ನಮ್ಮ ಹೆಮ್ಮೆಯ ಭಾರತ (3 - 4)

ನಮ್ಮ ಹೆಮ್ಮೆಯ ಭಾರತ (3 - 4)

೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ
ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ.

ಯೋಗವೆಂದರೆ ಕೇವಲ ಯೋಗಾಸನಗಳ ಸಾಧನೆಯಲ್ಲ; ಯೋಗದಲ್ಲಿ ಎಂಟು ಭಾಗಗಳಿವೆ. ಇದುವೇ ಅಷ್ಟಾಂಗ ಯೋಗ. ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತತೆ ಲಭ್ಯವಾಗುತ್ತದೆ. ನೂರಾರು ಯೋಗಾಸನಗಳಿವೆ. ಇವನ್ನು ಯೋಗಗುರುಗಳಿಂದ ಕಲಿತು ದಿನದಿನವೂ ಅಭ್ಯಾಸ ಮಾಡಿದರೆ, ಪ್ರತಿಯೊಂದು ಯೋಗಾಸನದಿಂದ ನಿರ್ದಿಷ್ಟ ಪ್ರಯೋಜನಗಳು ಲಭಿಸುತ್ತವೆ.

ಸಾವಿರಾರು ವರುಷಗಳಲ್ಲಿ ಅಸಂಖ್ಯ ಋಷಿಗಳ ಮತ್ತು ಸಾಧಕರ ಪರಿಶ್ರಮ ಹಾಗೂ ಸಾಧನೆಯಿಂದಾಗಿ "ಯೋಗ" ಇಂದಿನ ರೂಪಕ್ಕೆ ವಿಕಾಸವಾಗಿದೆ. ಸುಮಾರು ಸಾವಿರ ವರುಷಗಳ ಮುಂಚೆ, ಆ ವರೆಗಿನ ಯೋಗದ ಜ್ನಾನವನ್ನು ಸೂತ್ರಗಳ ರೂಪದಲ್ಲಿ ಪ್ರಸ್ತುತಪಡಿಸಿದ ಮಹಾಮುನಿ ಪತಂಜಲಿ. ಅದುವೇ ಪತಂಜಲಿಯ ”ಯೋಗಸೂತ್ರಗಳು”.

೨೦೧೪ರಿಂದೀಚೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಕ್ಕೆ ವಿಶ್ವಮಾನ್ಯತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಜಗತ್ತಿನ ಹಲವಾರು ದೇಶಗಳಲ್ಲಿ ಆರೋಗ್ಯವರ್ಧನೆಗಾಗಿ ಯೋಗವನ್ನು ಅನುಸರಿಸಲಾಗುತ್ತಿದೆ.

೪.ಸಂಖ್ಯಾಪದ್ಧತಿಯ ಮತ್ತು ಸೊನ್ನೆಯ ಮೂಲ ಭಾರತ
ಸೊನ್ನೆಯಿಂದ ಒಂಭತ್ತರ ವರೆಗಿನ ಸಂಖ್ಯೆಗಳನ್ನು ಭಾರತೀಯ-ಅರಾಬಿಕ್ ಸಂಖ್ಯೆಗಳು ಎಂದು ಕರೆಯಲಾಗುತ್ತದೆ. ೦,೧,೨.೩,೪,೫,೬,೭,೮,೯ - ಈ ಸಂಖ್ಯೆಗಳನ್ನು ಈಗ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲಿ ಬಳಸಲಾಗುತ್ತಿದೆ. ಸಂಖ್ಯೆಗಳಲ್ಲಿ ಸಮಸಂಖ್ಯೆಗಳು (೨,೪,೬ ಇತ್ಯಾದಿ) ಮತ್ತು ವಿಷಮಸಂಖ್ಯೆಗಳು (೧,೩,೫ ಇತ್ಯಾದಿ) ಎಂದು ಎರಡು ವಿಧ.

ಪ್ರಾಚೀನ ಭಾರತದಲ್ಲಿ ಬೆಳೆದು ಬಂದ ಸಂಖ್ಯಾಪದ್ಧತಿಯನ್ನು ೯ನೆಯ ಶತಮಾನದಲ್ಲಿ ಅರಬರು ಬಳಸಲು ಶುರು ಮಾಡಿದರು. ೧೦ನೆಯ ಶತಮಾನದಲ್ಲಿ ಅರಬರು ಇದನ್ನು ಯುರೋಪಿಯನರಿಗೆ ಪರಿಚಯಿಸಿದರು. ಆದ್ದರಿಂದ ಯುರೋಪಿನಲ್ಲಿ ಇದನ್ನು ಅರಾಬಿಕ್ ಸಂಖ್ಯಾಪದ್ಧತಿ ಎಂದು ಹೆಸರಿಸಿದರು. ಆದರೆ ಅರಬ್ ಜನರು ಇದನ್ನು ಇಂಡಿಯನ್ (ಭಾರತೀಯ) - ಅರಾಬಿಕ್ ಸಂಖ್ಯಾಪದ್ಧತಿ ಎಂದು ಕರೆಯುತ್ತಾರೆ.

ಜಗತ್ತಿಗೆ ಭಾರತದ ಅದ್ಭುತ ಕೊಡುಗೆಗಳಲ್ಲೊಂದು ಸೊನ್ನೆ. ಇದರ ಪರಿಕಲ್ಪನೆ ಜಗತ್ತಿನಲ್ಲಿ ಗಣಿತದ ಕ್ರಾಂತಿಗೆ ಕಾರಣವಾಯಿತು. ಸೊನ್ನೆಗೆ ಬೆಲೆಯಿಲ್ಲ; ಆದರೆ ಸೊನ್ನೆ ಜೊತೆಗೂಡದಿದ್ದರೆ ಯಾವ ಸಂಖ್ಯೆಗೂ ಬೆಲೆಯಿಲ್ಲ.