ನಮ್ಮ ಹೆಮ್ಮೆಯ ಭಾರತ (25 - 26)

ನಮ್ಮ ಹೆಮ್ಮೆಯ ಭಾರತ (25 - 26)

೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿ
ಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.

ಈ ತಿಳಿನೀರಿನ ದ್ವೀಪದ ಭೂಪ್ರದೇಶವು ಬ್ರಹ್ಮಪುತ್ರ ನದಿಯ ಕೊರೆತದಿಂದಾಗಿ ೧೨೫೦ ಚದರ ಕಿ.ಮೀ. ಇದ್ದದ್ದು ಈಗ ೫೭೭ ಚದರ ಕಿ.ಮೀ.ಗೆ ಇಳಿದಿದೆ. ಇಲ್ಲಿನ ಬಹುಪಾಲು ಪ್ರದೇಶದಲ್ಲಿರುವ ಕೆರೆಕುಂಟೆಗಳು ಹೇರಳ ಸಂಖ್ಯೆಯ ಪಕ್ಷಿಗಳನ್ನು ಆಕರ್ಷಿಸುತ್ತವೆ. ಈ ಕೆರೆಕುಂಟೆಗಳು ವಿಶಿಷ್ಠವಾದ ಸಸ್ಯಸಂಕುಲ ಮತ್ತು ಪ್ರಾಣಿಸಂಕುಲಕ್ಕೆ ಆಸರೆಯಾಗಿವೆ.
ಇಲ್ಲಿನ ಜನರಲ್ಲಿ ಬಹುಪಾಲು ಬುಡಕಟ್ಟು ಜನಾಂಗದವರು. ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ಅವರು ದೋಣಿಗಳನ್ನೇ ಅವಲಂಬಿಸಿದ್ದಾರೆ. ಇದು ವೈಷ್ಣವ ಪಂಥದ ಪ್ರಧಾನ ಸಾಂಸ್ಕೃತಿಕ ನೆಲೆ; ಇದರ ಸತ್ರಗಳು (ಮಠಗಳು) ಇಲ್ಲಿನ ಪಾರಂಪರಿಕ ಸಂಪತ್ತಿನ ಪ್ರಮುಖ ಭಾಗ.

೨೬.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ
ಮೇಘಾಲಯದ ಮಾಸಿನ್‌ರಾಮ್ ಹಳ್ಳಿ ಜಗತ್ತಿನಲ್ಲೇ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ. ಮಳೆಯ ಅಬ್ಬರ ಮತ್ತು ಚಂದ ನೋಡಲು ಅತ್ಯಂತ ಸೂಕ್ತ ಜಾಗವಾದ ಮಾಸಿನ್‌ರಾಮ್ ಪ್ರಕೃತಿಪ್ರಿಯರ ಕನಸಿನ ತಾಣ.

ಅಂದೊಮ್ಮೆ ಅತ್ಯಂತ ಜಾಸ್ತಿ ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಚಿರಾಪುಂಜಿಯಲ್ಲಿ ವಾರ್ಷಿಕ ಮಳೆ ೧೧,೭೭೭ ಮಿಮೀ. ಮಾಸಿನ್‌ರಾಮ್ ಹಳ್ಳಿಯಲ್ಲಿ ಇದು ೧೧,೮೭೨  ಮಿಮೀ. ಇದು ಕರ್ನಾಟಕದ ಕರಾವಳಿಯಲ್ಲಿ ಸುರಿಯುವ ೪,೦೦೦ ಮಿಮೀ ಮಳೆಗಿಂತ ಸುಮಾರು ನಾಲ್ಕು ಪಟ್ಟು ಅಧಿಕ!

ಮೇಘಾಲಯದಲ್ಲಿ ೧,೪೦೦ ಮೀಟರ್ ಎತ್ತರದಲ್ಲಿದೆ ಮಾಸಿನ್‌ರಾಮ್. ಇಲ್ಲಿ ಮಳೆಯ ಹೊಡೆತ ಎಷ್ಟು ಜೋರಾಗಿದೆ ಎಂದರೆ, ಮನೆಗಳ ಚಾವಣಿಗೆ ಅಪ್ಪಳಿಸುವ ಮಳೆಹನಿಗಳ ಕಿವಿಗಡಚಿಕ್ಕುವ ಸಪ್ಪಳವನ್ನು ಕಡಿಮೆ ಮಾಡಲಿಕ್ಕಾಗಿ ಅದರ ಮೇಲೆ ಹುಲ್ಲು ಹೊದೆಸುತ್ತಾರೆ. ಮಾಸಿನ್‌ರಾಮ್ ಪದದಲ್ಲಿರುವ "ಮಾ" ಎಂದರೆ ಖಾಸಿ ಭಾಷೆಯಲ್ಲಿ "ಶಿಲೆ" ಎಂದರ್ಥ. ಇದು ಖಾಸಿ ಗುಡ್ಡ ಪ್ರದೇಶದಲ್ಲಿರುವ ಬೃಹತ್ ಶಿಲೆಗಳನ್ನು ಸೂಚಿಸುತ್ತದೆ.

ಫೋಟೋ ೧: ಮಾಜುಲಿ ದ್ವೀಪದಲ್ಲಿ ದೋಣಿ ಯಾನ

ಫೋಟೋ ೨: ಮಾಸಿನ್‌ರಾಮ್ ಹಳ್ಳಿಯ ನಾಮಫಲಕ