ನಮ್ಮ ಹೆಮ್ಮೆಯ ಭಾರತ (23 - 24)
೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ
ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ.
ಹಿಮ ಆವರಿಸಿದ ಪರ್ವತಗಳು, ದೀರ್ಘ ಸಮುದ್ರ ತೀರಗಳು, ಹಿನ್ನೀರಿನ ಪ್ರದೇಶಗಳು, ಹಚ್ಚಹಸುರಿನ ಕಾಡುಗಳು, ನದಿದಡಗಳು, ಸರೋವರಗಳು - ಇವೆಲ್ಲ ಪ್ರಾಕೃತಿಕ ತಾಣಗಳು ಪ್ರವಾಸಿಗಳನ್ನು ದಂಗುಬಡಿಸುತ್ತವೆ. ವನ್ಯಜೀವಿ ರಕ್ಷಣಾ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಚಾರಿತ್ರಿಕ ಸ್ಥಳಗಳು, ಯುನೆಸ್ಕೋ ಪಾರಂಪರಿಕ ತಾಣಗಳು - ಇವೆಲ್ಲವೂ ಭಾರತದ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸಿವೆ.
ಅಧ್ಯಾತ್ಮ ಸಾಧನೆಗಾಗಿಯೂ ಸಾವಿರಾರು ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಯೋಗ ಮತ್ತು ಧ್ಯಾನ ಕಲಿಯಲಿಕ್ಕಾಗಿ ಬರುವ ಪ್ರವಾಸಿಗಳಲ್ಲಿ ಕೆಲವರು ಆಶ್ರಮಗಳಲ್ಲಿ ವರುಷಗಟ್ಟಲೆ ಉಳಿದು ನೆಮ್ಮದಿಯ ಬದುಕಿನ ಹುಡುಕಾಟದಲ್ಲಿ ತೊಡಗುತ್ತಾರೆ.
ಪ್ರವಾಸೋದ್ಯಮ ಲಕ್ಷಗಟ್ಟಲೆ ಭಾರತೀಯರಿಗೆ ಉದ್ಯೋಗ ಒದಗಿಸುತ್ತಿದೆ. ಇಲ್ಲಿಯ ಗಣೇಶ ಚತುರ್ಥಿ, ದೀಪಾವಳಿ ಇತ್ಯಾದಿ ಹಬ್ಬಗಳು; ಮೈಸೂರಿನ ದಸರಾ, ಕೇರಳದ ಉದ್ದ ದೋಣಿಗಳ ಸ್ಪರ್ಧೆ, ಢೆಲ್ಲಿಯ ರಾಜಪಥದ ಪ್ರಜಾಪ್ರಭುತ್ವ ದಿನದ ಪಥಸಂಚಲನ ಇತ್ಯಾದಿ ಜಗತ್-ಪ್ರಸಿದ್ಧ ಸಂಭ್ರಮಾಚರಣೆಗಳು; ವಿವಿಧ ಪ್ರದೇಶಗಳ ವೈವಿಧ್ಯಮಯ ತಿನಿಸುಗಳು; ವಿಭಿನ್ನ ಜನಸಮುದಾಯಗಳ ಆಚರಣೆಗಳು, ಕಟ್ಟುಕಟ್ಟಲೆಗಳು - ಇವೆಲ್ಲವೂ ವಿದೇಶಿ ಪ್ರವಾಸಿಗರನ್ನು ಬೆರಗಾಗಿಸುತ್ತವೆ; ಬೇರೊಂದು ವಿಸ್ಮಯಲೋಕಕ್ಕೆ ಒಯ್ಯುತ್ತವೆ. ಆದ್ದರಿಂದಲೇ ಅವರು ಮತ್ತೆಮತ್ತೆ ಭಾರತಕ್ಕೆ ಬರುತ್ತಾರೆ.
೨೪.ಜಗತ್ತಿನ ಅತೀ ದೊಡ್ಡ ನದಿಮುಖ ಸುಂದರಬನ
ಜಗತ್ತಿನ ಅತೀ ದೊಡ್ಡ ನದಿಮುಖ ಸುಂದರಬನ ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ. ಇದು ಮ್ಯಾಂಗ್ರೂವ್ ಕಾಡುಗಳು ಬೆಳೆದಿರುವ ೫೪ ಸಣ್ಣಸಣ್ಣ ದ್ವೀಪಗಳ ಸಮೂಹ. ಇವುಗಳ ನಡುವೆ ಹರಿಯುತ್ತಿವೆ ಗಂಗಾನದಿಯ ಹಲವಾರು ಕವಲುಗಳು.
ಇಲ್ಲಿ ಬೆಳೆದಿರುವ “ಸುಂದರಿ" ಎಂಬ ಮರಗಳಿಂದಾಗಿಯೇ ಈ ಪ್ರದೇಶಕ್ಕೆ ಸುಂದರಬನವೆಂಬ ಹೆಸರು ಬಂದಿದೆ. ಈ ಮರಗಳೇ ಕೆಸರಿನಿಂದ ನಿರ್ಮಿತವಾಗಿರುವ ದ್ವೀಪಗಳನ್ನು ಹಿಡಿದಿಟ್ಟಿವೆ. ಮ್ಯಾಂಗ್ರೂವ್ ಕಾಡುಗಳು ಇಲ್ಲಿ ಆಗಾಗ ಅಪ್ಪಳಿಸುವ ಬಿರುಗಾಳಿಗಳ ಬಿರುಸನ್ನು ಕಡಿಮೆ ಮಾಡುತ್ತವೆ. ಜೊತೆಗೆ, ನೀರಿನಲೆಗಳ ರಭಸದಿಂದ ಆಗುವ ಮಣ್ಣಿನ ಸವಕಳಿಯನ್ನೂ ತಡೆಯುತ್ತವೆ.
ಸುಂದರಬನಗಳ ದೊಡ್ಡ ಭಾಗವನ್ನು “ಹುಲಿ ರಕ್ಷಿತಾರಣ್ಯ”ವಾಗಿ ಸರಕಾರ ಘೋಷಿಸಿದೆ. ಜಗತ್ತಿನ ಅತ್ಯಂತ ಜಾಸ್ತಿ ಸಂಖ್ಯೆಯ ಹುಲಿಗಳು ಇಲ್ಲಿವೆ. ಸುಂದರಬನ ರಾಷ್ಟ್ರೀಯ ಉದ್ಯಾನವನ್ನು ೧೯೮೭ರಲ್ಲಿ “ಜಾಗತಿಕ ಪಾರಂಪರಿಕ ತಾಣ” ಎಂದು ಯುನೆಸ್ಕೋ ಘೋಷಿಸಿದೆ.
ಚಿತ್ರ ೧: ಮೈಸೂರು ದಸರಾದಲ್ಲಿ ವೀರಗಾಸೆ ನೃತ್ಯಗಾರರು
ಚಿತ್ರ ೨: ಸುಂದರಬನದ ಒಂದು ನೋಟ