ನಮ್ಮ ಹೆಮ್ಮೆಯ ಭಾರತ (1 - 2)

ನಮ್ಮ ಹೆಮ್ಮೆಯ ಭಾರತ (1 - 2)

೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ಅಭಿಮಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಮಾತೃಭೂಮಿಯ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.

ಚರಿತ್ರೆ ಮತ್ತು ಸಂಸ್ಕೃತಿ
೧.ಜಗತ್ತಿನ ಅತಿ ದೊಡ್ಡ ಮಹಾಕಾವ್ಯ “ಮಹಾಭಾರತ"
ಮಹಾಭಾರತದ ಕತೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಇದನ್ನು ಸಾವಿರಾರು ವರುಷಗಳಿಂದ ಮತ್ತೆಮತ್ತೆ ಹೇಳಲಾಗಿದೆ. ಜೊತೆಗೆ ಮತ್ತೆಮತ್ತೆ ಬರೆಯಲಾಗಿದೆ. ಇದನ್ನು ಆಧರಿಸಿ ಭಾರತದ ವಿವಿಧ ಭಾಷೆಗಳಲ್ಲಿ  ಅಸಂಖ್ಯ ಕತೆ, ಕವನ, ನಾಟಕಗಳನ್ನು ರಚಿಸಲಾಗಿದೆ. “ಮಹಾಭಾರತ"ದ ಟಿವಿ ಧಾರವಾಹಿ ದೂರದರ್ಶನದಿಂದ ಮೊದಲ ಬಾರಿ ಪ್ರಸಾರವಾದಾಗ ಜನರೆಲ್ಲ ಮನೆಗಳಲ್ಲಿ ಟಿವಿಯೆದುರು ಕೂತು ನೋಡುತ್ತಿದ್ದ ಕಾರಣ ರಸ್ತೆಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ೨೦೨೦ರಲ್ಲಿ ಕೋವಿಡ್ ವೈರಸ್ ಲಾಕ್-ಡೌನಿನಿಂದಾಗಿ ಇದರ ಮರುಪ್ರಸಾರ ಆರಂಭವಾದಾಗ ಇದು ಜಗತ್ತಿನಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಟಿವಿ ಕಾರ್ಯಕ್ರಮವಾಗಿ ದಾಖಲಾಯಿತು.

ಮಹಾಭಾರತವನ್ನು ಬರೆದವರು ಮಹರ್ಷಿ ವ್ಯಾಸರು. ಇದು ಸೋದರರಾದ ಧೃತರಾಷ್ಟ್ರ ಮತ್ತು ಪಾಂಡುವಿನ ಮಕ್ಕಳ ಮಹಾಕತೆ. ಬಾಲ್ಯದಿಂದಲೇ ಬೆಳೆದ ಅವರ ನಡುವಿನ ಅಸೂಯೆ ಹಾಗೂ ದ್ವೇಷಗಳ ಕಥನ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಮುಗಿಯುತ್ತದೆ. ದಾಯಾದಿಗಳ ಬದುಕಿನಲ್ಲಿ ಅಧರ್ಮದ ವಿರುದ್ಧ ಧರ್ಮದ ಜಯದಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರ ಪ್ರಧಾನ.

ಸಂಸ್ಕೃತ ಭಾಷೆಯ ಮಹಾನ್ ಕಾವ್ಯ ಮಹಾಭಾರತ. ಇದರ ೭೪,೦೦೦ ಶ್ಲೋಕಗಳಲ್ಲಿ ೧೮ ಲಕ್ಷ ಪದಗಳಿವೆ. ಮನುಷ್ಯನ ದಿನನಿತ್ಯದ ಬದುಕಿನ ಸಂಗತಿಗಳಿಂದ ತೊಡಗಿ ಸಂಕೀರ್ಣ ಅಧ್ಯಾತ್ಮದ ವರೆಗೆ ಮಹಾಭಾರತದಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ವಿಪುಲ. ಇದರ ಅಗಾಧತೆಯನ್ನು ಆರಂಭದ ಶ್ಲೋಕವೊಂದರಲ್ಲಿ ಹೀಗೆಂದು ದಾಖಲಿಸಲಾಗಿದೆ: “ ಇದರಲ್ಲಿರುವ ಸಂಗತಿ ನಿಮಗೆ ಬೇರೆಯದರಲ್ಲಿಯೂ ಸಿಗಬಹುದು; ಆದರೆ ಇಲ್ಲಿ ಸಿಗದಿರುವ ಸಂಗತಿ ನಿಮಗೆ ಬೇರೆಲ್ಲಿಯೂ ಸಿಗಲಾರದು.”  

ಫೋಟೋ (ಲೇಖಕರ ಸಂಗ್ರಹದಿಂದ): ಕುರುಕ್ಷೇತ್ರದಲ್ಲಿ ಭಗವದ್ಗೀತಾ ಉಪದೇಶದ ಶಿಲ್ಪ

೨.ಅತ್ಯಂತ ಪ್ರಾಚೀನ ವೈದ್ಯಕೀಯ ಶಾಸ್ತ್ರ “ಆಯುರ್ವೇದ"ದ ತವರೂರು ಭಾರತ
ಐದು ಸಾವಿರ ವರುಷಗಳ ಹಿಂದೆ ಭಾರತದಲ್ಲಿ ಬಳಕೆಗೆ ಬಂದ "ಆಯುರ್ವೇದ" ಜಗತ್ತಿನ ಅತ್ಯಂಚ ಪ್ರಾಚೀನ ವೈದ್ಯಕೀಯ ಶಾಸ್ತ್ರವೆಂದು ನಂಬಲಾಗಿದೆ. ಇಂದಿಗೂ ಜಗತ್ತಿನ ಮುಂಚೂಣಿ ವೈದ್ಯಕೀಯ ಪದ್ಧತಿಗಳಲ್ಲಿ ಆಯುರ್ವೇದ ಒಂದಾಗಿದೆ.

ಆಯುರ್ವೇದದ ಮೂಲ ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದ ಗ್ರಂಥ. ಅದರಲ್ಲಿ ಹಲವಾರು ರೋಗಗಳನ್ನು ಮತ್ತು ಅವುಗಳ ಚಿಕಿತ್ಸೆಗಳನ್ನು ಪ್ರಸ್ತಾಪಿಸಲಾಗಿದೆ. ಆರೋಗ್ಯರಕ್ಷಣೆ, ಆರೋಗ್ಯವರ್ಧನೆ ಮತ್ತು ರೋಗಚಿಕಿತ್ಸೆಯಲ್ಲಿ ಔಷಧೀಯ ಸಸ್ಯಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಮತ್ತು ವಿಶೇಷ ಆಹಾರಗಳನ್ನು ಆಯುರ್ವೇದ ಬಳಸುತ್ತದೆ.

ಆಯುರ್ವೇದ ಕೇವಲ ಔಷಧಿ ಪದ್ಧತಿಯಲ್ಲ; ಶರೀರ, ಮನಸ್ಸು ಮತ್ತು ಆತ್ಮಗಳ ನಡುವೆ ಪರಿಪೂರ್ಣ ಸಮತೋಲನ ಇದ್ದಾಗ ಮಾತ್ರ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂಬ ಚಿಂತನೆಯೇ ಆರ್ಯುರ್ವೇದದ ಮೂಲ ತತ್ವ. ಆಯುರ್ವೇದದ ಪ್ರಸಿದ್ಧ ಪಠ್ಯಗಳನ್ನು ರಚಿಸಿದವರು ಚರಕ (ಕ್ರಿ.ಪೂ.೩೦೦) ಮತ್ತು ಸುಶ್ರುತ (ಕ್ರಿ.ಪೂ.೬೦೦)

ಆಯುರ್ವೇದ ಒಂದು ಜೀವನಪದ್ಧತಿ ಎನ್ನುವುದೇ ಸೂಕ್ತ. ಸಮತೋಲನದ ಆಹಾರ, ದಿನನಿತ್ಯದ ದೈಹಿಕ ಚಟುವಟಿಕೆಗಳು, ಸಕಾರಾತ್ಮಕ ಯೋಚನೆ - ಇವು ಆಯುರ್ವೇದ ಪದ್ಧತಿಯ ಆಧಾರಸ್ತಂಭಗಳು. ವರುಷ ೨೦೦೦ದಿಂದ ಈಚೆಗೆ ಜನಸಾಮಾನ್ಯರಿಗೆ ರಾಸಾಯನಿಕಗಳನ್ನು ಔಷಧಿಯಾಗಿ ಸೇವಿಸುವುದರ ದುಷ್ಟರಿಣಾಮಗಳು ಸ್ಪಷ್ಟವಾದವು. ಹಾಗಾಗಿ ಹೆಚ್ಚೆಚ್ಚು ಜನರು ಆರೋಗ್ಯವರ್ಧನೆಗೆ ಮತ್ತು ರೋಗಚಿಕಿತ್ಸೆಗೆ ಆಯುರ್ವೇದ ಪದ್ಧತಿಯನ್ನು ಅವಲಂಬಿಸಲು ಶುರು ಮಾಡಿದ್ದಾರೆ. ಭಾರತದಲ್ಲಿ ನೂರಾರು ಕಂಪೆನಿಗಳು ಬೃಹತ್ ಪ್ರಮಾಣದಲ್ಲಿ ಆಯುರ್ವೇದ ಔಷಧಿಗಳನ್ನು ಉತ್ಪಾದಿಸುತ್ತಿದ್ದಾರೆ.

ಫೋಟೋ: ಆಯುರ್ವೇದದ ಪಿತಾಮಹ ಚರಕ ಮುನಿಯ ಮೂರ್ತಿ (ವಿಕಿಪೀಡಿಯದಿಂದ)