ರಕಲೆ: ಮಹಾರಾಷ್ಟ್ರದ ಪೈತಾನ್ ಪಟ್ಟಣ ಈ ಚಿತ್ರಕಲೆಯ ಮೂಲ. ಇದನ್ನು ಚಿತ್ರಕಥಿ ಎಂದು ಹೆಸರಿಸಲಾಗಿದೆ. ಈ ಚಿತ್ರಕಾರರು ಸಂಗೀತಗಾರರೂ ಆಗಿರುತ್ತಾರೆ. ಈ ಚಿತ್ರಗಳನ್ನು, ಕಲಾವಿದರು ಹಳ್ಳಿಯಿಂದ ಹಳ್ಳಿಗೆ ಹೊತ್ತೊಯ್ದು, ಹಾಡುತ್ತಾ, ಒಂದೊಂದೇ ಚಿತ್ರ ತೋರಿಸುತ್ತಾ ಕತೆ ಹೇಳುತ್ತಾರೆ. ಅವೆಲ್ಲ ರಾಮಾಯಣ ಮತ್ತು ಮಹಾಭಾರತದ ಕತೆಗಳು.

ತಂಜಾವೂರು ಚಿತ್ರಕಲೆ: ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಪ್ರಾರ್ಥನೆಯ ಉದ್ದೇಶಕ್ಕಾಗಿ ಚಿತ್ರಿಸಲ್ಪಟ್ಟಿದ್ದ ಇವು ಈಗ ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ. ಇವು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು:  ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ, ಮಹಾಶಿವನ ವಾಹನ ನಂದಿ ಇತ್ಯಾದಿ.

ಮೊಘಲರ ಪುಟಾಣಿ ಚಿತ್ರಗಳು: ೧೬ನೇ ಶತಮಾನದಲ್ಲಿ ಮೊಘಲ್ ದೊರೆ ಅಕ್ಬರ ಪರ್ಷಿಯಾದಿಂದ ಕಲಾಕಾರರನ್ನು ಕರೆಸಿ, ಸ್ಥಳೀಯ ಕಲಾಕಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದು ಮೊಘಲ್ ಚಿತ್ರಕಲೆಯ ನಾಂದಿ. ಇವು ಅಳತೆಯಲ್ಲಿ ಚಿಕ್ಕವು. ಈ ಚಿತ್ರಗಳಲ್ಲಿ ಸೂಕ್ಷ್ಮ ವಿವರಗಳು ಜಾಸ್ತಿ. ಅಲಂಕಾರಿಕ ಚೌಕಟ್ಟು ಮತ್ತು ಹಿನ್ನೆಲೆಯಲ್ಲಿರುವ ವಿವರಗಳು ಈ ಚಿತ್ರಗಳ ವಿಶೇಷ.

ಮುರಾಲ್ ಚಿತ್ರಕಲೆ: ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ಗೋಡೆಗಳು, ಚಾವಣಿಗಳು, ಕಂಬಗಳು ಮತ್ತು ಕಿಟಕಿಗಳ ಕಮಾನುಗಳಲ್ಲಿಯೂ ಕಲಾಕಾರರು ಚಿತ್ರ ಬಿಡಿಸುತ್ತಾರೆ. ಹೂಗಳ ವಿನ್ಯಾಸ, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಸಂಗತಿಗಳು ಮತ್ತು ಮಹಾಕಾವ್ಯಗಳ ದೃಶ್ಯಗಳು - ಇವನ್ನು ಚಿತ್ರಿಸಿದರು.

ಕಂಪೆನಿ ಸ್ಕೂಲ್ ಚಿತ್ರಕಲೆ: ಈ ಚಿತ್ರಗಳು ಭಾರತದ ಚಿತ್ರಕಲಾವಿದರು ಬ್ರಿಟಿಷರಿಗಾಗಿ ಚಿತ್ರಿಸಿದವುಗಳು. ಈ ರೀತಿಯಲ್ಲಿ ಮೊದಲಾಗಿ ಚಿತ್ರ ಬರೆಯಿಸಿದ್ದು “ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿ." ಆದ್ದರಿಂದ ಈ ಶೈಲಿಗೆ "ಕಂಪೆನಿ ಸ್ಕೂಲ್” ಎಂದು ಹೆಸರಾಯಿತು. ಇದು ಭಾರತೀಯ ಮತ್ತು ಯುರೋಪಿಯನ್ ಚಿತ್ರಶೈಲಿಗಳ ಮಿಶ್ರಶೈಲಿ.

ಫೋಟೋ ೧: ಭಾರತೀಯ ಚಿತ್ರಕಲೆಯ ಒಂದು ಮಾದರಿ. ಚಿತ್ರದಲ್ಲಿರುವ ಸೂಕ್ಷ್ಮ ವಿವರಗಳನ್ನು ಗಮನಿಸಿ.
ಫೋಟೋ ೨: ಜಿವ್ಯ ಸೋಮ ಮಶೆ ಚಿತ್ರಿಸಿದ ವರ್ಲಿ ಚಿತ್ರ; ಕೃಪೆ: ವಿಕಿಪಿಡೀಯಾ