ನಮ್ಮ ಹೆಮ್ಮೆಯ ಭಾರತ (11 - 12)

ನಮ್ಮ ಹೆಮ್ಮೆಯ ಭಾರತ (11 - 12)

೧೧. ಭಾರತದ ಅಪ್ರತಿಮ ಸಂವಿಧಾನ
ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು.

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವು ೨೬ ಜನವರಿ ೧೯೫೬ರಂದು ಜ್ಯಾರಿಗೆ ಬಂತು. ಆ ದಿನವನ್ನು ಭಾರತದಲ್ಲಿ ಪ್ರತಿ ವರುಷ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲಾಗುತ್ತದೆ. ಅವತ್ತು ನವದೆಹಲಿಯಲ್ಲಿ ರಾಜಪಥದಲ್ಲಿ ನಡೆಯುವ ಪಥಸಂಚಲನವು ಭಾರತದ ವೈವಿಧ್ಯತೆಯನ್ನೂ ವಿರಾಟ್ ಮಿಲಿಟರಿ ಶಕ್ತಿಯನ್ನೂ ಇಡೀ ಜಗತ್ತಿಗೆ ಅನಾವರಣಗೊಳಿಸುತ್ತದೆ.

ಜಗತ್ತಿನ ವಿವಿಧ ದೇಶಗಳ ಸಂವಿಧಾನಕ್ಕೆ ಹೋಲಿಸಿದಾಗ, ಭಾರತದ ಸಂವಿಧಾನ ಅತಿ ದೀರ್ಘವಾದದ್ದು ಮತ್ತು ವಿವರಣಾತ್ಮಕವಾದದ್ದು. ಅದು ಭಾರತದ ವಿವಿಧ ಆಡಳಿತಾತ್ಮಕ ಘಟಕಗಳ ಮತ್ತು ಪ್ರಜೆಗಳ ಕರ್ತವ್ಯಗಳು, ಹೊಣೆಗಾರಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಿಯಮಗಳನ್ನು ವಿಶದಪಡಿಸಿದೆ.

ಬದಲಾಗುತ್ತಿರುವ ಕಾಲಮಾನಕ್ಕೆ ಅನುಸಾರವಾಗಿ ಬದಲಾವಣೆಗಳನ್ನು ಮಾಡಲಿಕ್ಕೂ ಸಂವಿಧಾನವು ಅವಕಾಶ ಕಲ್ಪಿಸಿದೆ. ಈಗಾಗಲೇ ಭಾರತದ ಸಂವಿಧಾನಕ್ಕೆ ಮಾಡಲಾಗಿರುವ ತಿದ್ದುಪಡಿಗಳ ಸಂಖ್ಯೆ ೧೦೦ಕ್ಕಿಂತ ಅಧಿಕ.   

೧೨.ಭಾರತದ “ವಿವಿಧತೆಯಲ್ಲಿ ಏಕತೆ" ಜಗತ್ತಿಗೇ ಮಾದರಿ
ದೊಡ್ಡ ದೇಶ ಭಾರತದ ಜನಸಂಖ್ಯೆ ೨೦೧೭ರಲ್ಲಿ ೧೩೭ ಕೋಟಿ. ವಿವಿಧತೆ ನಮ್ಮ ಭಾರತದ ವಿಶೇಷತೆ. ತೀವ್ರ ಉಷ್ಣತೆಯಿಂದ ತೊಡಗಿ ತೀವ್ರ ಚಳಿಯ ವರೆಗೆ ಇಲ್ಲಿನ ಹವಾಮಾನ ವಿಭಿನ್ನ. ಭೌಗೋಳಿಕವಾಗಿ, ಪರ್ವತಗಳಿಂದ ತೊಡಗಿ ಮರುಭೂಮಿಗಳ ವರೆಗೆ ಮತ್ತು ಸಮುದ್ರತೀರಗಳಿಂದ ತೊಡಗಿ ಮಳೆಕಾಡುಗಳ ವರೆಗೆ ಇಲ್ಲಿನ ಪ್ರದೇಶಗಳು ವಿಭಿನ್ನ.

ಸಾವಿರಾರು ಜನಸಮುದಾಯಗಳು, ೭೮೦ ಭಾಷೆಗಳು ಮತ್ತು ಉಪಭಾಷೆಗಳು, ಹಲವಾರು ಉಡುಗೆಗಳು, ಅನೇಕ ಧರ್ಮಗಳು, ಹಲವು ಸಂಪ್ರದಾಯಗಳು, ಆಚರಣೆಗಳು, ಕಟ್ಟುಕಟ್ಟಳೆಗಳು ಇಲ್ಲಿ ವ್ಯಾಪಿಸಿವೆ. ಅದೇನಿದ್ದರೂ ಭಾರತೀಯರಲ್ಲಿ ಅದ್ಭುತ ಐಕ್ಯತೆಯಿದೆ. ಪಾರಂಪರಿಕ ಬದುಕು ವಿವಿಧತೆಯಲ್ಲಿ ಏಕತೆಯನ್ನು ನಮಗೆ ಕಲಿಸಿದೆ. ನಾಗರಿಕತೆಯ ಆರಂಭದಿಂದ ತಲೆಮಾರಿನಿಂದ ತಲೆಮಾರಿಗೆ ದಾಟಿ ಬಂದಿರುವ ಸಹಜೀವನಕ್ಕೆ ಅಗತ್ಯವಾದ ಮೌಲ್ಯಗಳೇ ಇದರ ಭದ್ರ ಬುನಾದಿ.

ಚಿತ್ರಗಳು: ಭಾರತದ ಸಂವಿಧಾನದ ಆರಂಭದ ಪುಟ ಮತ್ತು ವಿವಿಧತೆಯಲ್ಲಿ ಏಕತೆಯ ಸಾಂಕೇತಿಕ ಚಿತ್ರ